ಬೆಂಗಳೂರು: ಶಿಕ್ಷಕ ಮತ್ತು ಪದವೀಧರ ಕ್ಷೇತ್ರದ ಚುನಾವಣೆಯ ಮತದಾನದ ಅವಧಿಯನ್ನು ಸಂಜೆ ಆರರವರೆಗೆ ವಿಸ್ತರಿಸುವಂತೆ ಚುನಾವಣಾಧಿಕಾರಿಗಳಿಗೆ ಬಿಜೆಪಿ ಮನವಿ ಮಾಡಿದೆ. ಹಾಲಿ ಸೂಚನೆಯ ಪ್ರಕಾರ ಜೂನ್ 13ರಂದು ಬೆಳಗ್ಗೆ 8ರಿಂದ ಸಂಜೆ 4ರವರೆಗೆ ಮತದಾನ ನಡೆಯಲಿದೆ. ಇದನ್ನು ಆರು ಗಂಟೆವರೆಗೆ ವಿಸ್ತರಿಸಬೇಕು ಎಂದು ರಾಜ್ಯ ಬಿಜೆಪಿ ವಕ್ತಾರ ಮತ್ತು ವಿಧಾನಪರಿಷತ್ ಸದಸ್ಯ ಛಲವಾದಿ ನಾರಾಯಣಸ್ವಾಮಿ ಮತ್ತು ಚುನಾವಣಾ ಆಯೋಗ ವಿಭಾಗದ ರಾಜ್ಯ ಸಂಚಾಲಕ ದತ್ತಗುರು ಹೆಗಡೆ ಅವರು ಮುಖ್ಯ ಚುನಾವಣಾಧಿಕಾರಿಗಳಿಗೆ ಶುಕ್ರವಾರ ಮನವಿ ಸಲ್ಲಿಸಿದರು.
ವಿಸ್ತರಣೆ ಬೇಡಿಕೆ ಯಾಕೆ?
ಎಲ್ಲ ಕ್ಷೇತ್ರಗಳಲ್ಲಿ ಹೆಚ್ಚಿನ ಸಂಖ್ಯೆಯ ಮತದಾರರು ತಮ್ಮ ಹೆಸರು ನೋಂದಾಯಿಸಿಕೊಂಡಿದ್ದಾರೆ. ಶಿಕ್ಷಕರೂ ಹೆಚ್ಚಿನ ಸಂಖ್ಯೆಯಲ್ಲಿ ಹೆಸರು ನೊಂದಣಿ ಮಾಡಿಕೊಂಡಿದ್ದು, ಹಲವು ಶಿಕ್ಷಕರು ಪದವೀಧರ ಕ್ಷೇತ್ರದ ಅಭ್ಯರ್ಥಿಗೆ ಮತ ಚಲಾಯಿಸಲು ಅರ್ಹತೆ ಹೊಂದಿದ್ದಾರೆ. ಜೂನ್ 13ರಂದು ಎರಡೂ ಕ್ಷೇತ್ರಗಳಿಗೆ ಚುನಾವಣೆ ನಡೆಯುವಾಗ ಸಮಸ್ಯೆ ಆಗಬಾರದು ಎಂಬ ಕಾರಣಕ್ಕೆ ಮತದಾನದ ಅವಧಿ ವಿಸ್ತರಣೆ ಸೂಕ್ತ ಅನ್ನಿಸುತ್ತದೆ ಎಂದು ಬಿಜೆಪಿ ಹೇಳಿದೆ.
