ವಿಧಾನಸಭೆ: ಬೆಂಗಳೂರಿನಲ್ಲಿ ರಾಜಕಾಲುವೆ ಹಾಗೂ ಕೆರೆಗಳನ್ನು ಒತ್ತುವರಿ ಮಾಡಿ ಆಸ್ತಿ ನಿರ್ಮಾಣ ಮಾಡಿರುವ ಕುರಿತು ಸಂಪೂರ್ಣ ತನಿಖೆ ನಡೆಸಲು ನ್ಯಾಯಾಂಗ ಅಧಿಕಾರಿ ನೇತೃತ್ವದಲ್ಲಿ ಆಯೋಗವನ್ನು ರಚನೆ ಮಾಡಲಾಗುತ್ತದೆ ಎಂದು ಸಿಎಂ ಬಸವರಾಜ ಬೊಮ್ಮಾಯಿ ಘೋಷಣೆ ಮಾಡಿದ್ದಾರೆ.
ರಾಜ್ಯದಲ್ಲಿ ಅತಿವೃಷ್ಟಿ ಕುರಿತು ರಾಜ್ಯ ಸರ್ಕಾರದ ವತಿಯಿಂದ ಕಂದಾಯ ಸಚಿವ ಆರ್. ಅಶೋಕ್ ಅವರು ಉತ್ತರ ನೀಡುವ ಮಧ್ಯೆ ಹಾಗೂ ನಂತರ ಸ್ವತಃ ಸರ್ಕಾರದಿಂದ ಉತ್ತರ ನೀಡುವಾಗ ಸಿಎಂ ಬೊಮ್ಮಾಯಿ ಮಾತನಾಡಿದರು.
ಕಂದಾಯ ಸಚಿವ ಆರ್. ಅಶೋಕ್ ಉತ್ತರ ಕೊಡುತ್ತಿರುವ ಸಮಯದಲ್ಲಿ ಮಾಜಿ ಸಚಿವ ಕೆ.ಜೆ. ಜಾರ್ಜ್ ಅವರು ಅನೇಕ ಬಾರಿ ಮಧ್ಯಪ್ರವೇಶಿಸಲು ಪ್ರಯತ್ನಿಸಿದರು. ತಮ್ಮ ಕಾಲದಲ್ಲಿ ಕೆರೆ ಒತ್ತುವರಿ ಆಗಿದೆ ಎಂದು ಸರ್ಕಾರ ಸುಳ್ಳೂ ಹೇಳುತ್ತಿದೆ, ಕೆಸರೆರೆಚಲಾಗುತ್ತಿದೆ ಎಂದರು. ಈ ವೇಳೆ ಸಿಎಂ ಬೊಮ್ಮಾಯಿ ಮಾತನಾಡಿದರು.
ಇದನ್ನೂ ಓದಿ | 7 ದಿನಗಳ ಗಡುವು ಪೂರ್ಣ, ತೆರವಾಗದ ರೈನ್‌ಬೋ ಲೇಔಟ್ ಒತ್ತುವರಿ
ನಿಮ್ಮ ಸರ್ಕಾರದ ಅವಧಿಯಲ್ಲಿ, ರಾಜ್ಯಾದ್ಯಂತ ಕೆರೆಗಳನ್ನು ಮುಚ್ಚಿಹಾಕಲು ಪ್ರಯತ್ನ ನಡೆದಿದ್ದು ನಿಜ. ರಾಜ್ಯದಲ್ಲಿ ಒತ್ತುವರಿ ಆಗಿ, ಸ್ವರೂಪವನ್ನು ಕಳೆದುಕೊಂಡಿರುವ ಕೆರೆಗಳನ್ನು ನಕ್ಷೆಯಿಂದ ತೆಗೆದುಹಾಕಲು ಸುತ್ತೋಲೆ ಹೊರಡಿಸಲಾಗಿತ್ತು, ಸಂಪುಟ ಸಭೆಯಲ್ಲೂ ನಿರ್ಣಯ ಆಗಿತ್ತು. ಆದರೆ ಈ ವೇಳೆ ಜನರಿಂದ ಭಾರೀ ವಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ ಕೈಬಿಡಲಾಗಿದೆ. ಇದರ ಹೊರತಾಗಿಯೂ ರಾಜ್ಯದಲ್ಲಿ ಯಾರ‍್ಯಾರ ಕಾಲದಲ್ಲಿ ಎಷ್ಟೆಷ್ಟು ಕೆರೆ ಒತ್ತುವರಿ ಆಗಿದೆ ಎಲ್ಲವನ್ನೂ ತನಿಖೆ ನಡೆಸಲಾಗುತ್ತದೆ ಎಂದರು. ನಂತರ ಮತ್ತೆ ಈ ಕುರಿತು ಪ್ರಸ್ತಾಪಿಸಿದ ಸಿಎಂ, ನ್ಯಾಯಾಂಗ ಅಧಿಕಾರಿ ನೇತೃತ್ವದಲ್ಲಿ ತನಿಖೆಗೆ ಆದೇಶಿಸಲಾಗುತ್ತದೆ. ಜತೆಗೆ ಒಂದಿಬ್ಬರು ತಾಂತ್ರಿಕ ವ್ಯಕ್ತಿಗಳನ್ನೂ ಆಯೋಗಕ್ಕೆ ನೇಮಿಸಲಾಗುತ್ತದೆ ಎಂದು ತಿಳಿಸಿದರು.
