Site icon Vistara News

Property Tax: ಆಸ್ತಿ ತೆರಿಗೆ ಬಾಕಿದಾರರ ಮಾನ ಹರಾಜು ಹಾಕಲು ಬಿಬಿಎಂಪಿ ಸಿದ್ಧತೆ! ಸಾರ್ವಜನಿಕವಾಗಿ ಧ್ವನಿವರ್ಧಕದಲ್ಲಿ ಘೋಷಣೆ

bbmp property tax

ಬೆಂಗಳೂರು: ಆಸ್ತಿ ತೆರಿಗೆ (Property Tax) ಬಾಕಿದಾರರ ಹೆಸರನ್ನು ಅವರ ಮನೆಯ ಮುಂದೆಯೇ ಧ್ವನಿವರ್ಧಕದಲ್ಲಿ ಘೋಷಿಸುವ ಮೂಲಕ ಮುಜುಗರ ಸೃಷ್ಟಿಸಲು ಬಿಬಿಎಂಪಿ (BBMP) ಮುಂದಾಗಿದೆ. ಬಾಕಿದಾರರಿಗೆ ಇನ್ನು ಪಾಲಿಕೆಯಿಂದ ಧ್ವನಿ ಸಂದೇಶ ಮೂಲಕ ಎಚ್ಚರಿಕೆ ನೀಡಲಾಗುತ್ತದೆ.

ಬಾಕಿ ತೆರಿಗೆ ಪಾವತಿಸದವರಿಗೆ ಬಿಬಿಎಂಪಿಯಿಂದ ಧ್ವನಿ ಪ್ರತಿಕ್ರಿಯೆ ವ್ಯವಸ್ಥೆಗೆ ಸಿದ್ದತೆ ಮಾಡಿಕೊಳ್ಳಲಾಗುತ್ತಿದ್ದು, ಐವಿಆರ್‌ಎಸ್ ವ್ಯವಸ್ಥೆ ಜಾರಿಗೊಳಿಸಲು ಪಾಲಿಕೆಯಿಂದ ಟೆಂಡರ್ ಕರೆಯಲಾಗಿದೆ. ಖಾಸಗಿ ಬ್ಯಾಂಕ್‌ಗಳ ಮಾದರಿಯಲ್ಲಿ ತೆರಿಗೆ ವಂಚಿತರಿಗೆ ಎಚ್ಚರಿಕೆ ಸಂದೇಶ ನೀಡಲು, ಧ್ವನಿ ಸಂದೇಶ ಮೂಲಕ ತೆರಿಗೆ ಕಟ್ಟುವಂತೆ ಕಟ್ಟಡ ಮಾಲೀಕರಿಗೆ ಎಚ್ಚರಿಕೆ ನೀಡಲು ಇದನ್ನು ಬಳಸಿಕೊಳ್ಳಲಾಗುತ್ತದೆ.

ಸುಮಾರು ಮೂರು ಕೋಟಿ ರೂ. ವೆಚ್ಚದಲ್ಲಿ ಬಿಬಿಎಂಪಿ ಟೆಂಡರ್ ಕರೆದಿದೆ. ಈ ಮೊದಲು ತೆರಿಗೆ ಕಟ್ಟದ ಮಾಲೀಕರಿಗೆ ಪಾಲಿಕೆಯಿಂದ ನೋಟೀಸ್ ನೀಡಲಾಗುತ್ತಿತ್ತು. ಪ್ರತಿನಿತ್ಯ ಸಾವಿರಾರು ನೋಟೀಸ್ ನೀಡುವುದಕ್ಕೆ ಅಧಿಕಾರಿಗಳಿಗೆ ಕಷ್ಟವಾಗುತ್ತಿತ್ತು. ಪ್ರತಿನಿತ್ಯ ನಗರದ ಎಲ್ಲಾ ವಾರ್ಡ್‌ಗಳಲ್ಲಿ ಸಾವಿರಾರು ನೋಟೀಸ್ ನೀಡಲಾಗುತ್ತದೆ. ಇದರಿಂದ ಸಮಯವೂ ವ್ಯರ್ಥವಾಗುತ್ತಿತ್ತು. ಇದಕ್ಕೆ ಬ್ರೇಕ್ ಹಾಕಲು ಹೊಸ ಯೋಜನೆ ಜಾರಿ ಮಾಡಲಾಗುತ್ತಿದೆ.

ತೆರಿಗೆ ಕಟ್ಟದ ಕಟ್ಟಡದ ಮಾಲೀಕರಿಗೆ ಪ್ರತಿನಿತ್ಯ ಎರಡು ಬಾರಿ ಧ್ವನಿ ವ್ಯವಸ್ಥೆ ಮೂಲಕ ತೆರಿಗೆ ಕಟ್ಟುವಂತೆ ಸಂದೇಶ ನೀಡಲಾಗುತ್ತದೆ. ಪ್ರತಿ ದಿನ ಸುಮಾರು 70 ಸಾವಿರಕ್ಕೂ ಹೆಚ್ಚು ಧ್ವನಿ ವ್ಯವಸ್ಥೆ ಮೂಲಕ ಎಚ್ಚರಿಕೆ ನೀಡಲು ಯೋಜಿಸಲಾಗುತ್ತಿದೆ. ಹೀಗೆ ಮುಜುಗರ ಸೃಷ್ಟಿಸಿಯಾದರೂ ಬಾಕಿ ತೆರಿಗೆಯನ್ನು ಕಟ್ಟಡ ಮಾಲೀಕರಿಂದ ಕಟ್ಟಿಸಿಕೊಳ್ಳಲು ಬಿಬಿಎಂಪಿ ಮುಂದಾಗಿದೆ.

