Site icon Vistara News

Bill Politics : ಬೆಂಗಳೂರಿನ ಕಾಮಗಾರಿಗಳ ಬಾಕಿ ಬಿಲ್‌ ಬಿಡುಗಡೆ, ಮುನಿರತ್ನ ಕ್ಷೇತ್ರದ ಹಣಕ್ಕೆ ಕೊಕ್ಕೆ

Munirathna bill politics

ಬೆಂಗಳೂರು: ರಾಜ್ಯದಲ್ಲಿ ಗ್ಯಾರಂಟಿ ಯೋಜನೆಗಳ ಭಾರಕ್ಕೆ ಅಭಿವೃದ್ಧಿ ಕಾಮಗಾರಿಗಳು ಕುಸಿದಿವೆ ಎಂಬ ಆರೋಪಗಳು ಜೋರಾಗಿ ಕೇಳಿಬರುತ್ತಿದ್ದಂತೆಯೇ ಸರ್ಕಾರ ಸ್ವಲ್ಪ ಮಟ್ಟಿಗೆ ಎಚ್ಚೆತ್ತಿದೆ. ವಿಸ್ತಾರ ನ್ಯೂಸ್‌ ಕಳೆದ 140 ದಿನಗಳಲ್ಲಿ ಯಾವುದೇ ಅಭಿವೃದ್ಧಿ ಕಾಮಗಾರಿ ನಡೆದಿಲ್ಲ, ಬಿಲ್‌ ಪಾವತಿ ಆಗಿಲ್ಲ ಎಂಬುದರ ಮೇಲೆ ಬೆಳಕು ಚೆಲ್ಲಿತ್ತು. ಇದೀಗ ರಾಜ್ಯ ಸರ್ಕಾರ ಬೆಂಗಳೂರಿನಲ್ಲಿ ಕಾಮಗಾರಿ ಮಾಡಿದವರಿಗೆ ಜ್ಯೇಷ್ಠತೆಯ ಆಧಾರದಲ್ಲಿ ಹಣ ಬಿಡುಗಡೆ ಮಾಡಿದೆ. ಆದರೆ, ಶಾಸಕ ಮುನಿರತ್ನ (MLA Munirathna) ಅವರು ಪ್ರತಿನಿಧಿಸುವ ರಾಜರಾಜೇಶ್ವರಿ ಕ್ಷೇತ್ರದ (Rajarajeshwari zone) ಹಣ ಬಿಡುಗಡೆ ಮಾಡದಂತೆ ಸೂಚನೆ (Bill Politics) ನೀಡಿದೆ.

ಬೆಂಗಳೂರಿನ ಕಾಮಗಾರಿಗಳ (Bangalore Works) ತನಿಖೆಗೆ ಸರ್ಕಾರ ಈ ಹಿಂದೆ ಎಸ್‌ಐಟಿ ರಚನೆ ಮಾಡಿತ್ತು. ಇದರಿಂದ ಬಿಲ್‌ ಪಾವತಿ ಇನ್ನಷ್ಟು ವಿಳಂಬವಾಗಿತ್ತು. ಇದರ ವಿರುದ್ಧ ಭಾರಿ ಆಕ್ರೋಶ ವ್ಯಕ್ತವಾಗಿತ್ತು. ಜತೆಗೆ ಬೊಕ್ಕಸ ಖಾಲಿ ಆಗಿರುವುದರಿಂದಲೇ ಸರ್ಕಾರ ಈ ರೀತಿಯ ನಾಟಕ ಮಾಡುತ್ತಿದೆ ಎಂಬ ಆಪಾದನೆಗಳು ಕೇಳಿಬಂದವು. ಇದೀಗ ಸರ್ಕಾರ ಎಸ್‌ಐಟಿ ತನಿಖೆಯ ನಡುವೆಯೇ 73.07 ಕೋಟಿ ರೂಪಾಯಿ ಬಿಡುಗಡೆಗೆ ಆದೇಶ ನೀಡಿದೆ. ಅಂದರೆ ಒಟ್ಟಾರೆ ಮೊತ್ತದಲ್ಲಿ ಶೇ. 75ನ್ನು ಪಾವತಿ ಮಾಡಿರುವುದಾಗಿ ಸರ್ಕಾರ ಹೇಳಿದೆ.

ಯಾವ ವಲಯಕ್ಕೆ ಎಷ್ಟೆಷ್ಟು ಹಣ ಬಿಡುಗಡೆ?

