ಬೆಂಗಳೂರು: ಗ್ಯಾರಂಟಿ ಯೋಜನೆಗೆ (Congress Guarantee Scheme) ಹಣ ಹೊಂದಾಣಿಕೆ ಸಂಬಂಧ ಆದಾಯ ಮೂಲಗಳನ್ನು ಹುಡುಕುತ್ತಿರುವ ರಾಜ್ಯ ಸರ್ಕಾರ ಈಗ ಬಿಬಿಎಂಪಿಯಲ್ಲಿ (BBMP) ಆಗುತ್ತಿರುವ ಆದಾಯ ಸೋರಿಕೆ ತಡೆಗಟ್ಟಲು ಮುಂದಾಗಿದೆ. ಈ ಹಿನ್ನೆಲೆಯಲ್ಲಿ ನಗರದ ಆಸ್ತಿಗಳ ಡಿಜಿಟಲೀಕರಣ (Asset Digitization) ಪ್ರಕ್ರಿಯೆಗೆ ಚಾಲನೆ ನೀಡಿದೆ. ಈಗ ಸುಮಾರು 20 ಲಕ್ಷ ಆಸ್ತಿ ದಾಖಲೆಗಳನ್ನು ಡಿಜಿಟಲೀಕರಣಗೊಳಿಸುವ ಗುರಿಯನ್ನು ಹಾಕಿಕೊಳ್ಳಲಾಗಿದ್ದು, ಆ ನಿಟ್ಟಿನಲ್ಲಿ ಕಾರ್ಯೋನ್ಮುಖವಾಗಿದೆ. ಈಗ ಇದಕ್ಕಾಗಿ ವಿದ್ಯುತ್ ಬಿಲ್ ಹಾಗೂ ಆಸ್ತಿ ತೆರಿಗೆ ಪಾವತಿಸಿದ ದಾಖಲೆಯನ್ನು ಸಿದ್ಧವಾಗಿಟ್ಟುಕೊಳ್ಳುವಂತೆ ಆಸ್ತಿ ಮಾಲೀಕರ ನೋಂದಾಯಿತ ಮೊಬೈಲ್ ಸಂಖ್ಯೆಗೆ ಸಂದೇಶವನ್ನು ಕಳುಹಿಸಲಾಗುತ್ತಿದೆ.
ಬಿಬಿಎಂಪಿ ಸಿಬ್ಬಂದಿ ಮುಂದಿನ ದಿನಗಳಲ್ಲಿ ತಮ್ಮ ಸ್ವತ್ತಿಗೆ ಭೇಟಿ ನೀಡುತ್ತಾರೆ. ನಿಮ್ಮ ಸ್ವತ್ತಿನ ಆಸ್ತಿ ತೆರಿಗೆ ರಶೀದಿ ಮತ್ತು ಬೆಸ್ಕಾಂ ಬಿಲ್‌ನ ಪ್ರತಿಯನ್ನು ಸಿದ್ಧವಾಗಿಟ್ಟುಕೊಂಡು ಅವರಿಗೆ ನೀಡಬೇಕು. ನಿಮ್ಮ ಆಸ್ತಿಯನ್ನು ಡಿಜಿಟಲೈಸ್ ಮಾಡಲು ಇದು ಅತ್ಯವಶ್ಯಕವಾಗಿದೆ ಎಂಬ ಸಂದೇಶವನ್ನು ಕಂದಾಯ ಇಲಾಖೆ ವತಿಯಿಂದ ಕಳುಹಿಸಲಾಗುತ್ತಿದೆ.
ಪ್ರತಿ ಕಂದಾಯ ಅಧಿಕಾರಿಯಿಂದ ದಿನಕ್ಕೆ 25 ಆಸ್ತಿಗಳಿಗೆ ಭೇಟಿ ಗುರಿ
ಬಿಬಿಎಂಪಿ ವ್ಯಾಪ್ತಿಯಲ್ಲಿ ಬರುವ ಕೊಡಿಗೇಹಳ್ಳಿ, ಸಿ.ವಿ.ರಾಮನ್‌ನಗರ, ಹೊರಮಾವು ಹಾಗೂ ಅರಕೆರೆ ವಾರ್ಡ್‌ನಲ್ಲಿ ಆಸ್ತಿ ದಾಖಲೆಗಳ ಡಿಜಿಟಲೀಕರಣ ಕಾರ್ಯವು ಈಗಾಗಲೇ ಆರಂಭ ಮಾಡಲಾಗಿದೆ. ಮೂರು ತಿಂಗಳೊಳಗೆ ಈ ಪ್ರಕ್ರಿಯೆಯನ್ನು ಪೂರ್ಣಗೊಳಿಸುವ ಗುರಿಯನ್ನು ಹೊಂದಲಾಗಿದೆ. ಹೀಗಾಗಿ ಕಳೆದ ಒಂದು ವಾರದಿಂದಲೇ ಬಿಬಿಎಂಪಿಯ ಕಂದಾಯ ವಿಭಾಗದ ಅಧಿಕಾರಿಗಳು ನಗರದಲ್ಲಿ ಮನೆ ಮನೆ ಭೇಟಿ ನೀಡಿ ಆಸ್ತಿ ತೆರಿಗೆ ರಶೀದಿಯನ್ನು ಹಾಗೂ ವಿದ್ಯುತ್ ಬಿಲ್ ಅನ್ನು ಪಡೆಯುತ್ತಿದ್ದಾರೆ. ಅಲ್ಲದೆ, ಪ್ರತಿ ಕಂದಾಯ ಅಧಿಕಾರಿಯು ದಿನಕ್ಕೆ 25 ಆಸ್ತಿಗಳಿಗೆ ಭೇಟಿ ನೀಡುವ ಗುರಿಯನ್ನು ನೀಡಲಾಗಿದೆ.
