Site icon Vistara News

ಕರ್ನಾಟಕದ ಆರ್ಥಿಕತೆಯನ್ನು1 ಲಕ್ಷ ಕೋಟಿ ಡಾಲರ್‌ಗೆ ಹೆಚ್ಚಿಸುವ ಗುರಿ: ಸಿಎಂ ಬೊಮ್ಮಾಯಿ

Sankalp se siddhi basavaraj bommai

ಬೆಂಗಳೂರು: ದೇಶವನ್ನು 5 ಲಕ್ಷ ಕೋಟಿ ಡಾಲರ್‌ ಆರ್ಥಿಕ ಶಕ್ತಿಯಾಗಿಸುವ ಪ್ರಧಾನಿ ನರೇಂದ್ರ ಮೋದಿಯವರ ಗುರಿಯಲ್ಲಿ ಕರ್ನಾಟಕದಿಂದ 1 ಲಕ್ಷ ಕೋಟಿ ಡಾಲರ್‌ ಕೊಡುಗೆ ನೀಡುವ ಗುರಿ ಹೊಂದಲಾಗಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.

ಕೇಂದ್ರ ಸಂಸ್ಕೃತಿ ಸಚಿವಾಲಯ, ಸಿಐಐ ಹಾಗೂ ಇಂಡಿಯಾ@75 ಫೌಂಡೇಷನ್‌ನಿಂದ ಖಾಸಗಿ ಹೋಟೆಲ್‌ನಲ್ಲಿ ಗುರುವಾರ ಆಯೋಜಿಸಿದ್ದ 3ನೇ ಆವೃತ್ತಿಯ ʻಸಂಕಲ್ಪ್‌ ಸೆ ಸಿದ್ಧಿʼ ಕಾರ್ಯಕ್ರಮದಲ್ಲಿ ಮಾತನಾಡಿದರು.

ವ್ಯಕ್ತಿಯೊಬ್ಬರಿಗೆ 75 ವರ್ಷ ಎನ್ನುವುದು ತಮ್ಮ ಜೀವನದ ಕೊನೆಯ ಹಂತ. ಆದರೆ ದೇಶವೊಂದಕ್ಕೆ ಇದು ಅತ್ಯಂತ ಯುವ ಸಮಯ. ಈ ಎಪ್ಪತ್ತೈದು ವರ್ಷಗಳಲ್ಲಿ ದೇಶ ಸಾಕಷ್ಟು ಏಳುಬೀಳುಗಳನ್ನು ಕಂಡಿದೆ. ಅನೇಕ ಸಂತಸದ ಕ್ಷಣಗಳಿವೆ. ಪ್ರಜಾಪ್ರಭುತ್ವವನ್ನೇ ಸವಾಲಿಗೊಡ್ಡಿದ ಸಮಯಗಳನ್ನೂ ಕಂಡಿವೆ. ಈ ನಡುವೆ ನೀತಿಗಳಲ್ಲಿ ವೈಫಲ್ಯಗಳನ್ನೂ ಕಂಡಿದ್ದೇವೆ. ಆದರೆ ಈಗ ನಾವು ಮೇಕ್‌ ಇನ್‌ ಇಂಡಿಯಾ ನೀತಿ ಹೊಂದಿದ್ದೇವೆ. ನಮ್ಮ ದೇಶ ಮುಂದುವರಿಯಲು ಬೇಕಾಗಿರುವುದು ಸ್ವಯಂಸ್ಫೂರ್ತಿ. ಪ್ರಧಾನಮಂತ್ರಿಯವರು ಅಂತಹ ಸ್ಫೂರ್ತಿಯನ್ನು ನಮಗೆಲ್ಲ ನೀಡುತ್ತಿದ್ದಾರೆ ಎಂದರು.

