Site icon Vistara News

Rockline Mall : ರಾಕ್‌ಲೈನ್‌ಗೆ ಬಿಬಿಎಂಪಿ ಶಾಕ್‌; ಬೆಂಗಳೂರಿನ ಮಾಲ್‌ಗೆ ಬೀಗ; ನಿಜ ಸಂಗತಿ ಏನು?

Rockline Mall in Bangalore

ಬೆಂಗಳೂರು : ಇತ್ತೀಚಿನ ಕಾಟೇರ ಸೇರಿದಂತೆ ಸೂಪರ್‌ ಹಿಟ್‌ ಚಿತ್ರಗಳನ್ನು ನೀಡಿರುವ ಸಿನಿಮಾ ನಿರ್ಮಾಪಕ ರಾಕ್‌ಲೈನ್‌ ವೆಂಕಟೇಶ್‌ (Rockline Venkatesh) ಒಡೆತನದ ರಾಕ್‌ಲೈನ್‌ ಮಾಲ್‌ಗೆ (Rockline Mall) ಬಿಬಿಎಂಪಿ ಅಧಿಕಾರಿಗಳು (BBMP officials) ಬೀಗ ಜಡಿದಿದ್ದಾರೆ. ಸುಮಾರು 11.51 ಕೋಟಿ ರೂ. ತೆರಿಗೆ ಬಾಕಿ ಉಳಿಸಿಕೊಂಡ ಕಾರಣಕ್ಕಾಗಿ ಬುಧವಾರ ಬೆಳ್ಳಂಬೆಳಗ್ಗೆ ಟಿ ದಾಸರಹಳ್ಳಿಯ ಪ್ರಶಾಂತ್‌ ನಗರದಲ್ಲಿರುವ ರಾಕ್‌ಲೈನ್‌ ಮಾಲ್‌ಗೆ ಬೀಗ ಹಾಕಲಾಗಿದೆ. ಆದರೆ, ರಾಕ್‌ ಲೈನ್‌ ವೆಂಕಟೇಶ್‌ ಅವರು ಇದೊಂದು ಅಕ್ರಮವಾಗಿದ್ದು, ತೆರಿಗೆ ವಿಚಾರದಲ್ಲಿ (Tax issue) ಬಿಬಿಎಂಪಿ ಅನ್ಯಾಯ ಮಾಡುತ್ತಿದೆ ಎಂದು ಆರೋಪಿಸಿದ್ದಾರೆ.

ರಾಕ್‌ಲೈನ್‌ ಮಾಲ್‌ನಲ್ಲಿ ಹೋಟೆಲ್‌, ಶೋರೂಮ್‌ಗಳು ಮತ್ತು ಮಲ್ಟಿಪ್ಲೆಕ್ಸ್‌ಗಳಿವೆ. ಮುಂಜಾನೆಯೇ ಅಧಿಕಾರಿಗಳು ಬೀಗ ಹಾಕಿದ್ದರಿಂದ ಯಾವುದೇ ವ್ಯವಹಾರಗಳು ನಡೆದಿಲ್ಲ. ಈ ಮಾಲ್‌ಗೆ ಸಂಬಂಧಿಸಿ 2011ರಿಂದ 2023ರ ಒಟ್ಟು 11.51 ಕೋಟಿ ರೂ. ತೆರಿಗೆಯನ್ನು ಬಾಕಿ ಇರಿಸಲಾಗಿದೆ. ಇದುವರೆಗೂ ತೆರಿಗೆ ಪಾವತಿಸದ್ದರಿಂದ ಅಧಿಕಾರಿಗಳು ಮಾಲ್‌ಗೆ ಬೀಗ ಹಾಕಿದ್ದಾರೆ ಎಂದು ಹೇಳಲಾಗಿದೆ. ಬಿಬಿಎಂಪಿಯ ದಾಸರಹಳ್ಳಿ ವಲಯದ ಆಯುಕ್ತೆ ಪ್ರೀತಿ ಗೆಹ್ಲೋಟ್, ವಲಯ ಜಂಟಿ ಆಯುಕ್ತರಾದ ಬಾಲಶೇಖರ್ ದಾಸರಹಳ್ಳಿ ವಲಯ ಅಧಿಕಾರಿಗಳು, ಕಂದಾಯ ಅಧಿಕಾರಿಗಳು, ಪೊಲೀಸ್ ಸಿಬ್ಬಂದಿ, ಮಾರ್ಷಲ್‌ಗಳ ಉಪಸ್ಥಿತಿಯಲ್ಲಿ ಬೀಗ ಹಾಕಲಾಗಿದೆ

