ಬೆಂಗಳೂರು: ನಗರದಲ್ಲಿ ವಾರಕ್ಕೊಂದು ಎಂಬಂತೆ ಕಸದ ಲಾರಿಗಳಿಂದ ಅಪಘಾತ ಸಂಭವಿಸುತ್ತಿದ್ದ ಹಿನ್ನೆಲೆಯಲ್ಲಿ ಬಿಬಿಎಂಪಿ (BBMP) ವಿರುದ್ಧ ಸಾರ್ವಜನಿಕರಿಂದ ವ್ಯಾಪಕ ಆಕ್ರೋಶ ವ್ಯಕ್ತವಾಗಿತ್ತು. ಈ ಹಿನ್ನೆಲೆಯಲ್ಲಿ ಕಠಿಣ ಕ್ರಮಕ್ಕೆ ಮುಂದಾಗಿರುವ ಬಿಬಿಎಂಪಿ, ಪಾಲಿಕೆ ವ್ಯಾಪ್ತಿಯ ಕಸದ ವಾಹನಗಳ ಮೇಲೆ ಬಿಬಿಎಂಪಿ ನಾಮಫಲಕ ಹಾಕುವಂತಿಲ್ಲ ಎಂದು ಆದೇಶ ಹೊರಡಿಸಿದೆ.
ಬಿಬಿಎಂಪಿ ವಾಹನಗಳಿಂದ ಅಪಘಾತವಾಗುತ್ತಿದೆ ಎಂಬ ಅಪಖ್ಯಾತಿಯಿಂದ ದೂರವಿರಲು ಬಿಬಿಎಂಪಿ (BBMP) ಹೊಸ ರೂಲ್ಸ್ ಜಾರಿ ಮಾಡಿದೆ. ಗುತ್ತಿಗೆದಾರರ ಮೂಲಕ ಸರಬರಾಜು ಮಾಡಲಾದ ಎಲ್ಲ ವಾಹನಗಳಿಗೂ ಈ ಆದೇಶ ಅನ್ವಯವಾಗಲಿದೆ.
ಒಂದೊಮ್ಮೆ ಕಸದ ವಾಹನಗಳಿಂದ ಅಪಘಾತ ಸಂಭವಿಸಿ ಸಾವು, ನೋವಾದರೆ, ದಂಡದ ರೂಪದಲ್ಲಿ ಆ ವಾಹನ ಮಾಲೀಕರೇ ಪರಿಹಾರ ನೀಡಬೇಕೆಂದು ಬಿಬಿಎಂಪಿ (BBMP) ಘನತ್ಯಾಜ ವಿಭಾಗದ ವಿಶೇಷ ಆಯುಕ್ತರು ಆದೇಶಿಸಿದ್ದಾರೆ. ಅನಾಮಧೇಯ ವ್ಯಕ್ತಿಗಳಿಂದ ಸ್ವಂತ ವಾಹನಗಳ ಮೇಲೆ ಬಿಬಿಎಂಪಿ ನಾಮಫಲಕ ಅಳವಡಿಕೆಗೆ ಬ್ರೇಕ್ ಹಾಕಲು ಮುಂದಾಗಿದ್ದು, ಆದೇಶ ಪಾಲಿಸದಿದ್ದರೆ ತಕ್ಷಣ ಕ್ರಮ ಕೈಗೊಳ್ಳುವಂತೆ ಸೂಚನೆ ನೀಡಲಾಗಿದೆ.
ಇದನ್ನೂ ಓದಿ | ಬಿಬಿಎಂಪಿ ಲಾರಿ ಹಾಗೂ ಭಾರಿ ವಾಹನಗಳಿಗೆ ನಿಯಮ ಜಾರಿ; ರವಿಕಾಂತೇಗೌಡ ಸೂಚನೆ
ಪಾಲಿಕೆಯ ಆದೇಶದಲ್ಲಿ ಏನಿದೆ?
