ಬೆಂಗಳೂರು: ರಾಜಧಾನಿ ಬೆಂಗಳೂರಿನಲ್ಲಿ (Bengaluru News) ಭಯಂಕರ ಕೊಲೆ (Bengaluru Murder) ಪ್ರಕರಣವನ್ನು ಸಂಪಿಗೇಹಳ್ಳಿ ಪೊಲೀಸರು ಬಯಲು ಮಾಡಿದ್ದಾರೆ. ಮನೆಗೆ ಬಂದಿದ್ದ ವ್ಯಕ್ತಿಗೆ ಜಾಕ್ ರಾಡ್‌ನಿಂದ ಹೊಡೆದು ಕೊಂದು, ನಂತರ ಮೃತದೇಹವನ್ನು ತುಂಡು ತುಂಡಾಗಿ ಕತ್ತರಿಸಿ ಮೋರಿಗೆ ಎಸೆದಿದ್ದಾನೆ. ಬೆಂಗಳೂರಿನ ರಾಮಮೂರ್ತಿನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ (Murder case) ಈ ಕೃತ್ಯ ನಡೆದಿದೆ. ಕೆ.ವಿ.ಶ್ರೀನಾಥ್ (34) ಕೊಲೆಯಾದವನು. ಮಾಧವ ರಾವ್ ಎಂಬಾತ ಕೊಲೆ ಆರೋಪಿಯಾಗಿದ್ದಾನೆ.
ಥಣಿಸಂದ್ರದ ಅಂಜನಾದ್ರಿ ಲೇಔಟ್ ನಿವಾಸಿಯಾದ ಕೆ.ವಿ. ಶ್ರೀನಾಥ್ ಬೆಂಗಳೂರಿನ ಬಸವೇಶ್ವರನಗರದಲ್ಲಿರುವ ಮಾರ್ಗದರ್ಶಿ ಚಿಟ್ ಫಂಡ್‌ನಲ್ಲಿ ಡೆವಲಪ್ಮೆಂಟ್ ಆಫೀಸರ್ ಆಗಿದ್ದ. ಹೀಗಿರುವಾಗ ಕಳೆದ ಮೇ.28ರ ಬೆಳಗ್ಗೆ ಮನೆಯಿಂದ ಹೊರಹೋಗಿದ್ದ ಶ್ರೀನಾಥ್ ವಾಪಸ್ ಆಗಿರಲಿಲ್ಲ. ಇದರಿಂದ ಹೆದರಿದ ಶ್ರೀನಾಥ್ ಪತ್ನಿ ಮೇ.29ರಂದು ಸಂಪಿಗೆಹಳ್ಳಿ ಪೊಲೀಸ್ ಠಾಣೆಯಲ್ಲಿ ಮಿಸ್ಸಿಂಗ್ ಕೇಸ್ ದಾಖಲಿಸಿದ್ದರು.
ದೂರು ದಾಖಲಿಸಿಕೊಂಡು ಪ್ರಕರಣದ ಕುರಿತು ತನಿಖೆ ನಡೆಸಿದ ಪೊಲೀಸರಿಗೆ ಕೆ.ವಿ.ಶ್ರೀನಾಥ್ ಮೇ.28ರಂದು ಆರೋಪಿ ಮಾಧವರಾವ್ ಮನೆಗೆ ಹೋಗಿದ್ದು ಗೊತ್ತಾಗಿತ್ತು. ಕೆ.ಆರ್.ಪುರಂನ ವಿಜಿನಪುರದಲ್ಲಿರುವ ಮಾಧವರಾವ್ ಮನೆಗೆ ಶ್ರೀನಾಥ್ ಹೋಗುವುದು ಸಿಸಿಟಿವಿಯಲ್ಲಿ ಸೆರೆಯಾಗಿತ್ತು. ಆದರೆ ಒಳಗೆ ಹೋದವನು ಹೊರಗೆ ಬಂದಿರಲಿಲ್ಲ. ಜತೆಗೆ ಮನೆಯ ಒಳಗಡೆ ಪರಿಶೀಲನೆ ಮಾಡಿದಾಗ ರಕ್ತದ ಕಲೆಗಳು ಪತ್ತೆಯಾಗಿದ್ವು. ಇದರಿಂದ ಮಾಧವರಾವ್ ಬಗ್ಗೆ ವಿಚಾರಿಸಿದಾಗ ಆತನೂ ನಾಪತ್ತೆಯಾಗಿದ್ದ.
ಬಳಿಕ ಆತನ ಮೊಬೈಲ್ ಲೋಕೇಶನ್ ಪತ್ತೆ ಮಾಡಿದ ಪೊಲೀಸರಿಗೆ ಆರೋಪಿ ಆಂಧ್ರಪ್ರದೇಶದಲ್ಲಿಇದ್ದಾನೆ ಎಂದು ಗೊತ್ತಾಗಿತ್ತು. ನಂತರ ಮಾಧವರಾವ್‌ನನ್ನು ಕರೆತಂದು ಪೊಲೀಸರು ವಿಚಾರಣೆಯನ್ನು ನಡೆಸಿದಾಗ ಅಸಲಿ ಕಥೆಯನ್ನು ತೆರೆದಿಟ್ಟಿದ್ದ.
