Site icon Vistara News

2005ರಲ್ಲಿ ತಲೆಗೆ ಹೊಕ್ಕಿದ್ದ ಬುಲೆಟ್‌ 2023ರಲ್ಲಿ ಹೊರಬಂತು!

Bengaluru doctor pulls out bullet after hitting head

ಬೆಂಗಳೂರು: ಬೆಂಗಳೂರು ವೈದ್ಯರು ಊರಿಗೆಲ್ಲ ಫೇಮಸ್‌. ಅದ್ಯಾವುದೇ ಕಷ್ಟದ ಸರ್ಜರಿ ಇದ್ದರೂ ನುರಿತ ವೈದ್ಯರು ಯಶಸ್ವಿಯಾಗಿ ನಡೆಸುತ್ತಾರೆ. ಸದ್ಯ ಯುದ್ಧದ ಸಮಯದಲ್ಲಿ ವ್ಯಕ್ತಿ ತಲೆಗೆ ಹೊಕ್ಕಿದ್ದ ಬುಲೆಟ್‌ ಅನ್ನು ಹೊರತೆಗೆದಿದ್ದಾರೆ. ಈ ಮೂಲಕ 18 ವರ್ಷಗಳ ನರಳಾಟಕ್ಕೆ ಮುಕ್ತಿಯನ್ನು ನೀಡಿದ್ದಾರೆ.

28 ವರ್ಷದ ಯೆಮನ್‌ ಪ್ರಜೆಗೆ ಆತ 12 ವರ್ಷದವಾನಾಗಿದ್ದಾಗ ತಲೆಗೆ ಗುಂಡು ತಗುಲಿತ್ತು. ಈ ಬುಲೆಟ್‌ ಸ್ಕಲ್‌ ಬೋನ್‌ ಒಳಗೆ ನುಸುಳಿ ಕಿವಿಗೆ ಹೊಕ್ಕಿತ್ತು. ಪರಿಣಾಮ ವಿಪರೀತ ಕಿವಿ ನೋವಿನೊಂದಿಗೆ ಸೋರುವಿಕೆ, ತಲೆ ಹಾಗೂ ಕಿವಿ ನೋವು ಕಾಡುತ್ತಿತ್ತು. ತನ್ನೂರಿನ ಎಲ್ಲ ಆಸ್ಪತ್ರೆಗಳಿಗೆ ಅಲೆದಾಡಿ ಸುಸ್ತಾದ ಆ ವ್ಯಕ್ತಿ ಪೂರ್ತಿ ಗುಣಮುಖನಾಗಲಿಲ್ಲ. ಇತ್ತ ಇಬ್ಬರು ಮಕ್ಕಳ ತಂದೆಯಾಗಿದ್ದ ಆತ ಜವಾಬ್ದಾರಿಯು ಹೆಚ್ಚಾಗಿತ್ತು. ಆದರೆ ಆರೋಗ್ಯ ಹದಗೆಟ್ಟು ದುಡಿಯುತ್ತಿದ್ದ ಹಣವೆಲ್ಲವೂ ಖರ್ಚಾಗುತ್ತಿತ್ತು.

ಕೊನೆಗೆ ಸ್ನೇಹಿತರ ಸಹಾಯದೊಂದಿಗೆ ಬೆಂಗಳೂರಿನ ಆರ್‌.ವಿ ಆಸ್ಟರ್‌ ಆಸ್ಪತ್ರೆಗೆ ಬಂದಿದ್ದಾರೆ. ವೈದ್ಯರು ಎಕ್ಸರೇ ತೆಗೆದು ನೋಡಿದಾಗ ಬುಲೆಟ್‌ ಕಾಣಿಸಿಕೊಂಡಿದೆ. ಇನ್ನು ಈ ಶಸ್ತ್ರಚಿಕಿತ್ಸೆ ಮಾಡಬೇಕು ಎಂದಾಗ ವೈದ್ಯರು ಹಲವಾರು ಸವಾಲುಗಳನ್ನು ಹೆದುರಿಸಬೇಕಾಯಿತು. ಯಾಕೆಂದರೆ ಶಸ್ತ್ರಚಿಕಿತ್ಸೆಗೆ ಮುಂದಾದರೆ ರಕ್ತಸ್ರಾವ ಉಂಟಾಗಬಹುದು ಎಂದು ಅಂದಾಜಿಸಿದ್ದರೂ, ಆದರೂ ಸವಾಲಿನೊಂದಿಗೆ ಶಸ್ತ್ರಚಿಕಿತ್ಸೆ ನಡೆಸಿದ್ದಾರೆ.

