ಬೆಂಗಳೂರು: ಕರ್ನಾಟಕವು ಮುಂದಿನ ದಿನಗಳಲ್ಲಿ ಅತಿ ದೊಡ್ಡ ಏವಿಯೇಷನ್ ಹಬ್ (Aviation Hub) ಆಗಲಿದೆ ಎಂದು ಪ್ರಧಾನಿ ನರೇಂದ್ರ ಮೋದಿ (PM Narendra Modi) ಭವಿಷ್ಯ ನುಡಿದರು. ದೇಶದಲ್ಲಿ ವಿಮಾನ ಯಾನ ಕ್ಷೇತ್ರ ಅತ್ಯಂತ ವೇಗವಾಗಿ ಬೆಳೆಯುತ್ತಿದ್ದು, ಮೂಲೆ ಮೂಲೆಗೆ ಸಂಪರ್ಕ ವ್ಯವಸ್ಥೆ ನಿರ್ಮಾಣವಾಗುತ್ತಿದೆ. ಅದೇ ಹೊತ್ತಿಗೆ ಕರ್ನಾಟಕ ವೈಮಾನಿಕ ತಂತ್ರಜ್ಞಾನ (Aviation technology) ಮತ್ತು ಉತ್ಪಾದನೆಯ ಕೇಂದ್ರವಾಗಿ ಮೂಡುತ್ತಿದೆ ಎಂದು ಅವರು ಹರ್ಷ ವ್ಯಕ್ತಪಡಿಸಿದರು.
ಪ್ರಧಾನಿ ನರೇಂದ್ರ ಮೋದಿ ಅವರು ಬೆಂಗಳೂರಿನ ದೇವನಹಳ್ಳಿ ಸಮೀಪ ಬೋಯಿಂಗ್ ಇಂಡಿಯಾ ಎಂಜಿನಿಯರಿಂಗ್ ಮತ್ತು ಟೆಕ್ನಾಲಜಿ ಸೆಂಟರ್ (BIETC) ಕ್ಯಾಂಪಸನ್ನು (BIETC Campus) ಶುಕ್ರವಾರ ಲೋಕಾರ್ಪಣೆಗೊಳಿಸಿ ಮತ್ತು ಹೆಣ್ಮಕ್ಕಳಿಗೆ ವಿಮಾನ ಯಾನ ಕ್ಷೇತ್ರದಲ್ಲಿ ಹೆಣ್ಮಕ್ಕಳಿಗೆ ಪ್ರೋತ್ಸಾಹ ನೀಡುವ ಬೋಯಿಂಗ್ ಸುಕನ್ಯಾ (Boeing sukanya programme) ಎಂಬ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.
ಕಳೆದ ವರ್ಷ ಬೆಂಗಳೂರಿನಲ್ಲಿ ಏಷ್ಯಾದಲ್ಲೇ ಅತಿ ದೊಡ್ಡ ಹೆಲಿಕಾಪ್ಟರ್ ಉತ್ಪಾದನಾ ಘಟಕವನ್ನು ಸ್ಥಾಪಿಸಲಾಯಿತು. ಈಗ ಜಗತ್ತಿನ ಅತಿ ಶ್ರೇಷ್ಠ ವೈಮಾನಿನ ತಂತ್ರಜ್ಞಾನ ಕರ್ನಾಟಕದಲ್ಲಿ ನೆಲೆಗೊಂಡಿದೆ. ಈ ಮೂಲಕ ಕರ್ನಾಟಕ ಅತಿ ದೊಡ್ಡ ವಿಮಾನಯಾನ ಹಬ್ ಆಗುವ ಸಾಧ್ಯತೆ ಕಂಡುಬರುತ್ತಿದೆ ಎಂದು ಮೋದಿ ಹೇಳಿದರು. ಬೆಂಗಳೂರಿನಲ್ಲಿ ತಮ್ಮ ಸಂಸ್ಥೆಯ ಎರಡನೇ ಅತಿ ದೊಡ್ಡ ಕ್ಯಾಂಪಸ್‌ನ್ನು ಸ್ಥಾಪಿಸಿದ್ದಕ್ಕಾಗಿ ಅವರು ಬೋಯಿಂಗ್ ಸಂಸ್ಥೆಗೆ ಕೃತಜ್ಞತೆ ಹೇಳಿದರು.