ಭ್ರಷ್ಟಾಚಾರ ನಿಯಂತ್ರಣ ಮತ್ತು ಕೆಲಸದ ವಿಳಂಬ ತಪ್ಪಿಸಲು ಈ ಕ್ರಮ ಕೈಗೊಳ್ಳಲಾಗಿದೆ. ಪಾಲಿಕೆಯ ಕಂದಾಯ ವಿಭಾಗದ ಅಧಿಕಾರಿಗಳು ಆಸ್ತಿ ದಾಖಲೆಗಳನ್ನು ಸ್ಕ್ಯಾನ್ ಮಾಡಿ ಆನ್‌ಲೈನ್‌ನಲ್ಲಿ ಅಪ್ಲೋಡ್ ಮಾಡುತ್ತಿದ್ದಾರೆ. ಇದೇ ವೇಳೆ ದಾಖಲೆಗಳಿಗೆ ನಿರ್ದಿಷ್ಟ ರೂಪವನ್ನು ಸಹ ನೀಡಲಾಗುತ್ತಿದೆ. ಈ ಮೂಲಕ ಡಿಜಿಟಲೀಕರಣ ಮಾಡಲಾಗುತ್ತಿದೆ.
ಕಂದಾಯ ಇಲಾಖೆಯಿಂದ ಶೀಘ್ರ ಡ್ಯಾಶ್ ಬೋರ್ಡ್
ಮೂರು ತಿಂಗಳಲ್ಲಿ 20 ಲಕ್ಷ ಆಸ್ತಿಗಳನ್ನು ಡಿಜಿಟಲೀಕರಣ ಮಾಡುವ ಗುರಿಯನ್ನು ಹಾಕಿಕೊಳ್ಳಲಾಗಿದ್ದರಿಂದ ಕಂದಾಯ ವಿಭಾಗದಿಂದ ಡ್ಯಾಶ್ ಬೋರ್ಡ್ ಸಿದ್ಧತೆ ಬಗ್ಗೆ ಮಾತುಕತೆ ನಡೆಯುತ್ತಿದೆ. ಈ ಮೂಲಕ ಪ್ರತಿ ನಿತ್ಯ ಎಷ್ಟು ಆಸ್ತಿಗಳನ್ನು ಡಿಜಿಟಲೀಕರಣ ಮಾಡಲಾಗಿದೆ ಎಂಬುದನ್ನು ದಾಖಲಿಸುವ ಚಿಂತನೆ ಇದೆ. ಇದಕ್ಕಾಗಿ ಶೀಘ್ರದಲ್ಲಿ ಡ್ಯಾಶ್ ಬೋರ್ಡ್ ಸಿದ್ಧಪಡಿಸಲಾಗುವುದು ಎಂದು ಕಂದಾಯ ವಿಭಾಗದ ಅಧಿಕಾರಿಗಳು ತಿಳಿಸಿದ್ದಾರೆ.