ಇದನ್ನೂ ಓದಿ: Jetlog Pub: ನಟ ದರ್ಶನ್‌ ಅವರೇ ಟಾರ್ಗೆಟ್‌ ಯಾಕೆ? ರಾಕ್‌ಲೈನ್‌ ವೆಂಕಟೇಶ್‌ ಕಿಡಿ

2021ರಲ್ಲಿ ರಾಕ್‌ಲೈನ್‌ ವೆಂಕಟೇಶ್‌ ಮತ್ತು ಪದ್ಮಕುಮಾರಿ ಅವರು ಬಿಬಿಎಂಪಿಗೆ 8.5 ಕೋಟಿ ರೂ.ಗೂ ಅಧಿಕ ಮೊತ್ತದ ತೆರಿಗೆ ವಂಚಿಸಿದ್ದಾರೆ ಎಂದು ಬಿಜೆಪಿ ಬೆಂಗಳೂರು ದಕ್ಷಿಣ ಜಿಲ್ಲಾ ಘಟಕದ ಅಧ್ಯಕ್ಷರಾಗಿದ್ದ ಎನ್ ಆರ್ ರಮೇಶ್‌ ಆರೋಪಿಸಿದ್ದರು. ಬಿಬಿಎಂಪಿಯ ದಾಸರಹಳ್ಳಿ ವಲಯದ ವ್ಯಾಪ್ತಿಯಲ್ಲಿರುವ ರಾಕ್‌ಲೈನ್‌ ಮಾಲ್‌ ಕೇವಲ 48,500 ಚದರ ಅಡಿ ವಿಸ್ತೀರ್ಣ ಇದೆ ಎಂದು ಬಿಬಿಎಂಪಿಗೆ ಸುಳ್ಳು ಮಾಹಿತಿ ನೀಡಿದ್ದಾರೆ. ಆದರೆ, ಆರು ಮಹಡಿ ಸೇರಿದಂತೆ 1,22,743 ಚದರ ಅಡಿ ವಿಸ್ತಾರದಲ್ಲಿ ಈ ಮಾಲ್ ನಿರ್ಮಾಣಗೊಂಡಿದೆ ಎಂದು ಅವರು ದೂರಿದ್ದರು.

ಈ ಘಟನೆಯ ಬಗ್ಗೆ ರಾಕ್‌ಲೈನ್‌ ವೆಂಕಟೇಶ್‌ ಹೇಳುವುದೇನು?

ರಾಕ್‌ಲೈನ್‌ ಮಾಲ್‌ಗೆ ಸಂಬಂಧಿಸಿ ಬಿಬಿಎಂಪಿ ಮತ್ತು ತಮ್ಮ ಮಧ್ಯೆ ಹಿಂದಿನಿಂದಲೂ ವಿವಾದವಿದೆ. ಇದು ಹೈಕೋರ್ಟ್‌ನಲ್ಲಿ ಒಂದು ಹಂತದಲ್ಲಿ ಇತ್ಯರ್ಥವಾಗಿ ತೆರಿಗೆಯನ್ನು ನಿಗದಿ ಮಾಡಲಾಗಿದೆ. ಹೈಕೋರ್ಟ್‌ನಲ್ಲಿ ನಿಗದಿಪಡಿಸಿದ ಮೊತ್ತವನ್ನು ಪಾವತಿ ಮಾಡಲಾಗುತ್ತಿದೆ. ಆದರೆ, ಬಿಬಿಎಂಪಿಯವರು ತಪ್ಪು ಲೆಕ್ಕಾಚಾರ ನೀಡಿ ತೆರಿಗೆಯನ್ನು‌ ಹೆಚ್ಚು ಮಾಡಿದ್ದಾರೆ. ಇದನ್ನು ಪಾವತಿಸಲು ಸಾಧ್ಯವಿಲ್ಲ. ಈ ಬಗ್ಗೆ ನ್ಯಾಯ ಕೋರಿ ಮತ್ತೆ ಹೈಕೋರ್ಟ್‌ಗೆ ಮೊರೆ ಹೋಗುವುದಾಗಿ ರಾಕ್‌ ಲೈನ್‌ ವೆಂಕಟೇಶ್‌ ವಿಸ್ತಾರ ನ್ಯೂಸ್‌ಗೆ ತಿಳಿಸಿದ್ದಾರೆ.

