Site icon Vistara News

Bangalore Water Crisis: “ನೀರು ಕೊಡ್ತೀವಿ, ಪ್ಲೀಸ್‌ ಹೋಗ್ಬೇಡಿ…” ಐಟಿ ಸಂಸ್ಥೆಗಳಿಗೆ ರಾಜ್ಯ ಮನವಿ; ಗಾಳ ಹಾಕಿದ ಕೇರಳ

Bangalore water crisis IT companies

ಬೆಂಗಳೂರು: ಬೆಂಗಳೂರಿನಲ್ಲಿರುವ ನೀರಿನ ಕೊರತೆ ಸಮಸ್ಯೆಯಿಂದಾಗಿ (Bangalore water crisis, Bengaluru water crisis) ಬೃಹತ್‌ ಐಟಿ ಸಂಸ್ಥೆಗಳು (IT companies) ರಾಜಧಾನಿ ತೊರೆಯಲು ಮುಂದಾಗಿವೆ; ಇವುಗಳಿಗೆ ಕೇರಳ ರಾಜ್ಯ (Kerala State) ಗಾಳ ಹಾಕುತ್ತಿದೆ ಎಂಬ ವರದಿಗಳ ಹಿನ್ನೆಲೆಯಲ್ಲಿ, ನೀರು ಪೂರೈಕೆಯ ಬಗ್ಗೆ ಜಲಮಂಡಳಿ (BWSSB) ಭರವಸೆ ನೀಡಿದೆ. ಐಟಿ ಸಂಸ್ಥೆಗಳಿಗೆ ಒದಗಿಸುವಷ್ಟು ನೀರು ನಮ್ಮ ಬಳಿ ಇದೆ ಎಂದು ತಿಳಿಸಲಾಗಿದೆ.

ನಿನ್ನೆ ಐಟಿ- ಬಿಟಿ ಕಂಪನಿಗಳ ಜೊತೆಗೆ ಬೆಂಗಳೂರು ಒಳಚರಂಡಿ ಹಾಗೂ ಜಲಮಂಡಳಿ ಅಧ್ಯಕ್ಷ ರಾಮ್ ಪ್ರಸಾತ್ ಮನೋಹರ್ ಸಭೆ ನಡೆಸಿದರು. ಔಟರ್ ರಿಂಗ್ ರೋಡ್ ಕಂಪನಿ ಅಸೋಸಿಯೇಶನ್ ಪದಾಧಿಕಾರಿಗಳು ಸಭೆಯಲ್ಲಿ ಭಾಗವಹಿಸಿದ್ದರು. ನೀರಿನ ಸಮಸ್ಯೆ ಉಂಟಾಗಿರುವುದರ ಬಗ್ಗೆ ಕಂಪನಿ ಪದಾಧಿಕಾರಿಗಳು ಜಲಮಂಡಳಿ ಅಧ್ಯಕ್ಷರ ಗಮನಕ್ಕೆ ತಂದರು.

“ಐಟಿ, ಬಿಟಿ ಕಂಪನಿಗಳಿಗೆ ಸಮರ್ಪಕ ನೀರು ಪೂರೈಕೆಗೆ ಜಲಮಂಡಳಿ ಸಿದ್ಧವಿದೆ. ನಗರದಲ್ಲಿ ನೀರಿನ ಕೊರತೆಯನ್ನು ಸಮರ್ಥವಾಗಿ ನಿಭಾಯಿಸುತ್ತಿದ್ದೇವೆ. ಇದೇ ರೀತಿ ಐಟಿ, ಬಿಟಿ ಕಂಪನಿಗಳಿಗೂ ಸಮರ್ಪಕವಾಗಿ ನೀರು ಪೂರೈಸಲು ಎಲ್ಲ ಕ್ರಮ ಕೈಗೊಳ್ಳಲಾಗಿದೆ” ಎಂದು ಅಧ್ಯಕ್ಷರು ತಿಳಿಸಿದರು.

“ಕಾವೇರಿ 5ನೇ ಹಂತ ಪೂರ್ಣಗೊಂಡರೆ ನಗರಕ್ಕೆ ಪ್ರತಿದಿನ ಹೆಚ್ಚುವರಿ 775 mld ನೀರು ಸಿಗಲಿದೆ. ಇದರಿಂದ ನೀರಿನ ಕೊರತೆ ಕಡಿಮೆಯಾಗಲಿದೆ” ಎಂದು ಅಧ್ಯಕ್ಷರು ಮಾಹಿತಿ ನೀಡಿದ್ದು, ನಗರದಿಂದ ಹೊರ ಹೋಗದಂತೆ ಐಟಿಬಿಟಿ ಕಂಪನಿಗಳಿಗೆ ಮನವಿ ಮಾಡಿದರು.

