ಬೆಂಗಳೂರು: ಬೆಂಗಳೂರು ಕೆಂಪೇಗೌಡ ಅಂತಾರಾಷ್ಟ್ರೀಯ ಏರ್‌ಪೋರ್ಟ್‌ಗೆ ಪ್ರಯಾಣಿಕರನ್ನು ಕರೆದೊಯ್ಯುತ್ತಿದ್ದ ರೈಲಿನ ಸಂಚಾರವನ್ನು (Memu express train) ನೈಋತ್ಯ ರೈಲ್ವೆ (South western railway) ರದ್ದುಪಡಿಸಿದೆ. ಈ ರೈಲು ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ರೈಲ್ವೆ ಸ್ಟೇಶನ್‌ಗೆ ಬಂದು ಹೋಗುತ್ತಿತ್ತು.
ಪ್ರಯಾಣಿಕರ ಕೊರತೆಯ ಹಿನ್ನೆಲೆಯಲ್ಲಿ ಜೂನ್ 1ರಿಂದ ರೈಲುಗಳನ್ನು ಕೆಂಪೇಗೌಡ ಅಂತಾರಾಷ್ಟ್ರೀಯ ಏರ್‌ಪೋರ್ಟ್ ರೈಲ್ವೆ ನಿಲ್ದಾಣಕ್ಕೆ ಬಿಡುತ್ತಿಲ್ಲ ಎಂದು ಬೆಂಗಳೂರು ವಿಭಾಗೀಯ ರೈಲ್ವೆ ಮ್ಯಾನೇಜರ್ ಶ್ಯಾಮ್ ಸಿಂಗ್ ತಿಳಿಸಿದ್ದಾರೆ. ಪ್ರಯಾಣಿಕರ ಸಾಂದ್ರತೆಯ ಪ್ರಮಾಣ 5%ಕ್ಕಿಂತಲೂ ಕೆಳಕ್ಕೆ ಇಳಿದಿತ್ತು. ಸಿಬ್ಬಂದಿ ಸಮಸ್ಯೆಯೂ ತೀವ್ರವಾಗಿತ್ತು.
ವಿಧಾನಸಭೆ ಚುನಾವಣೆ ಮುಗಿದ ಬೆನ್ನಲ್ಲೇ ಈ ರೈಲು ಸಂಚಾರ ನಿಲ್ಲಿಸಲಾಗಿದೆ. ಬೆಂಗಳೂರು ಏರ್ ಪೋರ್ಟ್‌ನಿಂದ ಹೋಗಿ ಬರುವ ಪ್ರಯಾಣಿಕರಿಗೆ ಮೊಬೈಲ್ ಅಪ್ಲಿಕೇಶನ್ ಆಧರಿತ ಕ್ಯಾಬ್ ಸೇವೆ ಇದ್ದರೂ, ಅವು ದುಬಾರಿಯಾಗಿದ್ದರಿಂದ ರೈಲ್ವೆ ಸೇವೆ ಅನುಕೂಲಕರವಾಗುತ್ತಿತ್ತು ಎಂದು ಕೆಲ ಪ್ರಯಾಣಿಕರು ಹೇಳಿದ್ದಾರೆ. ರೈಲು ಸೇವೆ ವಲಯದ ಕಾರ್ಯಕರ್ತ ರಾಜ್ ಕುಮಾರ್ ದುಗಾರ್ ಅವರ ಪ್ರಕಾರ, ಏರ್ ಪೋರ್ಟ್ ರೈಲ್ವೆ ನಿಲ್ದಾಣದಿಂದ ರೈಲುಗಳ ಬರುವ-ಹೊರಡುವ ಸಮಯ, ಮಾರ್ಗ ಹಾಗೂ ರೈಲುಗಳ ನಿರ್ವಹಣೆ ಸರಿಯಾಗಿರಲಿಲ್ಲ. ಹೀಗಾಗಿ ಪ್ರಯಾಣಿಕರ ಕೊರತೆ ಇತ್ತು. ಸೌಲಭ್ಯವನ್ನು ಸುಧಾರಿಸಲು ಇಲಾಖೆ ಕಾರ್ಯಪ್ರವೃತ್ತವಾಗಿರಲಿಲ್ಲ. ಈ ರೈಲು ಸೇವೆಯನ್ನು ಚಿಕ್ಕಬಳ್ಳಾಪುರದ ತನಕ ವಿಸ್ತರಿಸಿದ್ದರೂ ಯಶಸ್ವಿಯಾಗುತ್ತಿತ್ತು ಎಂದು ವಿವರಿಸಿದ್ದಾರೆ.