ಟಾಸ್ಕ್ ಫೋರ್ಸ್ ರಚನೆ ಘೋಷಣೆ
ಚರ್ಚೆಯನ್ನು ಮುಂದುವರಿಸಿದ ಆರ್. ಅಶೋಕ್, ಯಾರ‍್ಯಾರಿಂದ ಬೆಂಗಳೂರಿನ ಕೆರೆಗಳು ಒತ್ತುವರಿ ಆಗಿವೆ ಎಂಬ ಪಟ್ಟಿಯನ್ನು ನೀಡಿದರು. ಅದರಂತೆ ಬಿಡಿಎ ವತಿಯಿಂದ 28 ಕೆರೆ, ಬಿಬಿಎಂಪಿಯಿಂದ 5 ಕೆರೆ, ಬಿಡಿಎ ಅನುಮೋದಿತ ಖಾಸಗಿ ಲೇಔಟ್‌ನಿಂದ 1 ಕೆರೆ, ಖಾಸಗಿ ವ್ಯಕ್ತಿಗಳಿಂದ 7 ಕೆರೆ ಒತ್ತುವರಿ ಮಾಡಲಾಗಿದೆ ಎಂದರು.
ಬೆಂಗಳೂರಿನ ವಿಧಾನಸೌಧದ ಭಾಗದಲ್ಲಿ ಈ ಹಿಂದೆ ಬಿದ್ದ ಮಳೆ ನೀರು, ಈಗಿನ ಕಂಠೀರವ ಸ್ಟೇಡಿಯಂ ಸ್ಥಳದಲ್ಲಿದ್ದ ಕೆರೆಗೆ ತೆರಳಿ, ಅಲ್ಲಿಂದ ಕೋರಮಂಗಲ ಕೆರೆ, ಎಚ್‌ಎಸ್‌ಆರ್ ಪ್ರದೇಶದಲ್ಲಿ ಹಾದು ಮುಂದೆ ಸಾಗುತ್ತಿತ್ತು. ಆದರೆ ಈ ಎಲ್ಲ ಕೆರೆಗಳೂ ಮುಚ್ಚಿಹೋಗಿದ್ದರಿಂದ ಎಲ್ಲ ನೀರು ನೇರವಾಗಿ ಮಹದೇವಪುರ ಭಾಗಕ್ಕೆ ಹೋಗಿ ಅನಾಹುತ ಸೃಷ್ಟಿಯಾಗಿದೆ ಎಂದರು.
