Site icon Vistara News

Bangalore traffic | ದಟ್ಟಣೆ ಜಂಕ್ಷನ್‌ಗಳ ಪರಿಶೀಲನೆ, ಸುಗಮ ಓಡಾಟ ಕ್ರಮಕ್ಕೆ ಸೂಚನೆ

bbmp

ನಗರಾಭಿವೃದ್ಧಿ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ರಾಕೇಶ್ ಸಿಂಗ್, ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್, ನಗರ ಪೊಲೀಸ್ ಆಯುಕ್ತ ಪ್ರತಾಪ್ ರೆಡ್ಡಿ ವಿವಿಧ ಸ್ಥಳಗಳಿಗೆ ಭೇಟಿ ನೀಡಿ ಪರಿಶೀಲಿಸಿದರು.

ಬೆಂಗಳೂರು: ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಹೆಚ್ಚು ಸಂಚಾರ ದಟ್ಟಣೆಯಾಗುವ ಪ್ರಮುಖ ಜಂಕ್ಷನ್‌ಗಳಿಗೆ ಮಂಗಳವಾರ ವಿವಿಧ ಉನ್ನತಾಧಿಕಾರಿಗಳು ಭೇಟಿ ನೀಡಿ ಪರಿಶೀಲಿಸಿ, ಪರಿಹಾರ ಕ್ರಮಗಳ ಕುರಿತು ಸೂಚನೆ ನೀಡಿದರು.

ಬೆಂಗಳೂರಿಗೆ ಟ್ರಾಫಿಕ್‌ ಸಮಸ್ಯೆಯಿಂದ ಮುಕ್ತಿ ನೀಡಲು ಬಿಬಿಎಂಪಿ ಶತಾಯಗತಾಯ ಪ್ರಯತ್ನಪಡುತ್ತಿದ್ದು, ಸರಣಿ ಸಭೆಗಳನ್ನು ನಡೆಸುತ್ತಿದೆ. ಅದರ ಮುಂದುವರಿದ ಭಾಗ ಇದಾಗಿದೆ. ನಗರಾಭಿವೃದ್ಧಿ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ರಾಕೇಶ್ ಸಿಂಗ್, ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್, ನಗರ ಪೊಲೀಸ್ ಆಯುಕ್ತ ಪ್ರತಾಪ್ ರೆಡ್ಡಿ ವಿವಿಧ ಸ್ಥಳಗಳಿಗೆ ಭೇಟಿ ನೀಡಿ ಪರಿಶೀಲಿಸಿದರು.

ಸಾರಕ್ಕಿ ಜಂಕ್ಷನ್ ಪರಿಶೀಲನೆ

ಸಿಂಧೂರ ರಸ್ತೆ ಕಡೆಯಿಂದ ಸಾರಕ್ಕಿ ಜಂಕ್ಷನ್ ಕಡೆಯ ರಸ್ತೆಯಲ್ಲಿ ಪಾಲಿಕೆ ವತಿಯಿಂದ ಅಳವಡಿಸಿರುವ ರಸ್ತೆಯ ನಾಮಫಲಕ, ಬೆಸ್ಕಾಂನವರು ಅಳವಡಿಸಿರುವ ಕಾಂಕ್ರೀಟ್ ಹಾಗೂ ಝೀರೋ ಟಾಲರೆನ್ಸ್ ಬೋರ್ಡ್‌ನ್ನು ಸ್ಥಳಾಂತರಿಸಿ ಪಾದಚಾರಿ ಮಾರ್ಗವನ್ನು ಸರಿಪಡಿಸಿ ಎಡಭಾಗಕ್ಕೆ ಹೋಗುವ ವಾಹನಗಳಿಗೆ ಸುಗಮವಾಗಿ ಚಲಿಸಲು ಅವಕಾಶ ಕಲ್ಪಿಸಬೇಕು. ಬಿಎಂಆರ್‌ಸಿಎಲ್ ಫಿಲ್ಲರ್‌ಗೆ ಅಳವಡಿಸಿರುವ ಸಿಗ್ನಲ್ ಲೈಟ್ ಎತ್ತರವನ್ನು ಇನ್ನೂ ಮೂರು ಅಡಿ ಎತ್ತರಿಸಬೇಕು.

