ಬೆಂಗಳೂರು: ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯಡಿ (BBMP Schools) ಬರುವ ಶಾಲೆಗಳಿಗೆ ಶಿಕ್ಷಕರು ಮತ್ತು ಕಾಲೇಜುಗಳಿಗೆ ಉಪನ್ಯಾಸಕರನ್ನು ನೇಮಕ (Teachers and Lecturers Appointment) ಮಾಡಲು ಪತ್ತೆದಾರಿ ಸಂಸ್ಥೆಯೊಂದಕ್ಕೆ ಹೊರಗುತ್ತಿಗೆ (Detective Agency) ನೀಡಲಾಗಿದೆ! ಮಕ್ಕಳಿಗೆ ಪಾಠ ಮಾಡುವ ಶಿಕ್ಷಕರ ವೈಯಕ್ತಿಕ ಬದುಕು ಹೇಗಿದೆ ಅಂತ ತಿಳಿದು ಈ ಸಂಸ್ಥೆ ನೇಮಕ ಮಾಡಲಿದೆಯಾ ಎಂದೆಲ್ಲ ಕೇಳಬೇಡಿ, ಪಕ್ಕಾ ಹಣ ಹೊಡೆಯುವ ಹಗರಣ (BBMP Scam) ಎಂದು ಸ್ಪಷ್ವವಾಗಿದೆ.
ಈಗ ಕರ್ತವ್ಯ ನಿರ್ವಹಿಸುತ್ತಿರುವ ಶಿಕ್ಷಕರನ್ನು ಶೈಕ್ಷಣಿಕ ವರ್ಷದ ಅರ್ಧ ಭಾಗದಲ್ಲೇ ಕಿತ್ತು ಹಾಕಿ ಹೊಸಬರನ್ನು ನೇಮಕ ಮಾಡಿಕೊಳ್ಳುವ ಪ್ರಕ್ರಿಯೆ ನಡೆಯುತ್ತಿದ್ದು, ಇದು ಶಿಕ್ಷಕರು ಮತ್ತು ಮಕ್ಕಳ ಜೊತೆಯಲ್ಲಿ ಬಿಬಿಎಂಪಿ ಆಡುತ್ತಿರುವ ಚೆಲ್ಲಾಟ ಎಂದು ಆಕ್ಷೇಪಿಸಲಾಗಿದೆ. ಅಪ್ಪು ಡಿಟೆಕ್ವಿವ್ ಆಂಡ್ ಸೆಕ್ಯೂರಿಟಿ ಸರ್ವಿಸಸ್ (Appu Detective and Security Services) ಸಂಸ್ಥೆಗೆ ಈ ಗುತ್ತಿಗೆಯನ್ನು 3.40 ಕೋಟಿ ರೂ.ಗಳಿಗೆ ಗುತ್ತಿಗೆ ನೀಡಲಾಗಿದೆ. ಶಿಕ್ಷಕರ ನೇಮಕಕ್ಕೂ ಸೆಕ್ಯೂರಿಟಿ ಸಂಸ್ಥೆಗೂ ಏನು ಸಂಬಂಧ ಎನ್ನುವುದನ್ನು ಬಿಬಿಎಂಪಿ ಅಧಿಕಾರಿಗಳೇ ಹೇಳಬೇಕಾಗಿದೆ. ಈ ನೇಮಕಾತಿಯ ಹಿಂದೆ ಯಾರ ಕೈವಾಡ ಇದೆ ಎನ್ನುವ ಪ್ರಶ್ನೆಯೂ ಕೇಳಿಬಂದಿದೆ.
ಬಿಬಿಎಂಪಿಯಲ್ಲಿ ಹೊರಗುತ್ತಿಗೆ ಆಧಾರದಲ್ಲಿ 600ಕ್ಕೂ ಹೆಚ್ಚು ಶಿಕ್ಷಕರು/ಉಪನ್ಯಾಸಕರು ಕೆಲಸ ಮಾಡುತ್ತಿದ್ದಾರೆ. ಕ್ರಿಸ್ಟಲ್ ಇನ್ಪೋಸಿಸ್ಟಮ್ ಆಂಡ್ ಸರ್ವಿಸಸ್ ಕಳೆದ 2022ರವರೆಗೆ ಶಿಕ್ಷಕರ ನೇಮಕಾತಿ ಗುತ್ತಿಗೆ ಪಡೆದಿತ್ತು ನಂತರ ಹೊರಗುತ್ತಿಗೆ ಶಿಕ್ಷಕರು/ಉಪನ್ಯಾಸಕರ ಸೇವೆಯನ್ನು ಒದಗಿಸಲು ಟೆಂಡರ್ ಕರೆಯಲಾಯಿತು. 2023ನೇ ಸಾಲಿನಲ್ಲಿ ಟೆಂಡರ್ ವಿಳಂಬವಾದ ಹಿನ್ನೆಲೆಯಲ್ಲಿ ಕ್ರಿಸ್ಟಲ್ ಸಂಸ್ಥೆಯ ಹಳೆಯ ಗುತ್ತಿಗೆಯನ್ನೇ ಮುಂದುವರಿಸಲಾಯಿತು.