1. ಪಾಲಿಕೆಯ ಘನತ್ಯಾಜ್ಯ ನಿರ್ವಹಣಾ ಕೋಶದ ಗುತ್ತಿಗೆದಾರರ ಮೂಲಕ ಸರಬರಾಜು ಮಾಡಲಾದ ಎಲ್ಲ ಆಟೋ, ಟಿಪ್ಪರ್‌ಗಳು, ಕಾಂಪ್ಯಾಕ್ಟರ್‌ಗಳ ಪಾಲಿಕೆಯ ಸೇವೆಯಲ್ಲಿ / ಬಿಬಿಎಂಪಿ / ಬಿಬಿಎಂಪಿ ಸೇವೆಯಲ್ಲಿ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ / ಇತರ ಎಂದು ನಮೂದಿಸುವುದನ್ನು ತಕ್ಷಣದಿಂದ ನಿಷೇಧಿಸಲಾಗಿದೆ.
2. ಪಾಲಿಕೆಗೆ ಸಂಬಂಧಿಸಿರದ ಅನಾಮಧೇಯ ವಾಹನಗಳು ಬೆಂಗಳೂರು ಮಹಾನಗರ ಸೇವೆಯಲ್ಲಿ / ಬಿಬಿಎಂಪಿ / ಬಿಬಿಎಂಪಿ ಸೇವೆಯಲ್ಲಿ / ಬೃಹತ್ ಪಾಲಿಕೆ ಎಂದು ನಾಮಫಲಕ ಹಾಕಿದ್ದಲ್ಲಿ ಅಥವಾ ನಮೂಸಿದ್ದಲ್ಲಿ ಅಂತಹ ವಾಹನಗಳ ಮೇಲೆ ಜತೆಗೆ ಮಾಲೀಕರ ಮೇಲೆ ಕ್ರಿಮಿನಲ್ ಪ್ರಕರಣಗಳನ್ನು ದಾಖಲಿಸಲಾಗುತ್ತದೆ.
3. ಎಲ್ಲ ಚಾಲಕರ ವಾಹನ ಚಾಲನಾ ಪರವಾನಿಗೆ , ವಾಹನ ಚಲಿಸಲು ದೈಹಿಕ ಸಧೃಡತೆಯ ಪ್ರಮಾಣ ಪತ್ರ , ವಾಹನದ ಫಿಟ್ನೆಸ್ ಪ್ರಮಾಣ ಪತ್ರ , ಇನ್ಶುರೆನ್ಸ್ ಪ್ರಮಾಣ ಪತ್ರಗಳ ತಪಾಸಣೆ ಹಾಗೂ ಅವಶ್ಯ ಕಾಯ್ದೆಗಳನ್ವಯ ಇತರ ತಪಾಸಣೆಗಳನ್ನು ಸಹ ಸಂಬಂಧಿಸಿದ ಸಹಾಯಕ ಕಾರ್ಯಪಾಲಕ ಅಭಿಯಂತರರು ಕಿರಿಯ ಆರೋಗ್ಯ ಪರಿವೀಕ್ಷಕರುಗಳು ಕೈಗೊಳ್ಳುವುದು .
