ಬೆಂಗಳೂರು: ಮಂಗಳವಾರ ರಾತ್ರಿಯಿಂದ ಬೆಂಗಳೂರಿನಲ್ಲಿ ಗುಡುಗು-ಸಿಡಿಲು, ಮಿಂಚು ಸಹಿತ ಧಾರಾಕಾರ ಮಳೆಯಾಗಿದೆ. ಸಂಜೆಯಿಂದಲೇ ಗುಡುಗು ಮಿಂಚು ಸಹಿತ ಭಾರೀ ಮಳೆ ಸುರಿದಿದ್ದು, ಹಲವು ಪ್ರದೇಶಗಳಲ್ಲಿ ಅದರಲ್ಲೂ ವಿಶೇಷವಾಗಿ ಚಂದ್ರಾ ಲೇಔಟ್, ಬಿಟಿಎಂ ಲೇಔಟ್, ಬನ್ನೇರುಘಟ್ಟ ರಸ್ತೆ, ಜಯಮಹಲ್ ರಸ್ತೆ ಮತ್ತು ದಕ್ಷಿಣ ಬೆಂಗಳೂರು ಸುತ್ತಮುತ್ತ ತಗ್ಗು ಪ್ರದೇಶಗಳು ಜಲಾವೃತಗೊಂಡಿವೆ. ಮನೆಗಳು, ಅಪಾರ್ಟ್‌ಮೆಂಟ್‌ನ ಬೇಸ್‌ಮೆಂಟ್, ಕಚೇರಿಗಳು, ದೇವಸ್ಥಾನಗಳ ಒಳಗೆ ನೀರು ನುಗ್ಗಿದೆ.
ಬೆಳಗ್ಗೆ ನೀರು ನುಗ್ಗಿದ ಮನೆಗಳಿಗೆ ಭೇಟಿ ನೀಡಿ ಸಿ.ಎಂ ಬೊಮ್ಮಾಯಿ ಪ್ರತೀ ಮನೆಗೂ 25 ಸಾವಿರ ರೂಪಾಯಿ ನೀಡುವುದಾಗಿ ಘೋಷಿಸಿದ್ದಾರೆ. ಒಂದು ವರ್ಷದಲ್ಲಿ ತಗ್ಗು ಪ್ರದೇಶದಲ್ಲಿ ನೀರು ಹರಿಯದೇ ಇರುವ ರೀತಿ ಸರಿ ಮಾಡಿಸಿಕೊಳ್ಳುವುದಾಗಿ ಭರವಸೆ ನೀಡಿದರು.
ಇದನ್ನೂ ಓದಿ | ನೈಋತ್ಯ ಮುಂಗಾರು ಅಂಡಮಾನ್ ಪ್ರವೇಶ, ರಾಜ್ಯದಲ್ಲಿ ಇನ್ನೂ 4 ದಿನ ಭರ್ಜರಿ ಮಳೆ
ವಿದ್ಯಾಪೀಠದಲ್ಲಿ 113 ಮೀ.ಮೀ. ಸಂಪಂಗಿರಾಮನಗರದಲ್ಲಿ 100.3 ಮೀ.ಮೀ. ಮಳೆ, ನಾಗಪುರದಲ್ಲಿ 100 ಮೀ.ಮೀ., ಅಗ್ರಹಾರ ದಾಸರಹಳ್ಳಿಯಲ್ಲಿ 97.5 ಮೀ.ಮೀ., ಹಂಪಿ ನಗರ 93.5 ಮೀ.ಮೀ. , ರಾಜಮಹಲ್ ಗುಟ್ಟಹಳ್ಳಿ 95 ಮೀ.ಮೀ., ದಯಾನಂದ ನಗರ 82 ಮೀ.ಮೀ. , ಸೂಲಿಕೆರೆ 80 ಮೀ.ಮೀ., ಆನೇಕಲ್ 74 ಮೀ.ಮೀ., ಕಾಡುಗೊಂಡಹಳ್ಳಿ 64 ಮೀ.ಮೀ., ಚಿಕ್ಕಬಾಣಾವರ 65ಮೀ.ಮೀ., ಕೊಡಿಗೇಹಳ್ಳಿ 65 ಮೀ.ಮೀ., ಹಳ್ಳಿ 56 ಮೀ.ಮೀ., ಕೆಂಗೇರಿ 60 ಮೀ.ಮೀ., ಆರ್.ಆರ್.ನಗರ 50 ಮಿ.ಮೀ. ಮಳೆಯಾಗಿರುವ ವರದಿಯಾಗಿದೆ.
