ಬೆಂಗಳೂರು: ಯುವ ಕಾಂಗ್ರೆಸ್‌ನ ನಾಯಕ ಮೊಹಮ್ಮದ್ ನಲಪಾಡ್ ಕೆಟ್ಟ ಕಾರಣಗಳಿಗೇ ಹೆಚ್ಚು ಸುದ್ದಿಯಾಗುತ್ತಿದ್ದಾರೆ. ಹಿಂದೊಮ್ಮೆ ಕ್ಲಬ್‌ನಲ್ಲಿ ಹೊಡೆದಾಡಿಕೊಂಡು ಸುದ್ದಿಯಾಗಿದ್ದ ನಲಪಾಡ್‌ರ ಸಹಚರರು ಮತ್ತದೇ ರೀತಿಯ ಗಲಾಟೆ ಮಾಡಿಕೊಂಡು ಪೊಲೀಸ್ ಠಾಣೆಯ ಮೆಟ್ಟಿಲು ಹತ್ತಿದ್ದಾರೆ.
ನಲಪಾಡ್ ಸಹಚರರು ನಗರದ ಗಾಂಧಿನಗರದಲ್ಲಿರುವ ಲೇಡಿಸ್ ಬಾರ್‌ನಲ್ಲಿ ದಾಂಧಲೆ ನಡೆಸಿದ್ದು, ಕುಡಿದ ಮತ್ತಿನಲ್ಲಿ ಇಬ್ಬರ ಮೇಲೆ ಹಲ್ಲೆ ಮಾಡಿರುವುದು ತಡವಾಗಿ ಬೆಳಕಿಗೆ ಬಂದಿದೆ. ಸೋಮವಾರ ರಾತ್ರಿ ʼಮಿಂಚುʼ ಲೇಡಿಸ್ ಬಾರ್ ನಲ್ಲಿ ಈ ಘಟನೆ ನಡೆದಿದೆ.
ಕಾಂಗ್ರೆಸ್ ನಾಯಕ ಹ್ಯಾರಿಸ್ ಪುತ್ರ ನಲಪಾಡ್‌ನ ಸ್ನೇಹಿತರು ಈ ದಾಂಧಲೆ ನಡೆಸಿದ ಸಂದರ್ಭದಲ್ಲಿ ನಲಪಾಡ್ ಸ್ಥಳದಲ್ಲಿದ್ದರೆ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ. ಆದರೆ ಈ ಬಗ್ಗೆ ಮಾಹಿತಿ ಹೋಗಿ ಪೋಲೀಸರು ಅವರನ್ನು ವಶಕ್ಕೆ ಪಡೆದಿದ್ದರು. ಆಗ ಠಾಣೆಗೆ ಆಗಮಿಸಿದ ನಲಪಾಡ್ ತನ್ನ ಸಹಚರರನ್ನು ಬಿಡಿಸಿಕೊಂಡು ಹೋಗಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ.
ಹೀಗೆ ಪೊಲೀಸರು ತಮ್ಮ ವಶದಲ್ಲಿಟ್ಟುಕೊಂಡಿದ್ದವರ ಹೆಸರು ಅಜೇಯ್ ಮತ್ತು ಪ್ರಸನ್ನ ಎಂದಾಗಿದ್ದು, ಇಬ್ಬರೂ ನಲಪಾಡ್‌ಗೆ ಆತ್ಮೀಯರು ಎನ್ನಲಾಗಿದೆ. ಉಪ್ಪಾರಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಬಾರ್‌ನ ಸಿಸಿ ಕ್ಯಾಮರಾ ದೃಶ್ಯ ಕಲೆ ಹಾಕಿರುವ ಪೊಲೀಸರು ಮುಂದಿನ ತನಿಖೆ ನಡೆಸುತ್ತಿದ್ದಾರೆ.
ಇದನ್ನೂ ಓದಿ | ಅಪರಾಧ ಕೃತ್ಯ ಮುಂದುವರಿಸಿದರೆ ʼಕೊಕಾ ಕಾಯ್ದೆʼ: ಎಸ್‌ಪಿ ಇಶಾಪಂತ್ ಎಚ್ಚರಿಕೆ