Site icon Vistara News

Bike Accident | ಅತಿವೇಗದ ಚಾಲನೆಗೆ ಹಾರಿಹೋಯ್ತು ಯುವತಿ ಪ್ರಾಣ; ಬರ್ತ್‌ಡೇ ದಿನವೇ ಯುವಕನ ಕೈ ಕಟ್‌

bike accident

ಬೆಂಗಳೂರು: ಹುಟ್ಟುಹಬ್ಬದ ಸಂಭ್ರಮದಲ್ಲಿದ್ದ ಯುವಕನೊಬ್ಬ ತನ್ನ ಸ್ನೇಹಿತೆಗೆ ಬರ್ತ್‌ಡೇ ಪಾರ್ಟಿ ಕೊಡಲು ಬೈಕ್‌ನಲ್ಲಿ ಕರೆದುಕೊಂಡು ಹೋಗುತ್ತಿದ್ದ. ಆದರೆ ಇಬ್ಬರ ಗ್ರಹಚಾರ ಕೆಟ್ಟಿತ್ತು, ವಿಧಿಯಾಟಕ್ಕೆ ಯುವತಿ ಬಲಿಯಾದರೆ, ಯುವಕ ಆಸ್ಪತ್ರೆ ಸೇರುವಂತಾಯಿತು. ಇದಕ್ಕೆಲ್ಲ ಕಾರಣವಾಗಿದ್ದು ಅತಿ ವೇಗದ ಬೈಕ್‌ (Bike Accident) ಚಾಲನೆ.

ಮಂಗಳವಾರ ಯಲಹಂಕ ಫ್ಲೈಓವರ್‌ನಲ್ಲಿ ನಡೆದ ಭೀಕರ ರಸ್ತೆ ಅಪಘಾತದಲ್ಲಿ 18 ವರ್ಷದ ಸನಾ ಸಾಹಿಬಾ ಮೃತಪಟ್ಟಿದ್ದಾಳೆ. ಹುಟ್ಟುಹಬ್ಬದ ಸಂಭ್ರಮದಲ್ಲಿದ್ದ ಆರ್.ಟಿ ‌ನಗರ ನಿವಾಸಿ 21 ವರ್ಷದ ಜಿಶಾನ್ ತನ್ನ ಸ್ನೇಹಿತೆ ಸನಾ ಸಾಹಿಬಾಳಿಗೆ ಪಾರ್ಟಿ ಕೊಡಿಸಲು ಬೈಕ್‌ನಲ್ಲಿ ಕರೆದುಕೊಂಡು ಹೋಗುತ್ತಿದ್ದ. ಅತಿವೇಗದಲ್ಲಿದ್ದ ಜಿಶಾನ್‌ಗೆ ಬೈಕ್‌ ನಿಯಂತ್ರಣ ತಪ್ಪಿ ಡಿವೈಡರ್‌ಗೆ ಡಿಕ್ಕಿ ಆಗಿದೆ. ಡಿಕ್ಕಿ ಹೊಡೆದ ರಭಸಕ್ಕೆ ಯುವಕನ ಕೈ ಕಟ್ ಆದರೆ, ತಲೆ ಮತ್ತು ಎದೆಗೆ ಬಲವಾದ ಪೆಟ್ಟಾಗಿ ಯುವತಿ ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾಳೆ.

ಬೆಂಗಳೂರಿನ ಆರ್.ಟಿ ನಗರ ನಿವಾಸಿಗಳಾದ ಸನಾ ಖಾಸಗಿ ಕಾಲೇಜಿನಲ್ಲಿ ಓದುತ್ತಿದ್ದಳು. ಇನ್ನು ಜಿಶಾನ್ ತಂದೆಯ ಅಂಗಡಿಯಲ್ಲಿ ಕೆಲಸ ಮಾಡಿಕೊಂಡಿದ್ದ. ಆದರೆ ಇವರ ಮಧ್ಯೆ ಸ್ನೇಹ ಹೇಗೆ ಆಯಿತು ಎಂಬುದು ಪೋಷಕರಿಗೂ ಗೊತ್ತಿಲ್ಲ. ಮರಣೋತ್ತರ ಪರೀಕ್ಷೆಗೆ ಯುವತಿಯ ಮೃತದೇಹವನ್ನು ಯಲಹಂಕ ಸರ್ಕಾರಿ ಆಸ್ಪತ್ರೆಗೆ ರವಾನೆ ಮಾಡಲಾಗಿದ್ದರೆ, ಇತ್ತ ಕೇಕ್‌ ಕಟ್‌ ಮಾಡಬೇಕಾದ ಜಿಶಾನ್‌ ಕೈ ಕಳೆದುಕೊಂಡು ಹೆಚ್ಚಿನ ಚಿಕಿತ್ಸೆಗಾಗಿ ಕೊಡಿಗೆಹಳ್ಳಿ ಬಳಿಯ ಪ್ರೋಲೈಫ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಲಾಗುತ್ತಿದೆ.

ಇದನ್ನೂ ಓದಿ | Robbery Case | ಫುಲ್‌ ಟೈಂ ಪೊಲೀಸ್‌ ಇನ್ಫಾರ್ಮರ್‌ನಿಂದ ಪಾರ್ಟ್‌ ಟೈಂ ಕಳ್ಳತನ!

Exit mobile version