ಜೆ.ಸಿ.ನಗರ, ಕುರುಬರಹಳ್ಳಿ, ಮೂಡಲಪಾಳ್ಯ, ಎಚ್‌ಎಸ್‌ಆರ್ ಲೇಔಟ್, ಕೋರಮಂಗಲ, ಚಿಕ್ಕಕಲ್ಲಸಂದ್ರ, ಪದ್ಮನಾಭನಗರ, ವಿಜಯನಗರ, ರಾಯಪುರಂ, ಬಸವೇಶ್ವರನಗರ 6ನೇ ಕ್ರಾಸ್, ಜಯನಗರ 3ನೇ ಬ್ಲಾಕ್, ಶಿವಾಜಿನಗರ, ವಸಂತನಗರ, ದೊಡ್ಡನೆಕ್ಕುಂದಿಯ ಗುರುರಾಜ ಲೇಔಟ್, ರಾಮಮೂರ್ತಿನಗರದ ಗುರುಮೂರ್ತಿರೆಡ್ಡಿ ಲೇಔಟ್‌ನ 3ನೇ ಬ್ಲಾಕ್, ಎಚ್‌ಬಿಆರ್ ಲೇಔಟ್ 3ನೇ ಬ್ಲಾಕ್‌ನ 13ನೇ ಕ್ರಾಸ್, ಇಂದಿರಾನಗರ 100 ಅಡಿ ರಸ್ತೆಯ 7ನೇ ಮುಖ್ಯರಸ್ತೆ, ಆರ್‌ಬಿಐ ಕಾಲೊನಿ, ಆರ್.ಟಿ.ನಗರ ಸಮೀಪದ ಮಂಜುನಾಥ ನಗರ, ಮುರುಗೇಶಪಾಳ್ಯದ ಕೆ.ಆರ್.ಗಾರ್ಡನ್, ಡಾಲರ್ಸ್ ಕಾಲೊನಿಯ 5ನೇ ಮುಖ್ಯರಸ್ತೆ, ಮಲ್ಲೇಶ್ವರ, ರಾಜಾಜಿನಗರ, ನಾಗರಬಾವಿ, ಆರ್ ಆರ್ ನಗರ, ತ್ಯಾಗರಾಜ ನಗರ ಸೇರಿದಂತೆ ಹಲವೆಡೆ ಮಳೆ ಸೇರಿದಂತೆ ಹಲವು ಬಡಾವಣೆಗಳಲ್ಲಿನೂರಾರು ಮನೆಗಳಿಗೆ ನೀರು ನುಗ್ಗಿ ಸಮಸ್ಯೆಯಾಯಿತು.
ಕೊಳಚೆಯೊಂದಿಗೆ ಹರಿದುಬಂದ ಮಳೆ ನೀರನ್ನು ಹೊರಹಾಕಲು ನಿವಾಸಿಗಳು ರಾತ್ರಿಯಿಡೀ ಜಾಗರಣೆ ಮಾಡಿದರು. ಬಟ್ಟೆ, ದಿನಸಿ ಪದಾರ್ಥಗಳು, ಗೃಹೋಪಯೋಗಿ ವಸ್ತುಗಳು, ಎಲೆಕ್ಟ್ರಾನಿಕ್ ಉಪಕರಣಗಳು ನೀರು ಪಾಲಾದವು. ರಾಜರಾಜೇಶ್ವರಿನಗರದ ಮೆಟ್ರೊ ನಿಲ್ದಾಣದ ಬಳಿ ಕಾಂಪೌಂಡ್ ಕುಸಿಯಿತು. ಅದೃಷ್ಟವಶಾತ್ ಯಾವುದೇ ಅನಾಹುತ ಸಂಭವಿಸಿಲ್ಲ.