ದೇಶದ ಟೆಕ್ ಹಬ್‌ನಲ್ಲಿ ನೀರಿನ ಬಿಕ್ಕಟ್ಟಿನ ವರದಿಗಳು ಹೊರಹೊಮ್ಮಿದ ನಂತರ, ಕೇರಳ ರಾಜ್ಯವನ್ನು ವಿಸ್ತರಣೆಗೆ ಪರಿಗಣಿಸುವಂತೆ ಆ ರಾಜ್ಯವು ಬೆಂಗಳೂರಿನ ಉನ್ನತ ಶ್ರೇಣಿಯ ತಂತ್ರಜ್ಞಾನ ಕಂಪನಿಗಳನ್ನು ಸಂಪರ್ಕಿಸಿತ್ತು. “ಬೆಂಗಳೂರಿನ ನೀರಿನ ಬಿಕ್ಕಟ್ಟಿನ ವರದಿಗಳನ್ನು ನಾವು ಓದಿದ ನಂತರ, ನಾವು ಐಟಿ ಕಂಪನಿಗಳಿಗೆ ಎಲ್ಲಾ ಸೌಲಭ್ಯಗಳನ್ನು ಮತ್ತು ಸಾಕಷ್ಟು ನೀರನ್ನು ನೀಡುವುದಾಗಿ ಪತ್ರ ಬರೆದಿದ್ದೇವೆ. ನಮ್ಮ ರಾಜ್ಯದಲ್ಲಿ ದೊಡ್ಡ ಮತ್ತು ಸಣ್ಣ 44 ನದಿಗಳಿವೆ. ಆದ್ದರಿಂದ ನೀರಿನ ಸಮಸ್ಯೆಯೇ ಇಲ್ಲ” ಎಂದು ಕೇರಳದ ಕೈಗಾರಿಕೆಗಳು ಮತ್ತು ಕಾನೂನು ಸಚಿವ ಪಿ. ರಾಜೀವ್ ಹೇಳಿದ್ದರು.

ಬೆಂಗಳೂರು ಐಟಿ ಉದ್ಯಮದ ಮೂಲಕ ಭಾರತದ 254 ಶತಕೋಟಿ ಡಾಲರ್‌ ಆದಾಯದ ಕೇಂದ್ರವಾಗಿದೆ. ಈ ಬೇಸಿಗೆಯ ಆರಂಭದಿಂದ ನಗರದಲ್ಲಿ ಪ್ರತಿದಿನ ಸುಮಾರು 500 ದಶಲಕ್ಷ ಲೀಟರ್ ನೀರಿನ ಕೊರತೆಯನ್ನು ಎದುರಿಸುತ್ತಿದೆ.

ಕೆಲವು ದಿನಗಳ ಹಿಂದೆ, ನಗರದಲ್ಲಿರುವ ಬೃಹತ್‌ ಸಂಸ್ಥೆಗಳಿಗೆ ಒದಗಿಸುವ ಕುಡಿಯುವ ನೀರಿನ ಪೂರೈಕೆಯಲ್ಲಿ ಶೇ.20ರಷ್ಟು ಕಡಿತ ಮಾಡಲಾಗಿದೆ. ಈ ಕ್ರಮದ ಬಗ್ಗೆ ಕೆಲವು ಸಂಸ್ಥೆಗಳು ಅಸಮಾಧಾನ ವ್ಯಕ್ತಪಡಿಸಿವೆ. ಸಾರ್ವಜನಿಕ ನೀರಿನ ಬಳಕೆಯ ನಲ್ಲಿಗಳಿಗೆ ಏರಿಯೇಟರ್‌ ಬಳಸುವುದನ್ನು ಕಡ್ಡಾಯ ಮಾಡಲಾಗಿದೆ. ಇದಕ್ಕೆ ಮಾರ್ಚ್‌ 31 ಗಡುವು ವಿಧಿಸಲಾಗಿದ್ದು, ತಪ್ಪಿದರೆ ದಂಡ ವಿಧಿಸಲಾಗುತ್ತಿದೆ.

ನೀರಿನ ದುರ್ಬಳಕೆ ಮಾಡಿದರೆ ದಂಡ ವಿಧಿಸಲಾಗುತ್ತಿದ್ದು, ಈಗಾಗಲೇ ಒಂದು ಲಕ್ಷ ರೂಪಾಯಿಗೂ ಅಧಿಕ ದಂಡ ವಸೂಲಿ ಮಾಡಲಾಗಿದೆ. ನಗರದ ಎಲ್ಲ ಹೋಟೆಲ್‌, ರೆಸಾರ್ಟ್‌ಗಳಲ್ಲಿ ಈಜುಕೊಳಗಳಿಗೆ ಕುಡಿಯುವ ನೀರು ಬಳಕೆ ನಿಷೇಧಿಸಲಾಗಿದೆ. ರೈನ್‌ ಡ್ಯಾನ್ಸ್‌ ಇತ್ಯಾದಿ ನಿರ್ಬಂಧಿಸಲಾಗಿದೆ.

ಐಟಿ ಸಂಸ್ಥೆಗಳು ಕಳೆದ ವರ್ಷ ಜೋರಾಗಿ ಮಳೆ ಬಂದು ಬೆಳ್ಳಂದೂರಿನಲ್ಲಿ ಪ್ರವಾಹ ಪರಿಸ್ಥಿತಿ ಉಂಟಾದಾಗಲೂ ಬೆಂಗಳೂರು ಬಿಟ್ಟು ಹೋಗುವ ಕುರಿತು ಮಾತನಾಡಿದ್ದವು. ಈ ಬೃಹತ್‌ ಸಂಸ್ಥೆಗಳಿಗೆ ತೆರಿಗೆ ಮುಕ್ತ ನೆಲೆ, ಕಡಿಮೆ ದರದಲ್ಲಿ ನೀರಿನ ಪೂರೈಕೆ, ಸುಗಮ ರಸ್ತೆ ಮುಂತಾದ ವ್ಯವಸ್ಥೆಗಳನ್ನು ರಾಜ್ಯ ಸರ್ಕಾರಗಳು ಮೊದಲಿನಿಂದಲೂ ಕಲ್ಪಿಸುತ್ತ ಬಂದಿವೆ.

ಇದನ್ನೂ ಓದಿ: Water Crisis: ಇನ್ನು 3 ದಿನದಲ್ಲಿ ನಿಮ್ಮ ಮನೆಯ ನಲ್ಲಿಗಳಿಗೆ ಈ ಸಾಧನ ಹಾಕದಿದ್ದರೆ 5000 ರೂ. ದಂಡ!

Exit mobile version