ಬೆಂಗಳೂರು: ಇಂದು ಮಧ್ಯರಾತ್ರಿ ಐತಿಹಾಸಿಕ ಬೆಂಗಳೂರು ಕರಗ (Bengaluru Karaga Festival) ಮಹೋತ್ಸವ ನಡೆಯಲಿದೆ. ಈ ಹಿನ್ನೆಲೆಯಲ್ಲಿ ಬೆಂಗಳೂರಿನ ಹಲವು ರಸ್ತೆಗಳಲ್ಲಿ ಸಂಚಾರ ನಿರ್ಬಂಧ (Traffic restriction) ಹೇರಲಾಗಿದ್ದು, ಪರ್ಯಾಯ (Alternate roads) ರಸ್ತೆಗಳಲ್ಲಿ ಸಾಗುವಂತೆ ಬೆಂಗಳೂರು ನಗರ ಸಂಚಾರ ಪೊಲೀಸರು (Bangalore traffic police) ಮನವಿ ಮಾಡಿದ್ದಾರೆ.
ಈ ಸಂಬಂಧ ಟ್ರಾಫಿಕ್ ಪೊಲೀಸರು ಪತ್ರಿಕಾ ಪ್ರಕಟಣೆ ನೀಡಿದ್ದಾರೆ: ದಿನಾಂಕ: 23.04.2024ರಿಂದ ದಿನಾಂಕ: 24.04.2024ರ ಬೆಳಗ್ಗೆ 06:00 ಗಂಟೆಯವರೆಗೆ ಇತಿಹಾಸ ಪ್ರಸಿದ್ಧ ಶ್ರೀ ಧರ್ಮರಾಯ ಸ್ವಾಮಿ ಬೆಂಗಳೂರು ಕರಗದ ಉತ್ಸವ ನಡೆಯುತ್ತಿದ್ದು, ಈ ಉತ್ಸವದಲ್ಲಿ ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಲಿರುವುದರಿಂದ ತಿಗಳರ ಪೇಟೆಯಲ್ಲಿರುವ ಧರ್ಮರಾಯ ಸ್ವಾಮಿ ದೇವಸ್ಥಾನದ ಸುತ್ತಮುತ್ತ ತಾತ್ಕಾಲಿಕವಾಗಿ ಸಂಚಾರ ನಿರ್ಬಂಧಿಸಲಾಗಿರುತ್ತದೆ ಎಂದು ತಿಳಿಸಿದೆ.
ಮೆರವಣಿಗೆ ಸಾಗುವ ಮಾರ್ಗ
ಮೆರವಣಿಗೆಯು ನಗರ್ತಪೇಟೆಯ ಧರ್ಮರಾಯ ಸ್ವಾಮಿ ದೇವಸ್ಥಾನದಿಂದ ಪ್ರಾರಂಭಗೊಂಡು ಕಬ್ಬನ್‌ಪೇಟೆ, ಗಾಣಿಗರ ಪೇಟೆ, ಅವೆನ್ಯೂ ರಸ್ತೆ ಮೂಲಕ ಕೆ.ಆರ್ ರಸ್ತೆಯಲ್ಲಿರುವ ಕೋಟೆ ಆಂಜನೇಯ ದೇವಾಲಯಕ್ಕೆ ಬಂದು ಸಿಟಿ ಮಾರ್ಕೆಟ್ ಪೊಲೀಸ್ ಠಾಣೆ ರಸ್ತೆಯ ಮೂಲಕ ರಾಣಾಸಿಂಗ್ ಪೇಟೆ, ಅಕ್ಕಿಪೇಟೆ, ಅರಳಿಪೇಟೆ, ಒಟಿಸಿ ರಸ್ತೆ , ಮಸ್ತಾನ್ ಸಾಹೇಬ್ ದರ್ಗಾ, ಬಳೇಪೇಟೆ ಮುಖ್ಯ ರಸ್ತೆ, ಕೆ.ಜಿ.ರಸ್ತೆ, ಎಸ್.ಪಿ.ರಸ್ತೆ ಮೂಲಕ ಅಣ್ಣಮ್ಮ ದೇವಾಲಯಕ್ಕೆ ಬರುತ್ತದೆ. ಪುನಃ ಅದೇ ಮಾರ್ಗವಾಗಿ ಸಂಚರಿಸಿ, ಕಿಲ್ಲಾರಿ ರಸ್ತೆ, ಮೈಸೂರು ಬ್ಯಾಂಕ್ ವೃತ್ತ, ಅವೆನ್ಯೂ ರಸ್ತೆ ಕ್ರಾಸ್, ಆರ್.ಟಿ.ರಸ್ತೆ , ಕುಂಬಾರಪೇಟೆ, ಗೊಲ್ಲರಪೇಟೆ, ತಿಗಳರಪೇಟೆ, ಸುಣಕಲ್‌ಪೇಟೆ ಮೂಲಕ ದಿ: 24/04/2024 ರಂದು ಬೆಳಗ್ಗೆ 6-00 ಘಂಟೆಗೆ ಧರ್ಮರಾಯ ಸ್ವಾಮಿ ದೇವಾಲಯಕ್ಕೆ ಸೇರುತ್ತದೆ.