ಅದಾದ ಬಳಿಕ ಮತ್ತೆ ಟೆಂಡರ್ ಕರೆದಿದ್ದು, ಅದರಲ್ಲಿ ದಕ್ಷಿಣ ಮತ್ತು ಆರ್.ಆರ್.ನಗರ ವಲಯದ ಶಿಕ್ಷಕರ ನೇಮಕಾತಿ ಹೊಣೆಯನ್ನು ಅಪ್ಪು ಡಿಟೆಕ್ವಿವ್ ಆಂಡ್ ಸೆಕ್ಯೂರಿಟಿ ಸರ್ವಿಸಸ್ಗೆ ನೀಡಲಾಗಿದೆ. ಹೊರಗುತ್ತಿಗೆ ಶಿಕ್ಷಕರು, ಉಪನ್ಯಾಸಕರನ್ನ ಸರಬರಾಬು ಮಾಡುವಂತೆ ಈ ಸಂಸ್ಥೆಗೆ ಟೆಂಡರ್ ಆನುಮೋದನೆ ನೀಡಲಾಗಿದೆ.
3,40,48,611 ರೂಪಾಯಿ ಮೊತ್ತದಲ್ಲಿ ಶಿಕ್ಷಕರನ್ನು ಒದಗಿಸಲು ಗುತ್ತಿಗೆ ನೀಡಲಾಗಿದ್ದು, ಇದಕ್ಕೆ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರು ಅನುಮೋದನೆ ನೀಡಿದ್ದಾರೆ. ಗುತ್ತಿಗೆ ನೀಡುವ ಪ್ರಕ್ರಿಯೆ ಆರಂಭ ಆಗಿದ್ದು ಬ್ಯಾಂಕ್ ಗ್ಯಾರಂಟಿ ಒದಗಿಸಲು ಪತ್ರ ನೀಡಲಾಗಿದೆ.
ಶೈಕ್ಷಣಿಕ ವರ್ಷದ ಅರ್ಧ ಭಾಗದಲ್ಲಿ ಬದಲಾವಣೆಗೆ ಆಕ್ರೋಶ
ಅಪ್ಪು ಡಿಟೆಕ್ವಿವ್ ಆಂಡ್ ಸೆಕ್ಯೂರಿಟಿ ಸರ್ವಿಸಸ್ಗೆ ಶಿಕ್ಷಕರ ನೇಮಕಾತಿ ಜವಾಬ್ದಾರಿ ಕೊಟ್ಟಿದ್ದೇ ಆಕ್ಷೇಪಕ್ಕೆ ಕಾರಣವಾಗಿದೆ. ಇದರ ಜತೆಗೆ ಶೈಕ್ಷಣಿಕ ವರ್ಷದ ಮಧ್ಯಭಾಗದಲ್ಲೇ ಹೊಸ ಶಿಕ್ಷಕರು/ಉಪನ್ಯಾಸಕರ ನೇಮಕಕ್ಕೆ ಅವಕಾಶ ಮಾಡಿರುವುದು ಇನ್ನೊಂದು ದೊಡ್ಡ ಎಡವಟ್ಟು ಮಾಡಿದಂತಾಗಿದೆ.
ಶೈಕ್ಷಣಿಕ ವರ್ಷದ ಮಧ್ಯ ಭಾಗದಲ್ಲಿ ಹೊಸ ಶಿಕ್ಷಕರನ್ನು ನೀಡುವ ಗುತ್ತಿಗೆಯನ್ನು ಬದಲಾಯಿಸುವುದು ಎಷ್ಟು ಸಮಂಜಸ ಎಂದು ಶಿಕ್ಷಕರು ಮತ್ತು ಪಾಲಕರು ಪ್ರಶ್ನೆ ಮಾಡಿದ್ದಾರೆ. ಈ ರೀತಿ ಗೊಂದಲ ಉಂಟು ಮಾಡಲು ಒತ್ತಡ ಹೇರುತ್ತಿರುವವರು ಯಾರು ಎಂಬ ಗಂಭೀರ ಪ್ರಶ್ನೆಯನ್ನೂ ಕೇಳಲಾಗಿದೆ.