ಪೈಪ್ ಲೈನ್ ಕೆಲಸ ಮಾಡ್ತಿದ್ದ ವೇಳೆ ಮಳೆನೀರು ನುಗ್ಗಿ ಸಾವು
ಬೆಂಗಳೂರಿನ ಜ್ಞಾನ ಭಾರತಿ ಉಪ್ಕಾರ್ ಲೇಔಟ್ ನಲ್ಲಿ ಪೈಪ್ ಲೈನ್ ಕೆಲಸ ಮಾಡುತ್ತಿದ್ದ ವೇಳೆ ಮಳೆನೀರು ನುಗ್ಗಿ ಉಸಿರುಗಟ್ಟಿ ಇಬ್ಬರು ಕಾರ್ಮಿಕರು ಸಾವಿಗೀಡಾಗಿದ್ದಾರೆ. ಬಿಹಾರ ಮೂಲದ ದೇವ್ ಭರತ್ ಹಾಗೂ ಉತತ್ರ ಪ್ರದೇಶದ ಅಂಕಿತ್ ಕುಮಾರ್ ಸಾವಗೀಡಾದ ಕಾರ್ಮಿಕರು. ಇನ್ನೊಬ್ಬ ಕಾರ್ಮಿಕ್ ಬಚಾವ್ ಆಗಿದ್ದು, ಸ್ಥಳಕ್ಕೆ ಜ್ಞಾನಭಾರತಿ ಪೊಲೀಸರು ಧಾವಿಸಿದ್ದಾರೆ. ಘಟನೆ ಸಂಬಂಧ ಇಬ್ಬರು ಕಾಂಟ್ರಾಕ್ಟರನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಕಾವೇರಿ ಐದನೇ ಹಂತದ ಯೋಜನೆಯ ಇಂಜಿನೀಯರ್ ರಮೇಶ್ ಈ ಕುರಿತು ಮಾತನಾಡಿ, ಹೈದರಾಬಾದ್ ಮೂಲದ ಮೇಘಾ ಇಂಜಿನಿಯರಿಂಗ್ ಸಂಸ್ಥೆಗೆ ಗುತ್ತಿಗೆ ಕೊಡಲಾಗಿತ್ತು. ಕೇವಲ ಪೈಪ್‌ಗೆ ಒಂದು ಹೋಲ್ ಮಾಡುವ ಕೆಲಸ ಮಾತ್ರವಿತ್ತು. ಹೀಗಾಗಿ ಮೂವರ ಅಗತ್ಯ ಮಾತ್ರವಿತ್ತು. ಒಬ್ಬ ಬಚಾವ್ ಆಗಿ ಬಂದಿದ್ದಾನೆ, ಘಟನೆ ಸಂಬಂಧ ಸೂಕ್ತ ತನಿಖೆಯಾಗಲಿದೆ. ಗುತ್ತಿಗೆದಾರರಿಂದ ಪರಿಹಾರ ಕೊಡಿಸುವ ಕೆಲಸ ಆಗಲಿದೆ. ಯಾವುದೇ ರೀತಿಯ ಸೇಫ್ಟಿ ಲೋಪ ಆಗಿಲ್ಲ. ಎಲ್ಲವೂ ಸರಿ ಇತ್ತು. ಒಂದೂವರೆ ವರ್ಷಗಳಿಂದ ಈ ಕಾವೇರಿ ಐದನೇ ಹಂತದ ಕಾಮಾಗರಿ ನಡೆಯುತ್ತಿದೆ ಎಂದು ಹೇಳಿಕೆ ನೀಡಿದ್ದಾರೆ.
ಇನ್ನೂ ನಾಲ್ಕು ದಿನ ಮಳೆ
ನಗರದಲ್ಲಿಇನ್ನೂ 4 ದಿನಗಳ ಕಾಲ ಮಳೆಯ ಆರ್ಭಟ ಮುಂದುವರಿಯಲಿದೆ. ಮೇ 18, 19ರಂದು ಭಾರೀ ಮಳೆಯಾಗಲಿದ್ದು, ಹವಾಮಾನ ಇಲಾಖೆ ಆರೆಂಜ್ ಅಲರ್ಟ್ ಘೋಷಿಸಿದೆ. ಮಾ. 1 ರಿಂದ ಮೇ 17 ರವರೆಗೆ ವಾಡಿಕೆಯಂತೆ 97 ಮೀ.ಮೀ. ಮಳೆ ಯಾಗಬೇಕಿತ್ತು. ಈ ವರೆಗೆ 182 ಮಿಮೀ ಮಳೆಯಾಗಿದ್ದು, ವಾಡಿಕೆಗಿಂತ 90% ಹೆಚ್ಚು ಮಳೆ ಸುರಿದಿದೆ.
ಇದನ್ನೂ ಓದಿ |ಕೊಪ್ಪಳದಲ್ಲಿ ಮಳೆಯಿಂದ ನೆಲಕ್ಕುರುಳಿದ ಬೆಳೆ; ನೀರು ತುಂಬಿದ ಗುಂಡಿಗೆ ಬಿದ್ದು ಬಾಲಕಿ ಸಾವು