ಬೆಂಗಳೂರು: ಬುಧವಾರ ರಾತ್ರಿಯಿಡೀ ಅಬ್ಬರದಿಂದ ಸುರಿದ ಮಳೆಗೆ ರಾಜಧಾನಿ ಮತ್ತೆ ನರಕಸದೃಶವಾಗಿದೆ.
ನಿನ್ನೆ ಸಂಜೆಯಿಂದ ಸುರಿದ ಮಹಾಮಳೆಗೆ ಐಟಿಬಿಟಿ ಸಿಟಿ ತತ್ತರಿಸಿದ್ದು, ಹಲವೆಡೆ ರಸ್ತೆಗಳು, ಮನೆಗಳು ಜಲಾವೃತವಾಗಿವೆ. ಮನೆಗಳಿಗೆ ಮಳೆ ನೀರು ನುಗ್ಗಿದೆ. ಅಂಡರ್‌ಪಾಸ್‌ಗಳು ಕೆರೆಗಳಾಗಿವೆ. ಮೆಟ್ರೋ ಬೇಲಿ ಕುಸಿದುಬಿದ್ದಿದೆ. ರಾಜಧಾನಿಯ ಹಲವು ಜಂಕ್ಷನ್, ಅಂಡರ್ ಪಾಸ್ ಹಾಗೂ ಫ್ಲೈಓವರ್‌ಗಳಲ್ಲಿ ಭಾರೀ ಪ್ರಮಾಣದ ನೀರು ನಿಂತಿದ್ದು, ವಾಹನ ಸಂಚಾರಕ್ಕೆ ಅಡ್ಡಿಯಾಗಿದೆ.
ಶಿವಾಜಿನಗರ, ಮಂತ್ರಿಮಾಲ್ ಮುಂಭಾಗ, ಜಯನಗರದ ಸೌತ್ ಎಂಡ್ ಸರ್ಕಲ್, ಓಕಳಿಪುರ ಸೇರಿ ವಿವಿಧೆಡೆ ಅಂಡರ್‌ಪಾಸ್‌ಗಳಲ್ಲಿ ನೀರು ನಿಂತು ವಾಹನ ಸಂಚಾರಕ್ಕೆ ತೀವ್ರ ಸಮಸ್ಯೆಯಾಯಿತು. ಧಾರಾಕಾರ ಮಳೆಗೆ ಮೆಜೆಸ್ಟಿಕ್ ಬಳಿ ಗೋಡೆ ಕುಸಿತಗೊಂಡಿದ್ದು, ಪರಿಣಾಮ ಆರು ಕಾರುಗಳು ಜಖಂಗೊಂಡಿವೆ. ಶೇಷಾದ್ರಿಪುರಂ ಪೊಲೀಸ್ ಠಾಣೆ ಮುಂದೆ ಒಂದೇ ಮಳೆಗೆ ರಸ್ತೆಯ ಟಾರು ಕೊಚ್ಚಿ ಹೋಗಿದೆ.
ಎಚ್.ಎ.ಎಲ್ 2ನೇ ಹಂತ ಇಂದಿರಾನಗರದ 17 ನೇ ಬಿ ಮೈನ್‌ನಲ್ಲಿ ಮನೆಗಳಿಗೆ ನೀರು ನುಗ್ಗಿದೆ. ಇಡೀ ರಾತ್ರಿ ಮನೆಗೆ ನುಗ್ಗಿರುವ ಮಳೆನೀರನ್ನು ಜನ ಹೊರಹಾಕುತ್ತಿದ್ದಾರೆ. ಒಳಚರಂಡಿ ವ್ಯವಸ್ಥೆ ಸರಿಯಾಗಿ ನಿರ್ವಹಣೆ ಮಾಡದಿರುವುದೇ ನೀರು ನುಗ್ಗಲು ಕಾರಣ. ಕಳೆದ ಆರು ವರ್ಷಗಳಿಂದ ಮಳೆ ಬಂದಾಗ ಇದೇ ಸಮಸ್ಯೆ. ಹಲವು ಬಾರಿ ಅಧಿಕಾರಿಗಳಿಗೆ ದೂರು ನೀಡಿದರೂ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ನಿವಾಸಿಗಳು ಆಕ್ರೋಶಿಸಿದ್ದಾರೆ.
ಎಲ್ಲೆಲ್ಲಿ ಎಷ್ಟು ಮಳೆ
ನಿನ್ನೆ ನಗರದಲ್ಲಿ ಸರಾಸರಿ 1.06 ಸೆಂ. ಮೀ ಮಳೆಯಾಗಿದೆ. ಗುಟ್ಟಹಳ್ಳಿಯಲ್ಲಿ 5.6 ಸೆಂಮೀ, ಸಂಪಗಿರಾಮ ನಗರದಲ್ಲಿ 5 ಸೆಂ.ಮೀ, ದಯಾನಂದ ನಗರದಲ್ಲಿ 4.9, ಬಸವನಗುಡಿಯಲ್ಲಿ 4.7, ಹಂಪಿನಗರ 3.5, ವಿಶ್ವೇಶ್ವರಪುರ 3.4, ಕೋನೇನ ಆಗ್ರಹಾರ 3.3, ಆಗ್ರಹಾರ ದಾಸರಹಳ್ಳಿಯಲ್ಲಿ ತಲಾ 3.15, ಲಾಲ್‌ಬಾಗ್ 3.1, ಕೃಷ್ಣರಾಜಪುರ 3 ಸೆಂ.ಮೀ ಮಳೆಯಾಗಿದೆ.
ಇನ್ನೂ ರಾಜ್ಯಾದ್ಯಂತ ಒಂದು ವಾರ ಮಳೆ ಸುರಿಯಲಿದೆ. ಬೆಂಗಳೂರು ಸೇರಿದಂತೆ ದಕ್ಷಿಣ ಒಳನಾಡು, ಉತ್ತರ ಒಳನಾಡಿನಲ್ಲಿ 4 ದಿನಗಳ ಕಾಲ ಭಾರೀ ಮಳೆ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮಾಹಿತಿ ನೀಡಿದೆ.