ಬೆಂಗಳೂರು: ಚುನಾವಣೆ ಹತ್ತಿರವಾಗುತ್ತಿರುವಂತೆ ಪಕ್ಷಗಳಲ್ಲಿನ ಆಕಾಂಕ್ಷಿಗಳು ಹಾಗೂ ಅಸಮಾಧಾನಿತರ ವಿಚಾರ ಹೊರಬರುತ್ತಿದ್ದು, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರ ರ‍್ಯಾಲಿಯಿಂದಲೇ ಮಾಜಿ ಶಾಸಕ ನಂದೀಶ್ ರೆಡ್ಡಿ ದೂರ ಉಳಿದಿದ್ದಾರೆ. ಅಸಮಾಧಾನದ ಕಾರಣದಿಂದಲೋ ಏನೊ, ಕೆ.ಆರ್. ಪುರದಲ್ಲಿ ನಡೆದ ರ‍್ಯಾಲಿಯಲ್ಲಿ ಜೆ.ಪಿ. ನಡ್ಡಾ ಅವರು ಅತ್ಯಂತ ಕಡಿಮೆ ಜನರನ್ನುದ್ದೇಶಿಸಿ ಭಾಷಣ ಮಾಡಬೇಕಾಯಿತು.
ಕೆ.ಆರ್. ಪುರದಲ್ಲಿ ಈ ಹಿಂದೆ ನಂದೀಶ್ ರೆಡ್ಡಿ ಶಾಸಕರಾಗಿದ್ದರು. ಕಳೆದ ಚುನಾವಣೆಯಲ್ಲಿ ಭೈರತಿ ಬಸವರಾಜ್ ವಿರುದ್ಧ ಸೋಲುಂಡಿದ್ದರು. ನಂತರ ಬದಲಾದ ರಾಜಕೀಯ ವ್ಯವಸ್ಥೆಯಲ್ಲಿ ಭೈರತಿ ಬಸವರಾಜು ರಾಜೀನಾಮೆ ನೀಡಿ ಉಪಚುನಾವಣೆಯಲ್ಲಿ ಬಿಜೆಪಿಯಿಂದ ಸ್ಪರ್ಧಿಸಿ ಗೆದ್ದು, ಸಚಿವರೂ ಆಗಿದ್ದಾರೆ.
ಕ್ಷೇತ್ರದಲ್ಲಿ ಬಿಜೆಪಿ ನಾಯಕರಾಗಿರುವ ನಂದೀಶ್ ರೆಡ್ಡಿ ಅಸಮಾಧಾನ ತಣಿಸಲು ಈ ಹಿಂದೆ ಬಿಎಂಟಿಸಿ ಅಧ್ಯಕ್ಷರಾಗಿ ನೇಮಿಸಲಾಗಿತ್ತು. ಇತ್ತೀಚೆಗಷ್ಟೆ ರಾಜ್ಯ ಬಿಜೆಪಿ ಉಪಾಧ್ಯಕ್ಷರಾಗಿಯೂ ನೇಮಿಸಲಾಗಿತ್ತು. ಆದರೂ ನಂದೀಶ್ ರೆಡ್ಡಿ, ಜೆ.ಪಿ. ನಡ್ಡಾ ರ‍್ಯಾಲಿಗೆ ಗೈರಾಗಿದ್ದಾರೆ.
ಕೆ.ಆರ್. ಪುರದಲ್ಲಿ ನಡೆದ ವಿಜಯಸಂಕಲ್ಪ ಯಾತ್ರೆಯಲ್ಲಿ ಮಾತನಾಡಿದ ಸಚಿವ ಆರ್. ಅಶೋಕ್, ಕಾಂಗ್ರೆಸ್ ಸುಳ್ಳುಗಾರರ, ಮೋಸಗಾರರ ಪಕ್ಷ. ಕಾಂಗ್ರೆಸ್ ಪೇ ಸಿಎಂ ಎಂಬ ಅಭಿಯಾನ ಮಾಡ್ತು. ಕಾಂಗ್ರೆಸ್ ನಲ್ಲಿ ಬಹಳಷ್ಟು ಜನ ಮುಖ್ಯಮಂತ್ರಿಗಳು ಆಗಿದ್ರಲ್ಲ, ಯಾರೆಲ್ಲ ಪೇ ಸಿಎಂ, ಎಟಿಎಂ ಸಿಎಂ ಆಗಿದ್ರು ಎಂದು ನೋಡ್ಕೊಳ್ಳಿ. ಕಾಂಗ್ರೆಸ್ ನವ್ರು ಇವಾಗ ಎಲ್ಲ ಬೇಲ್ ಮೇಲೆ, ಜೈಲಲ್ಲಿ ಇದ್ದಾರೆ. ಇಂತಹವರು ಇವಾಗ ಕರೆಪ್ಸನ್ ಬಗ್ಗೆ ಮಾತಾಡ್ತಿದ್ದಾರೆ.
