Site icon Vistara News

BJP Karnataka : ಯುಪಿಎ V/S ಮೋದಿ ಕಾಲದ ಅನುದಾನ ಲೆಕ್ಕ ನೀಡಿ ಬಿಜೆಪಿ ಕೌಂಟರ್

Budget Session Siddaramaiah Narendra Modi

ಬೆಂಗಳೂರು: ಕಾಂಗ್ರೆಸ್‌ ಸರ್ಕಾರ ತನ್ನ ವೈಪಳ್ಯ ಮುಚ್ಚಿಕೊಳ್ಳಲು ಕೇಂದ್ರ ಸರ್ಕಾರದ ವಿರುದ್ಧ ಪ್ರತಿಭಟನೆಗೆ ಮುಂದಾಗಿದೆ ಎಂದು ಕರ್ನಾಟಕ ಬಿಜೆಪಿ (BJP Karnataka) ಆರೋಪಿಸಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ (CM siddaramaiah) ಮತ್ತು ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ಅವರು ಸೋಮವಾರ ವಿಧಾನಸೌಧದಲ್ಲಿ ಜಂಟಿ ಪತ್ರಿಕಾಗೋಷ್ಠಿ ನಡೆಸಿ ಕೇಂದ್ರ ಸರ್ಕಾರದ ವಿರುದ್ಧ ದಾಳಿ (Attack on Central Government) ನಡೆಸಿ, ಪ್ರತಿಭಟನೆ ಘೋಷಿಸಿದ ಬೆನ್ನಿಗೇ ಬಿಜೆಪಿ ತಿರುಗೇಟು ನೀಡಿದ್ದು, ಆಡಳಿತ ವಿರೋಧಿ ಅಲೆಯಿಂದ ಜನರ ಗಮನವನ್ನು ಬೇರೆಡೆಗೆ ಸೆಳೆಯಲು ಕಾಂಗ್ರೆಸ್‌ ಮತ್ತು ಸಿದ್ದರಾಮಯ್ಯ ಅವರು ಕೇಂದ್ರ ಸರ್ಕಾರದ ಮೇಲೆ ಗೂಬೆ ಕೂರಿಸುವ ಪ್ರಯತ್ನ ನಡೆಸುತ್ತಿದೆ ಎಂದು ಬಿಜೆಪಿ ಟ್ವೀಟ್‌ (BJP Tweet) ಮಾಡಿದೆ. ಜತೆಗೆ ಹಿಂದೆ ಅಧಿಕಾರದಲ್ಲಿದ್ದ ಯುಪಿಎಗಿಂತಲೂ ಹೆಚ್ಚಿನ ಧನಸಹಾಯವನ್ನು ನರೇಂದ್ರ ಮೋದಿ ಸರ್ಕಾರ ನೀಡಿದೆ ಎಂದು ಅಂಕಿ ಅಂಶಗಳ ಮೂಲಕ ತೋರಿಸಿದೆ. ಇದರೊಂದಿಗೆ ರಾಜ್ಯದಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್‌ ನಡುವೆ ತೀವ್ರ ಹೋರಾಟಕ್ಕೆ ವೇದಿಕೆ ಅಣಿಯಾದಂತಾಗಿದೆ.

ಬಿಜೆಪಿ ಮಾಡಿದ ಆರೋಪಗಳೇನು?

ತಮ್ಮ ಆಡಳಿತದ ದಯನೀಯ ವೈಫಲ್ಯವನ್ನು ಮರೆಮಾಚಿಕೊಳ್ಳಲು ಸಿಎಂ ಸಿದ್ದರಾಮಯ್ಯ ಅವರು ಸದಾ ಆರೋಪಿಸುವುದು ಕೇಂದ್ರ ಸರ್ಕಾರವನ್ನು. ಕರ್ನಾಟಕದ ಇತಿಹಾಸದಲ್ಲಿಯೇ ಹಿಂದೆಂದೂ ಕಂಡು ಕೇಳರಿಯದಂತಹ ಆಡಳಿತ ವಿರೋಧಿ ಅಲೆ ಸದ್ಯ ಕಾಂಗ್ರೆಸ್ ಸರ್ಕಾರಕ್ಕಿದೆ. ಆಡಳಿತ ವಿರೋಧಿ ಅಲೆಯಿಂದ ಜನರ ಗಮನವನ್ನು ಬೇರೆಡೆ ಸೆಳೆಯಲು ಕಾಂಗ್ರೆಸ್ ಮತ್ತು ಸಿಎಂ ಸಿದ್ದರಾಮಯ್ಯನವರು ಕೇಂದ್ರ ಸರ್ಕಾರದ ಮೇಲೆ ಗೂಬೆ ಕೂರಿಸುವ ವ್ಯರ್ಥ ಪ್ರಯತ್ನ ಮಾಡುತ್ತಿದ್ದಾರೆ.

