ಬೆಂಗಳೂರು : ಕ್ರಿಕೆಟ್ ಬೆಟ್ಟಿಂಗ್ (Betting Case) ಸಂಬಂಧಿಸಿದಂತೆ ಸದಾಶಿವನಗರ ಕಾನ್ಸ್‌ಟೇಬಲ್ ಶಿವಕುಮಾರ್ ಮೇಲೆ ಸುಲಿಗೆ ಆರೋಪ ಕೇಳಿಬಂದಿದೆ. ಮೂರು ಲಕ್ಷ ಹಣ ವಸೂಲಿ ಮಾಡಿರುವ ಬಗ್ಗೆ ದೂರು ದಾಖಲಾಗಿದೆ.
ತಮ್ಮ ಠಾಣಾ ವ್ಯಾಪ್ತಿ ಬಿಟ್ಟು ಸಹಕಾರ ನಗರದ ಉದ್ಯಮಿಗೆ ಬೆದರಿಸಿ ಹಣ ಪೀಕಿರುವ ಆರೋಪ ಕೇಳಿ ಬಂದಿದೆ. ಈ ಕುರಿತು ಈಶಾನ್ಯ ವಿಭಾಗ ಡಿಸಿಪಿಗೆ ಸಹಕಾರ ನಗರದ ಉದ್ಯಮಿ ಯೋಗೇಶ್ ದೂರು ನೀಡಿದ್ದಾರೆ. ಹಾಲು ಉದ್ಯಮಿಯಾಗಿರುವ ಯೋಗೇಶ್‌ಗೆ ಕ್ರಿಕೆಟ್ ಬೆಟ್ಟಿಂಗ್ ವಿಚಾರಕ್ಕೆ ಸಂಬಂಧಿಸಿದಂತೆ ಪೊಲೀಸ್ ಪೇದೆ ಶಿವಕುಮಾರ್ ಹೆದರಿಸಿದ್ದರು ಎನ್ನಲಾಗಿದೆ. ಹಾಗೂ ಮೂರು ಲಕ್ಷ ಹಣ ವಸೂಲಿ ಮಾಡಿದ್ದಾರೆ ಎಂದು ಆರೋಪಿಸಿ ದೂರು ನೀಡಿದ್ದಾರೆ.
ಇದನ್ನೂ ಓದಿ | ಬೆಟ್ಟಿಂಗ್ ಕಂಪನಿ ಪರ ಪ್ರಚಾರ ಮಾಡಿದ ಬಾಂಗ್ಲಾ ಕ್ರಿಕೆಟಿಗನ ವೃತ್ತಿಗೆ ಬಂತಾ ಕುತ್ತು?
ಈ ದೂರಿನನ್ವಯ ಡಿಸಿಪಿ ಅನೂಪ್ ಶೆಟ್ಟಿ ಯಲಹಂಕ ಎಸಿಪಿಗೆ ತನಿಖೆ ನಡೆಸಿ ವರದಿ ನೀಡುವಂತೆ ಸೂಚನೆ ನೀಡಿದ್ದಾರೆ. ಶಿವಕುಮಾರ್, ಪ್ರಭಾವಿ ರಾಜಕಾರಣಿಯಿಂದ ತನ್ನ ವಿರುದ್ಧ ಕ್ರಮ ಕೈಗೊಳ್ಳದಂತೆ ಪ್ರಭಾವ ಬೀರುತ್ತಿದ್ದಾರೆ ಎನ್ನಲಾಗಿದೆ. ಇನ್ನೊಂದು ಕಡೆ ಶಿವಕುಮಾರ್ ಬಾತ್ಮಿದಾರನ ಮಾಹಿತಿ ಮೇರೆಗೆ ಸಹಕಾರನಗರಕ್ಕೆ ತೆರಳಿ ಬೆಟ್ಟಿಂಗ್ ಕೇಸ್ ವಿಚಾರಕ್ಕೆ ಹೋಗಿದ್ದರು. ಆದರೆ ಬಾತ್ಮಿದಾರ ಮಾಹಿತಿ ಕೊಟ್ಟಿರಲಿಲ್ಲ. ಹಣದ ವ್ಯವಹಾರ ತನಿಖೆ ನಂತರ ಅಷ್ಟೇ ಗೊತ್ತಾಗಬೇಕಿದೆ ಎಂದು ಅಧಿಕಾರಿಗಳು ಹೇಳುತ್ತಿದ್ದಾರೆ.
ತಮ್ಮ ಡಿವಿಷನ್ ಬಿಟ್ಟು ಬೇರೆ ಡಿವಿಷನ್‌ನಲ್ಲಿ ಕೇಸ್ ವಿಚಾರಕ್ಕೆ ಎಸ್‌ಬಿ ಕಾನ್ಸ್‌ಟೇಬಲ್ ಹೋಗಿದ್ದರಾ? ಅಥವಾ ನಿಜವಾಗಲೂ ಅಧಿಕಾರ ಬಳಸಿ ಹಣ ವಸೂಲಿ ಮಾಡಿದ್ದರಾ? ಎಂಬುದರ ಬಗ್ಗೆ ತನಿಖೆ ನಡೆಯಲಿದೆ.
ಇದನ್ನೂ ಓದಿ | IPL Betting: 1 ಕೋಟಿ ಕಳಕೊಂಡ ಪೋಸ್ಟ್ ಮಾಸ್ಟರ್, ಅಷ್ಟು ದುಡ್ಡು ಬಂದದ್ದು ಎಲ್ಲಿಂದ?