ಅಕ್ರಮಗಳಿಗೆ ಬೀಳಲಿದೆ ಕಡಿವಾಣ
ಪಾಲಿಕೆಯ ಬಹುತೇಕ ವಾರ್ಡ್‌ಗಳಲ್ಲಿ ಖಾತಾ ಪ್ರಮಾಣಪತ್ರಗಳನ್ನು ಮುದ್ರಿತ ರೂಪದಲ್ಲಿ ನೀಡಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ‘ಬಿ’ ಖಾತಾ ಆಸ್ತಿಗಳಿಗೆ ಅಕ್ರಮವಾಗಿ ‘ಎ’ ಖಾತಾ ನೀಡುವಂತಹ ಪ್ರಕರಣಗಳು ನಡೆಯುತ್ತಿದ್ದವು. ಈಗ ಮುದ್ರಿತ ಪ್ರಮಾಣಪತ್ರಗಳನ್ನು ಸ್ಕ್ಯಾನಿಂಗ್ ಮಾಡಿಸಿ ಆಸ್ತಿ ದಾಖಲೆಗಳನ್ನು ಡಿಜಿಟಲೀಕರಣ ಮಾಡುವುದರಿಂದ ಈ ಎಲ್ಲ ಅಕ್ರಮಗಳಿಗೆ ಕಡಿವಾಣ ಬೀಳಲಿದೆ. ಜತೆಗೆ ಪಾಲಿಕೆಗೆ ಉಂಟಾಗುತ್ತಿರುವ ಆದಾಯ ಸೋರಿಕೆ, ನಷ್ಟ ಸಹ ತಪ್ಪಲಿದೆ.
ತೆರಿಗೆ ವಂಚನೆ ಪತ್ತೆಯಾಗಿತ್ತು
ಆಸ್ತಿ ಮಾಲೀಕರು ಸ್ವಯಂಘೋಷಿತ ಆಸ್ತಿ ತೆರಿಗೆ ಪದ್ಧತಿಯಡಿ (ಎಸ್‌ಎಎಸ್) ಕಟ್ಟಡದ ವಿಸ್ತೀರ್ಣವನ್ನು ಕಡಿಮೆ ನಮೂದಿಸಿ ತೆರಿಗೆ ವಂಚಿಸುತ್ತಿರುವುದು ಟೋಟಲ್ ಸ್ಟೇಷನ್ ಸರ್ವೆಯಿಂದ ಬೆಳಕಿಗೆ ಬಂದಿತ್ತು. ಹೀಗಾಗಿ, ಎಲ್ಲ ಆಸ್ತಿಗಳನ್ನು ಡಿಜಿಟಲೀಕರಣ ಮಾಡಿ, ವಾಸ್ತವ ಅಳತೆಯನ್ನು ನಮೂದಿಸಲಾಗುತ್ತದೆ. ಆಗ ನಿಗದಿತ ಜಾಗಕ್ಕೆ ತೆರಿಗೆ ಕಟ್ಟುವುದರಿಂದ ಪ್ರಸ್ತುತ ಸಂಗ್ರಹವಾಗುತ್ತಿರುವ ಆಸ್ತಿ ತೆರಿಗೆಗಿಂತ 2 ರಿಂದ 3 ಪಟ್ಟು ಹೆಚ್ಚಳವಾಗಲಿದೆ.
ಈಗ ಸಂಗ್ರಹವಾಗುತ್ತಿರುವ ತೆರಿಗೆ ಎಷ್ಟು?
ಸದ್ಯ ಪಾಲಿಕೆಗೆ ವಾರ್ಷಿಕವಾಗಿ 3500 ರಿಂದ 4000 ಕೋಟಿ ರೂ. ತೆರಿಗೆ ಸಂಗ್ರಹವಾಗುತ್ತಿದೆ. ಒಂದು ವೇಳೆ ಆಸ್ತಿ ತೆರಿಗೆ ಮೂರು ಪಟ್ಟು ಹೆಚ್ಚಳವಾದರೆ 10000 ದಿಂದ 12000 ಕೋಟಿ ರೂಪಾಯಿವರೆಗೆ ಸಂಗ್ರಹವಾಗಬಹುದು ಎಂದು ಅಂದಾಜಿಸಲಾಗಿದೆ.
ಇದನ್ನೂ ಓದಿ: ಆರೇ ಜನ ಇದ್ದ ಕಾರಣ ಬೆಂಗಳೂರಲ್ಲಿ ವಿಮಾನದಿಂದ ಕೆಳಗಿಳಿಸಿದ ಸಿಬ್ಬಂದಿ; ಪ್ರಯಾಣಿಕರ ಆಕ್ರೋಶ
ಕಠಿಣ ಕ್ರಮಕ್ಕೆ ಮುಂದಾಗಿರುವ ಬಿಬಿಎಂಪಿ
ತೆರಿಗೆ ಬಾಕಿ ಉಳಿಸಿಕೊಂಡಿರುವ ಸುಸ್ತಿದಾರರಿಗೆ ನೋಟಿಸ್ ಜಾರಿಗೊಳಿಸುವ ಪ್ರಕ್ರಿಯೆಗೆ ಬಿಬಿಎಂಪಿ ಚಾಲನೆ ನೀಡಿದೆ. ನೋಟಿಸ್ ಬಳಿಕವೂ ತೆರಿಗೆ ಪಾವತಿ ಮಾಡದ ಆಸ್ತಿ ಮಾಲೀಕರಿಗೆ ದಂಡ ವಿಧಿಸಲು ಮುಂದಾಗಲಾಗಿದೆ.