ಜಪಾನಿನಲ್ಲಿ ರೈಲನ್ನು ಪರಯಾಣಿಕರ ಕೊರತೆ ಇದ್ದರೂ ಓಡಿಸುತ್ತಾರೆ. ಒಬ್ಬ ಪ್ರಯಾಣಿಕ ಇದ್ದರೂ ಬಿಡುವುದಿಲ್ಲ. ಇಂದು ಸಲ ಬಾಲಕಿಯೊಬ್ಬಳಿಗೆ ಶಾಲೆಗೆ ಹೋಗಲು ರೈಲನ್ನು ಬಳಸುತ್ತಾಳೆ ಎಂದು ಅವಳೊಬ್ಬಳಿಗೇ ರೈಲು ಹೊರಡುತ್ತಿತ್ತು ಎಂದು ನೆಟ್ಟಿಗರೊಬ್ಬರು ಹೇಳಿದ್ದಾರೆ.
ಬೆಂಗಳೂರು, ದಿಲ್ಲಿ ಮತ್ತು ವಾರಾಣಸಿ ಏರ್‌ಪೋರ್ಟ್‌ನಲ್ಲಿ ಪೇಪರ್‌ಲೆಸ್ ಎಂಟ್ರಿ ಸೌಲಭ್ಯ ಕಲ್ಪಿಸಲಾಗಿದೆ. ಸಾಫ್ಟ್‌ವೇರ್ ತಂತ್ರಜ್ಞಾನದ ಮೂಲಕ ಏರ್‌ಪೋರ್ಟ್ ನಿಮ್ಮ ಮುಖವನ್ನೇ ಗುರುತಿಸಲಿದೆ. ಈ ಸೌಕರ್ಯವನ್ನು ಡಿಜಿ ಯಾತ್ರಾ (Digi Yatra ) ಎಂದು ಕರೆದಿದೆ. ದೇಶದ ಈ ಮೂರು ಏರ್‌ಪೋರ್ಟ್‌ನಲ್ಲಿ ಮೊದಲ ಹಂತದಲ್ಲಿ ಪ್ರಯಾಣಿಕರಿಗೆ ಈ ಸೌಲಭ್ಯ ಸಿಗುತ್ತಿದೆ.
ಏನಿದು ಡಿಜಿ ಯಾತ್ರಾ? ಡಿಜಿ ಯಾತ್ರಾ ಯೋಜನೆಯಡಿಯಲ್ಲಿ, ಪ್ರಯಾಣಿಕರು ಏರ್‌ಪೋರ್ಟ್‌ನಲ್ಲಿ ಬೋರ್ಡಿಂಗ್ ಪಾಸ್ ಇಲ್ಲದೆಯೂ ಪ್ರವೇಶಿಸಬಹುದು. ನಿಮ್ಮ ಮುಖವನ್ನು ನಾನಾ ಚೆಕ್ ಪಾಯಿಂಟ್‌ಗಳಲ್ಲಿ ಸಾಫ್ಟ್ ವೇರ್ ತಂತ್ರಜ್ಞಾನದ ಮೂಲಕ ತನ್ನಿಂತಾನೆ ಗುರುತಿಸಲಾಗುವುದು. ಈ ಸೌಲಭ್ಯವನ್ನು ಪಡೆಯಬೇಕಿದ್ದರೆ, ಪ್ರಯಾಣಿಕರು ಮೊದಲು ತಮ್ಮ ಆಧಾರ್ ಸಂಖ್ಯೆ ಬಳಸಿಕೊಂಡು ಡಿಜಿಯಾತ್ರಾ ಮೊಬೈಲ್ ಆ್ಯಪ್‌ನಲ್ಲಿ ವ್ಯಾಲಿಡೇಟ್ ಮಾಡಿಕೊಳ್ಳಬೇಕಾಗುತ್ತದೆ. ವ್ಯಾಲಿಡೇಶನ್ ಸಲುವಾಗಿ ತಮ್ಮ ಚಿತ್ರವನ್ನು ತಾವೇ ತೆಗೆದುಕೊಳ್ಳಬೇಕು. (ಸೆಲ್ಫಿ) ಆಧಾರ್ ವಿವರಗಳನ್ನು ಒದಗಿಸಬೇಕು.
