Site icon Vistara News

Bangalore Kambala : ಬೆಂಗಳೂರು ಕಂಬಳದಿಂದ ವಿವಾದಿತ ಸಂಸದ ಬ್ರಿಜ್‌ ಭೂಷಣ್‌ ಸಿಂಗ್‌ ಔಟ್‌

Bangalore Kambala Brij Bhushan Singg

ಬೆಂಗಳೂರು: ಬೆಂಗಳೂರಿನ ಅರಮನೆ ಮೈದಾನದಲ್ಲಿ (Bangalore Palace ground) ಸೃಷ್ಟಿಸಿರುವ ಕೃತಕ ಕಂಬಳ ಕರೆಯಲ್ಲಿ (Bangalore Kambala) ನವೆಂಬರ್‌ 25 ಮತ್ತು 26ರಂದು ನಡೆಯಲಿರುವ ಐತಿಹಾಸಿಕ ಬೆಂಗಳೂರು ಕಂಬಳದ ಆಹ್ವಾನಿತರ ಪಟ್ಟಿಯಿಂದ ಕುಸ್ತಿ ಫೆಡರೇಷನ್‌ (Wrestling Federation) ಮಾಜಿ ಅಧ್ಯಕ್ಷ, ಬಿಜೆಪಿ ಸಂಸದ ಬ್ರಿಜ್‌ಭೂಷಣ್‌ ಸಿಂಗ್‌ (Brijbhushan Singh) ಅವರ ಹೆಸರನ್ನು ಕೈಬಿಡಲಾಗಿದೆ.

ಲೈಂಗಿಕ ಹಗರಣದಲ್ಲಿ ಅವರ ವಿರುದ್ಧ ಚಾರ್ಜ್‌ಶೀಟ್‌ ಸಲ್ಲಿಕೆಯಾಗಿರುವ ಹಿನ್ನೆಲೆಯಲ್ಲಿ ಅವರನ್ನು ಸಮಾರಂಭಕ್ಕೆ ಕರೆದಿರುವುದು ವಿವಾದಕ್ಕೆ ಕಾರಣವಾಗಿದೆ. ನವೆಂಬರ್ 26ರಂದು ರವಿವಾರ ಮಧ್ಯಾಹ್ನ 1 ಗಂಟೆಗೆ ನಡೆಯುವ ಸಭಾ ಕಾರ್ಯಕ್ರಮದಲ್ಲಿ ಬ್ರಿಜ್ ಭೂಷಣ್‌ ಸಿಂಗ್ ಪ್ರಧಾನ ಅತಿಥಿಯಾಗಿದ್ದು, ಸಾಧಕರಿಗೆ ಸನ್ಮಾನ ಮಾಡಲಿದ್ದಾರೆ ಎಂದು ಕಂಬಳ ಸಮಿತಿಯ ಆಹ್ವಾನ ಪತ್ರಿಕೆಯಲ್ಲಿ ತಿಳಿಸಲಾಗಿತ್ತು. ಇದೀಗ ಇದೊಂದು ವಿವಾದ ಸ್ವರೂಪ ಪಡೆದ ಹಿನ್ನೆಲೆಯಲ್ಲಿ ಆಹ್ವಾನಿತರ ಪಟ್ಟಿಯಿಂದ ಅವರನ್ನು ಬಿಡಲಾಗಿದೆ.

ಬ್ರಿಜ್‌ ಭೂಷಣ್‌ ಅವರು ಕಾರ್ಯಕ್ರಮಕ್ಕೆ ಬರುವುದಿಲ್ಲ. ಆಹ್ವಾನ ಪತ್ರಿಕೆಯನ್ನು ಬದಲಾಯಿಸಲಾಗುತ್ತದೆ ಎಂದು ಕಂಬಳ ಸಂಘಟಕರಲ್ಲಿ ಒಬ್ಬರಾದ ಪುತ್ತೂರು ಶಾಸಕ ಅಶೋಕ್‌ ರೈ ಅವರು ತಿಳಿಸಿದ್ದಾರೆ.

ಭಾರತೀಯ ಕುಸ್ತಿ ಫೆಡರೇಷನ್ (WFI) ಮಾಜಿ ಮುಖ್ಯಸ್ಥ ಮತ್ತು ಬಿಜೆಪಿ ಸಂಸದ ಬ್ರಿಜ್ ಭೂಷಣ್ ಶರಣ್ ಸಿಂಗ್ ಅವರ ಮೇಲೆ ಮಹಿಳಾ ಕುಸ್ತಿಪಟುಗಳಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪವಿದೆ. ಜೂನ್ 15ರಂದು ದೆಹಲಿ ಪೊಲೀಸರು ನ್ಯಾಯಾಲಯಕ್ಕೆ ಚಾರ್ಜ್ ಶೀಟ್‌ ಕೂಡಾ ಸಲ್ಲಿಸಲಾಗಿದೆ. ಇಂಥ ಒಬ್ಬ ವ್ಯಕ್ತಿಯನ್ನು ಕಂಬಳಕ್ಕೆ ಆಹ್ವಾನಿಸುವ ಅವಶ್ಯಕತೆಯಾದರೂ ಏನು ಎಂದು ಪ್ರಶ್ನಿಸಲಾಗಿತ್ತು.

