ಬೆಂಗಳೂರು: ರಾಜಧಾನಿಯ ಪಾರಂಪರಿಕ ಹಾಗೂ ಐತಿಹಾಸಿಕ ಹಿನ್ನೆಲೆ ಹೊಂದಿರುವ ಬೆಂಗಳೂರು ಕರಗ ಉತ್ಸವ ಚೈತ್ರ ಮಾಸದ ಹುಣ್ಣಿಮೆಯಂದು ಮಂಗಳವಾರ ರಾತ್ರಿ ವೈಭವದಿಂದ (Bengaluru Karaga 2024) ನಡೆಯಲಿದೆ. ಮಲ್ಲಿಗೆಯಿಂದ ಅಲಂಕೃತಗೊಂಡ ಕರಗ ನೋಡಲು ಭಕ್ತರು ಕಾತುರದಿಂದ ಕಾಯುತ್ತಿದ್ದಾರೆ. ಕರಗ ಉತ್ಸವಕ್ಕೆ ಕ್ಷಣಗಣನೆ ಶುರುವಾಗಿದ್ದು, ರಾಜಧಾನಿ ಹಾಗೂ ಸುತ್ತಮುತ್ತಲ ಜಿಲ್ಲೆಗಳಿಂದ ಆರು ಲಕ್ಷಕ್ಕೂ ಅಧಿಕ ಮಂದಿ ಭಾಗವಹಿಸುವ ನಿರೀಕ್ಷೆ ಇದೆ.
ಈಗಾಗಲೇ ತಿಗಳರಪೇಟೆ, ಚಿಕ್ಕಪೇಟೆ, ಕಾರ್ಪೋರೇಷನ್ ಸೇರಿದಂತೆ ಹಳೇ ಬೆಂಗಳೂರು ಪ್ರದೇಶವೆಲ್ಲವೂ ಸಿಂಗಾರಗೊಂಡಿದೆ. ಏ.23ರ ಚೈತ್ರ ಹುಣ್ಣಿಮೆಯ ದಿನದಂದು ಕರಗ ಶಕ್ತ್ಯೋತ್ಸವ ಮತ್ತು ಧರ್ಮರಾಯಸ್ವಾಮಿ ಮಹಾರಥೋತ್ಸವಕ್ಕೆ ಕ್ಷಣಗಣನೆ ಶುರುವಾಗಿದೆ. ಕರಗ ಹೊರುವ ಪೂಜಾರಿ ಜ್ಞಾನೇಂದ್ರ ಮಂಗಳವಾರ ವಿಶೇಷ ಪೂಜೆ ಸಲ್ಲಿಸಲಿದ್ದಾರೆ. ಇಂದು ಮಧ್ಯರಾತ್ರಿ 12:30ಕ್ಕೆ ಪೂಜಾ ಕೈಂಕರ್ಯಗಳು ಹಾಗೂ ಕಣ ಪೂಜೆ ಬಳಿಕ ಧರ್ಮರಾಯಸ್ವಾಮಿ ದೇಗುಲದಿಂದ ಹೊರಡುವ ಕರಗ ರಾಜಬೀದಿಗಳಲ್ಲಿ ಸಂಚಾರಿಸಲಿದೆ.
ಕರಗ ಸಾಗುವ ಮಾರ್ಗ ಹೀಗಿದೆ..