ಸುಮಾರು 3 ಸೆಂ.ಮೀ ಉದ್ದದ ಬುಲೆಟ್‌ ಅನ್ನು ಹೊರತೆಗೆದು ಯಶಸ್ವಿಯಾಗಿದ್ದಾರೆ. ಈ ಮೂಲಕ 18 ವರ್ಷಗಳ ನರಳಾಟಕ್ಕೆ ಮುಕ್ತಿ ನೀಡಿದ್ದಾರೆ. ಕಳೆದ ವಾರ ಈ ಸರ್ಜರಿ ನಡೆದಿದ್ದು, ವ್ಯಕ್ತಿ ಪೂರ್ಣ ಗುಣಮುಖರಾಗಿ ಸಂತಸದಿಂದ ತೆರಳಿದ್ದಾರೆ.

ಇದನ್ನೂ ಓದಿ: Karnataka Weather : ಮುಕ್ಕಾಲು ಕರ್ನಾಟಕದಲ್ಲಿ ಒಣಹವೆ; ನಾಳೆ ಈ ಜಿಲ್ಲೆಗಷ್ಟೆ ಮಳೆ ಸೂಚನೆ

ಇದು ತಲೆಗೆ ಹುಳ ಬಿಟ್ಟಿದ್ದಲ್ಲ, ಹೊಕ್ಕಿದ್ದು; ನೆತ್ತಿಯೊಳಗೆಲ್ಲ ಓಡಾಟ!

ಬೆಂಗಳೂರಲ್ಲಿ: ಸಿಲಿಕಾನ್‌ ವ್ಯಾಲಿ ಎಂದು ಕರೆಸಿಕೊಳ್ಳುವ ಬೆಂಗಳೂರು, ವೈದ್ಯಕೀಯ ಸೇವೆಯಲ್ಲಿ ತನ್ನದೇ ಆದ ಛಾಪು ಮೂಡಿಸಿದೆ. ಚಿಕಿತ್ಸೆ ಪಡೆಯಲು ಹೊರ ರಾಜ್ಯ ಮಾತ್ರವಲ್ಲದೇ ದೇಶ-ವಿದೇಶಗಳಿಂದ ರೋಗಿಗಳು ಆಗಮಿಸುತ್ತಾರೆ. ಯಾವುದೇ ಕ್ಲಿಷ್ಟಕರ ಶಸ್ತ್ರಚಿಕಿತ್ಸೆಯಾದರೂ ವೈದ್ಯರು (Successful surgery) ಯಶಸ್ವಿಗೊಳಿಸುತ್ತಾರೆ. ಸದ್ಯ ತಲೆಯೊಳಗೆ ಹೊಕ್ಕಿದ್ದ ಜೀವಂತ ಹುಳವೊಂದನ್ನು (Larva found) ಹೊರತೆಗೆದು ಮಹಿಳೆಯೊಬ್ಬರ ಜೀವವನ್ನು ಬೆಂಗಳೂರು ವೈದ್ಯರು ಉಳಿಸಿದ್ದಾರೆ.

26 ವರ್ಷದ ಆರಾಧ್ಯ (ಹೆಸರು ಬದಲಾಯಿಸಲಾಗಿದೆ) ವನ್ಯಜೀವಿ ಸಂರಕ್ಷಣಾ ಕ್ಷೇತ್ರದಲ್ಲಿ ಎನ್‌ಜಿಒದಲ್ಲಿ ಕೆಲಸ ಮಾಡುತ್ತಿದ್ದರು. ಈ ನಡುವೆ ನೆತ್ತಿಯ ಮೇಲೆ ಊತವೊಂದು ಕಾಣಿಸಿಕೊಂಡಿತ್ತು. ಮೊದಮೊದಲು ಈ ನಿರ್ಲಕ್ಷ್ಯ ವಹಿಸಿದ್ದ ಆರಾಧ್ಯಗೆ ಆನಂತರ ತೀವ್ರವಾದ ನೋವು ಕಾಡತೊಡಗಿತ್ತು. ಇದಕ್ಕೆ ಮನೆಯಲ್ಲಿ ಸಣ್ಣ-ಪುಟ್ಟ ಮನೆ ಮದ್ದು, ನೋವಿನ ಗುಳಿಗೆ ನುಗ್ಗಿದ್ದಳು. ಆದರೂ ಇದ್ಯಾವುದರಿಂದಲೂ ಸಮಸ್ಯೆ ಕಡಿಮೆ ಆಗಿರಲಿಲ್ಲ.