ಇವತ್ತು ಜೆಡಿಎಸ್ ಕಾಂಗ್ರೆಸ್ ನ ಬಿ ಟೀಮ್. ಕಾಂಗ್ರೆಸ್, ಜೆಡಿಎಸ್ ಸರ್ಕಾರ ಬಂದ್ರು ಮೂರು ದಿನ ಇರಲ್ಲ. ಈಗಾಗಲೇ ಸಿಎಂ ಸ್ಥಾನಕ್ಕಾಗಿ ಸಿದ್ದರಾಮಯ್ಯ, ಡಿಕೆಶಿ ಟವಲ್ ಹಾಕೊಂಡು ಕೂತಿದ್ದಾರೆ. ಆದರೆ ನಮ್ಮಲ್ಲಿ ಆ ರೀತಿಯ ಇಲ್ಲ, ನಮ್ಮಲ್ಲಿ ತುಂಬಾ ಜನ ನಾಯಕರು ಇದ್ದಾರೆ ಎಂದರು.
ರಾಜ್ಯ ಬಿಜೆಪಿ ಚುನಾವಣಾ ಸಹ ಉಸ್ತುವಾರಿ ಕೆ. ಅಣ್ಣಾಮಲೈ ಮಾತನಾಡಿ, ಮೋದಿಯವರು ರಾಜ್ಯದ 64% ಜನರಿಗೆ ಕುಡಿಯುವ ನೀರು ಕೊಟ್ಟಿದ್ದಾರೆ. ಕೇಂದ್ರದಲ್ಲೂ ರಾಜ್ಯದಲ್ಲೂ ಡಬಲ್ ಇಂಜಿನ್ ಸರ್ಕಾರ ಇದೆ. ಡಬಲ್ ಇಂಜಿನ್ ಸರ್ಕಾರದಿಂದಲೇ ಕರ್ನಾಟಕದ ಅಭಿವೃದ್ಧಿ. ಕಾಂಗ್ರೆಸ್ ನಲ್ಲಿ ಸುಳ್ಳು ಹೇಳೋದು ಜಾಸ್ತಿ. ತಮಿಳುನಾಡಿನಲ್ಲೂ ಡಿಎಂಕೆ ಮತ್ತು ಕಾಂಗ್ರೆಸ್ ನವ್ರು ಸುಳ್ಳು ಹೇಳಿದಾರೆ. ಒಂದು ರೇಷನ್ ಕಾರ್ಡ್ ಗೆ ಒಂದು ಸಾವಿರ ಕೊಡ್ತೀವಿ ಅಂದ್ರು.
ಇದುವರೆಗೆ ಕೊಡ್ಲಿಲ್ಲ, ಇಲ್ಲೂ ಕಾಂಗ್ರೆಸ್‌ನವರು ಸುಳ್ಳು ಹೇಳಿದಾರೆ. ಎರಡು ಸಾವಿರ ಕೊಡ್ತೀವಿ ಅಂದಿರೋದು ದೊಡ್ಡ ಸುಳ್ಳು. ಕಾಂಗ್ರೆಸ್‌ನವರದ್ದು ಸುಳ್ಳಿನ ರಾಜಕಾರಣ. ಕಾಂಗ್ರೆಸ್‌ನವರನ್ನು ನಂಬಬೇಡಿ. ಬಿಜೆಪಿಗೆ 150 ಸ್ಥಾನ ಕೊಟ್ಟು ಮತ್ತೊಮ್ಮೆ ಅಧಿಕಾರಕ್ಕೆ ತನ್ನಿ ಎಂದು ಮನವಿ ಮಾಡಿದರು.