ಮೊದಲಿಗೆ ಧರ್ಮರಾಯ ಸ್ವಾಮಿ ದೇವಸ್ಥಾನ ಪ್ರದಕ್ಷಿಣೆ ಹಾಕಿ ದ್ರೌಪದಮ್ಮ ಕರಗ ಹೊರಡಲಿದೆ. ಕುಂಬಾರಪೇಟೆ ರಸ್ತೆ ಮೂಲಕ ಸಾಗಿ ಕೆ.ಆರ್.ಮಾರುಕಟ್ಟೆ ನಂತರ ಕೋಟೆ ಆಂಜನೇಯ ಸ್ವಾಮಿ ದೇಗುಲಕ್ಕೆ ತೆರಳಿ ಪೂಜೆ ಸ್ವೀಕರಿಸಲಿದೆ. ಕೆ.ಆರ್. ಮಾರುಕಟ್ಟೆ ವೃತ್ತಕ್ಕೆ ವಾಪಾಸಾಗಿ ಕಾಟನ್‌ಪೇಟೆ ಪೊಲೀಸ್ ಠಾಣೆ ರಸ್ತೆಯಲ್ಲಿ ತೆರಳಿ, ಅಲ್ಲಿನ ಮಸ್ತಾನ್‌ಸಾಬ್ ದರ್ಗಾಕ್ಕೆ ತೆರಳಿ ಪೂಜೆ ಸ್ವೀಕರಿಸಿ, ಬಳೇಪೇಟೆ ವೃತ್ತದ ಮೂಲಕ ಅಣ್ಣಮ್ಮ ದೇವಿ ದೇವಸ್ಥಾನಕ್ಕೆ ಹೋಗಿ ಧರ್ಮರಾಯ ಸ್ವಾಮಿ ದೇವಸ್ಥಾನಕ್ಕೆ ವಾಪಸ್ ಮರಳಲಿದೆ.
ಮಸ್ತಾನ್ ಸಾಬ್ ದರ್ಗಾದಲ್ಲಿ ಕರಗ ವೈಭವ
ಸಂಪ್ರದಾಯದಂತೆ ಬೆಂಗಳೂರು ಕರಗವು ಅಕ್ಕಿಪೇಟೆಯಲ್ಲಿರುವ ಮಸ್ತಾನ್ ಸಾಬ್ ದರ್ಗಾಕ್ಕೆ ಹೋಗಿ ಬರಲಿದ್ದು, ಧಾರ್ಮಿಕ ಭಾವೈಕ್ಯತೆಗೆ ಸಾಕ್ಷಿಯಾಗಲಿದೆ. ಮುಸ್ಲಿಂ ಭಾಂದವರು ಸಹ ದರ್ಗಾದ ಧಾರ್ಮಿಕ ಸಂಪ್ರದಾಯದಂತೆ ಕರಗಕ್ಕೆ ಪೂಜೆ ಸಲ್ಲಿಸಲಿದ್ದಾರೆ. ಇದನ್ನು ಫಾತಿಯಾ ಎಂದು ಕರೆಯಲಾಗುತ್ತದೆ. ಕರಗದ ಮೆರವಣಿಗೆ ಗಣಪತಿ ದೇವಸ್ಥಾನದಲ್ಲಿ ಮೊದಲ ಪೂಜೆ, ಗ್ರಾಮ ದೇವತೆ ಮುತ್ಯಾಲಮ್ಮನಿಗೆ ಎರಡನೇ ನಮಸ್ಕಾರ ಸಲ್ಲಿಸಿ ಇಲ್ಲಿಂದ ರಾಜಬೀದಿಗಳಲ್ಲಿ ಸಂಚಾರಿಸಿ, ನಂತರ ನಗರ ದೇವತೆ ಅಣ್ಣಮ್ಮ ದೇವಸ್ಥಾನಕ್ಕೆ ಹೋಗಿ ವಾಪಸ್ ಧರ್ಮರಾಯಸ್ವಾಮಿ ದೇವಸ್ಥಾನಕ್ಕೆ ಬರಲಿದೆ.
