Site icon Vistara News

Kannada Name plate: ಜ.15ರೊಳಗೆ ಕನ್ನಡ ನಾಮಫಲಕ ಕಡ್ಡಾಯವೆಂದು ಬಿಬಿಎಂಪಿ ಆದೇಶ; ಬೋರ್ಡ್‌ ರೇಟ್‌ ದುಪ್ಪಟ್ಟು

Name plate in English

ಬೆಂಗಳೂರು: ಬಿಬಿಎಂಪಿ ವ್ಯಾಪ್ತಿಯಲ್ಲಿ ಉದ್ದಿಮೆಗಳ ನಾಮಫಲಕಗಳಲ್ಲಿ ಅಗ್ರಸ್ಥಾನದಲ್ಲಿ ಕನ್ನಡ ಭಾಷೆಯನ್ನು (Kannada Name plate) ಕಡ್ಡಾಯವಾಗಿ ನಮೂದು ಮಾಡುವ ಬಗ್ಗೆ ಕರವೇ ಹೋರಾಟವು ಉಗ್ರ ಸ್ವರೂಪ ಪಡೆದ ಹಿನ್ನೆಲೆಯಲ್ಲಿ ಎಚ್ಚೆತ್ತಿರುವ ಬಿಬಿಎಂಪಿ (BBMP), ಜನವರಿ 15ರ ಒಳಗೆ ಮಾಲ್‌ಗಳಲ್ಲಿ ಕನ್ನಡ ಕಡ್ಡಾಯಕ್ಕೆ ನೋಟಿಸ್ ನೀಡಿದೆ. ಅಲ್ಲದೆ, ಫೆ. 20ರೊಳಗೆ ನಗರದಲ್ಲಿರುವ ಉದ್ದಿಮೆಗಳು ಶೇ. 60ರಷ್ಟು ಕನ್ನಡ ಫಲಕಗಳನ್ನು ಹಾಕಬೇಕೆಂದು ನೋಟಿಸ್‌ನಲ್ಲಿ ಉಲ್ಲೇಖಿಸಿದೆ.

ಬಿಬಿಎಂಪಿಯ ನೋಟಿಸ್ ಬೆನ್ನಲ್ಲೇ ಹೊಸ ಬೋರ್ಡ್‌ಗಳಿಗೆ ಬೇಡಿಕೆ ಹೆಚ್ಚಳವಾಗಿದೆ. ಈ ಹಿನ್ನೆಲೆಯಲ್ಲಿ ಫಲಕಗಳನ್ನು ತಯಾರಿಸುವ ಅಂಗಡಿ ಮಾಲೀಕರು ದುಪ್ಪಟ್ಟು ಹಣವನ್ನು ವಸೂಲಿ ಮಾಡುತ್ತಿದ್ದಾರೆ ಎಂಬ ಗಂಭೀರ ಆರೋಪಗಳು ಕೇಳಿ ಬರುತ್ತಿವೆ.

ಒಂದು ಬೋರ್ಡ್‌ಗೆ 50ರಿಂದ 90 ಸಾವಿರ ರೂಪಾಯಿ ವರೆಗೂ ದರ ನಿಗದಿ ಮಾಡುತ್ತಿದ್ದಾರೆ. ದರ ಹೆಚ್ಚಾಯಿತು ಅಂದರೆ, ಸಮಯಕ್ಕೆ ಸರಿಯಾಗಿ ಬೊರ್ಡ್‌ ಅನ್ನು ಮಾಡಿಕೊಡಲು ಆಗುವುದಿಲ್ಲ. ನಮಗೂ ಸಾಕಷ್ಟು ಆರ್ಡರ್‌ಗಳಿವೆ ಎಂದು ಹೇಳುತ್ತಿದ್ದಾರೆ ಎನ್ನಲಾಗಿದೆ.

ಬಿಬಿಎಂಪಿ ಆದೇಶದಲ್ಲೇನಿದೆ?