ಮೂರನೇ ಅತಿ ದೊಡ್ಡ ದೇಶೀಯ ವೈಮಾನಿಕ ಮಾರ್ಕೆಟ್
ಭಾರತವು ಈಗ ಜಗತ್ತಿನಲ್ಲೇ ಮೂರನೇ ಅತಿ ದೊಡ್ಡ ದೇಶೀಯ ವೈಮಾನಿಕ ಮಾರುಕಟ್ಟೆಯನ್ನು ಹೊಂದಿದೆ. ಕಳೆದ 10 ವರ್ಷಗಳಲ್ಲಿ ವಿಮಾನ ಯಾನ ವಲಯದಲ್ಲಿ ದೊಡ್ಡ ಬದಲಾವಣೆಯಾಗಿದೆ. ನಾಔು ಜನರ ಆಕಾಂಕ್ಷೆ ಮತ್ತು ಈಸ್ ಆಫ್ ಲಿವಿಂಗ್‌ಗೆ ಹೆಚ್ಚಿನ ಒತ್ತು ನೀಡಿದ್ದೇವೆ. ವಿಮಾನ ಯಾನದ ಸೌಲಭ್ಯವನ್ನು, ಸಂಪರ್ಕದ ವ್ಯವಸ್ಥೆಯನ್ನು ಹೆಚ್ಚಿಸಿದ್ದೇವೆ. ಹೀಗಾಗಿ ದೇಶದ ಮೂಲೆ ಮೂಲೆಗೆ ವಿಮಾನ ಯಾನ ಸಂಪರ್ಕ ಸಾಧ್ಯವಾಗಿದೆ ಎಂದು ಮೋದಿ ಹೇಳಿದರು. ಇದರಲ್ಲಿ ಜನಸಾಮಾನ್ಯರ ವಿಮಾನಯಾನ ಎಂದೇ ಹೆಸರಾದ ಉಡಾನ್ ಯೋಜನೆಯ ಪ್ರಭಾವ ಹೆಚ್ಚಿದೆ ಎಂದರು.
2014ರಲ್ಲಿ ದೇಶದಲ್ಲಿ 70 ವಿಮಾನ ನಿಲ್ದಾಣಗಳಿದ್ದವು. ಈಗ ಅವುಗಳ ಸಂಖ್ಯೆ 150ಕ್ಕೆ ಏರಿದೆ. ನಾವು ಕೇವಲ ವಿಮಾನ ನಿಲ್ದಾಣಗಳ ಸಂಖ್ಯೆಯನ್ನು ಹೆಚ್ಚಿಸಿದ್ದಲ್ಲ. ಹಿಂದಿನ ವಿಮಾನ ನಿಲ್ದಾಣಗಳ ಸಾಮರ್ಥ್ಯವನ್ನೂ ಹೆಚ್ಚಿಸಿದೆವು. ಇದರಿಂದ ಸರಕು ಸಾಗಾಟದಲ್ಲೂ ಹೆಚ್ಚಳವಾಯಿತು ಎಂದು ಮೋದಿ ವಿವರಿಸಿದರು.
ಜಗತ್ತಿನಲ್ಲೇ ಅತಿ ಹೆಚ್ಚು ಮಹಿಳಾ ಪೈಲಟ್‌ಗಳು ಭಾರತದಲ್ಲಿ
ಭಾರತೀಯ ವಿಮಾನಯಾನ ಕ್ಷೇತ್ರದಲ್ಲಿ ಮಹಿಳೆಯರ ಪಾಲುದಾರಿಕೆ ದೊಡ್ಡ ಮಟ್ಟದಲ್ಲಿ ಹೆಚ್ಚಾಗುತ್ತಿದೆ. ಇದನ್ನು ಇನ್ನಷ್ಟು ಹೆಚ್ಚಿಸಲು ಬೋಯಿಂಗ್ ಸುಕನ್ಯಾ ಯೋಜನೆ ಜಾರಿಗೆ ಬಂದಿದೆ ಎಂದು ಪ್ರಧಾನಿ ಮೋದಿ ಹೇಳಿದರು.