13ನೇ ಬಾರಿ ಕರಗ ಹೊರುತ್ತಿರುವ ಜ್ಞಾನೇಂದ್ರ
ಏಪ್ರಿಲ್ 15ರಿಂದ ಕರಗ ಮಹೋತ್ಸವ ಶುರುವಾಗಿದ್ದು, ಏ. 23 ರಂದು ಕೊನೆಗೊಳ್ಳಲಿದೆ. ಈ ಬಾರಿಯೂ ಕರಗವನ್ನು ಕರಗದ ಪೂಜಾರಿ ಎ. ಜ್ಞಾನೇಂದ್ರ ಹೊರಲಿದ್ದಾರೆ. ಈ ಮೂಲಕ ಜ್ಞಾನೇಂದ್ರ 13ನೇ ಬೆಂಗಳೂರು ಕರಗ ಹೊರುತ್ತಿದ್ದಾರೆ. ಇನ್ನೂ ಕಳೆದ ವರ್ಷ ಕರಗ ಶಕ್ತ್ಯೋತ್ಸವ ನಡೆಯುವ ಸಂದರ್ಭದಲ್ಲಿ ಕಿಡಿಗೇಡಿಗಳು ಕರಗದ ಪೂಜಾರಿ ಜ್ಞಾನೇಂದ್ರ ಅವರ ಮೇಲೆ ಕೆಮಿಕಲ್ ಎರಚಿದ್ದರು. ಆ ಮೂಲಕ ಕರಗ ಮಹೋತ್ಸವಕ್ಕೆ ಅಡ್ಡಿಪಡಿಸಲು ಮುಂದಾಗಿದ್ದರು. ಆದರೂ ಕರಗದ ಪೂಜಾರಿ ಜ್ಞಾನೇಂದ್ರ ಯಶಸ್ವಿಯಾಗಿ ದ್ರೌಪದಿದೇವಿ ಕರಗವನ್ನು ರಾಜಬೀದಿಯಲ್ಲಿ ಉತ್ಸವ ಮುಗಿಸಿದರು. ಹಿಂದಿನ ಘಟನೆಯನ್ನು ಮರುಕಳಿಸಬಾರೆಂದು ಈ ಬಾರಿ ಹೆಚ್ಚಿನ ಭದ್ರತೆಯನ್ನು ನೀಡಲಾಗಿದೆ.
ಕರಗ ಮಹೋತ್ಸವ ಹಿನ್ನೆಲೆ ಮದ್ಯ ಮಾರಾಟ ನಿಷೇಧ
ಬೆಂಗಳೂರು: ಐತಿಹಾಸಿಕ ಬೆಂಗಳೂರು ಕರಗ ಮಹೋತ್ಸವ (Bengaluru Karaga 2024) ಹಿನ್ನೆಲೆಯಲ್ಲಿ ಏ.23ರಂದು ನಾಲ್ಕು ಠಾಣಾ ವ್ಯಾಪ್ತಿಯಲ್ಲಿ ಮದ್ಯ ಮಾರಾಟ ನಿಷೇಧ ಮಾಡಲಾಗಿದೆ. ಹಲಸೂರು ಗೇಟ್, ಎಸ್ಆರ್ ನಗರ, ವಿಲ್ಸನ್ ಗಾರ್ಡನ್, ಎಸ್‌ಜೆ ಪಾರ್ಕ್ ಠಾಣಾ ವ್ಯಾಪ್ತಿಯಲ್ಲಿ ಮದ್ಯ ಮಾರಾಟ ನಿಷೇಧ ಮಾಡುವಂತೆ ಆಯುಕ್ತ ದಯಾನಂದ ಆದೇಶ ಹೊರಡಿಸಿದ್ದಾರೆ. ಬೆಂಗಳೂರು ಕರಗ ಮಹೋತ್ಸವದಲ್ಲಿ ಸಾವಿರಾರು ಸಂಖ್ಯೆಯಲ್ಲಿ ಭಕ್ತರು ಭಾಗಿಯಾಗುತ್ತಾರೆ. ಈ ವೇಳೆ ಕೆಲವು ಕಿಡಿಗೇಡಿಗಳು ಮದ್ಯದ ಅಮಲಿನಲ್ಲಿ ಕಾನೂನು ಬಾಹಿರ ಕೃತ್ಯ ಎಸಗುವ ಸಾಧ್ಯತೆ ಇದೆ. ಇದು ಸಾರ್ವಜನಿಕರ ಶಾಂತಿಗೆ ಭಂಗ ಉಂಟು ಮಾಡುವ ಸಂಭವವಿದೆ.