ನಮ್ಮ ಮಾಲ್‌ ಇರುವುದು ಕೇವಲ ಮೂರು ಮಹಡಿ ಮಾತ್ರ. ಎರಡು ಮಹಡಿಗಳಲ್ಲಿ ವಾಣಿಜ್ಯ ವ್ಯವಹಾರಗಳಿದ್ದರೆ, ಮೂರನೇ ಮಹಡಿಯಲ್ಲಿ ಮಲ್ಟಿಪ್ಲೆಕ್ಸ್‌ ಇದೆ. ನಮ್ಮ ಮಾಲ್‌ನ ಒಟ್ಟು ವಿಸ್ತೀರ್ಣ 48,500 ಅಡಿ ಮಾತ್ರ. ಆದರೆ, ಬಿಬಿಎಂಪಿ ಅಧಿಕಾರಿಗಳು ಕಟ್ಟಡದಲ್ಲಿ ಆರು ಮಹಡಿಗಳಿವೆ ಎಂದು ವಾದಿಸುತ್ತಿದ್ದಾರೆ. ಅವರ ಪ್ರಕಾರ ಕಟ್ಟಡದ ವಿಸ್ತೀರ್ಣ 1,22,743 ಚದರ ಅಡಿ.

ಬಿಬಿಎಂಪಿ ಅಧಿಕಾರಿಗಳು 40 ಅಡಿ ಎತ್ತರ ಇರುವ ಮಲ್ಟಿಪ್ಲೆಕ್ಸ್‌ನ್ನು ನಾಲ್ಕು ಮಹಡಿ ಎಂದು ಲೆಕ್ಕ ತೆಗೆದಿದ್ದಾರೆ. ಇದು ಹೇಗಾಗುತ್ತದೆ? ಮಹಡಿ ಎಷ್ಟಿದೆ ಎನ್ನುವುದನ್ನು ಬಂದು ನೋಡಿ, ಒಟ್ಟು‌ ಫ್ಲೋರ್‌ ಏರಿಯಾವನ್ನು ಗಮನಿಸಿ ತೆರಿಗೆ ಹಾಕಿ ಎನ್ನುವುದು ನಮ್ಮ ವಾದ. ಹೈಕೋರ್ಟ್‌ ಮಧ್ಯಸ್ಥಿಕೆಯಲ್ಲಿ ಜಂಟಿ ಸರ್ವೇ ಮಾಡಿ ತೆರಿಗೆ ನಿಗದಿ ಮಾಡಿದ್ದರೂ ಬಿಬಿಎಂಪಿ ಅಧಿಕಾರಿಗಳು ಆಗಾಗ ತಕರಾರು ತೆಗೆಯುತ್ತಿದ್ದಾರೆ. ಇದನ್ನು ಹೈಕೋರ್ಟ್‌ನಲ್ಲೇ ಪ್ರಶ್ನೆ ಮಾಡುವುದಾಗಿ ರಾಕ್‌ ಲೈನ್‌ ವೆಂಕಟೇಶ್‌ ಹೇಳಿದ್ದಾರೆ.

Exit mobile version