ಕೋವಿಡ್ ನಿಯಮಾನುಸಾರ ಮತದಾನ ಮಾಡುವುದು ಅನಿವಾರ್ಯವೆನ್ನುವುದು ಹಿಂದಿನ ಅನುಭವದಿಂದ ತಿಳಿದುಬಂದಿದೆ. ರಾಜ್ಯದ ಹಲವು ಮತಗಟ್ಟೆಗಳ ಕೋಣೆಯಲ್ಲಿ ಶಿಕ್ಷಕ ಮತ್ತು ಪದವೀಧರ ಕ್ಷೇತ್ರದ ಅಭ್ಯರ್ಥಿಗಳಿಗೆ ಮತ ಹಾಕಬೇಕಾದ ಸಂದರ್ಭದಲ್ಲಿ ಒಬ್ಬ ಮತದಾರ ಮತದಾನದ ಕೋಣೆಯಿಂದ ಹೊರ ಬರುವ ಸಮಯ ವಿಳಂಬವಾಗುತ್ತದೆ. ಹಲವು ಕಡೆ ಮತಗಟ್ಟೆಗಳು ಮತದಾರನ ಊರು-ಮನೆಯಿಂದ 15-20 ಕಿಲೋಮೀಟರ್ ದೂರವಿದ್ದು, ಮತದಾನಕ್ಕೆ ಬರಲು ವಿಳಂಬವಾಗುವ ಸಾಧ್ಯತೆ ಹೆಚ್ಚಾಗಿದೆ ಎಂದು ಮನವಿ ಹೇಳಿದೆ.
ಶಿಕ್ಷಕರಲ್ಲದವರು, ಪದವೀಧರರಲ್ಲದವರು ನಕಲಿ (ಡುಪ್ಲಿಕೇಟ್) ಮತದಾರರು ಮತದಾನಕ್ಕೆ ಬರುತ್ತಾರೆ ಎಂಬುದನ್ನು ಹಿಂದಿನ ಚುನಾವಣೆಯ ಅನುಭವ ತಿಳಿಸಿದೆ. ಪ್ರತಿಯೊಬ್ಬ ಮತದಾನ ಅರ್ಹತೆಯನ್ನು ಪರಿಶೀಲಿಸಿ ಮತದಾನ ಮಾಡಲು ಅನುವು ಮಾಡಿಕೊಡಬೇಕಾದ ಅನಿವಾರ್ಯತೆಯಿದೆ. ಶಿಕ್ಷಕ ಅಭ್ಯರ್ಥಿಗೆ ಹಾಗೂ ಪದವೀಧರ ಕ್ಷೇತ್ರದ ಅಭ್ಯರ್ಥಿಗೆ ಮತ ಹಾಕಲು ಎರಡು ಬ್ಯಾಲೆಟ್ ಪೇಪರ್ ಕೊಡಲಾಗುತ್ತದೆ. ಈ ಕೆಲಸಕ್ಕೂ ಸಮಯ ಬೇಕಾಗುತ್ತದೆ. ಎರಡೂ ಕ್ಷೇತ್ರದ ಅಭ್ಯರ್ಥಿಗಳಿಗೆ ಮತದಾನ ಮಾಡುವ ಮತದಾರರು ಎರಡು ಬೆರಳುಗಳಿಗೆ ಶಾಯಿ ಹಾಕಲಾಗುವುದು ಎಂದು ತಿಳಿದಿದೆ. ಆದರೆ ಶಿಕ್ಷಕ ಕ್ಷೇತ್ರಕ್ಕೆ ಮತ ಚುನಾಯಿಸಿದ ಮತದಾರನಿಗೆ ಯಾವ ಬೆರಳಿಗೆ ಪದವೀಧರ ಕ್ಷೇತ್ರದ ಅಭ್ಯರ್ಥಿಗೆ ಮತ ಹಾಕಿದವರು ಯಾವ ಬೆರಳಿಗೆ ಶಾಯಿ ಹಾಕಿಸಿಕೊಳ್ಳಬೇಕು ಎನ್ನುವ ತಿಳುವಳಿಕೆ ಮತದಾರನಿಗೆ ಲಭ್ಯವಿಲ್ಲ ಎಂದು ವಿವರಿಸಲಾಗಿದೆ.
ಇದನ್ನೂ ಓದಿ: ಶಿಕ್ಷಕರ ಕೊರತೆ ಖಂಡಿಸಿ ವಿದ್ಯಾರ್ಥಿಗಳಿಂದ ಪ್ರತಿಭಟನೆ