Site icon Vistara News

BJP Karnataka : ಲೋಕಸಭೆ ಗೆಲ್ಲುವವರೆಗೆ ವಿಶ್ರಾಂತಿ ಪ್ರಶ್ನೆಯೇ ಇಲ್ಲ; ಬಿವೈ ವಿಜಯೇಂದ್ರ

Karnataka BJP BY Vijayendra front

ಬೆಂಗಳೂರು: ನಮ್ಮ ಮುಂದಿರುವ ಗುರಿ ಲೋಕಸಭಾ ಚುನಾವಣೆ (Parliamentary Election 2024). ಆ ಲೋಕಸಭಾ ಚುನಾವಣೆ ಆಗುವವರೆಗೂ ನಾವು ವಿಶ್ರಾಂತಿ ಪಡೆಯುವ, ಮನೆಯಲ್ಲಿ ಕುಳಿತುಕೊಳ್ಳುವ ಸಂದರ್ಭ ಉದ್ಭವಿಸಬಾರದು ಎಂದು ಎಂದು ಬಿಜೆಪಿ ರಾಜ್ಯಾಧ್ಯಕ್ಷ ಮತ್ತು ಶಾಸಕ ಬಿ.ವೈ.ವಿಜಯೇಂದ್ರ (BY Vijayendra) ಅವರು ಹೇಳಿದರು. ನಮ್ಮ ಎದುರಾಳಿಗಳನ್ನು ಹಗುರವಾಗಿ ತೆಗೆದುಕೊಳ್ಳದೆ, ನಮ್ಮ ಸಾಧನೆಗಳನ್ನು ಜನರ ಮುಂದಿಟ್ಟು, ಹಗಲು ರಾತ್ರಿ ಪಕ್ಷದ ಗೆಲುವಿಗಾಗಿ ಶ್ರಮ ಹಾಕಬೇಕಾಗಿದೆ (BJP Karnataka) ಎಂದು ಎಚ್ಚರಿಸಿದರು.

ನಗರದ ಅರಮನೆ ಮೈದಾನದಲ್ಲಿ ಶನಿವಾರ (ಜನವರಿ 27) ಆರಂಭವಾದ ರಾಜ್ಯ ಬಿಜೆಪಿ ವಿಶೇಷ ಕಾರ್ಯಕಾರಿಣಿಯ (BJP State Executive) ಉದ್ಘಾಟನಾ ಕಾರ್ಯಕ್ರಮದಲ್ಲಿ ಬಿ.ವೈ ವಿಜಯೇಂದ್ರ ಅವರು ಮಾತನಾಡಿದರು. ಒಂದು ಕಡೆ ಲೋಕಸಭಾ ಚುನಾವಣೆ ಬರುತ್ತಿದೆ. ಇನ್ನೊಂದೆಡೆ ನೂರಾರು ವರ್ಷಗಳ ತಪಸ್ಸಿನ ಫಲವಾಗಿ ಮೊನ್ನೆ ದಿನ ಜನವರಿ 22ರಂದು ನಮ್ಮ ದೇಶದ ಹೆಮ್ಮೆಯ ಪ್ರಧಾನಿ ನರೇಂದ್ರ ಮೋದಿಯವರ ನೇತೃತ್ವದಲ್ಲಿ ಅಯೋಧ್ಯೆಯಲ್ಲಿ ಶ್ರೀರಾಮನ ಪ್ರಾಣಪ್ರತಿಷ್ಠೆ ಆಗಿರುವ ಶುಭ ಘಳಿಗೆಯಲ್ಲಿ ನಾವೆಲ್ಲ ಇಲ್ಲಿ ಸೇರಿದ್ದೇವೆ ಎಂದು ತಿಳಿಸಿದರು. ಆದರೆ, ಯಾವ ಶುಭ ಘಳಿಗೆಯಲ್ಲಿ ನಾವೆಲ್ಲ ಇದ್ದೇವೆ ಎಂದರೆ, ಕಳೆದ ಹಲವಾರು ದಶಕಗಳಿಂದ ನಿರಂತರವಾದ ಹೋರಾಟ. ಪ್ರಭು ಶ್ರೀರಾಮಚಂದ್ರನ ಮಂದಿರ ಲೋಕಾರ್ಪಣೆಗೆ ನಿರಂತರ ಹೋರಾಟ ನಡೆದಿತ್ತು ಎಂದು ನೆನಪಿಸಿದರು.