ಸಾರಕ್ಕಿ ಜಂಕ್ಷನ್ ಕಡೆಯಿಂದ ಸಿಂಧೂರ ಜಂಕ್ಷನ್ ಕಡೆಗೆ ಚಲಿಸುವ ಕನಕಪುರ ರಸ್ತೆಯಲ್ಲಿ ಸಾರಕ್ಕಿ ಸಿಗ್ನಲ್‌ಗೆ ಹೊಂದಿಕೊಂಡಂತಿರುವ ಜೆ.ಪಿ.ನಗರ ಮೆಟ್ರೋ ನಿಲ್ದಾಣದ 14ನೇ ಇ ರಸ್ತೆಯಿಂದ ವಾಹನಗಳು ಪಾದಚಾರಿ ಮಾರ್ಗ ಮುಖೇನ ಕನಕಪುರ ರಸ್ತೆಗೆ ವೇಗವಾಗಿ ಬರುವುದರಿಂದ ಅಪಘಾತಗಳು ಉಂಟಾಗುತ್ತಿವೆ. ಈ ಪೈಕಿ 14ನೇ ಇ ಅಡ್ಡರಸ್ತೆ ಹಾಗೂ ಕನಕಪುರ ಮುಖ್ಯ ರಸ್ತೆಯ ಮಧ್ಯದಲ್ಲಿ ಪಾದಚಾರಿ ಮಾರ್ಗಕ್ಕೆ ಗ್ರಿಲ್ ಹಾಗೂ ಪಾದಚಾರಿ ಕಂಬಗಳನ್ನು ಅಳವಡಿಸಿ ಸುಗಮ ಸಂಚಾರ ಹಾಗೂ ಪಾದಚಾರಿಗಳ ಓಡಾಟಕ್ಕೆ ಅನುಕೂಲ ಮಾಡಿಕೊಡಬೇಕು.

ಸಾರಕ್ಕಿ ಸಿಗ್ನಲ್‌ನಿಂದ ಕನಕಪುರ ಮುಖ್ಯ ರಸ್ತೆಯಲ್ಲಿ ಜರಗನಹಳ್ಳಿ ಕಡೆಗೆ ಸಾಗುವ ರಸ್ತೆಯ ಎಡಭಾಗದಲ್ಲಿರುವ ಪಾದಚಾರಿ ಮಾರ್ಗ ಸಂಪೂರ್ಣವಾಗಿ ಹಾಳಾಗಿದೆ. ಪಾದಚಾರಿ ಮಾರ್ಗವನ್ನು ಸರಿಪಡಿಸಿ ಗ್ರಿಲ್‌ಗಳನ್ನು ಸರಿಯಾಗಿ ಅಳವಡಿಸಿ ಪಾದಚಾರಿಗಳು ಹಾಗೂ ವಾಹನಗಳ ಸುಗಮ ಸಂಚಾರಕ್ಕೆ ಅನುಕೂಲ ಮಾಡಿಕೊಡಬೇಕು.