4. ವಲಯ ಮತ್ತು ವಾರ್ಡ್ ಮಾರ್ಷಲ್‌ಗಳು /ಕಿರಿಯ ಆರೋಗ್ಯ ಪರಿವೀಕ್ಷಕರುಗಳು ಕಾರ್ಯಾಚರಣೆಯ ರಸ್ತೆಗಳಲ್ಲಿ ಇಂತಹ ಅನಧಿಕೃತವಾಗಿ ಪಾಲಿಕೆಯ ಹೆಸರನ್ನು ನಮೂದಿಸಿರುವ ನಾಮಫಲಕಗಳನ್ನು ಹಾಕಿರುವ ವಾಹನಗಳನ್ನು ನಿಲ್ಲಿಸಿ ಕೂಡಲೇ ತೆಗೆಸುವುದು
5. ಒಂದು ವೇಳೆ ಗುತ್ತಿಗೆದಾರರಿಗೆ ಪಾಲಿಕೆಯ ಹೆಸರು ನಮೂದು ನಾಮಫಲಕಗಳಿಲ್ಲದೆ ಘನತ್ಯಾಜ್ಯ ಸಂಗ್ರಹಣೆ , ಸಾಗಣೆ ಮತ್ತು ವಿಲೇವಾರಿಯಲ್ಲಿ ತೊಂದರೆಯಾಗುತ್ತಿದ್ದಲ್ಲಿ ಮುಂಚಿತವಾಗಿಯೇ ಅಧೀಕ್ಷಕ ಅಭಿಯಂತರರಿಂದ ಲಿಖಿತ ರೂಪದಲ್ಲಿ ಮಾನ್ಯತೆಯ ಅವಧಿಯೊಂದಿಗೆ ಅನುಮತಿ ಪತ್ರವನ್ನು ಪಡೆಯಬೇಕು. ಕಾರ್ಯಾಚರಣೆ ಸಮಯದಲ್ಲಿ ಪೊಲೀಸರು ಸೇರಿ ಇತರೆ ಅಧಿಕಾರಿಗಳು ಕೇಳಿದಲ್ಲಿ ಸದರಿ ಪತ್ರವನ್ನು ಸಲ್ಲಿಸುವುದು.
6. ಇನ್ನು ಮುಂದೆ ಅನಧಿಕೃತವಾಗಿ ಗುತ್ತಿಗೆದಾರರ ವಾಹನಗಳ ಮೇಲೆ ಪಾಲಿಕೆಯ ಸೇವೆಯಲ್ಲಿ ಬಿಬಿಎಂಪಿ ಸೇವೆಯಲ್ಲಿ ಬೃಹತ್ ಪಾಲಿಕೆ ಎಂದು ನಮೂದಿಸಿ ನಾಮಫಲಕ ಅಳವಡಿಸಿರುವುದು ಪಾಲಿಕೆಯ ಪೊಲೀಸ್ ಇಲಾಖೆಯ ಇತರೆ ಅಧಿಕಾರಿಗಳ ಗಮನಕ್ಕೆ ಬಂದರೆ, ಅಂತಹ ವಾಹನಗಳ ಚಾಲಕರ ಮೇಲೆ ಮತ್ತು ಮಾಲೀಕರ ಮೇಲೆ ಕಾನೂನಾತ್ಮಕವಾಗಿ ಕ್ರಮ ಜರುಗಿಸಲಾಗುತ್ತದೆ.
7. ಒಂದು ವೇಳೆ ಈ ವಾಹನಗಳಿಂದ ಅಪಘಾತಗಳಾಗಿ ಸಾರ್ವಜನಿಕರಿಗೆ ತೊಂದರೆ ಉಂಟಾದಲ್ಲಿ ಅಥವಾ ಸಾವು – ನೋವು ಸಂಭವಿಸಿದಲ್ಲಿ ಸದರಿ ವಾಹನಗಳ ಮಾಲೀಕರಿಂದಲೇ ಪರಿಹಾರದ ಮೊತ್ತವನ್ನು ದಂಡದ ರೂಪದಲ್ಲಿ ಸಂತ್ರಸ್ತರಿಗೆ ಕೊಡಿಸಲಾಗುವುದು ಎಂದು ಈ ಮೂಲಕ ಸೂಚಿಸಿದೆ.
ಇದನ್ನೂ ಓದಿ | ಜ್ವರ ಬಂದರೆ ಸಾಫ್ಟ್‌ವೇರ್ ಇಂಜಿನಿಯರ್ ಬಳಿ ಹೋಗುವ BBMP: ಕಸದ ಲಾರಿ ಕುರಿತ ತಪಾಸಣೆ ನಾಟಕ