ಆಕ್ರಮೇಣ ನೆತ್ತಿಯ ಆ ಒಂದು ಭಾಗ ಮಾತ್ರ ದೊಡ್ಡದಾಗುತ್ತಲೇ ಇತ್ತು. ಜತೆಗೆ ನೆತ್ತಿಯೊಳಗೆ ಏನೋ ಓಡಾಡುತ್ತಿರುವ ಅನುಭವವೂ ಆಗುತ್ತಿತ್ತು. ಇದರಿಂದ ಹೆಚ್ಚಿನ ಆತಂಕಕ್ಕೆ ಒಳಗಾದ ಆರಾಧ್ಯ ತಡಮಾಡದೆ ವೈದ್ಯರನ್ನು ಸಂಪರ್ಕಿಸಿದ್ದಳು. ತನಗೆ ಆಗುತ್ತಿರುವ ಎಲ್ಲ ಅನುಭವಗಳನ್ನು ವೈದ್ಯರ ಮುಂದೆ ಬಿಚ್ಚಿಟ್ಟಾಗ, ಅವರು ಸೂಕ್ಷ್ಮವಾಗಿ ಎಚ್ಚರಿಕೆಯಿಂದ ಪರೀಕ್ಷಿಸಿದರು.

ಇದನ್ನೂ ಓದಿ: Murder case: ಪ್ರೀತಿ ಕೊಂದ ಕೊಲೆಗಾರ! ಅವಳ ಮೋಹಿಸಿ ತನ್ನವಳಿಗೆ ವಿಷದ ಇಂಜೆಕ್ಷನ್‌ ಕೊಟ್ಟ

ಈ ವೇಳೆ ಈಕೆಯ ನೆತ್ತಿಯ ಚರ್ಮದ ಪದರದಿಂದ ಜೀವಂತ ಬಾಟ್‌ಫ್ಲೈ ಲಾರ್ವಾವೊಂದು ಪತ್ತೆಯಾಗಿತ್ತು. ಇನ್ನೂ ತಡಮಾಡಿದರೆ ಈ ಹುಳು ಅಂಗಾಂಶವನ್ನೇ ನಾಶ ಮಾಡಿಬಿಡುತ್ತೆ ಎಂದು ಶಸ್ತ್ರಚಿಕಿತ್ಸೆಗೆ ಸಲಹೆ ನೀಡಿದರು. ಆರಾಧ್ಯ ಕುಟುಂಬಸ್ಥರ ಒಪ್ಪಿಗೆ ಪಡೆದು ಅನಸ್ತೇಷಿಯಾ ನೀಡಿ ಶಸ್ತ್ರಚಿಕಿತ್ಸೆ ಮೂಲಕ ಲಾರ್ವಾವನ್ನು ಹೊರತೆಗೆದು ಬಳಿಕ ಚರ್ಮಕ್ಕೆ ಹೊಲಿಗೆ ಹಾಕಿದ್ದಾರೆ.

ಟ್ರೈಲೈಫ್‌ ಆಸ್ಪತ್ರೆಯು ಇಂತಹ ಯಶಸ್ವಿ ಶಸ್ತ್ರಚಿಕಿತ್ಸೆಯನ್ನು ನಡೆಸಿದ್ದು ರೋಗಿಯು ಈಗ ಆರೋಗ್ಯವಾಗಿ ಇದ್ದಾರೆ. ಇನ್ನು ಮುಂದೆ ಯಾವುದೇ ತೊಂದರೆಯನ್ನು ಅನುಭವಿಸುವುದಿಲ್ಲ. ಲಾರ್ವಾಗಳು ಬಾಟ್‌ಫ್ಲೈಗಳಾಗಿ ಅಭಿವೃದ್ಧಿ ಹೊಂದುವ ಸಾಧ್ಯತೆ ಇರುತ್ತದೆ. ಈ ಲಾರ್ವಾಗಳನ್ನು ಆರಂಭಿಕ ಹಂತದಲ್ಲೇ ಪತ್ತೆ ಮಾಡಿರುವುದರಿಂದ ಮುಂದೆ ಆಗುತ್ತಿದ್ದ ಅಪಾಯವನ್ನು ತಪ್ಪಿಸಿದಂತಾಗಿದೆ ಎಂದು ಮಾಹಿತಿ ನೀಡಿದ್ದಾರೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ. ಜತೆಗೆ ರಾಜ್ಯದ ಇನ್ನಷ್ಟು ಸುದ್ದಿಗಾಗಿ ಈ ಲಿಂಕ್‌ ಕ್ಲಿಕ್‌ ಮಾಡಿ

Exit mobile version