Site icon Vistara News

ಬೆಂಗಳೂರು ಏರ್‌ ಪೋರ್ಟ್‌ನಲ್ಲೀಗ ಪುರುಷರೂ ಮಗುವಿನ ಡೈಪರ್‌ ಬದಲಿಸಬಹುದು!

diaper change

ಬೆಂಗಳೂರು ವಿಮಾನ ನಿಲ್ದಾಣ ಇರಿಸಿದ ಸಂವೇದನಾಶೀಲ ಹೆಜ್ಜೆಯೊಂದು ಸಾಮಾಜಿಕ ಜಾಲತಾಣಗಳಲ್ಲಿ ಎಲ್ಲರ ಪ್ರಶಂಸೆಗೆ ಪಾತ್ರವಾಗುತ್ತಿದೆ. ವಿಮಾನ ನಿಲ್ದಾಣದ ಆವರಣದಲ್ಲಿರುವ ಪುರುಷರ ವಾಷ್‌ರೂಂಗಳಲ್ಲಿ ಈಗ ಮಕ್ಕಳ ಡೈಪರ್‌ ಬದಲಿಸುವ ಅವಕಾಶವನ್ನು ಕಲ್ಪಿಸಲಾಗಿದೆ.

ಮಕ್ಕಳ ಯೋಗಕ್ಷೇಮ ನೋಡಿಕೊಳ್ಳುವುದು ತಾಯಂದಿರಿಗೆ ಮಾತ್ರ ಸಂಬಂಧಿಸಿದ್ದು ಎಂಬಂತೆ ಮಹಿಳೆಯರ ವಾಷ್‌ರೂಂಗಳಲ್ಲಿ ಮಾತ್ರವೇ ಮಕ್ಕಳ ಡೈಪರ್‌ ಬದಲಿಸಲು ಜಾಗವಿರುತ್ತಿತ್ತು. ಆದರೀಗ ಬದಲಾಗಿರುವ ಕಾಲಮಾನದಲ್ಲಿ, ಮಗುವಿನ ಹೊಣೆ ಪಾಲಕರಿಬ್ಬರದ್ದೂ ಎಂಬ ಸಂವೇದನೆಗೆ ಪುಷ್ಟಿ ನೀಡುವಂತೆ ತೆಗೆದುಕೊಂಡ ಈ ಕ್ರಮ ಎಲ್ಲರ ಮೆಚ್ಚುಗೆಯನ್ನು ಗಳಿಸುತ್ತಿದೆ.

ಸುಖದಾ ಎಂಬುವರು ಟ್ವಿಟರ್‌ನಲ್ಲಿ ಈ ಬಗ್ಗೆ ಚಿತ್ರವೊಂದನ್ನು ಹಂಚಿಕೊಂಡು ʻʻಈ ಬಗ್ಗೆ ಸಂಭ್ರಮಿಸಬೇಕಾಗಿದೆ. ಡೈಪರ್‌ ಬದಲಿಸುವ ವ್ಯವಸ್ಥೆ- ಬೆಂಗಳೂರು ವಿಮಾನ ನಿಲ್ದಾಣದ ಪುರುಷರ ವಾಷ್‌ರೂಂನಲ್ಲಿ. ಮಗುವಿನ ಹೊಣೆ ಮಹಿಳೆಯರದ್ದು ಮಾತ್ರವೇ ಅಲ್ಲʼʼ ಎಂದು ಬರೆದಿದ್ದರು. ಇದಕ್ಕೆ ನೂರಾರು ಪ್ರತಿಕ್ರಿಯೆಗಳು ದಾಖಲಾಗಿವೆ. ಬೆಂಗಳೂರು ವಿಮಾನ ನಿಲ್ದಾಣದ ಅಧಿಕಾರಿಗಳೂ ಈ ಬಗ್ಗೆ ಪ್ರತಿಕ್ರಿಯಿಸಿದ್ದು ʻʻನಿಮ್ಮ ಮೆಚ್ಚುಗೆಗೆ ಧನ್ಯವಾದಗಳು. ಲಿಂಗಭೇದವಿಲ್ಲದೆ ಎಲ್ಲಾ ವಾಷ್‌ ರೂಂಗಳಲ್ಲೂ ಡೈಪರ್‌ ಬದಲಾವಣೆಗೆ ಅವಕಾಶ ಕಲ್ಪಿಸಿದ್ದೇವೆ. ಖಾಸಗಿತನ ಮತ್ತು ಸಾವಧಾನದಿಂದ ಪಾಲಕರು ಮಗುವಿನ ಆರೈಕೆ ಮಾಡಬಹುದುʼʼ ಎಂದು ಹೇಳಿದ್ದಾರೆ.‌

