ಬೆಂಗಳೂರು: ವಿಧಾನಸಭೆ ಚುನಾವಣೆ ಸಲುವಾಗಿ ರಾಜ್ಯ ಬಿಜೆಪಿಯಿಂದ ಫೆಬ್ರವರಿ ಅಂತ್ಯಕ್ಕೆ ರಾಜ್ಯದ ನಾಲ್ಕೂ ದಿಕ್ಕುಗಳಿಂದ ರಥಯಾತ್ರೆ ಆಯೋಜಿಸಲು ರಾಜ್ಯ ಬಿಜೆಪಿ ( BJP Karnataka) ಅಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅಧ್ಯಕ್ಷತೆಯ ಸಭೆಯಲ್ಲಿ ಚರ್ಚೆ ನಡೆಸಲಾಗಿದೆ.
ರಾಜ್ಯ ಬಿಜೆಪಿ ಕಚೇರಿಯಲ್ಲಿ ಸಭೆಯ ನಂತರ ಮಾತನಾಡಿದ ಸಿಎಂ ಬಸವರಾಜ ಬೊಮ್ಮಾಯಿ, ಬಿಜೆಪಿ ಅಧ್ಯಕ್ಷರ ನೇತೃತ್ವದಲ್ಲಿ ಸಭೆ ನಡೆದಿದೆ. ಜನವರಿ ಹಾಗೂ ಫೆಬ್ರವರಿಯಲ್ಲಿ ಯಾವ ಕಾರ್ಯಕ್ರಮ ರೂಪಿಸಬೇಕು, ಅಧಿವೇಶನದ ಜತೆಗೇ ಪಕ್ಷ ಸಂಘಟನೆ ಚರ್ಚೆ ನಡೆದಿದೆ. ಅದರಲ್ಲಿ ಪ್ರಮುಖವಾಗಿ, ನಾಲ್ಕು ದಿಕ್ಕಿನಿಂದ ಯಾತ್ರೆ ಆರಂಭಿಸಬೇಕು. ಅದಕ್ಕೆ ರೂಪುರೇಷೆ ಸಿದ್ಧಪಡಿಸಬೇಕು. ಫೆಬ್ರವರಿ ಅಂತ್ಯದವರೆಗೆ ಜನಸಂಕಲ್ಪ ಸಮಾವೇಶ ಮುಂದುವರಿಸಬೇಕು ಎಂಬ ಚರ್ಚೆ ನಡೆದಿದೆ.
ಬಜೆಟ್ ಮುಕ್ತಾಯದ ನಂತರ ಯಾತ್ರೆ ಆರಂಭವಾಗುತ್ತದೆ. ಎಲ್ಲ ಜಿಲ್ಲೆಗಳಿಂದಲೂ ಮಾಹಿತಿ ಪಡೆದು ರಾಜ್ಯದ ಜತೆಗೆ ಜಿಲ್ಲಾ ಮಟ್ಟದ ಪ್ರಣಾಳಿಕೆಯನ್ನೂ ರೂಪಿಸಲಾಗುತ್ತದೆ. ಕೇಂದ್ರದ ನಾಯಕರೂ ಪ್ರವಾಸ ಮಾಡಲಿದ್ದಾರೆ. ಬೂತ್ ವಿಜಯ ಸಂಕಲ್ಪ ಯಾತ್ರೆ ಆರಂಭವಾಗಲಿದೆ. ಒಂದು ಕಡೆ ಜೆ.ಪಿ. ನಡ್ಡಾ ಅವರು, ಒಂದು ಕಟೀಲ್ ಸೇರಿ ಅನೇಕರು ಭಾಗವಹಿಸುತ್ತಾರೆ ಎಂದರು.
ರಾಜ್ಯ ಸರ್ಕಾರದ ಯೋಜನೆಗಳನ್ನು ಮನೆಮನೆಗೆ ಕೊಂಡೊಯ್ಯಬೇಕು. ಮೋರ್ಚಾಗಳ ಜಿಲ್ಲಾ ಮಟ್ಟದ ಸಮಾವೇಶನವನ್ನು ಮಾಡಬೇಕೆಂಬ ತೀರ್ಮಾನ ಆಗುತ್ತದೆ. ಪಟ್ಟಿ ಬಿಡುಗೆ ಮಾಡುವುದನ್ನು ಕೇಂದ್ರದ ಸಂಸದೀಯ ಮಂಡಳಿ ಸಭೆ ತೀರ್ಮಾನ ಮಾಡುತ್ತದೆ. ನಾವು ಸೇರಿರುವುದು ಪಕ್ಷ ಸಂಘಟನೆ ಹಾಗೂ ಚುನಾವಣಾ ತಯಾರಿಗೆ ಮಾತ್ರ ಎಂದರು.
