ಬೆಂಗಳೂರು: ಬೆಂಗಳೂರು ತಂತ್ರಜ್ಞಾನದ ಪ್ರಮುಖ ತಾಣ, ಇದು ಸಂಶೋಧನೆಗೆ ವಿಶ್ವ ವಿಖ್ಯಾತಿ ಪಡೆದ ನಗರ. ಭಾರತದ ಆವಿಷ್ಕಾರ ಸೂಚ್ಯಂಕದಲ್ಲಿ ನಂ.1 ಸ್ಥಾನ ಗಳಿಸಿದೆ. ಭಾರತದ ಪ್ರಗತಿಗೆ ತಂತ್ರಜ್ಞಾನ ಮತ್ತು ಪ್ರತಿಭಾವಂತ ಯುವಜನತೆ ಕಾರಣ. (Bengaluru Tech Summit 2022) ಭಾರತದ ಈಗ ಜಗತ್ತಿನಲ್ಲಿಯೇ ಮೂರನೇ ಅತಿ ಹೆಚ್ಚು ಸ್ಟಾರ್ಟಪ್‌ಗಳ ತಾಣವಾಗಿ ಹೊರಹೊಮ್ಮಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು.
ಬೆಂಗಳೂರು ಟೆಕ್ ಸಮ್ಮಿಟ್ 2022 ಅನ್ನು ಉದ್ಘಾಟಿಸಿದ ಬಳಿಕ ವಿಡಿಯೊ ಕಾನ್ಫರೆನ್ಸ್ ಮೂಲಕ ಮಾತನಾಡಿದ ಅವರು, ಭಾರತದಲ್ಲಿ ತಂತ್ರಜ್ಞಾನವು ಸಮಾನತೆ ಮತ್ತು ಅಭಿವೃದ್ಧಿಯ ಆಧಾರ ಸ್ಥಂಭವಾಗಿದೆ. ಭಾರತದಲ್ಲಿ ಆಯುಷ್ಮಾನ್ ಭಾರತ ಜಗತ್ತಿನಲ್ಲೇ ಅತಿ ದೊಡ್ಡ ವಿಮೆ ಯೋಜನೆಯಾಗಿದೆ. ಇದಕ್ಕೆ ಕಾರಣ ತಂತ್ರಜ್ಞಾನವಾಗಿದೆ. ಭಾರತ ಕೋವಿಡ್ ಬಿಕ್ಕಟ್ಟಿನ ಸಂದರ್ಭ ವಿಶ್ವದ ಅತಿ ದೊಡ್ಡ ಲಸಿಕೆ ಅಭಿಯಾನ ಕೈಗೊಳ್ಳಲು ಕೂಡ ತಂತ್ರಜ್ಞಾನದ ಪ್ರಗತಿಯಿಂದ ಸಾಧ್ಯವಾಗಿದೆ.
ಸ್ವಾಮಿತ್ವ ಯೋಜನೆಯಡಿಯಲ್ಲಿ ಗ್ರಾಮೀಣ ಪ್ರದೇಶದಲ್ಲಿ ದ್ರೋನ್ ಮೂಲಕ ಆಸ್ತಿಯ ಮಾಪನ ಮಾಡಲು ಸಾಧ್ಯವಾಗಿದೆ. ಹಣಕಾಸು ಸೇರ್ಪಡೆ ಹೆಚ್ಚಿಸಲೂ ಸುಲಭವಾಗಿದೆ. ಬಡ ಫಲಾನುಭವಿಗಳಿಗೆ ಅವರ ಬ್ಯಾಂಕ್ ಖಾತೆಗೆ ನೇರವಾಗಿ ಸರ್ಕಾರದ ಯೋಜನೆಗಳ ಸಬ್ಸಿಡಿ ಹಾಗೂ ಹಣಕಸು ನೆರವನ್ನು ನೀಡಲಾಗುತ್ತಿದೆ.
ಭಾರತದಲ್ಲಿ ಇ-ಕಾಮರ್ಸ್ ಪ್ಲಾಟ್ ಫಾರ್ಮ್ ವಿಸ್ತಾರವಾಗಿದೆ. ಸಣ್ಣ ಮತ್ತು ಮಧ್ಯಮ ಉದ್ದಿಮೆಗಳಿಗೆ ವ್ಯಾಪಾರ ವಹಿವಾಟು ಹೆಚ್ಚಿಸಲು ಸಹಕಾರಿಯಾಗಿದೆ. ತಂತ್ರಜ್ಞಾನದ ಅಭಿವೃದ್ಧಿಯಿಂದ ಭ್ರಷ್ಟಾಚಾರ ಕಡಿಮೆಯಾಗುತ್ತಿದೆ. ಭಾರತದಲ್ಲಿ ಈಗ ರೆಡ್ ಟೇಪ್‌ಗೆ (ಕೆಂಪು ಪಟ್ಟಿ) ಅವಕಾಶ ಇಲ್ಲ. ಈಗ ಹೂಡಿಕೆದಾರರಿಗೆ ರೆಡ್ ಕಾರ್ಪೆಟ್ ಹಾಕಿ ಸ್ವಾಗತಿಸಲಾಗುತ್ತಿದೆ ಎಂದರು.
ಆರೋಗ್ಯ, ಹಣಕಾಸು, ಆಡಳಿತ ನಿರ್ವಹಣೆಯಲ್ಲಿ ಯುವ ಭಾರತೀಯರು ಮುಂಚೂಣಿಯಲ್ಲಿ ಇರುವುದನ್ನು ಗಮನಿಸಬಹುದು. ಯುನಿಕಾರ್ನ್‌ಗಳ ಸಂಖ್ಯೆ 2021ರಿಂದ ಇಮ್ಮಡಿಯಾಗಿದೆ. ನೂರಾರು ವಿದೇಶಿ ಕಂಪನಿಗಳು ಭಾರತದಲ್ಲಿ ಸಂಶೋಧನೆ ಮತ್ತು ಅಭಿವೃದ್ಧಿ ಕೇಂದ್ರವನ್ನು ಸ್ಥಾಪಿಸಿವೆ. ಮೊಬೈಲ್ ಮತ್ತು ಡೇಟಾ ಕ್ರಾಂತಿಯೇ ದೇಶದಲ್ಲಿ ನಡೆಯುತ್ತಿದೆ. ಬಡತನದ ವಿರುದ್ಧದ ಹೋರಾಟದಲ್ಲಿ ತಂತ್ರಜ್ಞಾನದ ಬೆಳವಣಿಗೆ ಪ್ರಮುಖ ಅಸ್ತ್ರವಾಗಿದೆ ಎಂದು ಮೋದಿ ಬಣ್ಣಿಸಿದರು.
ಬೆಂಗಳೂರಿನ ತಂತ್ರಜ್ಞಾನ ಶೃಂಗ ಯಶಸ್ವಿಯಾಗಿ ನಡೆಯುವ ನಿರೀಕ್ಷೆ ಇದೆ ಎಂದು ಪ್ರಧಾನಿ ಮೋದಿ ಹೇಳಿದರು. ಬೆಂಗಳೂರು ಟೆಕ್ ಸಮ್ಮಿಟ್ ಈ ವರ್ಷ ಬೆಳ್ಳಿ ಹಬ್ಬದ ಸಂಭ್ರಮದಲ್ಲಿದೆ.