ಬೆಂಗಳೂರು: ಸಿದ್ದರಾಮಯ್ಯನವರು ದಲಿತ ವಿರೋಧಿ (Siddaramaiah Anti dalit) . ಅವರು ದಲಿತರ ಸಮಾಧಿ ಮೇಲೆ ಕುಳಿತು ಅಧಿಕಾರ ನಡೆಸುತ್ತಿದ್ದಾರೆ ಎಂದು ಬಿಜೆಪಿ ರಾಜ್ಯ ಎಸ್‍ಸಿ ಮೋರ್ಚಾ ಅಧ್ಯಕ್ಷ (BJP SC Morcha President) ಹಾಗೂ ವಿಧಾನಪರಿಷತ್ ಸದಸ್ಯ ಛಲವಾದಿ ನಾರಾಯಣಸ್ವಾಮಿ (Chalavadi Narayanaswamy) ಅವರು ವಿಶ್ಲೇಷಿಸಿದರು. ಮಲ್ಲೇಶ್ವರದ ಬಿಜೆಪಿ ರಾಜ್ಯ ಕಾರ್ಯಾಲಯ “ಜಗನ್ನಾಥ ಭವನ”ದಲ್ಲಿ ಇಂದು ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡಿದ ಅವರು, ಕಾಂಗ್ರೆಸ್ ಪಕ್ಷವು ಮತ ಬ್ಯಾಂಕಿಗಾಗಿ ಮಾತ್ರ ದಲಿತರನ್ನು ಓಲೈಸುತ್ತದೆ. ದಲಿತರಿಗೆ ವಿವರಿಸಲು ಆಗದಷ್ಟು ಅನ್ಯಾಯವನ್ನು ಕಾಂಗ್ರೆಸ್ಸಿಗರು ಮಾಡಿದ್ದಾರೆ. ಮಾನ್ಯ ಮಲ್ಲಿಕಾರ್ಜುನ ಖರ್ಗೆಯವರನ್ನು (Mallikarjun Kharge) ಎಐಸಿಸಿ ಅಧ್ಯಕ್ಷಗಿರಿಗೆ ತಂದು ಕೂರಿಸಿದ್ದಾರೆ. ಆದರೆ, ಕರ್ನಾಟಕದಲ್ಲಿ ಇರುವಾಗ ಹಲವು ಬಾರಿ ಮುಖ್ಯಮಂತ್ರಿ ಆಗಲು ಯತ್ನಿಸಿದರೂ ಅವರನ್ನು ಮುಖ್ಯಮಂತ್ರಿ ಮಾಡಲಿಲ್ಲ ಎಂದು ಟೀಕಿಸಿದರು. ಕಾಂಗ್ರೆಸ್ ಪರಮೇಶ್ವರ್ ಅವರಿಗೂ ವಂಚಿಸಿದೆ ಎಂದರು (BJP Karnataka).
ʻʻದಲಿತರಿಗೆ 34 ಸಾವಿರ ಕೋಟಿ ಹಣ ಇಟ್ಟಿದ್ದಾಗಿ ಸಿದ್ದರಾಮಯ್ಯನವರು ಹೇಳಿದ್ದರು. 11 ಸಾವಿರ ಕೋಟಿಯನ್ನು ನುಂಗಿ ಬಿಟ್ಟರು. ಇದು ಕೂಡ ದಲಿತ ವಿರೋಧಿ ನಿಲುವುʼʼ ಎಂದು ಛಲವಾದಿ ಆಕ್ಷೇಪಿಸಿದರು. ವಿಪಕ್ಷಗಳ ವತಿಯಿಂದ ಖರ್ಗೆಯವರ ಹೆಸರನ್ನು ಪ್ರಧಾನಿ ಅಭ್ಯರ್ಥಿ ಎಂದು ಮಮತಾ ಬ್ಯಾನರ್ಜಿ ಪ್ರಸ್ತಾಪಿಸಿದ್ದಾರೆ. ಅದನ್ನು ಕೇಜ್ರಿವಾಲ್ ಅವರು ಅನುಮೋದಿಸಿದ್ದು, ನಿತೀಶ್‍ಕುಮಾರ್ ಕೂಡ ಒಪ್ಪಿದ್ದಾರೆ. ಎಲ್ಲರೂ ಒಪ್ಪಿದ್ದರೂ ಕಾಂಗ್ರೆಸ್ ಒಪ್ಪಿದೆಯಾ ಎಂದು ಪ್ರಶ್ನಿಸಿದರು.