ಸಿದ್ದರಾಮಯ್ಯನವರೇ ಕೆಳಗಿನ ಮಾಹಿತಿ ಸರಿಯಾಗಿ ಓದಿಕೊಳ್ಳಿ..

ಜೀವನ ಪೂರ್ತಿ ಪರರನ್ನು ಬೊಟ್ಟು ಮಾಡಿ ಜಾರಿಕೊಳ್ಳಲು ಯತ್ನಿಸುತ್ತಿರುವ ಸಿದ್ದರಾಮಯ್ಯನವರೇ, ಈ ಕೆಳಗಿನ ಮಾಹಿತಿ ನಿಮ್ಮ ಸರ್ಕಾರದ ಬಳಿ ಇಲ್ಲದಿರುವುದು ನಿಮ್ಮ ಆಡಳಿತದ ಅಸಾಮರ್ಥ್ಯ ತೋರಿಸುತ್ತದಷ್ಟೆ. ಕಾಂಗ್ರೆಸ್‌ ನೇತೃತ್ವದ ಯುಪಿಎ ಸರ್ಕಾರ ನೀಡಿದ್ದಕ್ಕಿಂತ ಮೂರುಪಟ್ಟು ಅಧಿಕ ತೆರಿಗೆಪಾಲು ಮತ್ತು ಅನುದಾನಗಳನ್ನು ನೀಡಿದ್ದು ನರೇಂದ್ರ ಮೋದಿ ಸರ್ಕಾರ.

▪ 2004-2014ರ ವರೆಗೆ ಯುಪಿಎ ಅಧಿಕಾರದಲ್ಲಿದ್ದಾಗ ಕಲ್ಲಿದ್ದಲು ಹಗರಣ, 2ಜಿ ಹಗರಣ, ಕಾಮನ್‌ವೆಲ್ತ್‌ ಹಗರಣಗಳಂಥ ಭಾನಗಡಿಗಳ ನಡುವೆ ಕರ್ನಾಟಕಕ್ಕೆ ನೀಡಲು ಅಂದಿನ ಕೇಂದ್ರ ಸರ್ಕಾರದ ಬಳಿ ಇದ್ದದ್ದೇ ₹81,795 ಕೋಟಿ. ಇದಕ್ಕೆ ಹೋಲಿಸಿದರೆ ಮೋದಿ ಸರ್ಕಾರ ನೀಡಿರುವ ₹2,82,791 ಕೋಟಿ ಶೇ.245 ರಷ್ಟು ಹೆಚ್ಚು ಎಂಬುದನ್ನು ಕಾಂಗ್ರೆಸ್‌ ಯಾವತ್ತೂ ಮರೆಮಾಚಲು ಸಾಧ್ಯವಿಲ್ಲ. ಕರ್ನಾಟಕದ ಅಭಿವೃದ್ಧಿಗೆ ಈಗ ಹಿಂದೆಂದಿಗಿಂತಲೂ ಹೆಚ್ಚು ಸಿಕ್ಕಿದೆ ಎಂಬುದನ್ನು ತಿರುಚಲು ನೀವು ಎಷ್ಟೇ ಪ್ರಯತ್ನಿಸಿದರೂ ಅಸಾಧ್ಯ.