ದೊಮ್ಮಲೂರು ಕೆರೆಯನ್ನು 1977ರಲ್ಲಿ, ಶ್ರೀವಾಗಿಲು ಕೆರೆಯನ್ನು 1965ರಲ್ಲಿ ಮುಚ್ಚಲಾಯಿತು. ಇದೇ ವೇಳೆ ಎಚ್‌ಎಎಲ್ 1ನೇ ಹಂತ ನಿರ್ಮಾಣಕ್ಕೆ 1978ರಲ್ಲಿ, ಡಾಲರ್ಸ್ ಕಾಲನಿ ನಿರ್ಮಾಣಕ್ಕೆ 1973ರಲ್ಲಿ, ಬಿಟಿಎಂಗಾಗಿ 1995ರಲ್ಲಿ, ಬನಶಂಕರಿ ನಿರ್ಮಾಣಕ್ಕೆ 1975ರಲ್ಲಿ, ಎಚ್‌ಎಸ್‌ಆರ್ ಲೇಔಟ್‌ಗಾಗಿ 1986ರಲ್ಲಿ, ನಾಗರಬಾವಿ ಬಡಾವಣೆಗೆ 2001ರಲ್ಲಿ, ರಾಜಾಜಿನಗರಕ್ಕೆ 1963ರಲ್ಲಿ, ವಿಶ್ವೇಶ್ವರಯ್ಯ ಲೇಔಟ್‌ಗಾಗಿ 2002ರಲ್ಲಿ, ಎಚ್‌ಆರ್‌ಬಿಆರ್ ನಿರ್ಮಾಣಕ್ಕೆ 2000ದಲ್ಲಿ ಕೆರೆಗಳನ್ನು ಮುಚ್ಚಲಾಗಿದೆ ಎಂದು ಉದ್ದ ಪಟ್ಟಿಯನ್ನು ಆರ್. ಅಶೊಕ್ ನೀಡಿದರು.
ಕೆರೆಗಳನ್ನು ಮುಚ್ಚಲು ಮೊದಲು ಅಧಿಕಾರಿಗಳು ಸಾರ್ವಜನಿಕ ಪ್ರಕಟಣೆ ಹೊರಡಿಸುತ್ತಾರೆ. ಯಾವುದೇ ಆಕ್ಷೇಪ ವ್ಯಕ್ತವಾಗದೇ ಇದ್ದಾಗ ಮಂತ್ರಿಗಳು ಒಪ್ಪಿಗೆ ನೀಡುತ್ತಾರೆ. ಆನಂತರ ಸಂಪುಟಕ್ಕೆ ತಂದು ಒಪ್ಪಿಗೆ ಪಡೆದು ಬಡಾವಣೆ ನಿರ್ಮಾಣ ಮಾಡಲಾಗುತ್ತದೆ ಎಂದರು.
ಮದ್ಯಾಹ್ನದ ಭೋಜನ ವಿರಾಮದ ನಂತರ ಮಾತನಾಡಿದ ಸಿಎಂ ಬೊಮ್ಮಾಯಿ, ಬೆಂಗಳೂರಿನ ಸಮಸ್ಯೆಗಳನ್ನು ಬಗೆಹರಿಸಲು ಎಲ್ಲ ಕೆರೆಗಳಿಗೂ ಸ್ಲೂಯಿಸ್ ಗೇಟ್ ಅಳವಡಿಸಲು ಆದೇಶಿಸಲಾಗಿದೆ. ಈಗಾಗಲೆ ಸ್ಥಾಪನೆ ಆಗಿರುವ ಹಾಗೂ ಕಾಮಗಾರಿ ಪ್ರಗತಿಯಲ್ಲಿರುವ ಕೊಳಚೆ ನೀರು ಸಂಸ್ಕರಣ ಘಟಕಗಳನ್ನು ಸಂಪೂರ್ಣ ಕಾರ್ಯನಿರ್ವಹಣೆ ಹಂತಕ್ಕೆ ತರಲಾಗುತ್ತದೆ. k100 ಯೋಜನೆಯಲ್ಲಿ ಅಭಿವೃದ್ಧಿಯಾಗುತ್ತಿರುವ ರಾಜಕಾಲುವೆ ಕಾಮಗಾರಿಯನ್ನು ಬೇಗ ಮುಗಿಸಲು ಸೂಚಿಸಲಾಗಿದೆ ಹಾಗೂ ಇತರೆಡೆಗಳಲ್ಲೂ ಇದೇ ಮಾದರಿಯನ್ನು ಅನುಸರಿಸಲಾಗುತ್ತದೆ.