ಹೀಗಾಗಿ ಮುನ್ನೆಚ್ಚರಿಕೆ ಸಲುವಾಗಿ ಏ.23ರ ಬೆಳಗ್ಗೆ 6ಗಂಟೆಯಿಂದ ಮರುದಿನ 24ರ ಬೆಳಗ್ಗೆ 10ರವರೆಗೆ ಮದ್ಯ ಮಾರಾಟಕ್ಕೆ ನಿಷೇಧ ಹೇರಲಾಗಿದೆ. ನಾಲ್ಕು ಠಾಣಾ ವ್ಯಾಪ್ತಿಯ ಬಾರ್ ರೆಸ್ಟೋರೆಂಟ್, ಮದ್ಯದ ಅಂಗಡಿಗಳು, ವೈನ್ ಶಾಪ್, ಪಬ್‌ಗಳನ್ನು ಮುಚ್ಚಲು ಆದೇಶಿಸಲಾಗಿದೆ. ಕಾನೂನು ಸುವ್ಯವಸ್ಥೆ ಕಾಪಾಡುವ ದೃಷ್ಟಿಯಿಂದ ಈ ಆದೇಶ ಹೊರಡಿಸಲಾಗಿದೆ.
ಕರಗ ಮಹೋತ್ಸವ; ವಾಹನ ಸವಾರರೇ ಬೇರೆ ದಾರಿ ಕಂಡುಕೊಳ್ಳಿ
ಇಂದು ಮಧ್ಯರಾತ್ರಿ ಐತಿಹಾಸಿಕ ಬೆಂಗಳೂರು ಕರಗ (Bengaluru Karaga Festival) ಮಹೋತ್ಸವ ನಡೆಯಲಿದೆ. ಈ ಹಿನ್ನೆಲೆಯಲ್ಲಿ ಬೆಂಗಳೂರಿನ ಹಲವು ರಸ್ತೆಗಳಲ್ಲಿ ಸಂಚಾರ ನಿರ್ಬಂಧ (Traffic restriction) ಹೇರಲಾಗಿದ್ದು, ಪರ್ಯಾಯ (Alternate roads) ರಸ್ತೆಗಳಲ್ಲಿ ಸಾಗುವಂತೆ ಬೆಂಗಳೂರು ನಗರ ಸಂಚಾರ ಪೊಲೀಸರು (Bangalore traffic police) ಮನವಿ ಮಾಡಿದ್ದಾರೆ.
ಈ ಸಂಬಂಧ ಟ್ರಾಫಿಕ್ ಪೊಲೀಸರು ಪತ್ರಿಕಾ ಪ್ರಕಟಣೆ ನೀಡಿದ್ದಾರೆ: ದಿನಾಂಕ: 23.04.2024ರಿಂದ ದಿನಾಂಕ: 24.04.2024ರ ಬೆಳಗ್ಗೆ 06:00 ಗಂಟೆಯವರೆಗೆ ಇತಿಹಾಸ ಪ್ರಸಿದ್ಧ ಶ್ರೀ ಧರ್ಮರಾಯ ಸ್ವಾಮಿ ಬೆಂಗಳೂರು ಕರಗದ ಉತ್ಸವ ನಡೆಯುತ್ತಿದ್ದು, ಈ ಉತ್ಸವದಲ್ಲಿ ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಲಿರುವುದರಿಂದ ತಿಗಳರ ಪೇಟೆಯಲ್ಲಿರುವ ಧರ್ಮರಾಯ ಸ್ವಾಮಿ ದೇವಸ್ಥಾನದ ಸುತ್ತಮುತ್ತ ತಾತ್ಕಾಲಿಕವಾಗಿ ಸಂಚಾರ ನಿರ್ಬಂಧಿಸಲಾಗಿರುತ್ತದೆ ಎಂದು ತಿಳಿಸಿದೆ.