ʻʻದಲಿತರು ಆ ಸ್ಥಾನಮಾನಕ್ಕೆ ಏರುವುದು ಕಾಂಗ್ರೆಸ್ ಪಕ್ಷಕ್ಕೆ ಬೇಕಾಗಿಲ್ಲ. ಹೋಗುತ್ತಾರೋ ಬಿಡ್ತಾರೋ ಬೇರೆ ವಿಷಯ. ಖರ್ಗೆ ಹೆಸರಿನ ಪ್ರಸ್ತಾಪದಿಂದ ಸೋನಿಯಾ ಗಾಂಧಿ, ರಾಹುಲ್ ಗಾಂಧಿ, ಪ್ರಿಯಾಂಕ ಗಾಂಧಿ ವಿಚಲಿತರಾಗಿದ್ದಾರೆ. ಅಂದಮೇಲೆ ಎಐಸಿಸಿ ಅಧ್ಯಕ್ಷರಾಗಿ ಖರ್ಗೆಯವರನ್ನು ಇವರು ನೇಮಕ ಮಾಡಿದ್ದೇಕೆʼʼ ಎಂದು ಕೇಳಿದರು.
ʻʻʻಖರ್ಗೆ ಅವರಿಗೆ ಅಧಿಕಾರ ಕೊಟ್ಟರೇ ಅಥವಾ ವಾಚ್‍ಮನ್ ಕೆಲಸ ಕೊಟ್ಟಿದ್ದಾರಾ ಎಂದು ಪ್ರಶ್ನೆಯನ್ನು ಮುಂದಿಟ್ಟರು. ಅವರ ಹೊಣೆಗಾರಿಕೆಯೇ ಅಥವಾ ವಾಚ್‍ಮನ್ ಕೆಲಸವೇ ಎಂಬ ಕುರಿತು ದೇಶವೇ ಪ್ರಶ್ನೆ ಮಾಡುತ್ತಿದೆ. ಇದಕ್ಕೆ ಉತ್ತರ ಕೊಡಿ. ದಲಿತ ಸಮುದಾಯಗಳಿಗೆ ಇದು ಅರ್ಥ ಆಗುತ್ತಿದೆʼʼ ಎಂದು ನುಡಿದರು.
ʻʻಖರ್ಗೆಯವರು ಕರ್ನಾಟಕದವರು. ಆದರೂ ಸಿದ್ದರಾಮಯ್ಯನವರು ರಾಹುಲ್ ಗಾಂಧಿಯವರೇ ಪ್ರಧಾನಿ ಆಗಲಿ ಎಂದಿದ್ದಾರೆ. ರಾಹುಲ್ ಗಾಂಧಿಯವರೇ ಸಿದ್ದರಾಮಯ್ಯನವರ ಮೂಲಕ ಈ ಮಾತು ಹೇಳಿಸಿದರೇ? ಅಥವಾ ಸಿದ್ದರಾಮಯ್ಯನವರೇ ದಲಿತರನ್ನು ತಪ್ಪಿಸಲು ಈ ಮಾತನಾಡಿದರೇʼʼ ಎಂದು ಸಂಶಯ ವ್ಯಕ್ತಪಡಿಸಿದರು. ಈ ಪ್ರಶ್ನೆಗಳಿಗೆ ಸಿದ್ದರಾಮಯ್ಯನವರು ಮತ್ತು ರಾಹುಲ್ ಗಾಂಧಿಯವರು ಉತ್ತರಿಸಲಿ ಎಂದು ಆಗ್ರಹಿಸಿದರು.