ಜೆ.ಪಿ. ನಡ್ಡಾ ಮಾತನಾಡಿ, ಮೊದಲು ಯಡಿಯೂರಪ್ಪರಿಂದ ರಾಜ್ಯದಲ್ಲಿ ಅಭಿವೃದ್ಧಿ ಪರ್ವ ಆರಂಭ ಆಯಿತು. ನಂತರ ಬೊಮ್ಮಾಯಿ ಅವರಿಂದ ಅಭಿವೃದ್ಧಿ ಕಾರ್ಯ ಮುಂದುವರಿಕೆ ಆಗುತ್ತಿದೆ. ಬೈರತಿ ಬಸವರಾಜು ಸಚಿವರಾಗಿ ಉತ್ತಮವಾಗಿ ಕೆಲಸ ಮಾಡಿದಾರೆ ಎಂದ ನಡ್ಡಾ, ಭಾಷಣದ ಮಧ್ಯೆಯೇ ಬೈರತಿಯವರನ್ನು ಕರೆದು ಕೈ ಹಿಡಿದು ಬೆನ್ನು ತಟ್ಟಿದರು.
2023 ರಲ್ಲಿ ಏಷ್ಯಾ ಪೆಸಿಫಿಕ್ ನಲ್ಲಿ ಬೆಂಗಳೂರು ವೇಗವಾಗಿ ಅಭಿವೃದ್ಧಿ ಆಗ್ತಿರುವ ನಗರ. 70 ಸಾವಿರ ಕೋಟಿ ಮೌಲ್ಯದ ಎಲೆಕ್ಟ್ರಾನಿಕ್ ಸಾಮಾಗ್ರಿಗಳನ್ನು ದೇಶ ರಪ್ತು ಮಾಡ್ತಿದೆ. ಆಪಲ್ ಮೊಬೈಲ್ ಸಹಾ ಭಾರತದಲ್ಲಿ ತಯಾರಾಗ್ತಿದೆ. ಬಹಳ ಬೇಗನೇ ಕರ್ನಾಟಕದಲ್ಲೂ ಆಪಲ್ ಮೊಬೈಲ್ ತಯಾರಾಗಲಿದೆ.
ಇತ್ತೀಚೆಗೆ ಮೋದಿಯವರು ಶಿವಮೊಗ್ಗದಲ್ಲಿ ಹೊಸ ಏರ್ಪೋರ್ಟ್, ಹೊಸ ರೈಲು ಯೋಜನೆಗಳಿಗೆ ಚಾಲನೆ ಕೊಟ್ರು. ಫೆಬ್ರವರಿ 6 ರಂದು ದೇವನಹಳ್ಳಿ ಏರ್ಪೋರ್ಟ್ ನಲ್ಲಿ ಹೊಸ ಟರ್ಮಿನಲ್ ಉದ್ಘಾಟಿಸಿದರು. ತುಮಕೂರಿನಲ್ಲಿ ಎಚ್ಎಎಲ್ ಹೆಲಿಕಾಪ್ಟರ್ ಘಟಕ ಉದ್ಘಾಟಿಸಿದರು. ಕೈಗಾರಿಕಾ ಟೌನ್ ಶಿಪ್, ವಂದೇಭಾರತ್ ರೈಲುಗಳಿಗೂ ಚಾಲನೆ ನೀಡಿದ್ದಾರೆ. ಕೆಂಪೇಗೌಡರ 108 ಪ್ರತಿಮೆಯನ್ನೂ ಮೋದಿ ಲೋಕಾರ್ಪಣೆ ಮಾಡಿದ್ದಾರೆ. ಅಭಿವೃದ್ಧಿಯಲ್ಲಿ ಬೆಂಗಳೂರು, ಕರ್ನಾಟಕದ ಮೇಲೆ ಕೆಂದ್ರದಿಂದ ವಿಶೇಷ ಒತ್ತು ನೀಡಲಾಗುತ್ತಿದೆ.