ಇದನ್ನೂ ಓದಿ: Bangalore Traffic | ಟ್ರಾಫಿಕ್‌ ದಟ್ಟಣೆ ನಿಭಾಯಿಸಲು ಸಿಎಂ ಸಮಾಲೋಚನೆ

ಕೋಣನಕುಂಟೆ ಕಡೆಯಿಂದ ಬಂದ ವಾಹನಗಳಿಗೆ ಸಾರಕ್ಕಿ ಜಂಕ್ಷನ್ ಬಳಿ ರಿಂಗ್ ರಸ್ತೆ ಕಡೆಗೆ ಸಿಗ್ನಲ್ ಮುಕ್ತ ಎಡ ತಿರುವು ಕಲ್ಪಿಸಲು ರಸ್ತೆಗೆ ಅಡ್ಡಲಾಗಿರುವ ಮರಗಳ‌ ಕೊಂಬೆಗಳನ್ನು ಕತ್ತರಿಸಬೇಕು ಹಾಗೂ ಬೆಸ್ಕಾಂ ಅಳವಡಿಸಿರುವ ಸೀಮೆಂಟ್ ಕಂಬವನ್ನು ಪಾದಚಾರಿ ಮಾರ್ಗಕ್ಕೆ ಹೊಂದಿಕೊಂಡಂತೆ ಸ್ಥಳಾಂತರಿಸಬೇಕು. ಜೊತೆಗೆ ಸರ್ವೀಸ್ ರಸ್ತೆಯನ್ನು ರಿಂಗ್ ರಸ್ತೆ ಮಟ್ಟಕ್ಕೆ ಎತ್ತರಿಸಿ ಡಾಂಬರೀಕರಣ ಮಾಡಬೇಕು. ಇಲಿಯಾಜ್ ನಗರ ಕಡೆಯಿಂದ ಬಂದ ವಾಹನಗಳು ಸಾರಕ್ಕಿ ಜಂಕ್ಷನ್ ಬಳಿ ಬನಶಂಕರಿ ಕಡೆಗೆ ಚಲಿಸಲು ಫ್ರೀ ಲೆಫ್ಟ್‌ ಟರ್ನ್‌ಗೆ ಅವಕಾಶ ಲ್ಪಿಸಬೇಕು.

ಈ ಮೇಲಿನ ಎಲ್ಲಾ ಕೆಲಸಗಳಿಗೆ ಸಂಬಂಧಿಸಿದಂತೆ ರಸ್ತೆ ಮೂಲಭೂತ ಸೌಕರ್ಯ ವಿಭಾಗದ ಮುಖ್ಯ ಇಂಜಿನಿಯರ್ ವಿನ್ಯಾಸ ಸಿದ್ಧಪಡಿಸಿ, ಸಮಸ್ಯೆಗಳನ್ನು ಬಗೆಹರಿಸಿ ಸಂಚಾರ ದಟ್ಟಣೆ ಕಡಿಮೆ ಮಾಡಿ ವಾಹನಗಳ ಸುಗಮ ಸಂಚಾರಕ್ಕೆ ಅವಕಾಶ ಕಲ್ಪಿಸಲು ಮುಖ್ಯ ಕಾರ್ಯದರ್ಶಿಗಳು ಸೂಚನೆ ನೀಡಿದರು.

ಜಯದೇವ ಮೇಲುಸೇತುವೆ

ಜಯದೇವ ಮೇಲುಸೇತುವೆ ಈಸ್ಟ್ ಎಂಡ್ ಮುಖ್ಯ ರಸ್ತೆಯ ಕಡೆಗೆ ರೋಡ್ ಸರ್ಫೇಸಿಂಗ್ ಸರಿಪಡಿಸುವ, ವಿದ್ಯುತ್ ದೀಪಗಳನ್ನು ಅಳವಡಿಸುವ, ಕೆಳಸೇತುವೆಯಲ್ಲಿ ವಾಟರ್ ಲಾಗಿಂಗ್ ಸರಿಪಡಿಸಲು ಡ್ರೈನೇಜ್ ಕಾಮಗಾರಿ ಪ್ರಗತಿಯಲ್ಲಿದೆ. ಒಂದು ವಾರದಲ್ಲಿ ಕಾಮಗಾರಿ ಪೂರ್ಣಗೊಳಿಸಲು ಆಡಳಿತಗಾರರು ಮೆಟ್ರೊ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಮೆಟ್ರೋ ವತಿಯಿಂದ ರಸ್ತೆ ದುರಸ್ತಿ ಕಾರ್ಯ ಕೈಗೊಳ್ಳಬೇಕಿದ್ದು, ಕೂಡಲೆ ಅದನ್ನು ಮಾಡಬೇಕು. ಸರ್ವೀಸ್ ರಸ್ತೆಯ ಬದಿ ಕಟ್ಟಡ ಭಗ್ನಾವಶೇಷಗಳನ್ನು ಹಾಕಿದ್ದು, ಅದನ್ನು ತೆರವುಗೊಳಿಸಲು ಸೂಚಿಸಿದರು.