ಶೇ.50ರಷ್ಟು ರಿಯಾಯಿತಿ

ಆಸ್ತಿ ತೆರಿಗೆ ಕಟ್ಟದೆ ಬಾಕಿ ಉಳಿಸಿಕೊಂಡವರಿಗೆ ಬಿಬಿಎಂಪಿಯಿಂದ ಸಿಹಿ ಸುದ್ದಿ ಸಿಕ್ಕಿದೆ. ತೆರಿಗೆ ಬಾಕಿ ಉಳಿಸಿಕೊಂಡ ಕಟ್ಟಡ ಮಾಲೀಕರಿಗೆ ಶೇ.50 ರಷ್ಟು ರಿಯಾಯಿತಿ ನೀಡಿ ತೆರಿಗೆ ವಸೂಲಿ ಮಾಡಲು ಪಾಲಿಕೆ ಮುಂದಾಗಿದೆ. ಈ ಬಗ್ಗೆ ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಮಾಹಿತಿ ನೀಡಿದ್ದಾರೆ.

2023-24 ಆರ್ಥಿಕ ವರ್ಷ ಮುಗಿಯುವುದರೊಳಗೆ ಆದಾಯ ಗುರಿ ತಲುಪಲು ಬಿಬಿಎಂಪಿ ಯೋಜನೆ ರೂಪಿಸಿದ್ದು, ಹೀಗಾಗಿ ತೆರಿಗೆಯಲ್ಲಿ ರಿಯಾಯಿತಿ ನೀಡಿದೆ. ಬಾಕಿ ಇರುವ ತೆರಿಗೆಯಲ್ಲಿ ಅರ್ಧದಷ್ಟು ತೆರಿಗೆ ಪಾವತಿ ಮಾಡಿ ಅಪೀಲು ಸಲ್ಲಿಸಿದವರಿಗೆ ಮಾತ್ರ ತೆರಿಗೆ ರಿಯಾಯಿತಿ ನೀಡಲಾಗುತ್ತೆ ಎಂದು ಮುಖ್ಯ ಆಯುಕ್ತರು ಮಾಹಿತಿ ನೀಡಿದ್ದಾರೆ.

ಸ್ಥಳೀಯ ಪಾಲಿಕೆ ಕಂದಾಯ ಕಚೇರಿಯಲ್ಲಿ ಅರ್ಧ ತೆರಿಗೆ ಕಟ್ಟಿ, ಉಳಿದ ಅರ್ಧ ತೆರಿಗೆ ಮನ್ನಾ ಮಾಡಲು ಮನವಿ ಸಲ್ಲಿಸಬೇಕು. ನೋಟಿಸ್ ಪಡೆದ ತೆರಿಗೆದಾರರು ಅರ್ಧದಷ್ಟು ತೆರಿಗೆ ಪಾವತಿಸಿ ನಂತರ ಪಾಲಿಕೆಗೆ ಅಪೀಲು ಸಲ್ಲಿಸಬೇಕು. ಸರ್ಕಾರ ಆಸ್ತಿ ತೆರಿಗೆ ಸಂಗ್ರಹದಲ್ಲಿ ತಿದ್ದುಪಡಿ ಮಾಡಿದರೆ ಅರ್ಧದಷ್ಟು ತೆರಿಗೆ ವಿನಾಯಿತಿಯಾಗುವ ಸಾಧ್ಯತೆ ಇದೆ.

ಸದ್ಯ ಬಾಕಿ ಇರುವ ತೆರಿಗೆಯಲ್ಲಿ ಅರ್ಧದಷ್ಟು ತೆರಿಗೆ ಪಾವತಿ ಮಾಡಿ ಅಪೀಲು ಸಲ್ಲಿಸಿದವರಿಗೆ ಮಾತ್ರ ತೆರಿಗೆ ರಿಯಾಯಿತಿ ನೀಡಲಾಗುತ್ತದೆ. ಈ ಹಿಂದೆ ತೆರಿಗೆ ರಿಯಾಯಿತಿ ಬಗ್ಗೆ ಡಿಸಿಎಂ ಡಿಕೆ ಶಿವಕುಮಾರ್ ಅವರು ಸುಳಿವು ನೀಡಿದ್ದರು. ಸದ್ಯ ರಿಯಾಯಿತಿ ಚರ್ಚೆ ನಡೆಯುತ್ತಿರುವ ಹೊತ್ತಿನಲ್ಲೇ ಮತ್ತೊಂದು ಮಾರ್ಗದಲ್ಲಿ ತೆರಿಗೆ ವಸೂಲಿಗೆ ಪಾಲಿಕೆ ಪ್ಲಾನ್ ಮಾಡಿದೆ ಎನ್ನಲಾಗಿದೆ. ಈಗ ರಿಯಾಯಿತಿ ಆಫ‌ರ್ ಕೊಟ್ಟು ಅರ್ಧದಷ್ಟಾದರೂ ತೆರಿಗೆ ಸಂಗ್ರಹ ಮಾಡುವುದು ಪಾಲಿಕೆ ಗುರಿಯಾಗಿದೆ.

ಇದನ್ನೂ ಓದಿ: Property Tax: ಬಾಕಿ ಆಸ್ತಿ ತೆರಿಗೆ ಪಾವತಿಗೆ ಶೇ.50ರಷ್ಟು ರಿಯಾಯಿತಿ ನೀಡಿದ ಬಿಬಿಎಂಪಿ

Exit mobile version