▪️ ಇದಲ್ಲದೆ ನಿರ್ದಿಷ್ಟ ಯೋಜನೆಗಳಿಗಾಗಿ ನೀಡಲಾದ ಅಭಿವೃದ್ಧಿ ಹಣ ಅದೆಷ್ಟು ಪಾಲು ಅಧಿಕ ಎಂಬುದನ್ನು ಲೆಕ್ಕ ಹಾಕಲು ಸ್ವಯಂಘೋಷಿತ ಆರ್ಥಿಕ ತಜ್ಞರಾದ ತಮಗೆ ಅಸಾಧ್ಯವಲ್ಲ. ಯುಪಿಎ ಅವಧಿಯಲ್ಲಿ ರಾಜ್ಯಕ್ಕೆ ಬಂದ ₹ 60,779 ಕೋಟಿಗಿಂತಲೂ ಮೋದಿ ಸರ್ಕಾರ ನೀಡಿದ ₹2,08,882 ಕೋಟಿ ಹೆಚ್ಚು ಎಂಬುದನ್ನು ಅರಿಯಲು ಅರ್ಥಶಾಸ್ತ್ರ ಗೊತ್ತಿರಲೇಬೇಕೆಂದು ಇಲ್ಲ, ಲೆಕ್ಕ ಗೊತ್ತಿದ್ದರೂ ಸಾಕು.

ನಿಮ್ಮೂರಿಗೆ ಒಂದುವರೆ ಗಂಟೆಯಲ್ಲಿ ಹೋಗಲು ಕಾರಣ ಮೋದಿ

▪️ ನಮ್ಮ ರಾಜ್ಯದಲ್ಲಿ ನಿಮ್ಮ ಪಕ್ಷದವರು 1947 ರಿಂದ 2014ರ ವರೆಗೆ ನಿರ್ಮಾಣ ಮಾಡಿದ ರಸ್ತೆ ಕೇವಲ 6750 ಕಿಲೋಮೀಟರ್. ಮೋದಿ ಸರ್ಕಾರ 2014ರ ನಂತರ ಕರ್ನಾಟಕದಲ್ಲಿ ಮಾಡಿದ ರಸ್ತೆ ನಿರ್ಮಾಣ ಒಟ್ಟು 13,500 ಕಿಲೋಮೀಟರ್. ಸಿದ್ದರಾಮಯ್ಯನವರೇ, ಮೊದಲು ನಾಲ್ಕು ಗಂಟೆಗೂ ಹೆಚ್ಚು ಸಮಯ ತಗಲುತ್ತಿದ್ದ ನಿಮ್ಮ ತವರೂರಿಗೆ ಕೇವಲ ಒಂದೂವರೆ ಗಂಟೆಯಲ್ಲೇ ನೀವಿಂದು ಹೋಗುತ್ತಿರುವ ಆ ರಸ್ತೆಯನ್ನು ಮಾಡಿಸಿದ್ದೂ ಸಹ ಮೋದಿ ಸರ್ಕಾರವೇ.

▪️ 2009 ರಿಂದ 2014ರ ವರೆಗೆ ರಾಜ್ಯದ ರೈಲ್ವೆ ಯೋಜನೆಗಳಿಗೆ ನಿಮ್ಮ ಸರ್ಕಾರ ನೀಡಿದ್ದ ₹835 ಕೋಟಿಗಿಂತ ಮೋದಿ ಸರ್ಕಾರ ನೀಡಿರುವ ₹11,000 ಕೋಟಿ ಎಷ್ಟು ಪಟ್ಟು ಹೆಚ್ಚು ಎಂಬುದನ್ನು ನೀವೇ ಸ್ವಲ್ಪ ಲೆಕ್ಕ ಹಾಕಿ ಹೇಳಿಬಿಡಿ.

ವಿದ್ಯುದೀಕರಣದಲ್ಲಿ ಆಗಿರುವ ಬೆಳವಣಿಗೆ ಒಮ್ಮೆ ನೋಡಿ

▪️ ಬ್ರಿಟೀಷರು ಭಾರತವನ್ನು ಬಿಟ್ಟು ಹೋದಲ್ಲಿಂದ ಹಿಡಿದು 2014 ರಲ್ಲಿ ಕಾಂಗ್ರೆಸ್‌ ಅಧಿಕಾರ ಬಿಟ್ಟು ತೊಲಗುವವರೆಗೆ, 67 ವರ್ಷಗಳಲ್ಲಿ ಕರ್ನಾಟಕದಲ್ಲಿ ಆದ ರೈಲ್ವೇ ವಿದ್ಯುದೀಕರಣ ಕೇವಲ 16 ಕಿಲೋಮೀಟರ್. ಆದರೆ ಕಾಂಗ್ರೆಸ್ಸನ್ನು ಉಚ್ಛಾಟಿಸಿ ಬಂದ ಮೋದಿ ಸರ್ಕಾರ ಮಾಡಿದ ರೈಲ್ವೆ ವಿದ್ಯುದೀಕರಣ ಬರೋಬ್ಬರಿ 3265 ಕಿಮೀ.