ಕನ್ನಡ ಪ್ರಾಧಿಕಾರವು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯಲ್ಲಿ ಕನ್ನಡೀಕರಣಕ್ಕಾಗಿ ಹಲವು ಅಂಶಗಳನ್ನು ಅನುಷ್ಠಾನಗೋಳಿಸಬೇಕೆಂದು ಹಲವಾರು ಬಾರಿ ಸೂಚಿಸಿರುವ ನಿಟ್ಟಿನಲ್ಲಿ ಹಾಗೂ ಪಾಲಿಕೆಗೆ ಈ ಸಂಬಂಧ ನಿರ್ದೇಶನ ನೀಡಲು ಪ್ರಾಧಿಕಾರವು ಸೂಚಿಸಿರುವ ಅಂಶಗಳ ಬಗ್ಗೆ ಸೂಕ್ತ ಕೈಗೊಳ್ಳಲು ಕರ್ನಾಟಕ ಅಧೀನ ಕಾರ್ಯದರ್ಶಿ, ಕನ್ನಡ ಸಂಸ್ಕೃತಿ ಮತ್ತು ವಾರ್ತಾ ಇಲಾಖೆ (ಆಡಳಿತ ಕನ್ನಡ) ಇಲಾಖೆಯವರು ಸೂಚಿಸಿರುತ್ತಾರೆ.

ಆಯಾ ಅಂಗಡಿ ಮುಂಗಟ್ಟುಗಳು, ಹೋಟೆಲ್‌ಗಳು, ಕಂಪನಿಗಳು ಹಾಗೂ ಇತರೆ ಪರವಾನಗಿ ಪಡೆದಿರುವ ವ್ಯಾಪಾರಿಗಳು ತಮ್ಮ ತಮ್ಮ ಶಾಖೆ ಮುಂದೆ ಅಳವಡಿಸಿರುವ/ ಅಳವಡಿಸದಿರುವ ನಾಮಫಲಕಗಳಲ್ಲಿ ಅಗ್ರ ಸ್ಥಾನದಲ್ಲಿ ಕನ್ನಡ ಭಾಷೆಯನ್ನು ಕಡ್ಡಾಯವಾಗಿ (ಶೇ. 60ರಷ್ಟು ಕನಿಷ್ಠ ಕನ್ನಡ ಭಾಷೆಯಲ್ಲಿರುವಂತೆ ಅಂದರೆ ಸ್ಪಷ್ಟವಾಗಿ ಎದ್ದು ಕಾಣಿಸುವಂತೆ ಕನ್ನಡ ಪದಗಳ ಬಳಕೆಯನ್ನು ಉಪಯೋಗಿಸುವುದು) ಅಳವಡಿಸಿಕೊಳ್ಳುವಂತೆ ಹಾಗೂ ಹೊಸದಾಗಿ ಪರವಾನಗಿ ಅರ್ಜಿ ಸಲ್ಲಿಸಿರುವಂತಹ ಅರ್ಜಿದಾರರಿಗೂ ಸಹ ತಮ್ಮ ತಮ್ಮ ನಾಮಫಲಕಗಳ ಅಗ್ರಸ್ಥಾನದಲ್ಲಿ ಕನ್ನಡ ಭಾಷೆಯನ್ನು ಕಡ್ಡಾಯವಾಗಿ ಉಪಯೋಗಿಸಬೇಕೆಂದು ಸ್ಪಷ್ಟ ಸೂಚನೆಯನ್ನು ಬಿಬಿಎಂಪಿ ಮಾನ್ಯ ಆಯುಕ್ತರು ಸಭೆಯಲ್ಲಿ ತಿಳಿಸಿರುತ್ತಾರೆ.

ಇದನ್ನೂ ಓದಿ: Karave Protest: ಇಂಗ್ಲಿಷ್‌ ನಾಮಫಲಕಕ್ಕೆ ಮಸಿ ಬಳಿಯಬೇಡಿ; ಹೀಗಾದ್ರೆ ಹೂಡಿಕೆಗೆ ಯಾರೂ ಬರಲ್ಲ: ಎಂ.ಬಿ. ಪಾಟೀಲ್

ನಾಮಫಲಕಗಳ ಪರಿವರ್ತನೆಗೊಳಿಸುವ ಕಾರ್ಯವನ್ನು ದಿನಾಂಕ: 15-01-2024 ರೊಳಗಾಗಿ ಕಡ್ಡಾಯವಾಗಿ ಪಾಲಿಸಬೇಕೆಂದು ತಿಳಿಸಲಾಗಿದೆ. ಇಲ್ಲವಾದಲ್ಲಿ ತಮಗೆ ನೀಡಿರುವ ಉದ್ದಿಮೆ ಪರವಾನಗಿಯನ್ನು ರದ್ದುಗೊಳಿಸಲಾಗುವುದು ಎಂದು ಬಿಬಿಎಂಪಿ ಆದೇಶದಲ್ಲಿ ತಿಳಿಸಿದೆ.

Exit mobile version