ಸಿಲಿಕಾನ್ ಸಿಟಿ ಜನತೆಗೆ ಸಿಹಿ ಸುದ್ದಿ | Kambala In Palace Grounds, Bengaluru | Vistara News

‌ಬ್ರಿಜ್‌ಭೂಷಣ್‌ಗೆ ಆಹ್ವಾನ ಯಾಕೆ?

ಇಲ್ಲಿ ಸನ್ಮಾನ ಮಾಡುತ್ತಿರುವುದು ಗೋವಾದಲ್ಲಿ ನಡೆದ ನ್ಯಾಷನಲ್‌ ಗೇಮ್ಸ್‌ನಲ್ಲಿ ಪದಕಗಳನ್ನು ಗೆದ್ದ ಕರ್ನಾಟಕದ ಕುಸ್ತಿಪಟುಗಳನ್ನು. ಕುಸ್ತಿ ಒಕ್ಕೂಟದ ಸಹಕಾರದಿಂದಲೇ ಅವರಿಗೆ ಸ್ಪರ್ಧೆಯಲ್ಲಿ ಭಾಗವಹಿಸಲು ಮತ್ತು ಪದಕ ಪಡೆಯಲು ಸಾಧ್ಯವಾಯಿತು. ಹೀಗಾಗಿ ಬ್ರಿಜ್‌ ಭೂಷಣ್‌ ಸಿಂಗ್‌ ಅವರಿಂದಲೇ ಗೌರವಿಸಲ್ಪಡಬೇಕು ಎನ್ನುವುದು ಕುಸ್ತಿ ಸ್ಪರ್ಧೆ ವಿಜೇತರ ಆಶಯವಾಗಿತ್ತು. ಹಾಗಾಗಿ ಅವರನ್ನು ಕರೆಸಿದ್ದೇವೆ ಎಂದು ಸಂಘಟಕರು ತಿಳಿಸಿದ್ದರು. ಆದರೆ ವಿವಾದ ಜೋರಾಗುತ್ತಿದ್ದಂತೆಯೇ ಆ ದಿನದ ಕಾರ್ಯಕ್ರಮಕ್ಕೆ ಬ್ರಿಜ್‌ ಭೂಷಣ್‌ ಶರಣ್‌ ಅವರು ಬರುವುದಿಲ್ಲ ಎಂದು ಸಂಘಟಕರು ತಿಳಿಸಿದ್ದಾರೆ.

ಇದನ್ನೂ ಓದಿ : Kambala Sports : ಬೆಂಗಳೂರು ಕಂಬಳಕ್ಕೆ 1 ಕೋಟಿ ರೂ. ಘೋಷಿಸಿದ ಸಿಎಂ; ಬರಲಿದ್ದಾರೆ ಲಕ್ಷ ಲಕ್ಷ ಜನ!

ಬ್ರಿಜ್‌ ಭೂಷಣ್‌ ಅವರ ಮೇಲೆ ಇರುವ ಆರೋಪ, ಅವರು ಬಿಜೆಪಿ ಸಂಸದರಾಗಿರುವುದು ಕೂಡಾ ವಿವಾದಕ್ಕೆ ಕಾರಣವಾಗಿತ್ತು. ಕಾರ್ಯಕ್ರಮದಲ್ಲಿ ಬಿಜೆಪಿ ನಾಯಕರಿಗೇ ಹೆಚ್ಚು ಮಣೆ ಹಾಕಲಾಗಿದೆ ಎಂಬ ಆರೋಪವೂ ಇದೆ. ಇದೆಲ್ಲವನ್ನೂ ಗಮನಿಸಿದ ಸಂಘಟಕರು ಆಹ್ವಾನಿತರ ಪಟ್ಟಿಯಿಂದ ಬ್ರಿಜ್‌ ಭೂಷಣ್‌ ಸಿಂಗ್‌ ಅವರನ್ನು ಕೈಬಿಟ್ಟಿದ್ದಾರೆ.

ಇಂಥ ವಿವಾದಿತ ವ್ಯಕ್ತಿಗಳನ್ನು ಕರೆ ತರುವುದರಿಂದ ಯಾವುದೆ ಲಾಭವಿಲ್ಲ. ಅನಗತ್ಯವಾಗಿ ವಿವಾದ ಮಾಡಿಕೊಳ್ಳುವುದು ಯಾಕೆ ಎಂಬ ಕಾರಣಕ್ಕೆ ಅವರನ್ನು ದೂರ ಇಡಲಾಯಿತು ಎಂಬ ಮಾತು ಒಂದೆಡೆ ಕೇಳಿಬಂದಿದೆ. ಈ ನಡುವೆ, ಬ್ರಿಜ್‌ ಭೂಷಣ್‌ ಅವರು ಈ ಕಾರ್ಯಕ್ರಮಕ್ಕೆ ಬರುವುದಿಲ್ಲ ಎಂದು ಮೊದಲೇ ಹೇಳಿದ್ದರು ಎಂದೂ ಹೇಳಲಾಗುತ್ತಿದೆ. ಈಗ ವಿವಾದ ಎದ್ದಿರುವುದರಿಂದ ಅದನ್ನು ಈಗಲೇ ಪ್ರಕಟಿಸಲಾಗಿದೆ ಎನ್ನಲಾಗಿದೆ.

Exit mobile version