ದೇಶದ ಅಭಿವೃದ್ಧಿ ಮತ್ತು ಮುನ್ನಡೆಯಲ್ಲಿ ಈಗ ಮಹಿಳಾ ಪಾಲುದಾರಿಕೆ ಹೆಚ್ಚುತ್ತಿದೆ. ಮಹಿಳಾ ನಾಯಕತ್ವದ ಅಭಿವೃದ್ಧಿಯ ಮಂತ್ರವನ್ನು ಜಿ20 ಸಮಾವೇಶದಲ್ಲಿ ನಾವು ಪ್ರತಿಪಾದಿಸಿದ್ದೆವು. ವಾಯುಯಾನ ಕ್ಷೇತ್ರದಲ್ಲಿ ಮಹಿಳೆಯರು ಮುಂಚೂಣಿಯಲ್ಲಿದ್ದಾರೆ. ರಕ್ಷಣಾ ವಿಮಾನಗಳಿರಬಹುದು, ನಾಗರಿಕ ವಿಮಾನಗಳಿರಬಹುದು. ಮಹಿಳೆಯರ ಪಾಲ್ಗೊಳ್ಳುವಿಕೆ ದೊಡ್ಡ ಪ್ರಮಾಣದಲ್ಲಿದೆ ಎಂದರು ಮೋದಿ.
ಭಾರತದ ವಿಮಾನಯಾನ ಕ್ಷೇತ್ರದಲ್ಲಿ ಮಹಿಳಾ ಪೈಲಟ್‌ಗಳ ಸಂಖ್ಯೆ 15% ಇದೆ. ಇದರ ವಿಶೇಷತೆ ಏನು ಎಂದು ತಿಳಿಯಬೇಕಾದರೆ ನೀವು ಜಗತ್ತಿನ ಪರಿಸ್ಥಿತಿ ತಿಳಿಯಬೇಕು. ಇದು ಜಾಗತಿಕ ಶೇಕಡಾವಾರು ಪ್ರಮಾಣಕ್ಕಿಂತ ಶೇ.ಕಡಾ ಮೂರು ಹೆಚ್ಚಾಗಿದೆ ಎಂದು ಮೋದಿ ಹರ್ಷ ವ್ಯಕ್ತಪಡಿಸಿದರು. ಬೋಯಿಂಗ್ ಸುಕನ್ಯಾದಲ್ಲಿ ಇನ್ನಷ್ಟು ಉತ್ತೇಜನ ನೀಡಲಾಗುತ್ತದೆ. ಹೀಗಾಗಿ ಬಡವರ ಮಕ್ಕಳು ಕೂಡಾ ಮುಂದಿನ ದಿನಗಲ್ಲಿ ಪೈಲಟ್ ಆಗಬಹುದು ಎಂದರು ಮೋದಿ.
STEM ಕ್ಷೇತ್ರದಲ್ಲೂ ಮಹಿಳೆಯರು ಮುಂಚೂಣಿಯಲ್ಲಿ
STEM ತಂತ್ರಜ್ಞಾನವನ್ನು ನಾವು ಬೆಳೆಸುತ್ತಿದ್ದೇವೆ. ಭಾರತದಲ್ಲಿ ಹೆಣ್ಮಕ್ಕಳು Science, Technology, Engineering and Maths ವಿಭಾಗದಲ್ಲಿ ಹೆಚ್ಚು ಅವಕಾಶಗಳನ್ನು ಪಡೆಯುತ್ತಿದ್ದಾರೆ ಎಂದು ಹೇಳಿದ ಅವರು, ಚಂದ್ರಯಾನದ ಮೂಲಕ ನಾವು ಇದುವರೆಗೆ ಯಾವುದೇ ದೇಶ ತಲುಪಲು ಸಾಧ್ಯವಾಗದ ಜಾಗಕ್ಕೆ ಹೋಗಿದ್ದೇವೆ. ವೈಜ್ಞಾನಿಕತೆಯನ್ನು ಅತ್ಯಂತ ಎತ್ತರಕ್ಕೆ ಒಯ್ಯುವ ಕೆಲಸ ಮಾಡುತ್ತಿದ್ದೇವೆ ಎಂದರು.