ಯಡಿಯೂರಪ್ಪ ಅವರನ್ನು ಸಭೆಗೆ ಆಹ್ವಾನಿಸದೇ ಇರುವ ಬಗ್ಗೆ ಪ್ರತಿಕ್ರಿಯೆ ನೀಡಿ, ಇದು ಪ್ರಾಥಮಿಕ ಸಭೆ ಮಾತ್ರ. ಅಂತಿಮಗೊಳಿಸುವಾಗ ಯಡಿಯೂರಪ್ಪ ಅವರೊಂದಿಗೆ ಸಮಾಲೋಚನೆ ಮಾಡಲಾಗುತ್ತದೆ ಎಂದರು.
ಬಿಜೆಪಿ ಸಭೆಯ ಹೈಲೈಟ್ಸ್
- ಚುನಾವಣಾ ದೃಷ್ಟಿಯಿಂದ ಜನಪ್ರಿಯ ಬಜೆಟ್ ಕೊಡುವುದು – ಭರಪೂರ ಭರವಸೆ ನೀಡುವುದು – ಸಾಧ್ಯವಾದಷ್ಟು ಜನರಿಗೆ ಹಳೆಯ ಕಾರ್ಯಕ್ರಮ ರೀಚ್ ಮಾಡಿಸುವುದು
- ಕಾಂಗ್ರೆಸ್ ಬಸ್ ಯಾತ್ರೆಗೆ ತಿರುಗೇಟು ಕೊಡಲು ರಥಯಾತ್ರೆ – ರಾಜ್ಯದ ನಾಲ್ಕು ದಿಕ್ಕುಗಳಿಂದ ರಥಯಾತ್ರೆ – ನಾಲ್ಕು ಟೀಮ್ ರಚನೆ ಮಾಡುವುದು
- ಜಿಲ್ಲೆಗಳಿಂದ ಮಾಹಿತಿ ಸಂಗ್ರಹಿಸಿ ರಾಜ್ಯಕ್ಕೆ ಚುನಾವಣಾ ಪ್ರಣಾಳಿಕೆ ಸಿದ್ಧಪಡಿಸುವುದು
- ಜನಸಂಕಲ್ಪ ಯಾತ್ರೆಯನ್ನು ಮುಂದುವರಿಸುವುದು
- ರಾಜ್ಯಕ್ಕೆ ರಾಷ್ಟ್ರೀಯ ನಾಯಕರ ಕರೆಸಿ ಅಬ್ಬರದ ಪ್ರಚಾರ ಮಾಡಿಸುವುದು- ಸ್ಥಳ ಮತ್ತು ದಿನಾಂಕ ನಿಗದಿ ಮಾಡುವುದು
- ವಿಜಯ ಸಂಕಲ್ಪ ಅಭಿಯಾನ ಯಶಸ್ವಿ ಮಾಡುವುದು – ಬೂತ್ ಇನ್ನಷ್ಟು ಸದೃಢ ಮಾಡುವುದು
- ಅಭ್ಯರ್ಥಿಯ ಆಯ್ಕೆ ಪ್ರಕ್ರಿಯೆಯಲ್ಲಿ ಪಕ್ಷಕ್ಕೆ ದುಡಿದ ಸೇವೆ ಜತೆಗೆ ಗೆಲ್ಲುವ ಸಾಮರ್ಥ್ಯ ನೋಡುವುದು
- ಪ್ರಧಾನಿ ನರೇಂದ್ರ ಮೋದಿ ಕಾರ್ಯಕಾರಣಿಯಲ್ಲಿ ಹೇಳಿರುವ ವಿಚಾರಗಳನ್ನು ಯಥಾವತ್ತಾಗಿ ಜಾರಿ ಮಾಡುವುದು
- ಹಳೆ ಮೈಸೂರು ಭಾಗದಲ್ಲಿ ಕಾಂಗ್ರೆಸ್, ಜೆಡಿಎಸ್‌ನಿಂದ ಅಸಮಾಧಾನಗೊಂಡವರನ್ನು ಪಕ್ಷಕ್ಕೆ ಸೆಳೆಯುವುದು
- ಕೇಂದ್ರ ಮತ್ತು ರಾಜ್ಯ ಸರ್ಕಾರದ ಸಾಧನೆಗಳನ್ನು ಜನರಿಗೆ ಇನ್ನಷ್ಟು ಚುರುಕಾಗಿ ತಲುಪಿಸುವುದು
ಇದನ್ನೂ ಓದಿ | karnataka Election | ಕಾಂಗ್ರೆಸ್ ಬಸ್ ಯಾತ್ರೆಗೆ ಪ್ರತಿಯಾಗಿ ಬಿಜೆಪಿಯಿಂದ ರಥಯಾತ್ರೆ, ಬಜೆಟ್ ಅಧಿವೇಶನದ ಬಳಿಕ ಶುರು!