ಸ್ವಾಭಿಮಾನದ ರಕ್ತ ಹರಿಯುತ್ತಿದ್ದರೆ ರಾಜೀನಾಮೆ ಕೊಟ್ಟು ಹೊರಬನ್ನಿ..
ಕಾಂಗ್ರೆಸ್ ರಕ್ತದಲ್ಲೇ ದಲಿತ ವಿರೋಧಿ ನೀತಿ ಇರುವುದು ಈಗ ಸ್ಪಷ್ಟಗೊಂಡಿದೆ. ಖರ್ಗೆಯವರ ಜನ್ಮಭೂಮಿಯಲ್ಲಿ ಅವರನ್ನು ವಿರೋಧಿಸುವ ಸಿದ್ದರಾಮಯ್ಯನವರು ಇದ್ದಾರೆ. ಇದು ಖರ್ಗೆಯವರಿಗೂ ಅರ್ಥ ಆಗಿರಬೇಕು. ಖರ್ಗೆಯವರು ಅಂಬೇಡ್ಕರ್ ವಾದಿ ಆಗಿದ್ದರೆ, ಅವರಲ್ಲಿ ಸ್ವಾಭಿಮಾನದ ರಕ್ತ ಹರಿಯುತ್ತಿದ್ದರೆ, ಅವರು ಕಾಂಗ್ರೆಸ್ ಬಣ್ಣ ಬಯಲು ಮಾಡಲಿ; ರಾಜೀನಾಮೆ ಕೊಟ್ಟು ಹೊರಕ್ಕೆ ಬರಲಿ ಎಂದು ಛಲವಾದಿ ನಾರಾಯಣಸ್ವಾಮಿ ಅವರು ಸವಾಲೆಸೆದರು.
ನಂಬಿಕೆಗೆ ಅರ್ಹರಲ್ಲದ ಶಿಕ್ಷಣ ಸಚಿವ ಮಧು ಬಂಗಾರಪ್ಪ
ಶಿಕ್ಷಣ ಸಚಿವ ಮಧು ಬಂಗಾರಪ್ಪ ಅವರ ವಿಚಾರವೂ ಹರಿದಾಡುತ್ತಿದೆ. ಅವರು ಸುಮಾರು 6.50 ಕೋಟಿಗೂ ಹೆಚ್ಚು ಮೊತ್ತದ ಚೆಕ್ ಬೌನ್ಸ್ ಕೇಸಿನಲ್ಲಿ ಸಿಲುಕಿದ್ದಾರೆ. ಅವರು ನಂಬಿಕೆಗೆ ಅರ್ಹರಲ್ಲ ಎಂದು ಕೋರ್ಟೇ ಹೇಳಿದೆ. ಹಣ ಕೊಡಿ; ಇಲ್ಲವೇ 6 ತಿಂಗಳು ಜೈಲುವಾಸ ಅನುಭವಿಸಲು ಸೂಚಿಸಿದೆ. ಒಬ್ಬ ಶಿಕ್ಷಣ ಸಚಿವರು ನಂಬಿಕೆಗೆ ಅರ್ಹರಲ್ಲ ಎಂಬ ಪಟ್ಟ ಕಟ್ಟಿಕೊಂಡ ಮೇಲೆ ಅವರು ಶಿಕ್ಷಣ ಕ್ಷೇತ್ರದಲ್ಲಿ ಕೆಲಸ ಮಾಡಲು ಯೋಗ್ಯರಿದ್ದಾರಾ ಎಂದು ಕೇಳಿದರು. ಅವರು ತಕ್ಷಣ ರಾಜೀನಾಮೆ ಕೊಡಬೇಕೇ ಬೇಡವೇ ಎಂದು ಪ್ರಶ್ನೆಯನ್ನು ಮುಂದಿಟ್ಟರು. ರಾಜೀನಾಮೆ ಕೊಡಲೇಬೇಕು; ಈ ಸರಕಾರ ಎಮ್ಮೆ ಚರ್ಮದ ಸರಕಾರ; ಎಲ್ಲ ವಿಚಾರದಲ್ಲೂ ಮುಖ್ಯಮಂತ್ರಿಗಳು ಸಚಿವರನ್ನು ರಕ್ಷಿಸುವ ಕೆಲಸ ಮಾಡುತ್ತಿದ್ದಾರೆ ಎಂದು ದೂರಿದರು.