ನಮಗೆ ದೂರದೃಷ್ಟಿಯುಳ್ಳ ನಾಯಕ, ಅದಕ್ಕೆ ತಕ್ಕಂತ ಸಿದ್ಧತೆ, ಜಾರಿಗೊಳಿಸುವ ನಾಯಕರು ಬೇಕಾಗಿದ್ದಾರೆ. ನಮ್ಮ ಬಳಿ ಈಗ ಪ್ರಧಾನಿ ನರೇಂದ್ರ ಮೋದಿಯವರಂತಹ ದೂರದೃಷ್ಟಿಯ ನಾಯಕ, ಉತ್ತಮ ನೀತಿ ಹಾಗೂ ಅಮಿತ್‌ ಷಾ ಅವರಂತಹ ನಾಯಕರು ಇದ್ದಾರೆ ಎಂದು ಬೊಮ್ಮಾಯಿ ಹೇಳಿದರು.

ಇದನ್ನೂ ಓದಿ | ಭಾರತದ ಮೊಟ್ಟ ಮೊದಲ ಸ್ವದೇಶಿ ಸಮರ ನೌಕೆ ವಿಕ್ರಾಂತ್ ನೌಕಾಪಡೆಗೆ ಹಸ್ತಾಂತರ

ಮಹಾರಾಜರ ಕೊಡುಗೆಯೂ ಸೇರಿ ಕರ್ನಾಟಕ ಅಭಿವೃದ್ಧಿ ಪಥದಲ್ಲಿ ಸದಾ ಮುಂಚೂಣಿಯಲ್ಲಿದೆ. ಹೀಗಾಗಿ ವಿಶ್ವದೆಲ್ಲೆಡೆಯಿಂದ ಇಲ್ಲಿ ಹೂಡಿಕೆ ಮಾಡಿದ್ದಾರೆ. ಕರ್ನಾಟಕದಲ್ಲೂ ಒಂದು ಸಮಯದಲ್ಲಿ ಪರ್ಮಿಟ್‌ ರಾಜ್‌ ಇತ್ತು. ಆದರೆ ಮುಂಬರುವ ದಿನಗಳಲ್ಲಿ ಅನೇಕ ಸುಧಾರಣೆಗಳನ್ನು ಕಂಡು, ಪಶ್ಚಿಮದ ದೇಶಗಳು ಪ್ರಬಲವಾಗಿದ್ದ ತಂತ್ರಜ್ಞಾನ ಕ್ಷೇತ್ರದಲ್ಲೂ ಮುಂಚೂಣಿಯಲ್ಲಿದ್ದೇವೆ. ಈಗ ವಿಶ್ವಪ್ರಸಿದ್ಧ 400 ಸಂಶೋಧನೆ ಮತ್ತು ಅಭಿವೃದ್ಧಿ ಕೇಂದ್ರಗಳನ್ನು ಹೊಂದಿದ್ದೇವೆ. ವಿಶ್ವದ ಯಾವುದೇ ನಗರ ಇಷ್ಟು ಕೇಂದ್ರಗಳನ್ನು ಹೊಂದಿಲ್ಲ ಎಂದು ಬೊಮ್ಮಾಯಿ ವಿವರಿಸಿದರು.