ಶ್ರೀರಾಮನ ಪ್ರಾಣ ಪ್ರತಿಷ್ಠಾಪನೆಯಿಂದ ಕೋಟ್ಯಂತರ ಹಿಂದೂಗಳು ಕುಣಿದು ಕುಪ್ಪಳಿಸುವ ವಾತಾವರಣ ದೇಶದೆಲ್ಲೆಡೆ ಇದೆ. ಇಂಥ ಶುಭ ಸಂದರ್ಭದಲ್ಲಿ ಕೇಂದ್ರದಲ್ಲಿ ಮೋದಿಯವರ ನೇತೃತ್ವದಲ್ಲಿ ಬಿಜೆಪಿ ಸರಕಾರವಿದ್ದು, ಕಳೆದ ಒಂಬತ್ತೂವರೆ ವರ್ಷಗಳಲ್ಲಿ ಅದು ಸ್ಪಷ್ಟ ವಿಚಾರಗಳನ್ನು ಮುಂದಿಟ್ಟುಕೊಂಡು, ಭ್ರಷ್ಟಾಚಾರಕ್ಕೆ ಅವಕಾಶ ಕೊಡದೆ ಉತ್ತಮ ಆಡಳಿತ ಕೊಟ್ಟಿದೆ. ಜೊತೆಜೊತೆಗೇ ಈ ದೇಶವನ್ನು ಜಗತ್ತಿನ ಅಗ್ರಗಣ್ಯ ರಾಷ್ಟ್ರಗಳ ಸಾಲಿನಲ್ಲಿ ತೆಗೆದುಕೊಂಡು ಹೋಗುವ ಕೆಲಸವನ್ನು ಸನ್ಮಾನ್ಯ ನರೇಂದ್ರ ಮೋದಿಯವರ ನೇತೃತ್ವದಲ್ಲಿ ಆಗುತ್ತಿದೆ ಎಂದು ವಿಶ್ಲೇಷಿಸಿದರು.

BJP Karnataka : ಬಿಜೆಪಿ ಕಾರ್ಯಕರ್ತರಿಂದ, ಕಾರ್ಯಕರ್ತರಿಗಾಗಿ ಕಾರ್ಯಕರ್ತರಿಗೋಸ್ಕರ

ಒಂದು ದಿನವೂ ವಿಶ್ರಾಂತಿಯನ್ನು ತೆಗೆದುಕೊಳ್ಳದೆ, ನಮ್ಮ ಪ್ರಧಾನಮಂತ್ರಿಗಳು ದೇಶದ ಎಲ್ಲ ಕ್ಷೇತ್ರಗಳಲ್ಲಿ ಅಭಿವೃದ್ಧಿ ಮಾಡಿದ್ದಾರೆ. ಈ ಮೂಲಕ ಇವತ್ತು ಭಾರತವನ್ನು ಮುನ್ನಡೆಸುವ ಕೆಲಸ ಮಾಡುತ್ತಿದ್ದಾರೆ. ಬಿಜೆಪಿ ಕಾರ್ಯಕರ್ತರಿಂದ, ಕಾರ್ಯಕರ್ತರಿಗಾಗಿ, ಕಾರ್ಯಕರ್ತರಿಗೋಸ್ಕರ ಇರುವ ಪಕ್ಷ ಎಂದು ವಿವರಿಸಿದರು.