ಮೆರವಣಿಗೆ ಸಾಗುವ ಮಾರ್ಗ
ಮೆರವಣಿಗೆಯು ನಗರ್ತಪೇಟೆಯ ಧರ್ಮರಾಯ ಸ್ವಾಮಿ ದೇವಸ್ಥಾನದಿಂದ ಪ್ರಾರಂಭಗೊಂಡು ಕಬ್ಬನ್‌ಪೇಟೆ, ಗಾಣಿಗರ ಪೇಟೆ, ಅವೆನ್ಯೂ ರಸ್ತೆ ಮೂಲಕ ಕೆ.ಆರ್ ರಸ್ತೆಯಲ್ಲಿರುವ ಕೋಟೆ ಆಂಜನೇಯ ದೇವಾಲಯಕ್ಕೆ ಬಂದು ಸಿಟಿ ಮಾರ್ಕೆಟ್ ಪೊಲೀಸ್ ಠಾಣೆ ರಸ್ತೆಯ ಮೂಲಕ ರಾಣಾಸಿಂಗ್ ಪೇಟೆ, ಅಕ್ಕಿಪೇಟೆ, ಅರಳಿಪೇಟೆ, ಒಟಿಸಿ ರಸ್ತೆ , ಮಸ್ತಾನ್ ಸಾಹೇಬ್ ದರ್ಗಾ, ಬಳೇಪೇಟೆ ಮುಖ್ಯ ರಸ್ತೆ, ಕೆ.ಜಿ.ರಸ್ತೆ, ಎಸ್.ಪಿ.ರಸ್ತೆ ಮೂಲಕ ಅಣ್ಣಮ್ಮ ದೇವಾಲಯಕ್ಕೆ ಬರುತ್ತದೆ. ಪುನಃ ಅದೇ ಮಾರ್ಗವಾಗಿ ಸಂಚರಿಸಿ, ಕಿಲ್ಲಾರಿ ರಸ್ತೆ, ಮೈಸೂರು ಬ್ಯಾಂಕ್ ವೃತ್ತ, ಅವೆನ್ಯೂ ರಸ್ತೆ ಕ್ರಾಸ್, ಆರ್.ಟಿ.ರಸ್ತೆ , ಕುಂಬಾರಪೇಟೆ, ಗೊಲ್ಲರಪೇಟೆ, ತಿಗಳರಪೇಟೆ, ಸುಣಕಲ್‌ಪೇಟೆ ಮೂಲಕ ದಿ: 24/04/2024 ರಂದು ಬೆಳಗ್ಗೆ 6-00 ಘಂಟೆಗೆ ಧರ್ಮರಾಯ ಸ್ವಾಮಿ ದೇವಾಲಯಕ್ಕೆ ಸೇರುತ್ತದೆ.
ಸಂಚಾರ ನಿರ್ಬಂಧಿಸಲಾದ ರಸ್ತೆಗಳು
ಸಿಟಿ ಮಾರುಕಟ್ಟೆ ವೃತ್ತದಿಂದ ಅವೆನ್ಯೂ ರಸ್ತೆಯ ಮೂಲಕ ಮೈಸೂರು ಬ್ಯಾಂಕ್ ವೃತ್ತದವರೆಗೆ ಎಲ್ಲ ಮಾದರಿಯ ವಾಹನ ಸಂಚಾರ ನಿಷೇಧಿಸಲಾಗಿದೆ. ಉತ್ಸವದ ಮೆರವಣಿಗೆ ಅವೆನ್ಯೂ ರಸ್ತೆ ಪ್ರವೇಶಿಸುತ್ತಿದ್ದಂತೆ, ಎ.ಎಸ್.ಚಾರ್ ರಸ್ತೆಯಿಂದ ಸಿಟಿ ಮಾರುಕಟ್ಟೆ ವೃತ್ತದ ಕಡೆ ವಾಹನಗಳ ಸಂಚಾರವನ್ನು ನಿಷೇಧಿಸಲಾಗಿದೆ. ಎಸ್.ಜೆ.ಪಿ ರಸ್ತೆಯಿಂದ ಎನ್.ಆರ್ ವೃತ್ತದ ಕಡೆಗೆ ಹೋಗಲು ಪಿ.ಕೆ. ಲೇನ್ ಬಳಿ ಎಡ ತಿರುವು ಪಡೆಯುವ ವಾಹನಗಳ ಸಂಚಾರವನ್ನು ನಿಷೇಧಿಸಲಾಗಿದೆ. ಉತ್ಸವದ ಮೆರವಣಿಗೆಯು ಅವೆನ್ಯೂ ರಸ್ತೆಯನ್ನು ಪ್ರವೇಶಿಸುತ್ತಿದಂತೆ ಮೆಡಿಕಲ್ ಕಾಲೇಜು
