ಬೆಂಗಳೂರು: ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ರಸ್ತೆ ಗುಂಡಿಗಳನ್ನು ಮುಚ್ಚುವ ಕಾರ್ಯ ನಿಧಾನಗತಿಯಲ್ಲಿ ಸಾಗುತ್ತಿರುವುದಕ್ಕೆ ಸ್ವತಃ ಮುಖ್ಯ ಆಯುಕ್ತರೇ ರಾತ್ರಿಯಿಡೀ ಸಂಚರಿಸಿ ರಸ್ತೆ ಗುಂಡಿಗಳನ್ನು ಮುಚ್ಚಿಸಿದರು. ಈ ಹಿಂದೆ ಬಿಬಿಎಂಪಿ ನೀಡಿದ್ದ ಗಡುವಿನ ಆಧಾರದಲ್ಲಿ ಇನ್ನು ಒಂದೆರಡು ದಿನದಲ್ಲಿ ಬೆಂಗಳೂರು ಸಂಫೂರ್ಣ ರಸ್ತೆ ಗುಂಡಿ ಮುಕ್ತವಾಗಬೇಕು. ಆದರೆ ಇನ್ನೂ ಅರ್ಧದಷ್ಟು ಕೆಲಸ ಬಾಕಿ ಉಳಿದಿದೆ. ಇದರಿಂದ ಸಾರ್ವಜನಿಕರಲ್ಲಿ ಅಸಮಾಧಾನ ಒಂದೆಡೆಯಾದರೆ ಸರ್ಕಾರದ ಕಡೆಯಿಂದಲೂ ಬಿಬಿಎಂಪಿ ಮೇಲೆ ಒತ್ತಡ ಹೆಚ್ಚಾಗುತ್ತಿತ್ತು
ಮುಖ್ಯ ಆಯುಕ್ತರಾದ ತುಷಾರ್ ಗಿರಿನಾಥ್‌ರವರು ನಗರದ ಪ್ರಮುಖ ರಸ್ತೆಗಳಲ್ಲಿ ರಸ್ತೆಗುಂಡಿ ಮುಚ್ಚುವ ಕಾರ್ಯವನ್ನು ಪರಿಶೀಲನೆ ನಡೆಸಿದರು. ಪಶ್ಚಿಮ ವಲಯ ವ್ಯಾಪ್ತಿಯ ಕಾವೇರಿ ಚಿತ್ರಮಂದಿರ ಜಂಕ್ಷನ್ ಬಳಿಯಿಂದ ಚೌಡಯ್ಯ ರಸ್ತೆಯಲ್ಲಿ (ಸ್ಯಾಂಕಿ ಟ್ಯಾಂಕ್) ರಸ್ತೆ ಕತ್ತರಿಸುವಿಕೆ ಭಾಗಕ್ಕೆ ಡಾಂಬರೀಕರಣ ಹಾಕಲಾಗುತ್ತಿದೆ. ವಾಹನ ಸಂಚಾರಕ್ಕೆ ಯಾವುದೇ ಸಮಸ್ಯೆ ಆಗದಂತೆ ಗುಣಮಟ್ಟವಾಗಿ ಡಾಂಬರೀಕರಣ ಮಾಡಲು ಮುಖ್ಯ ಆಯುಕ್ತರು ಅಧಿಕಾರಿಗಳಿಗೆ ಸೂಚನೆ ನೀಡಿದರು.