ಡಿಜಿ ಯಾತ್ರಾ-ನೋಂದಣಿ ಮತ್ತು ಬಳಕೆ ಹೀಗೆ: -ಡಿಜಿಯಾತ್ರಾ (DigiYatra) ಮತ್ತು ಡಿಜಿಲಾಕರ್ ಆ್ಯಪ್‌ಗಳನ್ನು (DigiLocker) ಪ್ಲೇ ಸ್ಟೋರ್‌ನಿಂದ ಡೌನ್‌ಲೋಡ್ ಮಾಡಿಟ್ಟುಕೊಳ್ಳಿ. – ಡಿಜಿಯಾತ್ರಾ ಆ್ಯಪ್‌ನಲ್ಲಿ ನಿಮ್ಮ ಫೋನ್ ಸಂಖ್ಯೆಯನ್ನು ಮತ್ತು ಒಟಿಪಿ ಪ್ರಕ್ರಿಯೆ ಪೂರ್ಣಗೊಳಿಸಿ. – ಆಧಾರ್ ವಿವರಗಳನ್ನು ಡಿಜಿ ಲಾಕರ್ ಬಳಸಿ ಸಲ್ಲಿಸಿ.
ವಿಮಾನ ಹಾರಾಟಕ್ಕೆ ಕನಿಷ್ಠ 1.5 ಗಂಟೆಗೆ ಮುನ್ನ ಏರ್‌ಪೋರ್ಟ್‌ನಲ್ಲಿ ಪ್ರಯಾಣಿಕರು ಇ-ಗೇಟ್‌ನಲ್ಲಿ ತಮ್ಮ ಬೋರ್ಡಿಂಗ್ ಪಾಸ್ ಮೇಲಿನ ಬಾರ್ ಕೋಡ್ ಅನ್ನು ಸ್ಕ್ಯಾನ್ ಮಾಡಬೇಕು. ಇದನ್ನು ಮಾಡಿದ ಬಳಿಕ ಏರ್‌ಪೋರ್ಟ್ ಪ್ರವೇಶ ಮತ್ತು ವಿಮಾನ ಹತ್ತಲು ಬೋರ್ಡಿಂಗ್ ಪಾಸ್‌ನ ಅಗತ್ಯ ಇರುವುದಿಲ್ಲ. ಇ-ಗೇಟ್‌ನಲ್ಲಿರುವ ಫೇಶಿಯಲ್ ರೆಕಗ್ನಿಶನ್ ಸಿಸ್ಟಮ್, ಪ್ರಯಾಣಿಕರ ಗುರುತನ್ನು ಮತ್ತು ಟ್ರಾವೆಲ್ ಡಾಕ್ಯುಮೆಂಟ್‌ಗಳನ್ನು ವ್ಯಾಲಿಡೇಟ್ ಮಾಡುತ್ತದೆ. ಈ ಪ್ರಕ್ರಿಯೆಯ ಬಳಿಕ ಇ-ಗೇಟ್, ಪ್ರಯಾಣಿಕರಿಗೆ ತೆರೆದುಕೊಳ್ಳುತ್ತದೆ.
ಇದನ್ನೂ ಓದಿ: IndiGo airline : ದೇಶದ ಅತಿ ದೊಡ್ಡ ಏರ್‌ಲೈನ್ ಇಂಡಿಗೊಗೆ 919 ಕೋಟಿ ರೂ. ಲಾಭ, ಕಾರಣವೇನು?