ಸಿಲ್ಕ್ ಬೋರ್ಡ್ ಜಂಕ್ಷನ್

ಬಿ.ಟಿ.ಎಂ ಲೇಔಟ್ – ಸಿಲ್ಕ್ ಬೋರ್ಡ್ ಕಡೆಗೆ ಎರಡು ಬದಿ ಚರಂಡಿ ಹಾಳಾಗಿರುವುದರಿಂದ ಮಳೆ ಬಂದಾಗ ಚರಂಡಿ ನೀರು ಮತ್ತು ಮಳೆ ನೀರು ಒಟ್ಟಾಗಿ ಸೇರಿ ರಾಜಕಾಲುವೆಯಿಂದ ಉಕ್ಕಿ ಹರಿಯುವುದರಿಂದ ವಾಹನಗಳ ಸಂಚಾರಕ್ಕೆ ಸಾಕಷ್ಟು ಸಮಸ್ಯೆ ಆಗುತ್ತಿದೆ. ರಾಜಕಾಲುವೆ ವಿಭಾಗದಿಂದ ಕೂಡಲೆ ಅಗತ್ಯ ಕ್ರಮಗಳನ್ನು ಕೈಗೊಂಡು ಸಮಸ್ಯೆಯಾಗುವುದನ್ನು ತಪ್ಪಿಸಲು ಮುಖ್ಯ ಆಯುಕ್ತರು ಸೂಚಿಸಿದರು.

ಹೊಸೂರು ರಸ್ತೆ – ಬಿಟಿಎಂ ರಸ್ತೆ ಕಡೆಗೆ ಹೋಗುವ ಸ್ಥಳದಲ್ಲಿರುವ ಕಾಲುವೆ ಮೇಲೆ ಬಿಎಂಆರ್‌ಸಿಎಲ್‌ನಿಂದ ಸ್ಲ್ಯಾಬ್ ಅಳವಡಿಸಿರುವುದರಿಂದ ವಾಹನಗಳು ಸರಾಗವಾಗಿ ಸಂಚರಿಸಲು ಸಾಧ್ಯವಾಗುತ್ತಿಲ್ಲ. ಈ ಸಂಬಂಧ ರಾಜಕಾಲುವೆ ಮೇಲೆ ಅಳವಡಿಸಿರುವ ಸ್ಲ್ಯಾಬ್ ಮಟ್ಟವನ್ನು ರಸ್ತೆ ಮಟ್ಟಕ್ಕೆ ಮಾಡಿ ವಾಹನಗಳ ಸುಗಮ ಸಂಚಾರಕ್ಕೆ(Free Left) ಅನುವು ಮಾಡಿಕೊಡಲು ಅಧಿಕಾರಿಗಳಿಗೆ ಸೂಚನೆ ನೀಡಿದರು.

ಸಿಲ್ಕ್ ಬೋರ್ಡ್ ಕಡೆಯಿಂದ ಬಿ.ಟಿ.ಎಂ ಲೇಔಟ್ ಬಸ್ ನಿಲ್ದಾಣದವರೆಗೆ ರೋಡ್ ಸರ್ಫೇಸಿಂಗ್ ಮಾಡಲು ಬಿಎಂಆರ್‌ಸಿಎಲ್ ಅಧಿಕಾರಿಗಳಿಗೆ ಸೂಚಿಸಿದರು. ಇದೇ ವೇಳೆ ಸಿಲ್ಕ್ ಬೋರ್ಡ್ ಜಂಕ್ಷನ್ ಬಸ್ ನಿಲ್ದಾಣದಿಂದ ಹೆಚ್.ಎಸ್.ಆರ್ ಲೇಔಟ್ ಸರ್ವಿಸ್ ರಸ್ತೆಯ ಕಡೆಗೆ ಪಾದಚಾರಿ ಮೇಲುಸೇತುವೆ ನಿರ್ಮಾಣ ಮಾಡುವ ಸಂಬಂಧ ಅಗತ್ಯ ಕ್ರಮ ಕೈಗೊಳ್ಳಲು ಅಧಿಕಾರಿಗಳಿಗೆ ಸೂಚಿಸಿದರು.