▪️ ರೈಲ್ವೆ ಇಲಾಖೆ ಸಾಧನೆಯೇ ಕಾಂಗ್ರೆಸ್‌ ಅವಧಿಯಲ್ಲಿ ಇಷ್ಟು ಅತ್ಯಲ್ಪವಾಗಿರುವಾಗ ನಿಮ್ಮ ಪಕ್ಷದವರು ಅಧಿಕಾರ ನಡೆಸುವಾಗ ಮೆಟ್ರೋಗೋಸ್ಕರ ಯಶಸ್ವಿಯಾಗಿ ಅಳವಡಿಸಿದ ಹಳಿಯ ಉದ್ದ ಕೇವಲ 7 ಕಿಮೀ. 2014 ರಿಂದ 2023 ನಡುವೆ ಬರೋಬ್ಬರಿ 73 ಕಿಲೋಮೀಟರ್ ಮೆಟ್ರೋ ಹಳಿ ಅಳವಡಿಸಲಾಗಿದೆ. ಅಂದರೆ ಇದು ನಿಮ್ಮ ಪಕ್ಷದವರು ನಿರ್ಮಿಸಿದ್ದಕ್ಕಿಂತ 10 ಪಟ್ಟಿಗೂ ಹೆಚ್ಚು ಅಧಿಕ.

ನಿಮ್ಮ ಸರ್ಕಾರ ಕಿತ್ತು ಹಾಕಿದ ಮೇಲೆ ಡಬಲ್‌ ವಿಮಾನ ನಿಲ್ದಾಣ ಬಂದಿದೆ!

▪️ ಕಾಂಗ್ರೆಸ್‌ನ 67 ವರ್ಷಗಳ ಆಡಳಿತದಲ್ಲಿ ಕರ್ನಾಟಕದಲ್ಲಿ ನಿರ್ಮಾಣವಾದ ವಿಮಾನ ನಿಲ್ದಾಣಗಳು ಕೇವಲ 7. ಆದರೆ 2014ರಲ್ಲಿ ದೇಶದ ಜನ ಕಾಂಗ್ರೆಸ್‌ ಪಕ್ಷವನ್ನು ಕಿತ್ತೊಗೆದ ನಂತರ ಕರ್ನಾಟಕವೊಂದರಲ್ಲೇ 14 ವಿಮಾನ ನಿಲ್ದಾಣಗಳನ್ನು ನಿರ್ಮಿಸಿರುವುದು ಮೋದಿ ಸರ್ಕಾರ.

▪️ ಕಳೆದ 5 ವರ್ಷಗಳಲ್ಲಿ ಮೋದಿ ಸರ್ಕಾರ ರಾಜ್ಯದ ರಾಷ್ಟ್ರೀಯ ಹೆದ್ದಾರಿಗಳಿಗೆ ನೀಡಿರುವುದು ₹30,000 ಕೋಟಿ. ಕರ್ನಾಟಕದ ರೈತರ ಜೇಬಿಗೆ ಬಂದ ಕಿಸಾನ್‌ ಸಮ್ಮಾನದ ಮೌಲ್ಯ ₹10,990 ಕೋಟಿ.

▪️ ಕಾಂಗ್ರೆಸ್‌ ಸರ್ಕಾರಗಳಿಗೆ 67 ವರ್ಷಗಳಲ್ಲಿ ಯೋಚಿಸಲೂ ಸಾಧ್ಯವಾಗದಿದ್ದ ಆಯುಷ್ಮಾನ್‌ ಭಾರತ ಯೋಜನೆಯ ಲಾಭವನ್ನು ಪಡೆದ ಕನ್ನಡಿಗರು 62,00,000 ಕ್ಕೂ ಅಧಿಕ. ಕರ್ನಾಟಕಕ್ಕೆ ಮೊದಲ ಐಐಟಿ ನೀಡಿದ್ದು ಸಹ ಮೋದಿ ಸರ್ಕಾರ ಎಂಬುದು ನಿಮಗೆ ತಿಳಿದಿತ್ತೇ ಮುಖ್ಯಮಂತ್ರಿ ಸಾಹೇಬರೇ?

