ರಾಮನಗರ: ಬೆಂಗಳೂರು- ಮೈಸೂರು ಎಕ್ಸ್‌ಪ್ರೆಸ್‌ವೇಯಲ್ಲಿ ಬೇಸಿಗೆಯ ಮೊದಲ ಮಳೆಯೇ ಕಿರಿಕಿರಿ ಸೃಷ್ಟಿಸಿದ್ದು, ರಾಮನಗರ ಸಮೀಪದ ಸಂಘಬಸವನದೊಡ್ಡಿ ಬಳಿ ಹೆದ್ದಾರಿ ಜಲಾವೃತವಾಗಿದೆ.
ಶುಕ್ರವಾರ ಸುರಿದ ಮಳೆಗೆ ರಸ್ತೆಯಲ್ಲಿ ಮಳೆನೀರು ನಿಂತಿದೆ. ವಾಹನ ಸವಾರರು ಪರದಾಟ ಅನುಭವಿಸಿದರು. ಕೆಲವು ದ್ವಿಚಕ್ರ ವಾಹನಗಳು ಮಳೆ ನೀರಿನಿಂದಾಗಿ ಕೆಟ್ಟು ನಿಂತವು. ಮಳೆನೀರು ಸರಾಗವಾಗಿ ಹರಿದುಹೋಗದೆ ರಸ್ತೆಯಲ್ಲಿ ನಿಂತುಹೋದುದರಿಂದ ಈ ಅವಾಂತರ ಸೃಷ್ಟಿಯಾಗಿದೆ.
ಈ ಅವ್ಯವಸ್ಥೆಯ ಬಗ್ಗೆ ಹೆದ್ದಾರಿ ಪ್ರಾಧಿಕಾರದ ವಿರುದ್ಧ ಹಲವು ವಾಹನ ಸವಾರರು ಆಕ್ರೋಶ ವ್ಯಕ್ತಪಡಿಸಿದರು. ದುಬಾರಿ ಟೋಲ್ ಕಟ್ಟಿದರೂ ಸಂಚಾರಕ್ಕೆ ಸರಿಯಾದ ವ್ಯವಸ್ಥೆ ಇಲ್ಲ ಎಂದು ಗರಂ ಆದರು. ಬೇಸಿಗೆಯ ಮಳೆಗೇ ಹೀಗಾದರೆ ಮುಂಗಾರಿನ ಭರ್ಜರಿ ಮಳೆಗೆ ರಸ್ತೆಯ ಸ್ಥಿತಿ ಏನಾಗಬಹುದು ಎಂಬ ಆತಂಕ ವ್ಯಕ್ತಪಡಿಸಿದರು.
ಕೋಲಾರದಲ್ಲಿ ತೋಟಗಾರಿಕೆ ಹಾನಿ
ಕೋಲಾರದಲ್ಲಿ ಎರಡು ದಿನಗಳಿಂದ ಮಳೆ ಆರ್ಭಟಿಸುತ್ತಿದ್ದು, ನೆನ್ನೆ ಸಂಜೆಯಿಂದಲೇ ಗುಡುಗು ಮಿಂಚು ಸಹಿತ ಮಳೆಯಾಯಿತು. ಭಾರೀ ಗಾಳಿಯೊಂದಿಗೆ ಸುರಿದ ಮಳೆಯಿಂದಾಗಿ ಮಾವು, ತೋಟಗಾರಿಕಾ ಬೆಳೆಗಳಿಗೆ ಹಾನಿಯಾಗಿ ರೈತರು ಕೈ ಸುಟ್ಟುಕೊಂಡಿದ್ದಾರೆ. ನಿನ್ನೆ ಹಲವೆಡೆ ಆಲಿಕಲ್ಲು ಮಳೆಯಾಗಿ ಅಪಾರ ನಷ್ಟವಾಗಿದೆ. ಪಪ್ಪಾಯಿ ಬೆಳೆ, ಟೊಮೆಟೊ, ಮಾವು ಸೇರಿದಂತೆ ಬೆಳೆಗಳಿಗೆ ಹಾನಿಯಾಗಿದೆ. ಬ್ಯಾಲಹಳ್ಳಿ ಪ್ರಕಾಶ್ ಎಂಬವರಿಗೆ ಸೇರಿದ ೨೧ ಎಕರೆ ಪಪ್ಪಾಯಿ ತೋಟ ನೆಲಕಚ್ಚಿದೆಯಲ್ಲದೆ, ಸುಮಾರು ಒಂದೂವರೆ ಕೋಟಿ ರೂ. ನಷ್ಟವಾಗಿದೆ.