ಸಿಲ್ಕ್ ಬೋರ್ಡ್ ಜಂಕ್ಷನ್‌ನಲ್ಲಿ ಬಿಎಂಟಿಸಿ ಬಸ್‌ಗಳ ನಿಲ್ದಾಣವು ಸಂಚಾರ ದಟ್ಟಣೆಯಾಗದಂತೆ ವ್ಯವಸ್ಥಿತವಾಗಿ ವಿನ್ಯಾಸ ಮಾಡಿಕೊಂಡು ಕೆಲಸ ಮಾಡಲು ಆಡಳಿತಗಾರರು ಬಿಎಂಟಿಸಿ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಇಬ್ಬಲೂರು ಜಂಕ್ಷನ್

ಇಬ್ಬಲೂರು ಜಂಕ್ಷನ್‌ನಿಂದ ಸರ್ಜಾಪುರ ರಸ್ತೆ ಕಡೆಗೆ ವಾಟರ್ ಲಾಗಿಂಗ್ ಆಗದಿರಲು ತೆಗೆದುಕೊಂಡಿರುವ ಕಾಮಗಾರಿಯನ್ನು ಪೂರ್ಣಗೊಳಿಸಬೇಕಿದೆ. ಸರ್ಜಾಪುರ ರಸ್ತೆಯಿಂದ ಬಂದು ಹೊರ ವರ್ತುಲ ರಸ್ತೆಗೆ ಹೋಗುವ ಸಂಚಾರಕ್ಕೆ ಹೆಚ್ಚಿನ ಸ್ಥಳಾವಕಾಶವನ್ನು ಕಲ್ಪಿಸಲು ವೃತ್ತದಲ್ಲಿರುವ 2 ಐಲ್ಯಾಂಡ್‌ಗಳನ್ನು ಮರು ವಿನ್ಯಾಸಗೊಳಿಸಬೇಕಾಗಿರುತ್ತದೆ. ಹರಳೂರು ಜಂಕ್ಷನ್‌ನಿಂದ ಇಬ್ಬಲೂರು ಜಂಕ್ಷನ್‌ ವರೆಗೆ ಎರಡೂ ಬದಿಗಳಲ್ಲಿ ಪಾದಚಾರಿ ಮಾರ್ಗಗಳನ್ನು ಅಭಿವದ್ಧಿಪಡಿಸುವುದಕ್ಕೆ ಸಂಬಂಧಿಸಿದಂತೆ ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳು ಅಗತ್ಯಕ್ರಮ ಕೈಗೊಳ್ಳಲು ಆಡಳಿತಗಾರರು ಸೂಚನೆ ನೀಡಿದರು.

ಈ ವೇಳೆ ಬಿಎಂಆರ್‌ಸಿಎಲ್ ವ್ಯವಸ್ಥಾಪಕ ನಿರ್ದೇಶಕ ಅಂಜುಂ ಫರ್ವೇಜ್, ಬಿಡಿಎ ಆಯುಕ್ತ ರಾಜೇಶ್ ಗೌಡ, ಜಲಮಂಡಳಿ ಅಧ್ಯಕ್ಷ ಜಯರಾಂ, ಬಿಎಂಟಿಸಿ ವ್ಯವಸ್ಥಾಪಕ ನಿರ್ದೇಶಕಿ ಸತ್ಯವತಿ, ಸಂಚಾರಿ ಪೋಲಿಸ್ ಜಂಟಿ ಆಯುಕ್ತ ರವಿಕಾಂತೇ ಗೌಡ, ಸ್ಮಾರ್ಟ್ ಸಿಟಿ ಹಾಗೂ ಬೆಸ್ಕಾಂನ ವ್ಯವಸ್ಥಾಪಕ ನಿರ್ದೇಶಕ ರಾಜೇಂದ್ರ ಚೋಳನ್, ಪಾಲಿಕೆಯ ವಲಯ/ವಿಶೇಷ ಆಯುಕ್ತರುಗಳು, ಬಿಎಂಆರ್‌ಎಲ್ ಅಧಿಕಾರಿಗಳು ಸೇರಿದಂತೆ ವಿವಿಧ ಇಲಾಖೆಗಳ ಪ್ರಮುಖ ಅಧಿಕಾರಿಗಳು ಉಪಸ್ಥಿತರಿದ್ದರು.

ಇದನ್ನೂ ಓದಿ: Traffic | ಬೆಂಗಳೂರು ಟ್ರಾಫಿಕ್‌ ಜಾಮ್‌ ಮುಕ್ತಿಗೆ ನಾನಾ ಇಲಾಖೆಗಳ ಸಮನ್ವಯ

Exit mobile version