ಜೆಡಿಎಸ್ ಮತ್ತು ಕಾಂಗ್ರೆಸ್ ಒಂದೇ ನಾಣ್ಯದ ಎರಡು ಮುಖ. ಈ ಎರಡೂ ಪಕ್ಷಗಳೂ ಭ್ರಷ್ಟಾಚಾರ, ಕುಟುಂಬ ರಾಜಕಾರಣ, ಜಾತಿವಾದ, ಕೋಮುವಾದ, ವಿಭಜನೆ ರಾಜಕಾರಣದ ಮೇಲೆ ನಂಬಿಕೆ ಇಟ್ಟಿವೆ. ಜೆಡಿಎಸ್ ಕುಟುಂಬಕ್ಕೆ ಆದ್ಯತೆ ಕೊಡುವ ಪಕ್ಷ. ಕಾಂಗ್ರೆಸ್ ಸಹ ಕುಟುಂಬ ರಾಜಕಾರಣದ ಪಕ್ಷ. ಕಾಂಗ್ರೆಸ್-ಜೆಡಿಎಸ್ ಭಾಯಿ ಭಾಯಿ ಇದ್ದಂತೆ. ಕಾಂಗ್ರೆಸ್ ನಾಯಕರು ಬೇಲ್ ಮೇಲಿದಾರೆ. ಜೆಡಿಎಸ್ ಗೆ ಮತ ಕೊಟ್ರೆ ಕಾಂಗ್ರೆಸ್ ಗೆ ಕೊಟ್ಟ ಹಾಗೆ. ಪಿಎಫ್ಐಗೆ ಕಾಂಗ್ರೆಸ್ ಜೆಡಿಎಸ್ ಬೆಂಬಲಿಸಿದ್ದವು. ಇಂಥ ಪಕ್ಷಗಳನ್ನು ಜನ ಬೆಂಬಲಿಸಬಾರದು. ದೇಶ ಮೋದಿಯವರ ಮೂಲಕ ಸುರಕ್ಷಿತವಾಗಿದೆ. ರಾಜ್ಯವು ಯಡಿಯೂರಪ್ಪ, ಬೊಮ್ಮಾಯಿ ಕೈಯಲ್ಲಿ ಸುರಕ್ಷಿತವಾಗಿದೆ ಎಂದರು.
ಇದನ್ನೂ ಓದಿ: BJP Rathayatre: ಆದಿವಾಸಿ, ಶೋಷಿತರ ಪರ ಮೋದಿ ಸರ್ಕಾರ ಕೆಲಸ; ಇಲ್ಲಿಯ ಚಿತ್ರಣವನ್ನೇ ಬದಲಿಸಲು ಬಂದಿದ್ದೇನೆ: ಜೆ.ಪಿ. ನಡ್ಡಾ
ದೇಶದಲ್ಲಿ ಯಾರೂ ರಾಹುಲ್ ಗಾಂಧಿ ಭಾಷಣ ಕೇಳುತ್ತಿಲ್ಲ ಅಂತಾ ವಿದೇಶದಲ್ಲಿ ಹೋಗಿ ಮಾತಾಡುತ್ತಿದ್ದಾರೆ. ಅಲ್ಲಿ ಹೋಗಿ ಮೋದಿ ವಿರುದ್ಧ ಮಾತಾಡ್ತಾ ಮಾತಾಡ್ತಾ ದೇಶಕ್ಕೆ ಅವಮಾನ ಮಾಡುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದರು.
ಆಮ್ ಆದ್ಮಿ ಪಕ್ಷವನ್ನು ತೊರೆದು ಇತ್ತೀಚೆಗೆ ಬಿಜೆಪಿ ಸೇರಿದ ನಿವೃತ್ತ ಐಪಿಎಸ್ ಅಧಿಕಾರಿ ಭಾಸ್ಕರ ರಾವ್ ಅವರು ವೇದಿಕೆಯಲ್ಲಿದ್ದರು. ಕಾರ್ಯಕ್ರಮದ ನಂತರ ಜೆ.ಪಿ. ನಡ್ಡಾ ಅವರ ಬಳಿ ಕರೆದುಕೊಂಡು ಹೋದ ಸಚಿವ ಡಾ. ಸಿ.ಎನ್. ಅಶ್ವತ್ಥನಾರಾಯಣ, ಬಾಸ್ಕರ ರಾವ್ ಅವರನ್ನು ಪರಿಚಯಿಸಿದರು. ಈ ವೇಳೆ ನಡ್ಡಾ ಅವರ ಕಾಲಿಗೆ ಭಾಸ್ಕರ ರಾವ್ ನಮಸ್ಕರಿಸಿದರು.