ಇದನ್ನೂ ಓದಿ: BIETC Campus : ಮೋದಿ ಉದ್ಘಾಟಿಸಿದ ಬೋಯಿಂಗ್ ಎಂಜಿನಿಯರಿಂಗ್ ಮತ್ತು ಟೆಕ್ನಾಲಜಿ ಕೇಂದ್ರದಲ್ಲಿ ಏನಿದೆ?
ಬೆಳೆಯುತ್ತಿದೆ ಏವಿಯೇಷನ್ ಮಾರ್ಕೆಟ್
ಕಳೆದ ಒಂದು ದಶಕದಲ್ಲಿ ಭಾರತದ ಏವಿಯೇಷನ್ ಮಾರ್ಕೆಟ್ ದೊಡ್ಡ ಮಟ್ಟದಲ್ಲಿ ಬೆಳೆದಿದೆ. ಉತ್ಪಾದನೆ ಮತ್ತು ಸರ್ವಿಸ್ ಸೆಕ್ಟರ್‌ನಲ್ಲಿ ಅವಕಾಶಗಳಿವೆಯೇ ಎಂದು ಬೇರೆ ಬೇರೆ ದೇಶಗಳು ಕಾಯುತ್ತಿವೆ. ಹೀಗೆ ಭಾರತ ದೊಡ್ಡ ಏವಿಯೇಷನ್ ಹಬ್ ಆಗಿ ಬೆಳೆಯುವ ಲಕ್ಷಣ ತೋರಿದೆ ಎಂದರು.
ನಮ್ಮದು ಮೇಕ್ ಇನ್ ಇಂಡಿಯಾ ಎಂಬ ಪರಿಕಲ್ಪನೆ. ಆದರೆ, ನಾವು ಮೇಕಿಂಗ್ ಇಟ್ ಫಾರ್ ವರ್ಲ್ಡ್. ನಾವು ಜಗತ್ತಿಗಾಗಿ ನಿರ್ಮಾಣ ಮಾಡುತ್ತಿದ್ದೇವೆ. ಇದು ದೇಶದ ಆರ್ಥಿಕತೆ ಮತ್ತು ಉದ್ಯೋಗಾವಕಾಶ ಹೆಚ್ಚಳದಲ್ಲೂ ದೊಡ್ಡ ಪಾತ್ರವನ್ನು ವಹಿಸುತ್ತಿದೆ ಎಂದು ಮೋದಿ ವಿವರಿಸಿದರು.
ಪೂರ್ಣ ಪ್ರಮಾಣದ ವಿಮಾನ ತಯಾರಿ ದಿನ ದೂರವಿಲ್ಲ
ಭಾರತದಲ್ಲಿ ನಾವು ಕಳೆದ 9 ವರ್ಷದಲ್ಲಿ 25 ಕೋಟಿ ಜನರನ್ನು ಬಡತನ ರೇಖೆಯಿಂದ ಮೇಲೆತ್ತಿದ್ದೇವೆ. ಭಾರತದಲ್ಲಿ ಈಗ ಸ್ಥಿರ ಸರ್ಕಾರವಿದೆ. ಮೇಕ್ ಇನ್ ಇಂಡಿಯಾ ಎಂಬ ಪ್ರೋತ್ಸಾಹಕ ನೀತಿ ಇದೆ. ಪ್ರತಿಭಾನ್ವಿತ ಉದ್ಯೋಗಿಗಳ ಬಲವಿದೆ. ನಮ್ಮ ಶಕ್ತಿ ಎಷ್ಟಿದೆ ಎಂದರೆ ನಾವು ಪೂರ್ಣ ಪ್ರಮಾಣದ ವಿಮಾನ ತಯಾರಿಗೆ ಹೆಚ್ಚು ಕಾಲ ಬೇಕಾಗಿಲ್ಲ ಎಂದು ಹೇಳಿದರು ಮೋದಿ. ಬೋಯಿಂಗ್‌ನಂಥ ಸಂಸ್ಥೆಗಳಿಗೂ ಭಾರತದ ಬೆಳವಣಿಗೆಯೊಂದಿಗೆ ತಾವೂ ಬೆಳೆಯುವ ಅವಕಾಶ ಸಿಗಲಿದೆ ಎಂದು ಮೋದಿ ಹೇಳಿದರು.