ಬೆಂಗಳೂರು: ಇಲ್ಲಿನ ಚಾಮರಾಜಪೇಟೆಯಲ್ಲಿರುವ ಈದ್ಗಾ ಮೈದಾನದ ವಿವಾದ ದಿನಕ್ಕೊಂದು ರೂಪ ಪಡೆದುಕೊಳ್ಳುತ್ತಿದೆ. ಮೈದಾನ ಯಾರದ್ದು ಎಂಬ ಗೊಂದಲದ ಮಧ್ಯೆ ಇದೀಗ ಬಕ್ರೀದ್ ಹಬ್ಬ ಬಂದಿದ್ದು, ಪೌರಕಾರ್ಮಿಕರು ಕೈಯಲ್ಲಿ ಪೂರಕೆ ಹಿಡಿದು ಸ್ವಚ್ಛ ಕಾರ್ಯದಲ್ಲಿ ತೊಡಗಿರುವ ಚಿತ್ರಣ ಕಂಡು ಬಂತು. ಇದೆಲ್ಲದರ ನಡುವೆ, ಚಾಮರಾಜಪೇಟೆ ಬಂದ್‌ಗೆ ಕರೆ ನೀಡಿರುವುದನ್ನು ಹಿಂಪಡೆಯುವುದಿಲ್ಲ ಎಂದು ʻಚಾಮರಾಜಪೇಟೆ ನಾಗರಿಕ ಬಂಧುಗಳ ಹಿತರಕ್ಷಣಾ ವೇದಿಕೆʼ ತಿಳಿಸಿದೆ.
ಪ್ರತಿ ವರ್ಷ ಬಕ್ರೀದ್, ರಂಜಾನ್ ಹಬ್ಬ ಬಂದಾಗ ಈದ್ಗಾ ಮೈದಾನದ ಶುಚಿ ಕಾರ್ಯದ ಜವಾಬ್ದಾರಿಯನ್ನು ಬಿಬಿಎಂಪಿ ವಹಿಸಿಕೊಳ್ಳುತ್ತಿತ್ತು. ಇದಕ್ಕಾಗಿ ಎರಡು ಲಕ್ಷ ರೂಪಾಯಿ ವ್ಯಯಿಸುತ್ತಿತ್ತು. ಆದರೆ, ವಿವಾದ ಬಳಿಕ ಕಳೆದ 5 ದಿನಗಳಿಂದ ಪೌರಕಾರ್ಮಿಕರ ಸುಳಿವೇ ಇರಲಿಲ್ಲ.
ಮೈದಾನ ಮಾಲೀಕತ್ವದ ವಿವಾದ ಕಾರಣಕ್ಕೆ ಈ ಬಾರಿ ಶುಚಿಗೊಳಿಸುವ ಗೊಡವೆಗೂ ಹೋಗದೆ ಬಿಬಿಎಂಪಿ ಸುಮ್ಮನಿತ್ತು. ವಕ್ಫ್ ಬೋರ್ಡ್‌ಗೆ ಬಿಬಿಎಂಪಿ ಎರಡನೇ ನೋಟಿಸ್ ನೀಡಿ, ವಿವಾದ ಬಗೆಹರಿಯುವವರೆಗೂ ಮೈದಾನ ಶುಚಿಗೊಳಿಸುವುದಿಲ್ಲ ಎಂದು ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಹೇಳಿದ್ದರು.
ಇದನ್ನೂ ಓದಿ | ಚಾಮರಾಜಪೇಟೆಯಲ್ಲಿ ಈದ್ಗಾ ಮೈದಾನ ಗಲಾಟೆ ಆಯ್ತು, ಈಗ ಪುತ್ಥಳಿ ವಿಚಾರವಾಗಿ ಗುಂಪು ಘರ್ಷಣೆ!
ಆದರೆ, ಮುಖ್ಯ ಆಯುಕ್ತರ ಹೇಳಿಕೆಗೂ ಮೈದಾನದಲ್ಲಿ ಕಂಡ ಚಿತ್ರಣಕ್ಕೂ ಸಂಬಂಧವೇ ಇಲ್ಲದಂತಾಗಿತ್ತು. ಏಕೆಂದರೆ ಶನಿವಾರ ಬೆಳಗ್ಗೆಯೇ 20ಕ್ಕೂ ಹೆಚ್ಚು ಬಿಬಿಎಂಪಿ ಪೌರಕಾರ್ಮಿಕರು ಸಮವಸ್ತ್ರ ಧರಿಸಿ ಮೈದಾನದ ಶುಚಿ ಕಾರ್ಯದಲ್ಲಿ ತೊಡಗಿದರು.