ಕರ್ನಾಟಕಕ್ಕೆ ಪ್ರಕೃತಿಯ ಆಶೀರ್ವಾದವಿದ್ದು, ಇಲ್ಲಿ 10 ಕೃಷಿ ಪರಿಸರವಿದೆ. ಹೆಚ್ಚಿನ ದಿನಗಳಲ್ಲಿ ಕೃಷಿ ಚಟುವಟಿಕೆಗಳು ಇಲ್ಲಿ ನಡೆಯುತ್ತವೆ. ಕೃಷಿಯಲ್ಲಿ 1% ಬೆಳವಣಿಗೆಯು ಉತ್ಪಾದನಾ ಕ್ಷೇತ್ರದಲ್ಲಿ 4% ಹಾಗೂ 10% ಸೇವಾ ಕ್ಷೇತ್ರದ ಬೆಳವಣಿಗೆಗೆ ಕಾರಣವಾಗುತ್ತದೆ. ಹಾಗಾಗಿ, ಕೃಷಿ ಕ್ಷೇತ್ರವನ್ನು ಕೇವಲ ಆಹಾರ ಭದ್ರತೆ ದೃಷ್ಟಿಯಿಂದ ಮಾತ್ರ ನೋಡಬಾರದು. ರೈತರ ಆದಾಯವನ್ನು ದ್ವಿಗುಣಗೊಳಿಸುವ ನಿಟ್ಟಿನಲ್ಲಿ ಎಲ್ಲರೂ ಗಮನ ಹರಿಸಬೇಕು. ಆರ್ಥಿಕತೆಯ ಅಡಿಪಾಯ ಎಂದರೆ ಹಣವಲ್ಲ, ಜನರು. ಜನರ ಅಗತ್ಯಗಳನ್ನು ಮೂಲವಾಗಿಸಿಕೊಂಡು ಯೋಜನೆಗಳನ್ನು ರೂಪಿಸಬೇಕು. 1 ಟ್ರಿಲಿಯನ್‌ ಡಾಲರ್‌ ಕೊಡುಗೆ ನೀಡುವ ಯೋಜನೆ ಹೊಂದಿದ್ದೇವೆ. ಇದಕ್ಕೆ ಎಲ್ಲ ನೀಲಿನಕ್ಷೆ ಸಿದ್ಧವಾಗಿದೆ, ಸದ್ಯದಲ್ಲೆ ಜಾರಿ ಆರಂಭಿಸಲಿದ್ದೇವೆ ಎಂದರು.

ದೇಶದಲ್ಲಿ ಶಾಂತಿ ಮೂಡಿದೆ: ಕೇಂದ್ರ ಸಚಿವ ರೆಡ್ಡಿ

ಪ್ರಧಾನಿ ನರೇಂದ್ರ ಮೋದಿಯವರ ಅಧಿಕಾರಾವಧಿಯಲ್ಲಿ ದೇಶದ ಪ್ರಮುಖ ನಗರಗಳಲ್ಲಿ ಶಾಂತಿ ಮೂಡಿಸಿದೆ ಎಂದು ಕೇಂದ್ರ ಸಂಸ್ಕೃತಿ ಸಚಿವ ಜಿ. ಕಿಶನ್‌ ರೆಡ್ಡಿ ತಿಳಿಸಿದರು. ಕೋಮು ಸಂಘರ್ಷಗಳು ತಗ್ಗಿವೆ. ಈಶಾನ್ಯ ರಾಜ್ಯಗಳಲ್ಲಿ 15-20 ದಿನಗಳವರೆಗೆ ಬಂದ್‌ ಆಗುತ್ತಿದ್ದ ದಿನಗಳು ಈಗ ಇಲ್ಲವಾಗಿವೆ. ಅಲ್ಲಿನ ಎಂಟು ರಾಜ್ಯ ಸರ್ಕಾರಗಳೊಂದಿಗೆ ಸಂಪರ್ಕ ಸಾಧಿಸಿ ಈಗ ರಸ್ತೆ, ಮೂಲಸೌಕರ್ಯ, ವೈದ್ಯಕೀಯ, ರಾಜಕೀಯ ಸೇರಿ ಎಲ್ಲ ಕ್ಷೇತ್ರಗಳಲ್ಲೂ ಬೆಳವಣಿಗೆ ಕಾಣುತ್ತಿದ್ದೇವೆ ಎಂದರು.