ರಾಜಕಾಲುವೆ ಒತ್ತುವರಿಯನ್ನು ನಿರ್ದಾಕ್ಷಿಣ್ಯವಾಗಿ ತೆರವು ಮಾಡಲಾಗುತ್ತದೆ. ಇಲ್ಲಿಯವರೆಗೆ ಸರ್ಕಾರಗಳಿಗೆ ಈ ಕಾರ್ಯ ಆದ್ಯತೆಯಾಗಿರಲಿಲ್ಲ. ಈಗ ಇದೇ ಕಾರ್ಯವನ್ನು ಕೈಗೆತ್ತಿಕೊಳ್ಳಲು ಟಾಸ್ಕ್ ಫೋರ್ಸ್ ರಚನೆ ಮಾಡಲಾಗುತ್ತದೆ. ಈ ಟಾಸ್ಕ್ ಫೋರ್ಸ್ ಮುಂದಿನ ಮೂರ್ನಾಲ್ಕು ವರ್ಷ ಇದೇ ಕೆಲಸ ಮಾಡುತ್ತದೆ. ರಾಜಕಾಲುವೆ ಅಗಲ ಎಷ್ಟಿರಬೇಕು, ವಿನ್ಯಾಸ ಹೇಗೆ ಎಲ್ಲವನ್ನೂ ಇದೇ ಟಾಸ್ಕ್ ಫೋರ್ಸ್ ನಿರ್ಧಾರ ಮಾಡುತ್ತದೆ. ಇದಕ್ಕಾಗಿ ಬಜೆಟ್‌ನಲ್ಲಿ ಅನುದಾನವನ್ನೂ ನೀಡಲಾಗುತ್ತದೆ ಎಂದರು.
ಬೆಂಗಳೂರಿನಲ್ಲಿ ರಾಜಕಾಲುವೆ ನಿರ್ವಹಣೆಗೆ ಈಗಾಗಲೆ 300 ಕೋಟಿ ರೂ. ಬಿಡುಗಡೆ ಮಾಡಲಾಗಿದೆ. ರಸ್ತೆ ಅಭಿವೃದ್ಧಿಗೆ 300 ಕೋಟಿ ರೂ. ಬಿಡುಗಡೆ ಮಾಡಲಾಗುತ್ತದೆ. ರಾಜ್ಯಾದ್ಯಂತ ಬೆಳೆಹಾನಿಗಾಗಿ ಒಟ್ಟು 850 ಕೋಟಿ ರೂ. ಬಿಡುಗಡೆ ಮಾಡಬೇಕಿದ್ದು, ಈಗಾಗಲೆ 196 ಕೋಟಿ ರೂ. ಬಿಡುಗಡೆ ಮಾಡಲಾಗಿದೆ. ಹಿಂದಿನ ಮೂರು ವರ್ಷದ ಬಾಕಿ ಹಣ 3104.74 ಕೋಟಿ ರೂ. ಬಿಡುಗಡೆ ಮಾಡಬೇಕಿದ್ದು, ಇದರಲ್ಲಿ 1,527 ಕೋಟಿ ರೂ. ಬಿಡುಗಡೆ ಮಾಡಬೇಕಿದೆ. ಒಟ್ಟಾರೆ ಗ್ರಾಮೀಣ ಮೂಲಸೌಕರ್ಯ ಅಭಿವೃದ್ಧಿಗೆ 600 ಕೋಟಿ ರೂ. ಬಿಡುಗಡೆ ಮಾಡಲಾಗುತ್ತದೆ ಎಂದರು.
ಕಡಲ ಕೊರೆತಕ್ಕೆ ಶಾಶ್ವತ ಯೋಜನೆ ರೂಪಿಸಲಾಗುತ್ತದೆ, ಕೈಗಾರಿಕಾ ನಷ್ಟಕ್ಕೆ ಕೇಂದ್ರದ ನಿಧಿಯಲ್ಲಿ ಅವಕಾಶ ಇಲ್ಲದಿದ್ದರೂ ರಾಜ್ಯ ಸರ್ಕಾರ ನೀಡುತ್ತದೆ, ಬೋಟ್ ಹಾನಿಗೆ ಪರಿಹಾರ ನೀಡಲಾಗುತ್ತದೆ ಎಂದರು.
ಇದನ್ನೂ ಓದಿ | ವಿಸ್ತಾರ TOP 10 NEWS | ರಾಜಕಾಲುವೆ ಒತ್ತುವರಿ ತೆರವಿನಿಂದ SCO ಶೃಂಗಸಭೆವರೆಗಿನ ಪ್ರಮುಖ ಸುದ್ದಿಗಳಿವು