ಈ ವಿಚಾರದಲ್ಲಾದರೂ ಅವರ ರಾಜೀನಾಮೆ ಪಡೆಯಲಿ ಎಂದು ಮುಖ್ಯಮಂತ್ರಿಗಳನ್ನು ಆಗ್ರಹಿಸಿದರು. ಸಾವರ್ಕರ್ ಅವರ ಪಾಠವನ್ನು ಕಿತ್ತು ಬಿಸಾಡಿದ್ದಾಗಿ ಹೇಳಿದ್ದ ಶಿಕ್ಷಣ ಸಚಿವರು ಆ ಜಾಗದಲ್ಲಿ ಶಿಕ್ಷಣ ಸಚಿವ ಮಧು ಬಂಗಾರಪ್ಪ ಅವರ ಚೆಕ್ ಬೌನ್ಸ್ ಕೇಸಿನ ಪಾಠವನ್ನು ಸೇರಿಸುತ್ತಾರಾ ಎಂದು ವ್ಯಂಗ್ಯವಾಗಿ ಕೇಳಿದರು.
ಇದನ್ನೂ ಓದಿ : Congress Politics : ಪ್ರಧಾನಿ ಹುದ್ದೆಗೆ ಖರ್ಗೆ ಬದಲು ಬೇರೆ ವ್ಯಕ್ತಿ ಹೆಸರು ಹೇಳಿದ ಸಿದ್ದರಾಮಯ್ಯ!
ಜನರು ಬರ ಸಂಕಷ್ಟದಲ್ಲಿರುವಾಗಲೂ ಮುಸ್ಲಿಂ ಓಲೈಕೆ
ತೀವ್ರ ಬರಗಾಲವಿದ್ದರೂ ರೈತರು ಸೇರಿ ಜನರು ಸಂಕಷ್ಟದಲ್ಲಿದ್ದರೂ ಅವರಿಗೆ ಒಂದು ರೂಪಾಯಿ ನೀಡಿಲ್ಲ. ಆದರೆ, ಇವನ್ನೆಲ್ಲ ಬಿಟ್ಟು ಚುನಾವಣಾ ಓಲೈಕೆಗೆ ಮುಸಲ್ಮಾನರ ಕಾಲೋನಿಗಳ ಅಭಿವೃದ್ಧಿಗೆ ಒಂದು ಸಾವಿರ ಕೋಟಿ ನೀಡುವ ಪ್ರಕಟಣೆ ನೀಡಿದ್ದಾರೆ. ಇದು ಓಲೈಕೆ, ಜಾತಿವಾದ, ಧರ್ಮವಾದವಲ್ಲವೇ ಎಂದು ಕೇಳಿದರು. ಇದು ಕೋಮುವಾದಿತನವಲ್ಲವೇ? ಮುಖ್ಯಮಂತ್ರಿಯವರು ಇವತ್ತು ಸಂಪೂರ್ಣವಾಗಿ ಮುಸ್ಲಿಮರನ್ನು ಮಾತ್ರ ಓಲೈಸುತ್ತಿದ್ದಾರೆ. ದಲಿತರು, ಹಿಂದುಳಿದವರು ಎಲ್ಲರೂ ಸಂಕಷ್ಟದಲ್ಲಿದ್ದಾರೆ. ಮುಸ್ಲಿಮರನ್ನು ಮಾತ್ರ ರಕ್ಷಣೆ ಮಾಡಬೇಕೇ? ದಲಿತರು, ಹಿಂದುಳಿದವರು, ಹೆಣ್ಮಕ್ಕಳ ರಕ್ಷಣೆ ಬೇಡವೇ?- ಇವೆಲ್ಲಕ್ಕೂ ಈ ಸರಕಾರ ಉತ್ತರ ಕೊಡಲಿ ಎಂದು ಛಲವಾದಿ ನಾರಾಯಣ ಸ್ವಾಮಿ ಆಗ್ರಹಿಸಿದರು.