Site icon Vistara News

Bengaluru Rain | ರಾಜಧಾನಿ ಮುಳುಗಿದ್ದು ಕಾಂಗ್ರೆಸ್‌ನಿಂದ: ಸಿಎಂ ಬೊಮ್ಮಾಯಿ ಆರೋಪ

CM Bommai

ಬೆಂಗಳೂರು: ಕಾಂಗ್ರೆಸ್ ಸರ್ಕಾರದ ದುರಾಡಳಿತದ ಫಲವಾಗಿ ಬೆಂಗಳೂರಿನ ಬಡಾವಣೆಗಳು ಜಲಾವೃತವಾಗಿವೆ ಎಂದು ಸಿಎಂ ಬಸವರಾಜ ಬೊಮ್ಮಾಯಿ ಆರೋಪಿಸಿದ್ದಾರೆ.

ತಮ್ಮ ನಿವಾಸದ ಬಳಿ ಮಾಧ್ಯಮದವರೊಂದಿಗೆ ಮಾತನಾಡಿದ ಸಿಎಂ ಬಸವರಾಜ ಬೊಮ್ಮಾಯಿ, ಹಿಂದೆ ಇದ್ದ ಕಾಂಗ್ರೆಸ್ ಸರ್ಕಾರದ ಯೋಜನಾ ರಹಿತ ಹಾಗೂ ದುರಾಡಳಿತದ ಫಲವಾಗಿ ಈ ಬಡಾವಣೆಗಳು ಜಲಾವೃತಗೊಳ್ಳುವ ಸ್ಥಿತಿ ಎದುರಿಸಬೇಕಾಗಿದೆ ಎಂದರು.

ಎಗ್ಗಿಲ್ಲದೆ ಕೆರೆಗಳಲ್ಲಿ, ಕೆರೆ ಬಂಡ್ ಹಾಗೂ ಬಫರ್ ವಲಯಗಳಲ್ಲಿ ಅನುಮತಿಗಳನ್ನು ನೀಡಿದ್ದಾರೆ. ಈ ಪರಿಸ್ಥಿತಿಗೆ ಕಾಂಗ್ರೆಸ್ ಕಾರಣ. ಕೆರೆಗಳ ನಿರ್ವಹಣೆಯ ಬಗ್ಗೆ ಅವರು ಯೋಚಿಸಿಯೂ ಇಲ್ಲ. ಯಾವುದೇ ನಿಯಮಾವಳಿ ಇಲ್ಲದೆ ಅನುಮತಿ ನೀಡಿದ್ದಾರೆ. ನಾನು ಇದನ್ನು ಸವಾಲಾಗಿ ಸ್ವೀಕರಿಸಿದ್ದು 1,500 ಕೋಟಿ ರೂ.ಗಳನ್ನು ಬಿಡುಗಡೆ ಮಾಡಲಾಗಿದೆ. ಒತ್ತುವರಿ ತೆರೆವುಗೊಳಿಸಲು ಸೋಮವಾರ ಪುನಃ 300 ಕೋಟಿ ರೂ. ನೀಡಲಾಗಿದೆ. ರಾಜಕಾಲುವೆಗಳಿಗೆ ಪಕ್ಕಾ ಗೋಡೆ ಕಟ್ಟುವಂತೆ ಸೂಚಿಸಲಾಗಿದೆ. ಮುಂದಿನ ದಿನಗಳಲ್ಲಿ ನೀರಿನ ಹರಿವೆಗೆ ಯಾವುದೇ ತೊಂದರೆ ಇಲ್ಲದಂತೆ ವ್ಯವಸ್ಥೆ ಮಾಡಲಾಗುವುದು. ಒತ್ತುವರಿಗೂ ಅವಕಾಶವಿಲ್ಲದಂತೆ ಎಚ್ಚರ ವಹಿಸಲಾಗುವುದು ಎಂದರು.

ಬೆಂಗಳೂರಿನ ಎಲ್ಲ ಪ್ರದೇಶಗಳೂ ಜಲಾವೃತವಾಗಿಲ್ಲ ಎಂದ ಬೊಮ್ಮಾಯಿ, ಬೆಂಗಳೂರು 90 ವರ್ಷದಲ್ಲೇ ಊಹಿಸದಷ್ಟು ಮಳೆ ಬಂದಿದೆ. ಎಲ್ಲ ಕೆರೆಗಳೂ ತುಂಬಿವೆ, ಕೆಲವು ಒಡೆದಿವೆ. ಇಡೀ ಬೆಂಗಳೂರು ಮುಳುಗಿಲ್ಲ. ಎರಡು ವಲಯಗಳು ಹೆಚ್ಚು ಹಾನಿಯಾಗಿವೆ. ಅದರಲ್ಲೂ ಮಹದೇವಪುರ ವಲಯ ಹೆಚ್ಚು ತೊಂದರೆಯಲ್ಲಿದೆ. ಇದಕ್ಕೆ ಮೂರು ಕಾರಣಗಳು. ಇಷ್ಟು ಚಿಕ್ಕ ಪ್ರದೇಶದಲ್ಲಿ 69 ಕೆರೆಗಳಿವೆ, ಎಲ್ಲ ಕೆರೆಗಳೂ ಭರ್ತಿಯಾಗಿವೆ. ಹೆಚ್ಚಿನ ಕಾರ್ಪೊರೇಟ್‌ ಸಂಸ್ಥೆಗಳು ಕೆಳ ಪ್ರದೇಶದಲ್ಲಿವೆ. ಮೂರನೆಯದು ಒತ್ತುವರಿ ಸಮಸ್ಯೆ. ಅಧಿಕಾರಿಗಳು ಒತ್ತುವರಿ ತೆರವು ಮಾಡುತ್ತಿದ್ದಾರೆ, ಕೆರೆಗಳಿಗೆ ಗೇಟ್‌ ಅಳವಡಿಸುವ ಪ್ರಯತ್ನ ನಡೆಯುತ್ತಿದೆ ಎಂದಿದ್ದಾರೆ.

ಇದನ್ನೂ ಓದಿ | Bengaluru Rain News | ಔಟರ್‌ ʻರಿವರ್‌ʼ ರೋಡ್‌ ಆಗಿ ಬದಲಾಯ್ತು ಔಟರ್‌ ರಿಂಗ್‌ ರೋಡ್‌!

Exit mobile version