ಅಟಲ್‌ ಬಿಹಾರಿ ವಾಜಪೇಯಿ ಅವರ ಕಾಲದಲ್ಲಿ ಸ್ವರ್ಣ ಚತುರ್ಭುಜ ಯೋಜನೆ ಮೂಲಕ ಹೈವೇಗಳ ಅಭಿವೃದ್ಧಿ ಆರಂಭವಾಗಿತ್ತು. ಆದರೆ ನಡುವೆ ಆಗಮಿಸಿದ ಸರ್ಕಾರದ ಸಮಯದಲ್ಲಿ ಈ ಯೋಜನೆ ನನೆಗುದಿಗೆ ಬಿದ್ದಿತು. ಈಗ ಮತ್ತೆ ದೇಶದಲ್ಲಿ ಅತ್ಯುತ್ತಮ ಹೈವೇಗಳು ಅಭಿವೃದ್ಧಿಯಾಗುತ್ತಿವೆ. ವಿಮಾನ ನಿಲ್ದಾಣಗಳ ಅಭಿವೃದ್ಧಿ ವೇಗ ಹೆಚ್ಚಾಗಿದೆ. ಮುಂದಿನ ನಾಲ್ಕು ವರ್ಷದಲ್ಲಿ 100 ವಿಮಾನ ನಿಲ್ದಾಣಗಳು ನಿರ್ಮಾಣವಾಗಲಿವೆ. ಬೆಟ್ಟಗುಡ್ಡಗಳ ಪ್ರದೇಶಗಳಲ್ಲಿ 100 ಹೆಲಿಪ್ಯಾಡ್‌ ನಿರ್ಮಾಣ ಆಗಲಿವೆ. ಅದೇ ರೀತಿ ರೈಲು, ಹಡಗು ಸಂಪರ್ಕದಲ್ಲೂ ಅನೇಕ ಯೋಜನೆಗಳು ಅನುಷ್ಠಾನವಾಗುತ್ತಿವೆ ಎಂದು ವಿವರಿಸಿದರು.

ದೇಶದ ವಿವಿಧೆಡೆಯೂ ಸರ್ಕಾರ ಹಾಗೂ ಕೈಗಾರಿಕಾ ಕ್ಷೇತ್ರದ ಸಹಭಾಗಿತ್ವದಿಂಧಾಗಿ ಅಭಿವೃದ್ಧಿ ಆಗುತ್ತಿದೆ. ಈಗಾಗಲೆ ಅನೇಕ ಕ್ಷೇತ್ರಗಳ ಉತ್ಪಾದನೆಯಲ್ಲಿ ಮುಂಚೂಣಿಯಲ್ಲಿದ್ದು, ಅನೇಕ ಕ್ಷೇತ್ರಗಳಲ್ಲಿ ಮೊದಲ ಸ್ಥಾನ ತಲುಪುವ ಮಾರ್ಗದಲ್ಲಿದ್ದೇವೆ. ವಿಶ್ವದಲ್ಲೇ ಅತಿ ಹೆಚ್ಚು ಹೂಡಿಕೆ ಆಕರ್ಷಿಸುವ ದೇಶವಾಗಿಸುವಲ್ಲಿ, ದೇಶವನ್ನು ವಿಶ್ವಗುರುವಾಗಿಸುವಲ್ಲಿ ಎಲ್ಲರೂ ಸಹಭಾಗಿತ್ವದಲ್ಲಿ ಪ್ರಯತ್ನ ನಡೆಸೋಣ ಎಂದರು.

ಕಿರ್ಲೋಸ್ಕರ್‌ ಸಂಸ್ಥೆಯ ವಿಕ್ರಂ ಕಿರ್ಲೋಸ್ಕರ್‌ ಮಾತನಾಡಿ, ಕೋವಿಡ್‌ ಸಮಯದಲ್ಲಿ ಪ್ರಧಾನಿ ಮೋದಿಯವರ ಮಾತು ಸಾಕಷ್ಟು ಉತ್ತೇಜನ ನೀಡಿತು. ಕೋವಿಡ್‌ ಸಮಯದಲ್ಲಿ, ಅಧಿಕಾರದಲ್ಲಿರುವವರಿಂದ ಸಾಮಾನ್ಯ ಜನರವರೆಗೂ ಎಲ್ಲರ ಸಹಭಾಗಿತ್ವದಿಂದಾಗಿ ಸುರಕ್ಷಿತವಾಗಿ ಹೊರಬರಲು ಕಾರಣರಾಗಿದ್ದಾರೆ ಎಂದು ಹೇಳಿದರು.

