ಬೆಂಗಳೂರು: ಕೌಟುಂಬಿಕ ಕಲಹ ಹಿನ್ನೆಲೆಯಲ್ಲಿ ವೃದ್ಧ ದಂಪತಿ ಆತ್ಮಹತ್ಯೆಗೆ ಶರಣಾಗಿದ್ದಾರೆ. ಬೆಂಗಳೂರಿನ ಕೃಷ್ಣಯ್ಯ ಲೇಔಟ್‌ನಲ್ಲಿ ಘಟನೆ ನಡೆದಿದೆ. ಕೃಷ್ಣಂ ನಾಯ್ಡು (84), ಸರೋಜಮ್ಮ (78) ಎಂಬುವವರು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಈ ದಂಪತಿಗೆ ಇಬ್ಬರು ಮಕ್ಕಳಿದ್ದು, ಮಗ ಅಶೋಕ್ ಜತೆಗೆ ವಾಸವಿದ್ದರು. ಆಂಧ್ರ ಮೂಲದ ದಂಪತಿ ಹಲವು ವರ್ಷಗಳಿಂದ ಬೆಂಗಳೂರಿನಲ್ಲೆ ವಾಸವಾಗಿದ್ದರು. ಮೂರು ಅಂತಸ್ಥಿನ ಕಟ್ಟಡವನ್ನು ಹೊಂದಿದ್ದ ಈ ದಂಪತಿ ಟೆರಸ್‌ನ ರೂಂನಲ್ಲಿ ಇರುತ್ತಿದ್ದರು. ಮಗನ ನಿರ್ಲಕ್ಷ್ಯದಿಂದಲೇ ವೃದ್ಧ ದಂಪತಿ ಮೃತಪಟ್ಟರಾ ಎಂಬ ಅನುಮಾನ ಮೂಡಿದೆ. ಮಗ ಅಶೋಕ್ ಹಾಗೂ ವೃದ್ಧ ದಂಪತಿ ನಡುವೆ ಆಗಾಗ ಜಗಳವಾಗುತ್ತಿತ್ತು ಎನ್ನಲಾಗಿದೆ. ಒಂದು ವಾರದ ಹಿಂದೆ ಗಲಾಟೆಯಾಗಿ, ಹಲ್ಲೆ ಮಾಡಿರುವ ಆರೋಪವಿದೆ. ಇದೇ ವಿಚಾರಕ್ಕೆ ವೃದ್ಧ ದಂಪತಿಯ ಮಗಳು ಅಣ್ಣ ಅಶೋಕ್‌ನಿಗೆ ಅಪ್ಪ- ಅಮ್ಮನನ್ನು ಚೆನ್ನಾಗಿ ನೋಡಿಕೊಳ್ಳುವಂತೆ ಬೈದಿದ್ದರು ಎನ್ನಲಾಗಿದೆ.
ಕೆಲ ತಿಂಗಳ ಹಿಂದೆ ಮಗನೊಟ್ಟಿಗೆ ಇರದೇ ಮನೆಯ ಟೆರೆಸ್ ಮೇಲಿರುವ ರೂಂನಲ್ಲಿ ವಾಸವಾಗಿದ್ದರು. ಫೆ.22ರ ಗುರುವಾರ ಬೆಳಗ್ಗೆ 7.30ರ ಸುಮಾರಿಗೆ ಸೊಸೆ ನೀರು ಹಿಡಿದುಕೊಳ್ಳಲು ಬಂದಾಗ ಇಬ್ಬರು ನೇಣು ಬಿಗಿದುಕೊಂಡಿರುವುದು ಬೆಳಕಿಗೆ ಬಂದಿತ್ತು. ಸದ್ಯ ಸ್ಥಳಕ್ಕೆ ಸೋಕೋ ಟೀಂ ಹಾಗೂ ಚೆನ್ನಮ್ಮನ ಕೆರೆ ಅಚ್ಚುಕಟ್ಟು ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ವೃದ್ಧ ದಂಪತಿ ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗಾಗಿ ಆಸ್ಪತ್ರೆಗೆ ರವಾನಿಸಲಾಗಿದೆ. ಈ ಸಂಬಂಧ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆಯನ್ನು ಮುಂದುವರಿಸಿದ್ದಾರೆ.
ಇದನ್ನೂ ಓದಿ: Monkey Pox: ಸಿದ್ದಾಪುರದಲ್ಲಿ ಮಂಗನಕಾಯಿಲೆಗೆ ಮಹಿಳೆ ಬಲಿ
ಕುಡಿಬೇಡ ಎಂದಿದ್ದಕ್ಕೆ ಬಾತ್‌ರೂಂನಲ್ಲಿ ನೇಣು ಬಿಗಿದುಕೊಂಡ ಯುವಕ
ರಾಯಚೂರು: ಕುಡಿಬೇಡ ಎಂದು ಬುದ್ಧಿ ಹೇಳಿದಕ್ಕೆ ಯುವಕನೊರ್ವ ಆತ್ಮಹತ್ಯೆ (Self Harming) ಮಾಡಿಕೊಂಡಿದ್ದಾನೆ. ರಾಯಚೂರು ಜಿಲ್ಲೆಯ ಮಾನ್ವಿ ಪಟ್ಟಣ ಘಟನೆ ನಡೆದಿದೆ. ಆದರ್ಶ್ (24) ಆತ್ಮಹತ್ಯೆ ಮಾಡಿಕೊಂಡವನು.
ಮಾನ್ವಿ ಪಟ್ಟಣದಲ್ಲಿ ಆದರ್ಶ್ ಹೇರ್ ಕಟಿಂಗ್ ಶಾಪ್ ಹೊಂದಿದ್ದ. ಈ ನಡುವೆ ಮದ್ಯ ಸೇವಿಸುವುದನ್ನು ಹವ್ಯಾಸ ಮಾಡಿಕೊಂಡಿದ್ದ. ದುಡಿದ ಹಣವನ್ನೆಲ್ಲ ಕುಡಿತಕ್ಕೆ ಹಾಕುತ್ತಿದ್ದ. ನಿತ್ಯ ಕುಡಿದು ಮನೆಗೆ ಬರುತ್ತಿದ್ದ. ಇದೇ ವಿಚಾರಕ್ಕೆ ಮನೆಯಲ್ಲಿ ಪೋಷಕರು ಬೈದು ಬುದ್ಧಿವಾದ ಹೇಳಿದ್ದರು.
ಬುದ್ಧಿವಾದವನ್ನೇ ಅವಮಾನ ಎಂದು ತಿಳಿದು ಮನನೊಂದಿದ್ದ. ಕೋಪದ ಕೈಗೆ ಬುದ್ಧಿಕೊಟ್ಟ ಆದರ್ಶ್ ಮನೆ ಬಾತ್ ರೂಂನಲ್ಲಿರುವ ಪೈಪ್‌ಗೆ ಹಗ್ಗ ಕಟ್ಟಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಮಗನ ಸಾವಿನಿಂದ ಹೆತ್ತವರ ಆಕ್ರಂದನ ಮುಗಿಲು ಮುಟ್ಟಿದೆ. ಮಾನ್ವಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದ್ದು, ಈ ಸಂಬಂಧ ಪ್ರಕರಣ ದಾಖಲಾಗಿದೆ.
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