ಬೆಂಗಳೂರು: ಬಿಬಿಎಂಪಿ ವಾರ್ಡ್ ಮರುವಿಂಗಡಣೆ ಅವೈಜ್ಞಾನಿಕವಾಗಿದ್ದು, ಬಿಜೆಪಿಗೆ ಅನುಕೂಲವಾಗುವಂತೆ, ಸಾರ್ವಜನಿಕರಿಗೆ ಅನನುಕೂಲವಾಗುವಂತೆ ಮಾಡಲಾಗಿದೆ. ಈ ಮರುವಿಂಗಡಣೆ ವಿಚಾರವಾಗಿ 3 ಸಾವಿರಕ್ಕೂ ಹೆಚ್ಚು ಆಕ್ಷೇಪಗಳು ವ್ಯಕ್ತವಾಗಿದ್ದರೂ ಹೆಸರು ಬದಲಾವಣೆ ಹೊರತು ಯಾವುದೇ ವಾರ್ಡ್‌ಗಳಲ್ಲಿ ಬದಲಾವಣೆ ತಂದಿಲ್ಲ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ, ಮಾಜಿ ಸಚಿವ ರಾಮಲಿಂಗಾ ರೆಡ್ಡಿ ಆರೋಪ ಮಾಡಿದ್ದಾರೆ.
ಶನಿವಾರ ಕೆಪಿಸಿಸಿ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಅಮಿಬಾಗಳಿಗಾದರೂ ತಕ್ಕಮಟ್ಟಿಗೆ ಆಕಾರವಿರುತ್ತದೆ. ಆದರೆ, ಈಗ ಮರುವಿಂಗಡಣೆಯಾದ ವಾರ್ಡ್‌ಗಳಿಗೆ ಆಕಾರವೇ ಇಲ್ಲದಂತಾಗಿದೆ. ಈ ಮರುವಿಂಗಡಣೆ ಪ್ರಕ್ರಿಯೆ ಬಿಜೆಪಿ ಶಾಸಕರು, ಸಂಸದರ ಕಚೇರಿಯಲ್ಲಿ ನಿರ್ಧಾರವಾಗಿ ಕೇಶವಕೃಪದಲ್ಲಿ ಅಂತಿಮ ಒಪ್ಪಿಗೆ ಪಡೆಯಲಾಗಿದೆ ಎಂದು ವ್ಯಂಗ್ಯ ಮಾಡಿದರು.
ಇಷ್ಟೊಂದು ಆಕ್ಷೇಪ ವ್ಯಕ್ತವಾದ ಬಳಿಕವೂ ಕಂದಾಯ ಅಧಿಕಾರಿ, ಜಂಟಿ ಆಯುಕ್ತರಾಗಲಿ ಬಂದು ಪರಿಶೀಲನೆ ನಡೆಸಲೇ ಇಲ್ಲ. ಈಗ ಈ ಆಕ್ಷೇಪಗಳು ಸಿಎಂ ಕಚೇರಿಯಂದ ಆಚೆ ಬರಲೇ ಇಲ್ಲ. 243 ವಾರ್ಡ್‌ಗಳು ಸರಿಯಾಗಿವೆ ಎಂದು ಸಣ್ಣ ಬದಲಾವಣೆ ಇಲ್ಲದೆ ಮತ್ತೆ ಅದನ್ನೇ ಬಿಡುಗಡೆ ಮಾಡಿದ್ದಾರೆ. ಕೇವಲ ಹೆಸರಿಗೆ ಮಾತ್ರ ಆಕ್ಷೇಪಗಳನ್ನು ಸಂಗ್ರಹಿಸಿದ್ದಾರೆ ಎಂದು ಕಿಡಿಕಾರಿದರು.
ಇದನ್ನೂ ಓದಿ | ಬಿಬಿಎಂಪಿ ವಾರ್ಡ್ ಮರುವಿಂಗಡಣೆ ನಡೆದಿದ್ದು ಬಿಜೆಪಿ ಕಚೇರಿ, ಕೇಶವ ಕೃಪಾದಲ್ಲಿ ಎಂದ ರಾಮಲಿಂಗಾರೆಡ್ಡಿ
ಕಾಂಗ್ರೆಸ್ ಎಲ್ಲಿ ಗೆಲ್ಲಲು ಸಾಧ್ಯವಿದೆಯೋ ಅಲ್ಲಿ ಮತ ವಿಭಜಿಸಿ ಸೋಲಿಸುವ ಪ್ರಯತ್ನ ಮಾಡುತ್ತಿದ್ದಾರೆ. ಆದರೆ, ಪ್ರತಿ ಚುನಾವಣೆಯಲ್ಲೂ ಶೇ.20ರಷ್ಟು ತಟಸ್ಥ ಮತದಾರರು ಯಾವುದೇ ಪಕ್ಷಕ್ಕೆ ಸೇರದೆ ಮತ ಹಾಕುತ್ತಾರೆ. ಅವರು ಹಾಕುವ ಮತಗಳೇ ನಿರ್ಣಾಯಕವಾಗುತ್ತದೆ. ಈ ವಿಶ್ಲೇಷಣೆಯನ್ನು ಅವರು ಚುನಾವಣೆ ಫಲಿತಾಂಶ ಬಂದಾಗ ಮಾಡಿಕೊಳ್ಳಲಿ ಎಂದು ಸವಾಲು ಹಾಕಿದರು.
ಇನ್ನು ವಾರ್ಡ್‌ಗಳ ಹೆಸರು ಬದಲಾವಣೆ ಅಧಿಕಾರ ಸರ್ಕಾರಕ್ಕಿದೆ. ಆದರೆ, ಇಲ್ಲಿ ವಾರ್ಡ್ ಮರುವಂಗಡಣಾ ಸಮಿತಿಯೇ ತಮ್ಮ ಅಧಿಕಾರ ವ್ಯಾಪ್ತಿ ಮೀರಿ ಹೆಸರುಗಳನ್ನು ಬದಲಾವಣೆ ಮಾಡಿದೆ. ಆ ಮೂಲಕ ಈ ವಾರ್ಡ್‌ಗಳ ಮರುವಿಂಗಡಣೆಯಲ್ಲಿ ಸರ್ಕಾರದ ಹಸ್ತಕ್ಷೇಪ ಇದೆ ಎಂಬುದು ಸಾಬೀತಾಗುತ್ತದೆ ಎಂದರು.
ಇದನ್ನೂ ಓದಿ | 2011ರ ಜನಗಣತಿ ಆಧಾರದಲ್ಲಿ ವಾರ್ಡ್ ಮರು ವಿಂಗಡಣೆ: ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್