Site icon Vistara News

ಬಿಬಿಎಂಪಿ ಚುನಾವಣೆ: ಕೆಂಪೇಗೌಡ ಪೌರ ಸಭಾಂಗಣಕ್ಕೆ ಹೈಟೆಕ್ ಸ್ಪರ್ಶ

BBMP

ಬೆಂಗಳೂರು: ಬಿಬಿಎಂಪಿ ಚುನಾವಣೆಗೆ ಸುಪ್ರೀಂಕೋರ್ಟ್ ಗ್ರೀನ್ ಸಿಗ್ನಲ್‌ ನೀಡಿರುವ ಹಿನ್ನೆಲೆಯಲ್ಲಿ ಪಾಲಿಕೆಯಲ್ಲಿ ಚುನಾವಣಾ ಸಿದ್ಧತೆ ಗರಿಗೆದರಿದೆ. ಬಿಬಿಎಂಪಿ ವಾರ್ಡ್‌ಗಳ ಸಂಖ್ಯೆ 198 ರಿಂದ 243ಕ್ಕೆ ಏರಿಕೆಯಾಗಿರುವುದರಿಂದ ಎಲ್ಲ ಸದಸ್ಯರು ಹಾಗೂ ಜನಪ್ರತಿನಿಧಿಗಳಿಗೆ ಆಸನ ವ್ಯವಸ್ಥೆ ಮಾಡಲು ಹೊಸ ಕೌನ್ಸಿಲ್ ಹೌಸ್ ನಿರ್ಮಾಣ ಮಾಡಲಾಗುತ್ತಿದೆ.

ಕೆಂಪೇಗೌಡ ಪೌರ ಸಭಾಂಗಣಕ್ಕೆ ಹೈಟೆಕ್ ಸ್ಪರ್ಶ ನೀಡಲು ಬಿಬಿಎಂಪಿ ಯೋಜನೆ ರೂಪಿಸಿದೆ. ಆಸನಗಳ ಸಾಮರ್ಥ್ಯ ಹೆಚ್ಚಳ, ಇನ್ನಿತರ ಮೂಲಸೌಕರ್ಯ ಒದಗಿಸಲು ಕೌನ್ಸಿಲ್ ಕಟ್ಟಡ ನವೀಕರಣಕ್ಕೆ ಪಾಲಿಕೆ ಅಡಳಿತಾಧಿಕಾರಿಯಿಂದ ಹಸಿರು ನಿಶಾನೆ ತೋರಲಾಗಿದೆ. ಕೌನ್ಸಿಲ್ ಕಟ್ಟಡ ಮರು ವಿನ್ಯಾಸದಲ್ಲಿ ಹೈಟೆಕ್ ತಂತ್ರಜ್ಞಾನ ಅಳವಡಿಕೆಗೆ ಅಧಿಕಾರಿಗಳು ಮುಂದಾಗಿದ್ದಾರೆ.

ಇದನ್ನೂ ಓದಿ | ಬಿಬಿಎಂಪಿ ಚುನಾವಣೆ ನಡೆಸಲು ಅಗತ್ಯವಿರುವ ಪ್ರಕ್ರಿಯೆ 8 ವಾರದಲ್ಲಿ ಮುಗಿಸಿ: ಸುಪ್ರೀಂಕೋರ್ಟ್‌ ಸೂಚನೆ