ದಾಸರಹಳ್ಳಿ ವಲಯದ ಜಾಲಹಳ್ಳಿ ರಸ್ತೆಯಿಂದ ಕಂಠೀರವ ಸ್ಟುಡಿಯೋ ಕಡೆ ಹೋಗುವ ಟಿವಿಎಸ್ ರಸ್ತೆಯಲ್ಲಿ ರಸ್ತೆ ಗುಂಡಿಗಳನ್ನು ಮುಚ್ಚುವ ಕಾರ್ಯವನ್ನು ನಡೆಸಲಾಗುತ್ತಿದೆ. ನಗರದ ಪ್ರಮುಖ ರಸ್ತೆಗಳಾದ ಆರ್ಟಿರಿಯಲ್ ಹಾಗೂ ಸಬ್-ಆರ್ಟಿರಿಯಲ್ ರಸ್ತೆಗಳಲ್ಲಿ ಗುರುತಿಸಿರುವ ರಸ್ತೆಗಳನ್ನು ಆದ್ಯತೆ ಮೇರೆಗೆ ಮುಚ್ಚಲು ಅಧಿಕಾರಿಗಳಿಗೆ ಆಯುಕ್ತ ಸೂಚನೆ ನೀಡಿದರು. ಇದೇ ವೇಳೆ ರಸ್ತೆಗಳಲ್ಲಿ ಜಲಮಂಡಳಿ ವತಿಯಿಂದ ಮಾಡಿರುವ ಒಳಚರಂಡಿಗಳ ಚೇಂಬರ್ ಪಾಯಿಂಟ್ ಬಳಿ ರಸ್ತೆ ಮಟ್ಟಕ್ಕಿಂತ ಎತ್ತರಕ್ಕೆ ಎತ್ತರಿಸದಂತೆ ಅಧಿಕಾರಿಗಳು ನೋಡಿಕೊಳ್ಳಲು ಸೂಚಿಸಿದರು.
ಇದನ್ನೂ ಓದಿ: ಅಪಾಯಕಾರಿ ಕಟ್ಟಡಗಳ ಮಾಹಿತಿ ಕೊಡಿ: ಬಿಬಿಎಂಪಿ ನೂತನ ಆಯುಕ್ತ ಗಿರಿನಾಥ್
ಪೀಣ್ಯ ಒಳ ವರ್ತುಲ ರಸ್ತೆ ಪರಿಶೀಲನೆ
ರಾಜರಾಜೇಶ್ವರಿ ನಗರ ವಲಯ ವ್ಯಾಪ್ತಿಯ ಪೀಣ್ಯ ಒಳ ವರ್ತುಲ ರಸ್ತೆ ರಾಜ್ ಕುಮಾರ್ ಸಮಾದಿ ಬಳಿ ರಸ್ತೆ ಗುಂಡಿ ಮುಚ್ಚುವ ಕಾರ್ಯವನ್ನು ಪರಿಶೀಲನೆ ಮಾಡಿದ ವೇಳೆ ಬೆಸ್ಕಾಂ ವಿದ್ಯುತ್ ತಂತಿ ನೆಲದಡಿ ಅಳವಡಿಸಿರುವ ಪೈಪ್ ಹಾಗೂ ಜಲಮಂಡಳಿ ವತಿಯಿಂದ ಮಾಡಿರುವ ಒಳ ಚರಂಡಿ ಕಾರ್ಯವು ಅವೈಜ್ಞಾನಿಕವಾಗಿದ್ದು, ಇದರಿಂದ ವಾಹನ ಸವಾರರಿಗೆ ಸಮಸ್ಯೆಯಾಗಲಿದೆ. ಈ ಸಂಬಂಧ ಸಂಬಂಧ ಅಧಿಕಾರಿಗಳ ಜತೆ ಮಾತನಾಡಿ ಸಮಸ್ಯೆ ಬಗೆಹರಿಸಲು ಅಧಿಕಾರಿಗಳಿಗೆ ಸೂಚನೆ ನೀಡಿದರು.
