ಬೆಂಗಳೂರು: ಯುವಕನೊಬ್ಬ ವಿಲನ್ಸ್ ಮ್ಯಾನರ್ ಬ್ರಿಡ್ಜ್‌ನಿಂದ ಚಲಿಸುತ್ತಿದ್ದ ಕಾರಿನ ಮೇಲೆ ಬಿದ್ದು (Bengaluru News) ಮೃತಪಟ್ಟಿದ್ದಾನೆ. ಯುವಕ ಬಿದ್ದ ರಭಸಕ್ಕೆ ಕಾರಿನ ಗಾಜು ಪುಡಿ ಪುಡಿಯಾಗಿದೆ. ಜತೆಗೆ ಕಾರಿನ ಎಡಬದಿ ನಜ್ಜುಗುಜ್ಜಾಗಿದೆ. ತಮಿಳುನಾಡಿನ ವೆಲ್ಲೂರು ಮೂಲದ ಯುವಕ ಗೌರೀಶ್ (21) ಮೃತ ದುರ್ದೈವಿ.
ಚಲಿಸುತ್ತಿದ್ದ ರೈಲಿನಿಂದ ಅಚಾನಕ್ ಆಗಿ ಬಿದ್ದಿರಬಹುದಾ? ಅಥವಾ ಆತ್ಮಹತ್ಯೆಗೆ ಯತ್ನಿಸಿದ್ದನ್ನಾ ಎಂಬ ಅನುಮಾನ ಮೂಡಿದೆ. ಕಿಯಾ ಸೊನೆಟ್ ಕಾರನ್ನು ಓಡಿಸಿಕೊಂಡು ಯುವತಿ ಬರುತ್ತಿದ್ದಾಗ ವಿಲನ್ಸ್ ಮ್ಯಾನರ್ ಬ್ರಿಡ್ಜ್‌ನಿಂದ ಬಿದ್ದಿದ್ದಾನೆ. ಗೌರೀಶ್ ಬಿದ್ದ ರಭಸಕ್ಕೆ ಗಂಭೀರವಾಗಿ ಗಾಯಗೊಂಡಿದ್ದರು.
ಕೂಡಲೇ ಅಲ್ಲಿದ್ದ ಸ್ಥಳೀಯರು ಗಂಭೀರವಾಗಿ ಗಾಯಗೊಂಡಿದ್ದ ಯುವಕನನ್ನು ಆಂಬ್ಯುಲೆನ್ಸ್ ಮೂಲಕ ಆಸ್ಪತ್ರೆಗೆ ರವಾನಿಸಿದ್ದಾರೆ. ಆದರೆ ಆತ ಆಸ್ಪತ್ರೆಗೆ ಸೇರುವ ಮೊದಲೇ ಮೃತಪಟ್ಟಿದ್ದಾನೆ ಎನ್ನಲಾಗಿದೆ. ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಹೈಗ್ರೌಂಡ್ ಪೊಲೀಸರು ಆಗಮಿಸಿ ಪರಿಶೀಲನೆ ನಡೆಸಿದ್ದಾರೆ. ಆತನ ಬಳಿಯಿದ್ದ ಮೊಬೈಲ್ ಜಖಂ ಆಗಿದೆ. ಸದ್ಯ ಬೇರೆ ಯಾವುದೇ ದಾಖಲೆಗಳು ಪತ್ತೆಯಾಗಿಲ್ಲ. ರೈಲಿನಿಂದ ರಸ್ತೆಗೆ ಬಿದ್ದಿರುವುದು ಖಚಿತವಾಗಿದೆ. ಆದರೆ ಆಕಸ್ಮಿಕವೋ ಅಥವಾ ಆತ್ಮಹತ್ಯೆಯೋ ಎಂಬುದು ತಿಳಿದು ಬಂದಿಲ್ಲ. ಈ ಸಂಬಂಧ ಪೊಲೀಸರು ತನಿಖೆಯನ್ನು ನಡೆಸುತ್ತಿದ್ದಾರೆ.