ಸೆಪ್ಟೆಂಬರ್‌ನಲ್ಲಿ ಪಾಲಿಕೆ ಚುನಾವಣೆ ನಡೆಯುವ ನಿರೀಕ್ಷೆ ಇಟ್ಟುಕೊಂಡು ಕೌನ್ಸಿಲ್ ಹಾಲ್ ನೀಲಿ ನಕ್ಷೆ ಸಿದ್ಧಮಾಡಲಾಗಿದೆ. ₹10 ಕೋಟಿ ವೆಚ್ಚದಲ್ಲಿ ನವೀಕರಣ ಮಾಡಲಾಗುತ್ತಿದೆ. ಇದುವರೆಗೆ ಕೌನ್ಸಿಲ್ ಹಾಲ್‌ನಲ್ಲಿ 270 ಮಂದಿ ಕೂಲು ಆಸನ ವ್ಯವಸ್ಥೆ ಇತ್ತು. ಈ ಬಾರಿ ವಾರ್ಡ್‌ ಸದಸ್ಯರು 243, ಎಂಎಲ್‌ಎ 28, ಎಂಎಲ್‌ಸಿ 6, ಎಂಪಿ 3, ಸಚಿವರು 4, ನಾಮ ನಿರ್ದೇಶನ ಸದಸ್ಯರು 25, ಅಧಿಕಾರಿಗಳು 55 ಆಸನ ಸೇರಿ ಒಟ್ಟು 364 ಮಂದಿ ಕೂರುವಂತಹ ಹಾಲ್ ನಿರ್ಮಾಣ ಮಾಡಲಾಗುತ್ತದೆ.

ಪ್ರತಿ ಆಸನವನ್ನೂ ಟೀಕ್ ಮರದಲ್ಲಿ ನಿರ್ಮಾಣ ಮಾಡಿ, ಪ್ರತಿ ಸದಸ್ಯರ ಆಸನದಲ್ಲಿ ಮೈಕ್ ಅಳವಡಿಕೆ ಮಾಡಲಾಗುತ್ತದೆ. ಸೌಂಡ್ ಪ್ರೂಫ್ ಸಭಾಂಗಣ, ಎಲ್ಇಡಿ, ಸಿಸಿ ಕ್ಯಾಮರಾ ಅಳವಡಿಕೆ, ಕೌನ್ಸಿಲ್‌ ಸಭೆ ವೀಕ್ಷಿಸಲು ಸಾರ್ವಜನಿಕರು ಹಾಗೂ ಮಾಧ್ಯದವರಿಗೆ ಆಸನ ವ್ಯವಸ್ಥೆ ಮಾಡಲಾಗುತ್ತಿದೆ. ಕೌನ್ಸಿಲ್‌ ಕಟ್ಟಡ ಈಗ 330.15 ಚದರ ಮೀಟರ್‌ ವಿಸ್ತೀರ್ಣ ಹೊಂದಿದೆ. ನವೀಕರಣದ ನಂತರ ಕಟ್ಟಡದ ವಿಸ್ತೀರ್ಣ 382.83 ಚದರ ಮೀಟರ್‌ಗೆ ವಿಸ್ತರಣೆಯಾಗಲಿದೆ.

2 ವರ್ಷಗಳ ಹಿಂದೆಯೇ ಪಾಲಿಕೆ ಆಡಳಿತ ಅವಧಿ ಮುಗಿದಿದ್ದು, 8 ವಾರಗಳೊಳಗೆ ವಾರ್ಡ್‌ ಮರು ವಿಂಗಡಣೆ ಹಾಗೂ ಮೀಸಲಾತಿ ನಿಗದಿ ಪ್ರಕ್ರಿಯೆ ನಡೆಸಲು ಸುಪ್ರೀಂಕೋರ್ಟ್‌ ಇತ್ತೀಚೆಗೆ ನಿರ್ದೇಶನ ನೀಡಿತ್ತು. ಜತೆಗೆ ಅಧಿಸೂಚನೆ ಹೊರಬಿದ್ದ ಒಂದು ವಾರದಲ್ಲಿ ಚುನಾವಣೆ ನಡೆಸಲು ರಾಜ್ಯ ಚುನಾವಣಾ ಆಯೋಗಕ್ಕೆ ಸೂಚಿಸಿತ್ತು.

ಇದನ್ನೂ ಓದಿ | ರಾಜ್ಯದಲ್ಲಿ ಯಾವುದೇ ಚುನಾವಣೆ ಎದುರಿಸಲು ಬಿಜೆಪಿ ಸಂಪೂರ್ಣ ಸಿದ್ಧ: ನಳಿನ್ ಕುಮಾರ್ ಕಟೀಲ್

Exit mobile version