ಜಯಮಹಲ್ ರಸ್ತೆ ಅಭಿವೃದ್ಧಿ ಕಾರ್ಯ ಪರಿಶೀಲನೆ
ಪೂರ್ವ ವಲಯ ವ್ಯಾಪ್ತಿಯ 2.3 ಕಿ.ಮೀ ಉದ್ದದ ಜಯಮಹಲ್ ರಸ್ತೆ (ಮೇಕ್ರಿ ವೃತ್ತದಿಂದ ಜಯಮಹಲ್ ಪ್ಯಾಲೆಸ್ ಹೋಟೆಲ್ ವರೆಗೆ) ಸಂಪೂರ್ಣ ಅಭಿವೃದ್ಧಿ ಕಾರ್ಯವನ್ನು ಕೈಗೆತ್ತಿಕೊಂಡಿದ್ದು, ತಾತ್ಕಾಲಿಕವಾಗಿ ವಾಹನ ಸಂಚಾರಕ್ಕೆ ಅನುವಾಗುವಂತೆ Motorable Road ಮಾಡಿ ವಾಹನ ಸಂಚಾರಕ್ಕೆ ಅನುವು ಮಾಡಿಕೊಡಲಾಗಿದೆ.
ಸದರಿ ರಸ್ತೆಯಲ್ಲಿ ಹೆಚ್ಚು ಸಂಚಾರದಟ್ಟಣೆಯಿರುವ ಕಾರಣ ಹಂತ-ಹಂತವಾಗಿ ರಸ್ತೆ ಅಭಿವೃದ್ಧಿ ಕಾರ್ಯ ನಡೆಸಬೇಕು.
ಮೊದಲನೇ ಹಂತದಲ್ಲಿ ಮೇಕ್ರಿ ವೃತ್ತದಿಂದ ಮುನಿರೆಡ್ಡಿ ಪಾಳ್ಯ ಮುಖ್ಯ ರಸ್ತೆಯವರೆಗೆ ಅಭಿವೃದ್ಧಿ ಕಾರ್ಯ ಕೈಗೆತ್ತಿಕೊಂಡಿದ್ದು, ಅದಾದ ಬಳಿಕ ಮತ್ತೊಂದು ಹಂತದಲ್ಲಿ ರಸ್ತೆ ಅಭಿವೃದ್ಧಿ ಕಾರ್ಯ ಸೇರಿದಂತೆ ಪಾದಚಾರಿ ಮಾರ್ಗ ಅಭಿವೃದ್ಧಿ ಕಾರ್ಯ ಮಾಡಲಾಗುತ್ತದೆ ಎಂದು ಅಧಿಕಾರಿಯೊಬ್ಬರು ಮಾಹಿತಿ ನೀಡಿದರು. ಇದಕ್ಕೆ ಪ್ರತಿಕ್ರಿಯಿಸಿದ ಮುಖ್ಯ ಆಯುಕ್ತರು, ರಸ್ತೆ ಅಭಿವೃದ್ಧಿ ಕಾರ್ಯ ಮಾಡುವ ವೇಳೆ ರಸ್ತೆ ಮೇಲೆ ಮಳೆ ನೀರು ನಿಲ್ಲದಂತೆ ಸರಾಗವಾಗಿ ಶೋಲ್ಡರ್ ಡ್ರೈನ್ ಮೂಲಕ ಚರಂಡಿಗೆ ನೀರು ಹರಿದು ಹೋಗುವಂತೆ ಮಾಡಬೇಕು. ಅಲ್ಲದೆ ವಾಹನ ಸಂಚಾರಕ್ಕೆ ಯಾವುದೇ ರೀತಿಯ ಸಮಸ್ಯೆಯಾಗದಂತೆ ಅಭಿವೃದ್ಧಿ ಕಾರ್ಯ ನಡೆಸಲು ಸೂಚನೆ ನೀಡಿದರು.
ಇದನ್ನೂ ಓದಿ: ವಾರದಲ್ಲೆ ಎಲ್ಲ ಗುಂಡಿಗಳನ್ನು ಮುಚ್ಚುವ ಭರವಸೆ ನೀಡಿದ ತುಷಾರ್ ಗಿರಿನಾಥ್