ಕೇಂದ್ರ ವಲಯಕ್ಕೆ 1.15 ಕೋಟಿ ರೂ, ಪೂರ್ವ ವಲಯಕ್ಕೆ 6.57 ಕೋಟಿ ರೂ, ಪಶ್ಚಿಮ ವಲಯಕ್ಕೆ 6.32 ಕೋಟಿ ರೂ., ದಕ್ಷಿಣ ವಲಯಕ್ಕೆ 9.23 ಕೋಟಿ ರೂ., ರಾಜರಾಜೇಶ್ವರಿ ನಗರ ವಲಯಕ್ಕೆ 4.58 ಕೋಟಿ ರೂ., ಬೊಮ್ಮನಹಳ್ಳಿ ವಲಯಕ್ಕೆ 4.02 ಕೋಟಿ ರೂ., ದಾಸರಹಳ್ಳಿ ವಲಯಕ್ಕೆ 3.49 ಕೋಟಿ ರೂ., ಯಲಹಂಕ ವಲಯಕ್ಕೆ 32.71 ಕೋಟಿ ರೂ, ಮಹದೇವಪುರ ವಲಯಕ್ಕೆ 4.95 ಕೋಟಿ ರೂ. ಬಿಡುಗಡೆ ಮಾಡಲಾಗಿದೆ.

ಮುನಿರತ್ನ ವಲಯಕ್ಕೆ ಯಾಕೆ ಹಣ ಬಿಡುಗಡೆಯಾಗಿಲ್ಲ?

ಸರ್ಕಾರ ಹಣ ಬಿಡುಗಡೆಗೆ ಸೂಚನೆ ನೀಡಿದ್ದರೂ ಅದರಲ್ಲಿ ಒಂದು ಕೊಕ್ಕೆ ಇಟ್ಟಿದೆ. ಅದೇನೆಂದರೆ, ಆರ್ ಆರ್ ನಗರದ ವಾರ್ಡ್ 160,129,71,37,16,17,38,42,69 ವಾರ್ಡ್ ಕಾಮಗಾರಿಗಳ ಬಗ್ಗೆ ಕೆಲವೊಂದು ದೂರುಗಳು ಬಂದಿರುವುದರಿಂದ ಎಸ್‌ಐಟಿ ತನಿಖೆಯ ವರದಿ ಬರುವವರೆಗೆ ಈ ವಾರ್ಡ್‌ಗಳ ಯಾವುದೇ ಬಿಲ್‌ಗಳನ್ನು ಆನ್‌ಲೈನ್‌ ಮುಖಾಂತರ ಪಾವತಿ ಮಾಡಬಾರದು ಎಂದು ಬಿಬಿಎಂಪಿಯ ಹಣಕಾಸು ವಿಭಾಗದ ವಿಶೇಷ ಆಯುಕ್ತರು ಸೂಚನೆ ನೀಡಿದ್ದಾರೆ.

ಕೆರಳಿ ನಿಂತ ಮುನಿರತ್ನ, ಹೊಂದಾಣಿಕೆ ಮಾಡಿಕೊಂಡೋರಿಗೆ ಸಿಗ್ತದೆ

ಈ ರೀತಿ ಬಿಲ್‌ ಬಿಡುಗಡೆ ಮಾಡಿದ ನಂತರವೂ ತಡೆ ಹಿಡಿದ ಕ್ರಮವನ್ನು ರಾಜರಾಜೇಶ್ವರಿ ಕ್ಷೇತ್ರದ ಬಿಜೆಪಿ ಶಾಸಕ ಮುನಿರತ್ನ ಆಕ್ಷೇಪಿಸಿದ್ದಾರೆ. ಮತ್ತು ಕೆಲವೊಂದು ಆಪಾದನೆಗಳನ್ನು ಮಾಡಿದ್ದಾರೆ.

ʻʻ ಯಾರು ಇವರ ಜತೆ ಹೊಂದಾಣಿಕೆ ಮಾಡಿಕೊಳ್ತಾರೋ ಯಾರು ಇವರು ಹೇಳಿದ್ದನ್ನು ಕೇಳ್ತಾರೋ, ಮುಂದಿನ ಚುನಾವಣೆಯಲ್ಲಿ ಇವರಿಗೆ ಯಾರು ಸಹಾಯ ಮಾಡ್ತಾರೋ ಅವರ ಬಿಲ್ ಬಿಡುಗಡೆ ಮಾಡಿದ್ದಾರೆ. ನಾನು ಇವರ ಹೇಳಿದಂತೆ ಮಾಡಲ್ಲ. ಹಾಗಾಗಿ ನನ್ನ ಕ್ಷೇತ್ರದಲ್ಲಿ ಆದ ಕೆಲಸಗಳಿಗೆ ಬಿಲ್ ಬಿಡುಗಡೆ ಮಾಡಿಲ್ಲʼʼ ಎಂದಿದ್ದಾರೆ ಮುನಿರತ್ನ.

ʻʻನಾನು ಹೊಂದಾಣಿಕೆ ಪಾಲಿಟಿಕ್ಸ್ ಮಾಡಲ್ಲ. ನನ್ನ ವಿರುದ್ಧ ಸೋತವರನ್ನು ಗೆಲ್ಲಿಸಿ ಮಂತ್ರಿ ಮಾಡಬೇಕು ಅನ್ನೋದು ಇವರ ಇಚ್ಛೆ. ಅವರು ಬಂದು ಆರ್ ಆರ್ ನಗರ ಅಭಿವೃದ್ಧಿ ಮಾಡ್ತೀವಿ ಅಂತ ಹೇಳಿದ್ರೆ ನಾನೇ ರಾಜೀನಾಮೆ ಕೊಟ್ಟು ಹೋಗ್ತೀನಿʼʼ ಎಂದು ಮುನಿರತ್ನ ಹೇಳಿದರು.