ಜಮ್ಮು ಕಾಶ್ಮೀರವು ಹಲವಾರು ವರ್ಷಗಳಿಂದ ಉಗ್ರಗಾಮಿಗಳ ಚಟುವಟಿಕೆಯಿಂದ ತತ್ತರಿಸಿ ಹೋಗಿತ್ತು. ಅಲ್ಲಿದ್ದ ಆರ್ಟಿಕಲ್ 370 ರದ್ದುಪಡಿಸಿದರೆ ಅಲ್ಲೋಲಕಲ್ಲೋಲ ಆಗಲಿದೆ ಎಂದು ಬಿಂಬಿಸುವ ಕೆಲಸ ಕಾಂಗ್ರೆಸ್‍ನಿಂದ ಆಗಿತ್ತು. ನರೇಂದ್ರ ಮೋದಿಯವರ ದಿಟ್ಟ ನಾಯಕತ್ವ ಮತ್ತೊಂದು ಕಡೆ ಹೆಮ್ಮೆಯ ಗೃಹ ಸಚಿವ ಅಮಿತ್ ಶಾ ಜೀ ಅವರ ದಿಟ್ಟ ನಿರ್ಧಾರದಿಂದ ಆರ್ಟಿಕಲ್ 370 ರದ್ದು ಮಾಡುವ ಮೂಲಕ ಅಲ್ಲಿದ್ದ ಉಗ್ರಗಾಮಿ ಚಟುವಟಿಕೆಗಳಿಗೆ ಆರ್ಥಿಕ ಶಕ್ತಿ ಕೊಡುವುದನ್ನೂ ಬುಡಸಮೇತ ಕಿತ್ತು ಹಾಕುವ ಕೆಲಸ ಆಗಿದೆ ಎಂದು ಬಿವೈ ವಿಜಯೇಂದ್ರ ಮೆಚ್ಚುಗೆ ಸೂಚಿಸಿದರು.

BJP Karnataka : ರಾಮ ಮಂದಿರ ವಿಚಾರದಲ್ಲಿ ಬಿಜೆಪಿ ದ್ವಂದ್ವ

ಇವತ್ತು ಒಂದು ಕಡೆ ಅಯೋಧ್ಯೆಯಲ್ಲಿ ರಾಮಮಂದಿರ ಪ್ರತಿಷ್ಠಾಪನೆ ಆದರೆ, ಕಾಂಗ್ರೆಸ್ ಪಕ್ಷದ ನಡವಳಿಕೆಯನ್ನು ನೀವು ನೋಡಿದ್ದೀರಿ. ರಾಜ್ಯದ ಕಾಂಗ್ರೆಸ್ಸಿವರು ಆಮಂತ್ರಣ ಬಂದಿಲ್ಲ ಎಂದು ಬೊಬ್ಬೆ ಹೊಡೆಯುತ್ತಿದ್ದರೆ, ಕೇಂದ್ರದ ಕಾಂಗ್ರೆಸ್ ಮುಖಂಡರು ಆಮಂತ್ರಣ ಧಿಕ್ಕರಿಸಿ ಅಯೋಧ್ಯೆಗೆ ಹೋಗುವುದಿಲ್ಲ ಎಂಬ ತೀರ್ಮಾನ ಮಾಡಿದ್ದರು. ರಾಜ್ಯದ ಕಾಂಗ್ರೆಸ್ ಸರಕಾರ ದ್ವಂದ್ವ ನಿಲುವನ್ನು ತೆಗೆದುಕೊಂಡಿದೆ ಎಂದು ಬಿವೈ ವಿಜಯೇಂದ್ರ ಆಕ್ಷೇಪಿಸಿದರು.