ಸಂಚಾರ ನಿರ್ಬಂಧಿಸಲಾದ ರಸ್ತೆಗಳು
ಸಿಟಿ ಮಾರುಕಟ್ಟೆ ವೃತ್ತದಿಂದ ಅವೆನ್ಯೂ ರಸ್ತೆಯ ಮೂಲಕ ಮೈಸೂರು ಬ್ಯಾಂಕ್ ವೃತ್ತದವರೆಗೆ ಎಲ್ಲ ಮಾದರಿಯ ವಾಹನ ಸಂಚಾರ ನಿಷೇಧಿಸಲಾಗಿದೆ. ಉತ್ಸವದ ಮೆರವಣಿಗೆ ಅವೆನ್ಯೂ ರಸ್ತೆ ಪ್ರವೇಶಿಸುತ್ತಿದ್ದಂತೆ, ಎ.ಎಸ್.ಚಾರ್ ರಸ್ತೆಯಿಂದ ಸಿಟಿ ಮಾರುಕಟ್ಟೆ ವೃತ್ತದ ಕಡೆ ವಾಹನಗಳ ಸಂಚಾರವನ್ನು ನಿಷೇಧಿಸಲಾಗಿದೆ. ಎಸ್.ಜೆ.ಪಿ ರಸ್ತೆಯಿಂದ ಎನ್.ಆರ್ ವೃತ್ತದ ಕಡೆಗೆ ಹೋಗಲು ಪಿ.ಕೆ. ಲೇನ್ ಬಳಿ ಎಡ ತಿರುವು ಪಡೆಯುವ ವಾಹನಗಳ ಸಂಚಾರವನ್ನು ನಿಷೇಧಿಸಲಾಗಿದೆ. ಉತ್ಸವದ ಮೆರವಣಿಗೆಯು ಅವೆನ್ಯೂ ರಸ್ತೆಯನ್ನು ಪ್ರವೇಶಿಸುತ್ತಿದಂತೆ ಮೆಡಿಕಲ್ ಕಾಲೇಜು
ಕಡೆಯಿಂದ ಮಾರ್ಕೆಟ್ ವೃತ್ತದ ಕಡೆಗೆ ಬರುವ ವಾಹನಗಳ ಸಂಚಾರವನ್ನು ನಿರ್ಬಂಧಿಸಿದೆ. ನಿರ್ಬಂಧಿಸಲಾದ ವಾಹನಗಳ ಸಂಚಾರಕ್ಕೆ ಪರ್ಯಾಯ ಮಾರ್ಗ ಎಸ್‌ಜೆಪಿ ರಸ್ತೆ -ಟೌನ್‌ಹಾಲ್, ಕೆಂಪೇಗೌಡ ರಸ್ತೆ ಮಾರ್ಗವಾಗಿ ತೆರಳಬಹುದು. ಮೈಸೂರು ರಸ್ತೆಯ ಎ.ಎಸ್.ಎಚ್ ರಸ್ತೆಯಲ್ಲಿ ಬಲ ತಿರುವು ರಾಯನ್ ವೃತ್ತದ ಮೂಲಕ ಸಂಚರಿಸಬಹುದು. ಚಾಮರಾಜಪೇಟೆ ಕಡೆಯಿಂದ ಬರುವ ವಾಹನಗಳು ಪ್ರೊ. ಶಿವಶಂಕರ ವೃತ್ತದ ಮೂಲಕ ಜೆ.ಸಿ ರಸ್ತೆಯನ್ನು ಪ್ರವೇಶಿಸಿ ಟೌನ್‌ಹಾಲ್ ಕಡೆಗೆ ಸಂಚರಿಸಬಹುದು.
ವಾಹನಗಳ ಪಾರ್ಕಿಂಗ್ ಸ್ಥಳಗಳು
ಕರಗ ಉತ್ಸವಕ್ಕೆ ಬರುವ ಸಾರ್ವಜನಿಕರು ತಮ್ಮ ವಾಹನಗಳನ್ನು ಬನ್ನಪ್ಪ ಪಾರ್ಕ್ ಹಾಗೂ ಪುರಭವನ, ಬಿ.ಬಿ.ಎಂ.ಪಿ ಮಾರ್ಕೆಟ್ ಕಾಂಪ್ಲೆಕ್ಸ್, ಇಲ್ಲಿ ನಿಲುಗಡೆ ಮಾಡಬಹುದಾಗಿರುತ್ತದೆ.
ಪಾರ್ಕಿಂಗ್ ನಿರ್ಬಂಧಿಸಲಾದ ಸ್ಥಳಗಳು
ಪಿ.ಕೆ ಲೈನ್, ಓ.ಟಿ.ಸಿ ರಸ್ತೆ, ಎಸ್ಪಿ ರಸ್ತೆ , ಕಬ್ಬನ್‌ಪೇಟೆ ರಸ್ತೆ, ಸುಣ್ಣಕಲ್ ಪೇಟೆ ರಸ್ತೆ, ಎಸ್.ಜೆ.ಪಿ. ಸಿಟಿ ಮಾರ್ಕೆಟ್ ಸರ್ಕಲ್, ಎಸ್.ಜೆ.ಪಿ ರಸ್ತೆ, ಅವೆನ್ಯೂ ರಸ್ತೆ , ಎ.ಎಸ್.ಚಾರ್ ಸ್ಟ್ರೀಟ್ ನಿಂದ ಮಾರ್ಕೆಟ್ ಸರ್ಕಲ್‌ವರೆಗೆ ರಸ್ತೆಗಳಲ್ಲಿ ಎಲ್ಲಾ ಮಾದರಿಯ ವಾಹನಗಳ ನಿಲುಗಡೆಯನ್ನು ನಿರ್ಬಂಧಿಸಿದೆ.
ಇದನ್ನೂ ಓದಿ: Karnataka Weather : ಬೆಂಗಳೂರು ಕರಗಕ್ಕೆ ಅಡ್ಡಿಯಾಗುತ್ತಾ ಮಳೆ; ಮತ್ತೆ ಬಿಸಿ ಗಾಳಿ ಎಚ್ಚರಿಕೆ ಕೊಟ್ಟ ತಜ್ಞರು