ʻʻಚುನಾವಣೆ ಆರಂಭದ ದಿನದಿಂದ ಇವತ್ತಿನವರೆಗೂ ನಡೆಯುತ್ತಿರುವ ಎಲ್ಲ ಬೆಳವಣಿಗೆಗಳ ಬಗ್ಗೆ ನಿಮಗೆ ಗೊತ್ತಿದೆ. ಇವರ ಜತೆ ಮಾತನಾಡಿಕೊಂಡು ಬರುವವರು, ಹೊಂದಾಣಿಕೆ ಮಾಡಿಕೊಂಡು ಹೋಗುವವರು, ಇವರಿಗೆ ಲೋಕಸಭಾ ಚುನಾವಣೆಯಲ್ಲಿ ಸಪೋರ್ಟ್ ಮಾಡೋರಿಗೆ ತೊಂದರೆ ಇಲ್ಲ. ನಾನು ಇವರ ಜತೆ ಇಲ್ಲ. ಜತೆಗೆ ಮೈತ್ರಿ ಬಳಿಕ ಕುಮಾರಸ್ವಾಮಿ ಜತೆ ಇದ್ದೇನೆ, ಹೀಗಾಗಿ ನನ್ನ ಕ್ಷೇತ್ರದ ಬಿಲ್ ಬಿಡುಗಡೆ ಮಾಡಿಲ್ಲʼʼ ಎಂದು ಸ್ಪಷ್ಟವಾಗಿ ಹೇಳಿದರು.

ಇದನ್ನೂ ಓದಿ: Congress Government : ಸರ್ಕಾರಕ್ಕೆ 140 ದಿನ; 2,50,993 ಕೋಟಿ ರೂ. ಬಜೆಟ್‌ನಲ್ಲಿ ಬಿಡುಗಡೆಯಾಗಿದ್ದು ಬೊಗಸೆಯಷ್ಟು!

ಸಿದ್ದರಾಮಯ್ಯ ಕೂಡಾ ಬದಲಾಗಿದ್ದಾರೆ ಎಂದ ಮುನಿರತ್ನ

ಈಗ ಮುಖ್ಯಮಂತ್ರಿಯಾಗಿರುವುದು 2013ರ ಸಿಎಂ ಸಿದ್ದರಾಮಯ್ಯ ಅಲ್ಲ. 2023ರ ಸಿದ್ದರಾಮಯ್ಯ ಬೇರೆ. ಹಿಂದಿನ ಸಿಎಂ ನಾವು ನೋಡಲು ಸಾಧ್ಯವಿಲ್ಲ. ಹಾಗಾಗಿ ನಾನು ಸಿಎಂ ಭೇಟಿ ಮಾಡಲ್ಲ ಎಂದು ಮುನಿರತ್ನ ಹೇಳಿದರು.

ʻʻಬೆಂಗಳೂರಿನ ಎಲ್ಲ ಕ್ಷೇತ್ರಗಳ ಬಿಲ್ ಬಿಡುಗಡೆ ಆಗುತ್ತದೆ. ಆದರೆ ಆರ್ ಆರ್ ನಗರದ ಬಿಲ್ ಬಿಡುಗಡೆ ಆಗಲ್ಲ ಅಂದರೆ ಏನರ್ಥ? ಯಶವಂತಪುರ, ಆರ್ ಆರ್ ನಗರ ಒಬ್ಬರೇ ಝೋನಲ್ ಆಫೀಸರ್. ಯಶವಂತಪುರ ಬಿಲ್ ಬಿಡುಗಡೆ ಆಗುತ್ತೆ. ನಮ್ಮ ಬಿಲ್ ಬಿಡುಗಡೆ ಆಗಲ್ಲ. ಇದನ್ನೇ ಲೋಕಸಭಾ ಚುನಾವಣೆ ಸಮಯದಲ್ಲಿ ಜನರ ಮುಂದೆ ಹೇಳ್ತೀನಿ. ಜನರ ಅಭಿಪ್ರಾಯ ಪಡೆದು ಮುಂದೂವರೆಯುತ್ತೇನೆʼʼ ಎಂದ ಮುನಿರತ್ನ, ಅವರಿಗೆ ಈಗ ನನ್ನ ವಿರುದ್ಧ ಸೋತವರನ್ನು ಶಾಸಕರಾಗಿ ಮಾಡಿ ಮಿನಿಸ್ಟರ್ ಮಾಡಬೇಕಿದೆ, ಅಷ್ಟಕ್ಕೇ ಇಷ್ಟೆಲ್ಲ ನಾಟಕ ಎಂದರು ಮುನಿರತ್ನ.

Exit mobile version