ಮಧ್ಯ ವಾರ್ಷಿಕ ಪರೀಕ್ಷೆ ನಡೆಯುವ ಸಂದರ್ಭದಲ್ಲಿ ಶಿಕ್ಷಕರನ್ನು ಸೇವೆಯನ್ನು ರದ್ದುಪಡಿಸಿ, ಹೊಸದಾಗಿ ನೇಮಕ ಮಾಡಿಕೊಂಡರೆ ಹೊಸದಾಗಿ ಬರುವ ಶಿಕ್ಷಕರಿಗೆ ಎಷ್ಟು ಪಠ್ಯ ಮಾಡಬೇಕು ಹಾಗೂ ಏನು ತಯಾರಿ ಮಾಡಬೇಕು ಮತ್ತು ಮಕ್ಕಳ ಮನಸ್ಥಿತಿಗೆ ಹೊಂದಿಕೊಳ್ಳುವ ಗೊಂದಲ ಉಂಟಾಗುವ ಸಾಧ್ಯತೆ ಇದೆ ಎನ್ನುವುದು ಪೋಷಕರ ಆಕ್ಷೇಪ.
ಎದ್ದು ಬಂದಿರುವ ಹಲವು ಪ್ರಶ್ನೆಗಳು
- ಹೊಸದಾಗಿ ಶಿಕ್ಷಕರು/ಉಪನ್ಯಾಸಕರನ್ನು ನೇಮಿಸಿದರೆ ಕಳೆದ 15ರಿಂದ 20ವರ್ಷಗಳಿಂದ ಸೇವೆ ಸಲ್ಲಿಸುತ್ತಿರುವ ಶಿಕ್ಷಕರ ಗತಿ, ಸ್ಥಿತಿ ಏನಾಗಬೇಕು.?
- ಹೊಸದಾಗಿ ಗುತ್ತಿಗೆ ಪಡೆಯುತ್ತಿರುವ ಟೆಂಡರ್ ದಾರರ ಬಳಿ ನುರಿತ/ಅನುಭವಿ ಶಿಕ್ಷಕರು/ಉಪನ್ಯಾಸಕರು ಲಭ್ಯವಿರುತ್ತಾರೆಯೆ? ಇದನ್ನು ಬಿಬಿಎಂಪಿ ಅಧಿಕಾರಿಗಳು ಖಾತರಿ ಮಾಡಿಕೊಂಡಿದ್ದಾರೆಯೇ?
- ಈಗ ಇರುವ ಶಿಕ್ಷಕರು, ಉಪನ್ಯಾಸಕರನ್ನು ಮುಂದುವರಿಸಲು ಸಾಧ್ಯವೆ.?
- ಈಗ ಕೆಲಸ ಮಾಡುತ್ತಿರುವವರಲ್ಲಿ 40 ವರ್ಷಕ್ಕಿಂತ ಹೆಚ್ಚಿನ ವಯಸ್ಸಿನ ಹಲವಾರು ಮಂದಿ ಇದ್ದಾರೆ. ಈಗ ಅವರನ್ನು ಏಕಾಏಕಿ ಕೆಲಸದಿಂದ ತೆಗೆದು ಹಾಕಿದರೆ ಅವರು ಎಲ್ಲಿಗೆ ಹೋಗಬೇಕು?
ಶಿಕ್ಷಕರಿಂದ ಪ್ರತಿಭಟನೆಗೆ ಸಿದ್ಧತೆ
ಇದೀಗ ದಕ್ಷಿಣ ಮತ್ತು ಆರ್.ಆರ್. ನಗರ ವಲಯದ ಶಿಕ್ಷಕರ ನೇಮಕಾತಿ ಟೆಂಡರ್ ಆಗಿದೆ ಇದರಲ್ಲಿ 600 ಮಂದಿ ಶಿಕ್ಷಕರು ಇದ್ದಾರೆ. ಇದರ ಬಗ್ಗೆಯೇ ಇಷ್ಟೊಂದು ಗೊಂದಲ ಇರುವ ನಡುವೆ ಪಶ್ಚಿಮ, ಪೂರ್ವ ವಲಯ ಟೆಂಡರ್ ಆನುಮೋದನೆಯಾಗಿ ಅಲ್ಲಿಯೂ ಹೊಸ ಗುತ್ತಿಗೆದಾರ ನೇಮಕಗೊಳ್ಳಲಿದ್ದಾರೆ.