ಇದನ್ನೂ ಓದಿ: Baby Girl : ಹೆಣ್ಣು ಮಗುವೆಂದು ಗಂಡನ ತಾತ್ಸಾರ; ದಾನ ಮಾಡಲು ಮುಂದಾದ ನತದೃಷ್ಟ ತಾಯಿ
ಧಾರವಾಡದಲ್ಲಿ ಕಾರು- ಟ್ರ್ಯಾಕ್ಟರ್ ಡಿಕ್ಕಿ; ಸವಾರ ಸಾವು
ಕಾರು ಹಾಗೂ ಟ್ರ್ಯಾಕ್ಟರ್ ನಡುವೆ ಡಿಕ್ಕಿಯಾಗಿದ್ದು, ಕಾರಿನಲ್ಲಿದ್ದ ಓರ್ವ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಧಾರವಾಡ ತಾಲೂಕಿನ ಸವದತ್ತಿ ರಸ್ತೆಯ ಅಮ್ಮಿನಬಾವಿ ಗ್ರಾಮದ ಬಳಿ ಸೋಮವಾರ ರಾತ್ರಿ ಘಟನೆ ನಡೆದಿದೆ. ಟ್ರ್ಯಾಕ್ಟರ್‌ನಲ್ಲಿದ್ದ ಪ್ರಯಾಣಿಕರು ಧಾರವಾಡ ಕಡೆಯಿಂದ ಸವದತ್ತಿ ಯಲ್ಲಮ್ಮ ಗುಡ್ಡಕ್ಕೆ ದರ್ಶನಕ್ಕೆ ಹೊರಟಿದ್ದರು. ಸವದತ್ತಿ ಕಡೆಯಿಂದ ಕಾರು ಧಾರವಾಡ ಕಡೆ ಬರುತ್ತಿದ್ದಾಗ ಅಪಘಾತ ಸಂಭವಿಸಿದೆ. ಟ್ರ್ಯಾಕ್ಟರ್‌ನಲ್ಲಿದ್ದ ಮೂವರಿಗೆ ಹಾಗೂ ಕಾರಿನಲ್ಲಿದ್ದ ಓರ್ವನಿಗೆ ಗಾಯವಾಗಿದೆ. ಗಾಯಾಳುಗಳನ್ನು ಧಾರವಾಡ ಜಿಲ್ಲಾ ಆಸ್ಪತ್ರೆಗೆ ರವಾನೆ ಮಾಡಲಾಗಿದೆ. ಧಾರವಾಡ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಸಂಬಂಧ ಪ್ರಕರಣ ದಾಖಲಾಗಿದೆ.
ಉದ್ಘಾಟನೆಗೊಂಡ ಹತ್ತೇ ದಿನಕ್ಕೆ ಸೇತುವೆಗೆ ಲಾರಿ ಡಿಕ್ಕಿ
ಉದ್ಘಾಟನೆಯಾಗಿ ಹತ್ತೇ ದಿನಕ್ಕೆ ವಿದ್ಯಾನಗರ ವೃತ್ತಾಕಾರದ ಸೇತುವೆಗೆ ಲಾರಿಯೊಂದು ಡಿಕ್ಕಿ ಹೊಡೆದಿದೆ. ಶಿವಮೊಗ್ಗದ ವಿದ್ಯಾನಗರ ಮೇಲ್ಸೇತುವೆ ಮೇಲೆ ಅಪಘಾತ ಸಂಭವಿಸಿದೆ. ಹೊಳೆಹೊನ್ನೂರು ದಿಕ್ಕಿನಿಂದ ಬಂದ ಲಾರಿ ಚಾಲಕನ ನಿಯಂತ್ರಣ ತಪ್ಪಿ ಮೇಲ್ಸೇತುವೆಯ ತಡೆಗೋಡೆಗೆ ಡಿಕ್ಕಿಯಾಗಿದೆ. ಅಪಘಾತದ ರಭಸಕ್ಕೆ ಲಾರಿ ಮುಂಭಾಗ ಜಖಂಗೊಂಡಿದೆ. ವೇಗವಾಗಿ ಬಂದಾಗ ಲಾರಿ ಚಾಲಕನ ನಿಯಂತ್ರಣ ತಪ್ಪಿ ಅಪಘಾತ ಸಂಭವಿಸಿದೆ. ಪೂರ್ವ ಸಂಚಾರಿ ಠಾಣೆಯಲ್ಲಿ ಈ ಸಂಬಂಧ ಪ್ರಕರಣ ದಾಖಲಾಗಿದೆ.
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