ಈ ಬಗ್ಗೆ ಅಧಿಕಾರಿಗಳನ್ನು ವಿಚಾರಿಸಿದರೆ, ಸ್ವಚ್ಛತೆಯನ್ನು ಬಿಬಿಎಂಪಿ ವತಿಯಿಂದ ಮಾಡಿಸುತ್ತಿಲ್ಲ. ಸ್ಥಳೀಯ ಮುಖಂಡರೊಬ್ಬರ ಸೂಚನೆ ಮೇರೆಗೆ ಕ್ಲೀನ್ ಮಾಡುತ್ತಿರುವುದಾಗಿ ಸ್ಥಳೀಯ ಇಂಜಿನಿಯರ್‌ಗೆ ಪೌರಕಾರ್ಮಿಕರು ಮಾಹಿತಿ ನೀಡಿದ್ದಾರೆ. ಆದರೆ, ನಿಗದಿತ ಕೆಲಸದ ವೇಳೆ ಕಾರ್ಮಿಕರು ಮೈದಾನ ಶುಚಿಗೊಳಿಸುವಂತಿಲ್ಲ. ಹೀಗಾಗಿ ಪೌರಕಾರ್ಮಿಕರ ಮುಖಂಡರಿಗೆ ನೋಟಿಸ್ ನೀಡಲು ಸ್ಥಳೀಯ ಇಂಜಿನಿಯರ್‌ಗೆ ಬಿಬಿಎಂಪಿಯಿಂದ ಸೂಚನೆ ನೀಡಲಾಗಿದೆ ಎಂದು ಹೇಳಲಾಗಿದೆ.
ಬಂದ್ ಶತಃಸಿದ್ಧ
ಚಾಮರಾಜಪೇಟೆ ಬಂದ್ ಆಗುವುದು ಶತಃಸಿದ್ಧ ಎಂದು ಚಾಮರಾಜಪೇಟೆ ನಾಗರಿಕ ಬಂಧುಗಳ ವೇದಿಕೆ ಸ್ಪಷ್ಟಪಡಿಸಿದೆ. ಚಾಮರಾಜಪೇಟೆ ಕ್ಚೇತ್ರದ ಶಾಸಕ ಶಾಸಕ ಜಮೀರ್ ಅಹ್ಮದ್ ಖಾನ್, ಬಂದ್ ಆಚರಣೆ ಆಗುವುದಿಲ್ಲ ಎಂದು ಅವರು ತಿಳಿಸಿದ್ದಾರೆ. ಇದರ ಹಿಂದೆ ಅವರ ಹುನ್ನಾರವಿದೆ.
ಚಾಮರಾಜಪೇಟೆ ಮೈದಾನವನ್ನು ವಕ್ಫ್ ಬೋರ್ಡ್‌ಗೆ ಹಸ್ತಾಂತರಿಸಲು ಹುನ್ನಾರ ನಡೆಸಿದ್ದಾರೆ. ಈ ಹಿನ್ನೆಲೆಯಲ್ಲಿ ಜುಲೈ ೧೨ರಂದು ಬಂದ್ ಖಂಡಿತವಾಗಿಯೂ ನಡೆಯಲಿದೆ. ಚಾಮರಾಜಪೇಟೆಯ ಪ್ರತಿಯೊಬ್ಬರಿಗೂ ಕರಪತ್ರ ಹಂಚಿದ್ದೇವೆ. ಅಂಗಡಿ ಮುಂಗಟ್ಟು, ಬ್ಯಾಂಕ್, ಬೀದಿ ಬದಿ ವ್ಯಾಪಾರಿಗಳು ಸೇರಿದಂತೆ ಎಲ್ಲರಿಗೂ ಮನವರಿಕೆ ಮಾಡಲಾಗುತ್ತಿದೆ. ಸ್ವಯಂಪ್ರೇರಿತವಾಗಿ ಎಲ್ಲರೂ ಬೆಳಗ್ಗೆ 8ರಿಂದ ಸಂಜೆ 5ರವರೆಗಿನ ಬಂದ್‌ಗೆ ಸಹಕರಿಸಲಿದ್ದಾರೆ ಎಂದು ಪತ್ರಿಕಾ ಹೇಳಿಕೆಯಲ್ಲಿ ತಿಳಿಸಲಾಗಿದೆ.
ಇದನ್ನೂ ಓದಿ | ಚಾಮರಾಜಪೇಟೆ ಈದ್ಗಾ ಮೈದಾನ ವಿವಾದ: ಜುಲೈ 12ರಂದು ಚಾಮರಾಜಪೇಟೆ ಬಂದ್ ಕರೆ