ಈ ರೀತಿ ಶಿಕ್ಷಕರನ್ನು ಮಾರುಕಟ್ಟೆ ಸರಕಿನಂತೆ ಬಳಸಿಕೊಳ್ಳುತ್ತಿರುವ ವಿಚಾರ ಶಿಕ್ಷಕರ ವಲಯದಲ್ಲಿ ಆಕ್ರೋಶಕ್ಕೆ ಕಾರಣವಾಗಿದೆ. ಇದರ ವಿರುದ್ಧ ಶಿಕ್ಷಕರು, ಉಪನ್ಯಾಸಕರು ಹೋರಾಟ ಮಾಡಲು ಮುಂದಾಗಿದ್ದಾರೆ.
ಈಗ ಪಾಠ ಪಡುತ್ತಿರುವ ಶಿಕ್ಷಕರು, ಉಪಾನ್ಯಾಸಕರಲ್ಲಿ ಹಲವರು ಡಾಕ್ಟರೇಟ್ ಸೇರಿದಂತೆ ಉನ್ನತ ವಿದ್ಯಾಭ್ಯಾಸ ಮಾಡಿದವರು. ಅಂಥವರನ್ನು ಬಿಟ್ಟು ಪತ್ತೆದಾರಿ ಸಂಸ್ಥೆಯ ಮೂಲಕ ಶಿಕ್ಷಕರನ್ನು ನೇಮಿಸಿಕೊಳ್ಳುವ ಕ್ರಮವೇ ಅಸಂಬದ್ಧ ಎಂದು ಆಕ್ರೋಶ ವ್ಯಕ್ತವಾಗಿದೆ.
ಇದನ್ನೂ ಓದಿ: Teachers Recruitment: ಪ್ರಾಥಮಿಕ, ಪ್ರೌಢ ಶಾಲೆ ಶಿಕ್ಷಕರ ನೇಮಕ; ಒಟ್ಟು ಎಷ್ಟು ಹುದ್ದೆ ನಿರೀಕ್ಷೆ?
ಮಾಜಿ ಶಿಕ್ಷಣ ಸಚಿವ ಸುರೇಶ್ ಕುಮಾರ್ ಆಕ್ಷೇಪ
ಬಿಬಿಎಂಪಿಯ ಈ ಅಸಂಬದ್ಧ ಕ್ರಮವನ್ನು ಮಾಜಿ ಶಿಕ್ಷಣ ಸಚಿವ, ರಾಜಾಜಿ ನಗರದ ಬಿಜೆಪಿ ಶಾಸಕ ಎಸ್. ಸುರೇಶ್ ಕುಮಾರ್ ಅವರು ಖಂಡಿಸಿದ್ದಾರೆ. ಶಿಕ್ಷಕರ ನೇಮಕವನ್ನು ಪತ್ತೆದಾರಿ ಸಂಸ್ಥೆಗೆ ನೀಡಿದ್ದರ ಔಚಿತ್ಯವನ್ನು ಅವರು ಪ್ರಶ್ನೆ ಮಾಡಿದ್ದಾರೆ.
ಯಾರು ಅರ್ಹರೋ ಅವರಿಗೆ ಗುತ್ತಿಗೆ ಎಂದ ಬಿಬಿಎಂಪಿ ಮುಖ್ಯ ಆಯುಕ್ತ
ಶಿಕ್ಷಕರ ನೇಮಕದ ಹೊಣೆಯನ್ನು ಪತ್ತೆದಾರಿ ಸಂಸ್ಥೆಗೆ ವಹಿಸಿರುವ ಕ್ರಮವನ್ನು ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಸಮರ್ಥಿಸಿಕೊಂಡಿದ್ದಾರೆ. ಯಾರು ಅರ್ಹರು ಇರ್ತಾರೋ ಅವರಿಗೆ ಗುತ್ತಿಗೆ ನೀಡಲಾಗುತ್ತದೆ. ಟೆಂಡರ್ ಕರೆದಾಗ ಯಾರು ವಿರೋಧ ವ್ಯಕ್ತಪಡಿಸಿಲ್ಲ. ಕಳೆದ ಹತ್ತು ವರ್ಷದಿಂದ ಒಂದೇ ಸಂಸ್ಥೆಗೆ ನೀಡಲಾಗಿತ್ತು. ಈಗ ಆಯಾ ವಲಯ ಮಟ್ಟದಲ್ಲಿ ಮಾನವ ಸಂಪನ್ಮೂಲ ಒದಗಿಸುವ ಕಂಪನಿಗಳು ಮುಂದಿದ್ವು ಅವರಿಗೆ ಅರ್ಹತೆ ನೋಡಿ ನೀಡಲಾಗಿದೆ ಎಂದು ಅವರು ಹೇಳಿದ್ದಾರೆ.