ಆರ್‌.ಪಿ. ಸಂಜೀವ್‌ ಗೋಯೆಂಕಾ ಗ್ರೂಪ್‌ನ ಸಂಜೀವ್‌ ಗೋಯೆಂಕಾ “”ಭಾರತದ ಸಾಮರ್ಥ್ಯವನ್ನು ಅರಿಯುವವರಲ್ಲಿ ಪ್ರಧಾನಿ ಮೋದಿಯವರು ಮುಂಚೂಣಿಯಲ್ಲಿದ್ದಾರೆ. ಸಬ್‌ ಕಾ ಸಾಥ್‌, ಸಬ್‌ ಕಾ ವಿಕಾಸ್‌ ಘೋಷಣೆ ಮೂಲಕ ದೇಶವನ್ನು ಮುನ್ನಡೆಸುತ್ತಿದ್ದಾರೆ. ಕೈಗಾರಿಕೆ ಹಾಗೂ ಎಲ್ಲರೂ ಸೇರಿ ಭಾರತವನ್ನು ಮುನ್ನಡೆಸೋಣ, ಹರ್‌ ಘರ್‌ ತಿರಂಗಾ ಅಭಿಯಾನದಲ್ಲೂ ನಾವು ಭಾಗಿಯಾಗುತ್ತಿದ್ದೇವೆʼʼ ಎಂದರು.

ಬಜಾಜ್‌ ಫೈನಾನ್ಸ್‌ನ ಸಂಜೀವ್‌ ಬಜಾಜ್‌ ಮಾತನಾಡಿ “”ಕೊರೊನಾ ಸಮಯದಲ್ಲಿ ಎದುರಾದ ಸಂಕಷ್ಟಗಳು ನಮಗೆ ಅನೇಕ ಅವಕಾಶಗಳನ್ನು ಕಲ್ಪಿಸಿಕೊಟ್ಟಿವೆ. ಇದಕ್ಕಾಗಿ ನಾವು ನಮ್ಮ ಉತ್ಪಾದನೆಯನ್ನು ನಾಲ್ಕೈದು ಪಟ್ಟು ಹೆಚ್ಚಳ ಮಾಡಬೇಕಿದೆ. ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ದೇಶಕ್ಕೆ ಹೊಸ ಗುರಿಯನ್ನು ನಿಗದಿಪಡಿಸುತ್ತಿರುವುದು ಸಂತಸವಾಗುತ್ತಿದೆ. ಮುಂದಿನ ಇಪ್ಪತ್ತೈದು ವರ್ಷದಲ್ಲಿ ಕನಿಷ್ಠ 8-10% ಜಿಡಿಪಿ ಬೆಳವಣಿಗೆ ಆಗಲೇಬೇಕಿದೆ. ಅಮೆರಿಕ ಹಾಗೂ ಚೀನಾ ಜತೆಗೂಡಿದಕ್ಕಿಂತಲೂ ಹೆಚ್ಚಿನ ಪ್ರಮಾಣದ ಆನ್‌ಲೈನ್‌ ವಹಿವಾಟನ್ನು ಭಾರತ ನಡೆಸುತ್ತಿದೆ. ಭಾರತದಲ್ಲಿ ಹೆಚ್ಚೆಚ್ಚು ಜನರನ್ನು ಔಪಚಾರಿಕ ಆರ್ಥಿಕ ವ್ಯಾಪ್ತಿಗೆ ತರಲು ತಂತ್ರಜ್ಞಾನ ಸಹಾಯ ಮಾಡಲಿದೆʼʼ ಎಂದರು.

ಇದನ್ನೂ ಓದಿ | Modi Rally : ತೆಲಂಗಾಣ ಮಂದಿಗೆ ಡಬಲ್‌ ಎಂಜಿನ್‌ ಅಭಿವೃದ್ಧಿ ಹಂಬಲ

Exit mobile version