ಇದನ್ನೂ ಓದಿ: BJP Karnataka : ಬಿಜೆಪಿ ಕಾರ್ಯಕಾರಿಣಿ ಆರಂಭ; 28ಕ್ಕೆ 28 ಗೆಲ್ಲಲೇ ಬೇಕು ಎಂದ ಬಿಎಸ್‌ವೈ

ಒಂದು ಕಡೆ ಅಯೋಧ್ಯೆ ವಿಚಾರದಲ್ಲಿ ಜನರೆಲ್ಲರೂ ಸಂತೋಷದಿಂದಿದ್ದರೆ, ರಾಜ್ಯದಲ್ಲಿದ್ದ ದುಷ್ಟ ಕಾಂಗ್ರೆಸ್ ಸರಕಾರವು, ಹುಬ್ಬಳ್ಳಿಯ ಶ್ರೀಕಾಂತ ಪೂಜಾರಿಯವರನ್ನು ಬಂಧಿಸಿ ಸೇಡು ತೀರಿಸುವ ಕೆಲಸ ಮಾಡಿದೆ. ಸರಕಾರ ಬಂದು 8 ತಿಂಗಳಾದರೂ ಸಹ ಕಾನೂನು- ಸುವ್ಯವಸ್ಥೆ ಸಂಪೂರ್ಣ ಹದಗೆಟ್ಟಿದೆ. ಮತ್ತೊಂದು ಕಡೆ ಬರದ ವಿಚಾರದಲ್ಲಿ ಕಾಂಗ್ರೆಸ್ ಸರಕಾರ ರೈತರ ಸಂಕಷ್ಟಕ್ಕೆ ಸ್ಪಂದನೆ ಮಾಡದೆ ಇದೆ. ರೈತರು ಭೀಕರ ಬರಗಾಲಕ್ಕೆ ತುತ್ತಾಗಿ ಸಂಕಷ್ಟದಲ್ಲಿರುವ ಸಂದರ್ಭದಲ್ಲಿ ಕೂಡ ಅದು ಎಚ್ಚತ್ತಿಲ್ಲ ಎಂದು ಟೀಕಿಸಿದರು ಬಿವೈ ವಿಜಯೇಂದ್ರ.

ಕೇಂದ್ರೀಯ ಸಂಸದೀಯ ಮಂಡಳಿ ಸದಸ್ಯ ಮತ್ತು ರಾಜ್ಯದ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ, ಕೇಂದ್ರ ಸಚಿವರಾದ ಭೂಪೇಂದ್ರ ಯಾದವ್, ಪ್ರಲ್ಹಾದ್ ಜೋಶಿ, ರಾಜೀವ್ ಚಂದ್ರಶೇಖರ್, ಭಗವಂತ ಖೂಬಾ, ವಿಧಾನಸಭೆಯ ವಿರೋಧ ಪಕ್ಷದ ನಾಯಕ ಆರ್. ಅಶೋಕ್, ರಾಜ್ಯದ ಮಾಜಿ ಮುಖ್ಯಮಂತ್ರಿಗಳಾದ ಬಸವರಾಜ ಬೊಮ್ಮಾಯಿ, ಡಿ.ವಿ.ಸದಾನಂದಗೌಡ, ಜಗದೀಶ್ ಶೆಟ್ಟರ್, ರಾಜ್ಯದ ಮಾಜಿ ಉಪಮುಖ್ಯಮಂತ್ರಿಗಳಾದ ಡಾ. ಸಿ.ಎನ್. ಅಶ್ವತ್ಥನಾರಾಯಣ್, ಗೋವಿಂದ ಕಾರಜೋಳ, ಕೆ.ಎಸ್.ಈಶ್ವರಪ್ಪ, ನಿಕಟಪೂರ್ವ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ. ರವಿ, ಬಿಜೆಪಿ ನಿಕಟಪೂರ್ವ ರಾಜ್ಯಾಧ್ಯಕ್ಷ ಮತ್ತು ಸಂಸದ ನಳಿನ್‍ಕುಮಾರ್ ಕಟೀಲ್, ವಿಧಾನಪರಿಷತ್ ವಿಪಕ್ಷ ನಾಯಕ ಕೋಟ ಶ್ರೀನಿವಾಸ ಪೂಜಾರಿ, ಮತ್ತು ಪ್ರಮುಖರು ಉಪಸ್ಥಿತರಿದ್ದರು.

Exit mobile version