ಬೆಂಗಳೂರು: ರಾಜಧಾನಿ ಬೆಂಗಳೂರಿನಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿದ್ಯಾ ಅಥವಾ ಕಾನೂನು, ಪೊಲೀಸರು ಅಂದರೆ ರೌಡಿಗಳಿಗೆ ಭಯ ಇಲ್ವಾ? ಇಂತಹ ಪ್ರಶ್ನೆಗಳಿಗೆ ಕಾರಣವಾಗಿದ್ದು ಮಧ್ಯರಾತ್ರಿ (Bengaluru Rowdyism) ನಡೆದ ಆ ಗ್ಯಾಂಗ್ ವಾರ್.
ಏರಿಯಾದಲ್ಲಿ ಹವಾ ಮೆಂಟೈನ್ ಮಾಡುವ ಸಲುವಾಗಿ ಪುಂಡ ರೌಡಿಗಳ ನಡುವೆ ಗ್ಯಾಂಗ್ ವಾರ್ ನಡೆದಿದೆ. ಮಧ್ಯರಾತ್ರಿ ಮಚ್ಚು, ಬ್ಯಾಟ್‌ಗಳಲ್ಲಿ ಮನಬಂದಂತೆ ಹೊಡೆದಾಡಿಕೊಂಡಿದ್ದಾರೆ. ಕಳೆದ ಆರು ತಿಂಗಳ ಹಿಂದೆ ರೌಡಿ ಕುಳ್ಳು ರಿಜ್ವಾನ್ ಸಹಚರ ಗುಡ್ಡೆ ಭರತ ಎಂಬಾತನ ಮೇಲೆ ಸೈಕಲ್ ರವಿ ಎಂಬಾತನ ಹುಡುಗರು ಅಟ್ಯಾಕ್ ಮಾಡಿದ್ದರು. ಮತ್ತೊಮ್ಮೆ ಗುಡ್ಡೆ ಭರತನ ಮೇಲೆ ಅಟ್ಯಾಕ್ ಮಾಡಲು ಹೊಂಚು ಹಾಕಿ ರೌಂಡ್ಸ್ ಮಾಡುತ್ತಿದ್ದರು. ಆದರೆ ಈ ವಿಷಯ ಅದ್ಹೇಗೋ ಗುಡ್ಡೆ ಭರತನ ಹುಡುಗರ ಕಿವಿಗೆ ಬಿದ್ದಿತ್ತು.
ಕಳೆದ ಸೆಪ್ಟೆಂಬರ್ 22ರಂದು ಸೈಕಲ್ ರವಿಯ ಹುಡುಗರು ಅಟ್ಯಾಕ್ ಮಾಡಲು ಬರುತ್ತಿದ್ದಾರೆ ಎಂಬ ವಿಷಯ ತಿಳಿದ ಗುಡ್ಡೆ ಭರತನ ಹುಡುಗರು ತಿರುಗೇಟು ನೀಡಲು ತಯಾರಾಗಿದ್ದರು. ಹನುಮಂತ ನಗರ ಪೊಲೀಸ್ ಠಾಣಾ ವ್ಯಾಪ್ತಿಯ ಶ್ರೀನಗರದ ರಾಘವೇಂದ್ರ ಬ್ಲಾಕ್ ಬಳಿ ಎರಡೂ ಗ್ಯಾಂಗ್‌ನವರು ಮುಖಾಮುಖಿಯಾದಾಗ, ಮಾರಾಮಾರಿಯೇ ನಡೆಸಿದ್ದರು. ಇದೇ ದೃಶ್ಯ ಎಲ್ಲ ಕಡೆ ವೈರಲ್ ಆಗಿತ್ತು.
ಇನ್ನು ಘಟನೆ ನಡೆದ ಪ್ರದೇಶ ಒಂದು ಮುಖ್ಯರಸ್ತೆಯಾಗಿದ್ದು, ಅಕ್ಕಪಕ್ಕದಲ್ಲಿ ಮನೆಗಳು, ಅಂಗಡಿ ಮುಂಗಟ್ಟುಗಳು ಎಲ್ಲವೂ ಇದ್ದಾವೆ. ಇವು ಯಾವುದನ್ನೂ ಲೆಕ್ಕಿಸದೇ ರೌಡಿಗಳು ಪುಂಡಾಟ ನಡೆಸಿದ್ದಾರೆ. ಇದರಿಂದ ಒಂದೆಡೆ ಈ ಪುಂಡರಿಗೆ ಕಾನೂನು ಮತ್ತು ಪೊಲೀಸರ ಭಯವೇ ಇಲ್ಲವಾ ಎಂಬ ಪ್ರಶ್ನೆ ಮೂಡಿದೆ. ಇನ್ನೊಂದೆಡೆ ಘಟನೆ ನಡೆದು ಹತ್ತು ದಿನವಾದರೂ ಪೊಲೀಸರ ಗಮನಕ್ಕೇ ಬಂದಿರಲಿಲ್ಲ ಎಂಬುದು ಸೋಜಿಗವೇ ಸರಿ.
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