ಕಡೆಯಿಂದ ಮಾರ್ಕೆಟ್ ವೃತ್ತದ ಕಡೆಗೆ ಬರುವ ವಾಹನಗಳ ಸಂಚಾರವನ್ನು ನಿರ್ಬಂಧಿಸಿದೆ. ನಿರ್ಬಂಧಿಸಲಾದ ವಾಹನಗಳ ಸಂಚಾರಕ್ಕೆ ಪರ್ಯಾಯ ಮಾರ್ಗ ಎಸ್‌ಜೆಪಿ ರಸ್ತೆ -ಟೌನ್‌ಹಾಲ್, ಕೆಂಪೇಗೌಡ ರಸ್ತೆ ಮಾರ್ಗವಾಗಿ ತೆರಳಬಹುದು. ಮೈಸೂರು ರಸ್ತೆಯ ಎ.ಎಸ್.ಎಚ್ ರಸ್ತೆಯಲ್ಲಿ ಬಲ ತಿರುವು ರಾಯನ್ ವೃತ್ತದ ಮೂಲಕ ಸಂಚರಿಸಬಹುದು. ಚಾಮರಾಜಪೇಟೆ ಕಡೆಯಿಂದ ಬರುವ ವಾಹನಗಳು ಪ್ರೊ. ಶಿವಶಂಕರ ವೃತ್ತದ ಮೂಲಕ ಜೆ.ಸಿ ರಸ್ತೆಯನ್ನು ಪ್ರವೇಶಿಸಿ ಟೌನ್‌ಹಾಲ್ ಕಡೆಗೆ ಸಂಚರಿಸಬಹುದು.
ವಾಹನಗಳ ಪಾರ್ಕಿಂಗ್ ಸ್ಥಳಗಳು
ಕರಗ ಉತ್ಸವಕ್ಕೆ ಬರುವ ಸಾರ್ವಜನಿಕರು ತಮ್ಮ ವಾಹನಗಳನ್ನು ಬನ್ನಪ್ಪ ಪಾರ್ಕ್ ಹಾಗೂ ಪುರಭವನ, ಬಿ.ಬಿ.ಎಂ.ಪಿ ಮಾರ್ಕೆಟ್ ಕಾಂಪ್ಲೆಕ್ಸ್, ಇಲ್ಲಿ ನಿಲುಗಡೆ ಮಾಡಬಹುದಾಗಿರುತ್ತದೆ.
ಪಾರ್ಕಿಂಗ್ ನಿರ್ಬಂಧಿಸಲಾದ ಸ್ಥಳಗಳು
ಪಿ.ಕೆ ಲೈನ್, ಓ.ಟಿ.ಸಿ ರಸ್ತೆ, ಎಸ್ಪಿ ರಸ್ತೆ , ಕಬ್ಬನ್‌ಪೇಟೆ ರಸ್ತೆ, ಸುಣ್ಣಕಲ್ ಪೇಟೆ ರಸ್ತೆ, ಎಸ್.ಜೆ.ಪಿ. ಸಿಟಿ ಮಾರ್ಕೆಟ್ ಸರ್ಕಲ್, ಎಸ್.ಜೆ.ಪಿ ರಸ್ತೆ, ಅವೆನ್ಯೂ ರಸ್ತೆ , ಎ.ಎಸ್.ಚಾರ್ ಸ್ಟ್ರೀಟ್ ನಿಂದ ಮಾರ್ಕೆಟ್ ಸರ್ಕಲ್‌ವರೆಗೆ ರಸ್ತೆಗಳಲ್ಲಿ ಎಲ್ಲಾ ಮಾದರಿಯ ವಾಹನಗಳ ನಿಲುಗಡೆಯನ್ನು ನಿರ್ಬಂಧಿಸಿದೆ.
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