ಬೆಂಗಳೂರು: ಮಾಜಿ ಸಿಎಂ ಸಿದ್ದರಾಮಯ್ಯ ಅವಧಿಯಲ್ಲಿ ನಡೆಸಲಾದ ಟೆಂಡರ್ ಶ್ಯೂರ್ ಕಾಮಗಾರಿಗಳಲ್ಲಿ 50% ಕಮಿಷನ್ ಪಡೆಯಲಾಗಿದೆ ಎಂದು ಆರೋಪಿಸಿ ಲೋಕಾಯುಕ್ತಕ್ಕೆ ಬಿಜೆಪಿ ದೂರು ನೀಡಿದೆ.
ಲೋಕಾಯುಕ್ತ ಕಚೇರಿಗೆ ಆಗಮಿಸಿದ ಬಿಜೆಪಿ ಎಸ್‌ಸಿ ಮೋರ್ಚಾ ಅಧ್ಯಕ್ಷ ಛಲವಾದಿ ನಾರಾಯಣಸ್ವಾಮಿ ಹಾಗೂ ಕಾನೂನು ಪ್ರಕೋಷ್ಠದ ಯೋಗೇಂದ್ರ ಸೇರಿ ಅನೇಕರು ದೂರು ನೀಡಿದರು.
ನಂತರ ಮಾತನಾಡಿದ ಛಲವಾದಿ ನಾರಾಯಣ ಸ್ವಾಮಿ, ಕಾಂಗ್ರೆಸ್‌ನವರು ಬಿಜೆಪಿ ವಿರುದ್ಧ ಪ್ರತಿಭಟನೆ ಮಾಡುತ್ತಿದ್ದಾರೆ. 40% ಕಮಿಷನ್ ಪೋಸ್ಟರ್ ಮಾಡಿ ದಾಖಲೆ ಇಲ್ಲದೇ ನಮ್ಮ ವಿರುದ್ಧ ಅಪಪ್ರಚಾರ ಮಾಡುತ್ತಿದ್ದಾರೆ. ನಾವು ಇವತ್ತು ಸಿದ್ದರಾಮಯ್ಯ ಮತ್ತು ಕಾಂಗ್ರೆಸ್ ವಿರುದ್ಧ ಲೋಕಾಯುಕ್ತಕ್ಕೆ ದೂರು ಕೊಟ್ಟಿದ್ದೇನೆ.
ನಮ್ಮ ಆಪಾದನೆಗಳಿಗೆ ದಾಖಲೆ ಇದೆ. ನಮ್ಮ ವಿರುದ್ಧ ಅವರ ಆಪಾದನೆಗಳಿಗೆ ದಾಖಲೆ ಇಲ್ಲ. ನಮ್ಮ ಲೀಗಲ್ ಸೆಲ್‌ನ ಯೋಗೇಂದ್ರ ಮತ್ತು ಕೆಲವು ವಕೀಲರ ಜತೆ ತೆರಳಿ ದೂರು ಕೊಟ್ಟಿದ್ದೇವೆ. ಟೆಂಡರ್ ಶ್ಯೂರ್ ಯೋಜನೆಯಲ್ಲಿ 2013-14 ರಲ್ಲಿ 53.86% ರಷ್ಟು ಹೆಚ್ಚಿನ ಅನುದಾನ ಬಿಡುಗಡೆ ಮಾಡಲಾಗಿದೆ. ಟೆಂಡರ್ ಶ್ಯೂರ್‌ನಡಿ ಹೆಚ್ಚುವರಿ ಹಣ ಬಿಡುಗಡೆ ಮಾಡಿಕೊಂಡು ಅಕ್ರಮ ಮಾಡಲಾಗಿದೆ ಎಂದರು.
ನಿಮಗೆ ತಾಕತ್ ಇದ್ದರೆ ನಮ್ಮ ವಿರುದ್ಧ ಮಾಡಿದ ಆರೋಪಗಳಿಗೆ ಲೋಕಾಯುಕ್ತಕ್ಕೆ ಕಾಂಗ್ರೆಸ್ ದಾಖಲೆ ಕೊಡಲಿ ಎಂದ ನಾರಾಯಣಸ್ವಾಮಿ, ಟೆಂಡರ್ ಶ್ಯೂರ್‌ನಲ್ಲಿ 50% ಕಮೀಷನ್ ಹೊಡೆಯಲಾಗಿದೆ. ಸಿದ್ದರಾಮಯ್ಯ ಮತ್ತು ನಲವತ್ತು ಕಳ್ಳರಿಂದ ಕಮಿಷನ್ ಪಡೆಯಲಾಗಿದೆ. ಸಿದ್ದರಾಮಯ್ಯ ಅವರ ಕರ್ಮಕಾಂಡ ಎಲ್ಲವನ್ನೂ ಬಯಲಿಗೆಳೆಯುತ್ತೇವೆ ಎಂದರು.
ಇದನ್ನೂ ಓದಿ | Lokayukta Raid : ಹೋಂ ಗಾರ್ಡ್ ಬಳಿ ಲಂಚ ಸ್ವೀಕರಿಸುತ್ತಿದ್ದಾಗಲೇ ಲೋಕಾಯುಕ್ತ ಬಲೆಗೆ ಬಿದ್ದ ಜಿಲ್ಲಾ ಕಮಾಂಡೆಂಟ್
ಸಿದ್ದರಾಮಯ್ಯ ಹರಿಶ್ಚಂದ್ರರಲ್ಲ ಎಂದ ನಾರಾಯಣಸ್ವಾಮಿ, ಅವರ ಕಾಲದಲ್ಲಿ ಅನೇಕ ಅಕ್ರಮ ಆಗಿವೆ. ಆದರೆ ಅವರು ಹರಿಶ್ಚಂದ್ರ ರೀತಿ ಮಾತನಾಡುತ್ತಾರೆ. ಜನ ಅವರ ಅಕ್ರಮ ಸಹಿಸದೇ ಮನೆಗೆ ಕಳಿಸಿದರು. ಕಾಂಗ್ರೆಸ್‌ನವರಿಗೆ, ಸಿದ್ದರಾಮಯ್ಯ ಅವರಿಗೆ ಮಾನ ಮರ್ಯಾದೆ ಇದ್ದರೆ ಈ ದೂರು ಎದುರಿಸಲಿ ಎಂದರು.