▪️ ಕೊರೋನಾದ ಪ್ರಕ್ಷುಬ್ಧ ಪರಿಸ್ಥಿತಿಯಲ್ಲಿ ಮೋದಿ ಸರ್ಕಾರ ಕರ್ನಾಟಕಕ್ಕೆ ಉಚಿತವಾಗಿ ನೀಡಿದ ಲಸಿಕೆಯೇ 10 ಕೋಟಿಗೂ ಹೆಚ್ಚು. ಆ ಪ್ರಮಾಣದಲ್ಲಿ ನಿಮ್ಮ ಪಕ್ಷದ ಸರ್ಕಾರಗಳು ಪೋಲಿಯೋ ಲಸಿಕೆಗಳನ್ನೂ ನೀಡಿಲ್ಲ ಎಂಬ ಅಂಶ ನಿಮ್ಮ ತಲೆಯಲ್ಲಿರಲಿ.

ಇದನ್ನೂ ಓದಿ: CM Siddaramaiah: 5 ವರ್ಷದಲ್ಲಿ 73 ಸಾವಿರ ಕೋಟಿ ರೂ. ಕಡಿತ; ಕೇಂದ್ರದ ವಿರುದ್ಧ ಸಿಎಂ ಗರಂ

ಶ್ವೇತಪತ್ರ ಹೊರಡಿಸುವ ದಮ್ಮು ನಿಮ್ಮಲ್ಲಿದೆಯೇ ಸಿದ್ದರಾಮಯ್ಯನವರೇ?

▪️ ಮೇಲೆ ಹೇಳಿದ ಇವಿಷ್ಟೂ ಅಲ್ಲದೆ ಪಿಎಂ ಗತಿ ಶಕ್ತಿ ಯೋಜನೆ, ಸಾಗರಮಾಲಾ ಯೋಜನೆ, ಬಡವರಿಗೆ ಸ್ವಂತ ಮನೆ ಖಾತರಿಪಡಿಸುವ ಪಿಎಂ ಆವಾಸ್ ಯೋಜನೆಯಡಿ ರಾಜ್ಯಕ್ಕೆ ₹1 ಲಕ್ಷ ಕೋಟಿ ರೂಪಾಯಿಗೂ ಅಧಿಕ ನೆರವು 2014ರ ನಂತರ ಹರಿದುಬಂದಿದೆ. ಅಷ್ಟಕ್ಕೂ ಕೇಂದ್ರ ಸರ್ಕಾರ ಅನುದಾನ ನೀಡುತ್ತಿಲ್ಲ ಎಂದು ಪಟಾಲಂ ಕಟ್ಟಿಕೊಂಡು ಬೊಬ್ಬೆ ಹೊಡೆಯುತ್ತಿರುವ ಸಿದ್ದರಾಮಯ್ಯನವರೇ, ಜಲ ಜೀವನ್‌ ಮಿಷನ್‌, ಅಮೃತ್‌ ಯೋಜನೆ, ಸ್ಮಾರ್ಟ್‌ ಸಿಟಿ, ಪಿಎಂ ಆವಾಸ್‌ ಯೋಜನೆ ಸೇರಿದಂತೆ ನೀರಾವರಿ ಯೋಜನೆಗಳಿಗೆ ಕೇಂದ್ರ ಸರ್ಕಾರ ಇದುವರೆಗೆ ನೀಡಿದ ಅನುದಾನವನ್ನು ಎಷ್ಟರ ಮಟ್ಟಿಗೆ ಬಳಸಿಕೊಂಡಿದ್ದೀರಾ ಎಂಬ ಶ್ವೇತಪತ್ರವನ್ನು ಹೊರಡಿಸುವ ತಾಕತ್ತು, ದಮ್ಮು ನಿಮ್ಮಲ್ಲಿದೆಯೇ?

ಕನ್ನಡಿಗರ ಶ್ರಮದ ತೆರಿಗೆ ಹಣವನ್ನು ವಾಮಮಾರ್ಗದಲ್ಲಿ ಸಂಗ್ರಹಿಸಿ, ತೆಲಂಗಾಣ, ಛತ್ತಿಸ್‌ಗಢ, ಮಧ್ಯಪ್ರದೇಶ, ರಾಜಸ್ಥಾನದ ಚುನಾವಣೆಗೆ ನೀಡಿದ ನಿಮಗೆ ಈ ವಿಚಾರದ ಬಗ್ಗೆ ಮಾತನಾಡುವ ನೈತಿಕತೆಯೇ ಇಲ್ಲ.

Exit mobile version