ಇದನ್ನೂ ಓದಿ: Online Beauty Trend: ವೈರಲ್‌ ಆದ ಹೇರ್‌ ಕಲರ್ ಸ್ಟೈಲ್‌

ಇದಕ್ಕೆ ಬಂದ ಒಂದಿಷ್ಟು ಪ್ರತಿಕ್ರಿಯೆಗಳು ಹೀಗಿವೆ:

ʻಬೆಂಗಳೂರು ವಿಮಾನ ನಿಲ್ದಾಣ ಆಡಳಿತದವರ ಆಧುನಿಕ ಚಿಂತನೆಗಳಿಗೆ ಒಳ್ಳೆಯದಾಗಲಿʼʼ

ʻʻಎಷ್ಟೊಂದು ಸ್ಥಳಗಳಲ್ಲಿ ಮಹಿಳೆಯರ ವಾಷ್‌ರೂಂಗಳಲ್ಲಿ ಮಾತ್ರ ಇವು ಕಾಣಸಿಗುತ್ತವೆ. ಇಬ್ಬರಿಗೂ ಆಗುವಂಥ ಸ್ಥಳಗಳಲ್ಲಿ ಇವು ಇದ್ದರೆ ಸೂಕ್ತʼʼ

ʻʻನಮ್ಮ ದೇಶದಲ್ಲಿ ಇಂಥ ಬದಲಾವಣೆಗಳು ಆಗುತ್ತಿರುವುದು ತುಂಬಾ ಒಳ್ಳೆಯದು.ʼʼ

ʻʻಇಂಥ ಬದಲಾವಣೆಗಳಿಂದ ಭರವಸೆ ಮೂಡುತ್ತಿದೆ. ಇಂಥ ಯೋಚನೆಗಳ ಹಿಂದೆ ಯಾರೇ ಇರಲಿ, ಹೊಣೆ ಹಂಚಿಕೆಯ ಬಗೆಗಿನ ಉತ್ತಮ ನಡೆಯಿದುʼʼ

ʻʻಪುರುಷರ ವಾಷ್‌ರೂಂಗಳಲ್ಲಿ ಅತಿ ಕಡಿಮೆ ಅಥವಾ ಇಲ್ಲವೇ ಇಲ್ಲ ಎನ್ನುವಷ್ಟು ಸೌಲಭ್ಯ. ಹೀಗಾಗಿ ನನ್ನಿಬ್ಬರು ಮಕ್ಕಳ ಡೈಪರ್ ಬದಲಾಯಿಸುವ ಬವಣೆಯಿಂದ ಒದ್ದಾಡಿದ್ದೇನೆ. ಇದೊಂದು ಸ್ವಾಗತಾರ್ಹ ನಡೆ. ಆದರೆ ಇದು ಹೆಚ್ಚಿನ ಸ್ಥಳಗಳಲ್ಲಿ ಇರುವುದಿಲ್ಲ ಎಂಬುದೇ ಬೇಸರ.ʼʼ…

ಇದನ್ನೂ ಓದಿ: G7 Summit | ಮೋದಿ ಇದ್ದಲ್ಲಿಗೆ ಬಂದು ಮಾತನಾಡಿಸಿದ ಬೈಡೆನ್‌; ವಿಡಿಯೋ ವೈರಲ್‌

Exit mobile version