ಇದನ್ನೂ ಓದಿ: Self Harming : ಮಗಳ ನಗ್ನ ಫೋಟೊ ತೋರಿಸಿ ಪ್ರಿಯಕರ ಬ್ಲ್ಯಾಕ್‌ಮೇಲ್; ಮರ್ಯಾದೆಗೆ ಅಂಜಿ ವಿಷ ಸೇವಿಸಿದ ಕುಟುಂಬಸ್ಥರು
ಅಕ್ರಮ ಸಂಬಂಧದ ಶಂಕೆ
ಮಾಧವರಾವ್ ಮತ್ತು ಕೆ.ವಿ.ಶ್ರೀನಾಥ್ ಇಬ್ಬರು ಎರಡು ವರ್ಷದಿಂದ ಪರಿಚಯಸ್ಥರಾಗಿದ್ದರು. ಕೆ.ವಿ.ಶ್ರೀನಾಥ್ ಬಳಿ ಮಾಧವರಾವ್ 5 ಲಕ್ಷ ರೂ. ಹಣದ ಚೀಟಿ ಹಾಕಿದ್ದ. ಈ ಚೀಟಿ ಹಣದ ವಿಚಾರಕ್ಕೆ ಇಬ್ಬರ ನಡುವೆ ಗಲಾಟೆ ಆಗಿತ್ತು. ಚೀಟಿ ಹಣ ವಾಪಸ್ ಕೊಡುವಂತೆ ಶ್ರೀನಾಥ್ ಒತ್ತಾಯ ಮಾಡುತ್ತಿದ್ದ. ಅಷ್ಟಲ್ಲದೇ ಮಾಧವರಾವ್ ಪತ್ನಿ ಜತೆ ಶ್ರೀನಾಥ್ ಅಕ್ರಮ ಸಂಬಂಧವನ್ನು ಹೊಂದಿದ್ದನಂತೆ.
ಹೀಗಿರುವಾಗ ಮೇ 28ರಂದು ಬೆಳಗ್ಗೆ ಮಾಧವರಾವ್ ಮನೆಗೆ ಶ್ರೀನಾಥ್ ಬಂದಿದ್ದ. ಈ ವೇಳೆ ಮನೆಯಲ್ಲಿ ಇಬ್ಬರಿಗೂ ಹಣದ ವಿಚಾರಕ್ಕೆ ಗಲಾಟೆ ಆಗಿತ್ತು. ಗಲಾಟೆ ವಿಕೋಪಕ್ಕೆ ತಿರುಗಿದ್ದು, ಸಿಟ್ಟಿನಲ್ಲಿ ಮಾಧವರಾವ್ ಮನೆಯಲ್ಲಿದ್ದ ಜಾಕ್ ರಾಡ್‌ನಿಂದ ಶ್ರೀನಾಥ್ ತಲೆಗೆ ಹೊಡೆದಿದ್ದ. ಕುಸಿದು ಬಿದ್ದ ಶ್ರೀನಾಥ್‌ನ ದೇಹವನ್ನು ಮಚ್ಚಿನಿಂದ ತುಂಡು ತುಂಡಾಗಿ ಕತ್ತರಿಸಿದ್ದ.
ಬಳಿಕ ಸಾಕ್ಷಿ ನಾಶ ಮಾಡಲು ಶ್ರೀನಾಥ್‌ನ ಮೃತದೇಹವನ್ನು ಮೂರು ಪ್ಲಾಸ್ಟಿಕ್ ಚೀಲದಲ್ಲಿ ತುಂಬಿದ್ದ. ಮೊದಲಿಗೆ ಒಂದು ಬ್ಯಾಗ್ ನಂತರ ಎರಡು ಬ್ಯಾಗ್‌ಗಳಲ್ಲಿ ಮೃತದೇಹದ ತುಂಡುಗಳನ್ನು ತುಂಬಿಕೊಂಡು ಬೆಳತ್ತೂರು ಬಳಿಯ ಮೋರಿಯಲ್ಲಿ (ಪಿನಾಕಿನಿ ನದಿ) ಹಾಕಿದ್ದ. ನಂತರ ತನ್ನ ಮೊಬೈಲ್ ಸ್ವಿಚ್ಡ್ ಆಫ್ ಮಾಡಿಕೊಂಡು ಆಂಧ್ರಪ್ರದೇಶಕ್ಕೆ ಎಸ್ಕೇಪ್ ಆಗಿದ್ದ.
ಸದ್ಯ ಕೊಲೆ ಪ್ರಕರಣವನ್ನು ರಾಮಮೂರ್ತಿನಗರ ಪೊಲೀಸ್ ಠಾಣೆಗೆ ವರ್ಗಾವಣೆ ಮಾಡಲಾಗಿದೆ. ರಾಮಮೂರ್ತಿನಗರ ಪೊಲೀಸರು ಕೊಲೆ (302) ಮತ್ತು ಸಾಕ್ಷಿ ನಾಶ(201)ರಡಿ ಕೇಸ್ ದಾಖಲು ಮಾಡಿಕೊಂಡು, ಶ್ರೀನಾಥ್ ಮೃತದೇಹದ ತುಂಡುಗಳಿಗೆ ಕಳೆದ ಮೂರು ದಿನದಿಂದ ಹುಡುಕಾಡುತ್ತಿದ್ದಾರೆ. ಸದ್ಯಕ್ಕೆ ಮೋರಿಯಲ್ಲಿ ಮೃತದೇಹದ ತುಂಡುಗಳು ಕೊಚ್ಚಿಕೊಂಡು ಹೋಗಿರುವ ಸಾಧ್ಯತೆ ಇದ್ದು, ಮಂಗಳೂರಿನಿಂದ ನುರಿತರನ್ನು ಕರೆಸಿದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ತಿಳಿದು ಬಂದಿದೆ.
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