ಬೆಂಗಳೂರು: ಸುಮಾರು 400 ಕೋಟಿ ರೂ. ಮೌಲ್ಯದ ಸರ್ಕಾರದ ಭೂಮಿಯನ್ನು, ಅಧಿಕಾರಿಗಳ ಮೇಲೆ ಪ್ರಭಾವ ಬೀರಿ ಖಾಸಗಿಯವರಿಗೆ ನೀಡಲು ಸಹಕರಿಸಿದ್ದಾರೆ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ವಿರುದ್ಧ ಬಿಜೆಪಿ ಬೆಂಗಳೂರು ದಕ್ಷಿಣ ಅಧ್ಯಕ್ಷ ಎನ್. ಆರ್. ರಮೇಶ್ ಲೋಕಾಯುಕ್ತದಲ್ಲಿ ದೂರು ದಾಖಲಿಸಿದ್ದಾರೆ.
ಈ ಕುರಿತು ಮಾಜಿ ಸಿಎಂ ಸಿದ್ದರಾಮಯ್ಯ ಜತೆಗೆ ಬಿಡಿಎ, ನಗರಾಭಿವೃದ್ಧಿ ಅಧಿಕಾರಿಗಳು, ಭೂಮಿಯನ್ನು ಅಕ್ರಮವಾಗಿ ಪರಭಾರೆ ಮಾಡಿಕೊಂಡ ಖಾಸಗಿ ವ್ಯಕ್ತಿಗಳ ವಿರುದ್ಧ ಪ್ರಕರಣ ದಾಖಲಿಸಿ ವಿಚಾರಣೆ ನಡೆಸಬೇಕು ಎಂದು ದೂರಿನಲ್ಲಿ ಎನ್.ಆರ್. ರಮೇಶ್ ಆಗ್ರಹಿಸಿದ್ದಾರೆ.
ದೂರಿನ ಸಾರಾಂಶ
RMV 2ನೇ ಹಂತದ ಬಡಾವಣೆ ನಿರ್ಮಾಣಕ್ಕೆಂದು 1984 ರಲ್ಲಿ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರವು(ಬಿಡಿಎ) ಭೂಪಸಂದ್ರ ಗ್ರಾಮದ ಪ್ರದೇಶಗಳನ್ನು ಭೂಸ್ವಾಧೀನಪಡಿಸಿಕೊಂಡಿತ್ತು.
ಭೂಪಸಂದ್ರ ಗ್ರಾಮದ ಸರ್ವೆ ನಂ. 20 ರಲ್ಲಿನ 03.34 ಎಕರೆ, ಸರ್ವೆ ನಂ. 21 ರಲ್ಲಿ 02.32 ಎಕರೆ ಸೇರಿ ಒಟ್ಟು 06.26 ಎಕರೆ ಜಮೀನಿಗೆ ಭೂಸ್ವಾಧೀನ ಪ್ರಕ್ರಿಯೆ ಮುಗಿಸಿತ್ತು. ಸಂಬಂಧಪಟ್ಟ ಭೂ ಮಾಲೀಕರಿಗೆ ಸಲ್ಲಬೇಕಾದ ಪರಿಹಾರದ ಮೊತ್ತವನ್ನು ನಗರ ಸಿವಿಲ್ ನ್ಯಾಯಾಲಯದಲ್ಲಿ ಠೇವಣಿ ಇಡಲಾಗಿತ್ತು. ನಂತರ ಸ್ವತ್ತುಗಳು ಬಿಡಿಎ ಹೆಸರಿಗೆ ವರ್ಗಾವಣೆಗೊಂಡಿದ್ದವು.
ತಾನು ಕಾನೂನು ರೀತ್ಯಾ ಭೂ ಸ್ವಾಧೀನಪಡಿಸಿಕೊಂಡ ಸ್ವತ್ತುಗಳನ್ನು ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರವು ತನ್ನ ಎಂಜಿನಿಯರಿಂಗ್ ಇಲಾಖೆಯ ಮೂಲಕ ಕೋಟ್ಯಾಂತರ ರೂಪಾಯಿ ವೆಚ್ಚ ಮಾಡಿ ಬಡಾವಣೆ ನಿರ್ಮಾಣಕ್ಕೆ ಬೇಕಾದ ಮೂಲ ಸೌಕರ್ಯಗಳನ್ನೂ ನಿರ್ಮಿಸಿ, 42 ಅರ್ಜಿದಾರರಿಗೆ ಹಂಚಿಕೆ ಮಾಡಿ ʼಸ್ವಾಧೀನ ಪತ್ರʼವನ್ನು ನೀಡಿ, ಹಂಚಿಕೆದಾರರಿಗೆ ಆಯಾ ನಿವೇಶನಗಳ ಸುಪರ್ದನ್ನು ನೀಡಿತ್ತು.
ಈ ಎಲ್ಲಾ ಕಾನೂನು ಪ್ರಕ್ರಿಯೆ ಮುಗಿದ ನಂತರ, ಪರಿಹಾರದ ಮೊತ್ತವನ್ನು ಪಡೆದಿದ್ದ ಜಮೀನಿನ ಮಾಲೀಕರು ಅತಿಯಾದ ದುರಾಸೆಯಿಂದ, ಡಿನೋಟಿಫಿಕೇಷನ್ ಮಾಡಲು ಹೈಕೋರ್ಟ್ ಮತ್ತು ಸುಪ್ರೀಂಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿದರು. ತೀರ್ಪು ಬಿಡಿಎ ಪರವಾಗಿ ಬಂದರೂ, ಜಮೀನಿಗೆ ಯಾವುದೇ ಸಂಬಂಧ ಇಲ್ಲದಂತಹ ವ್ಯಕ್ತಿಗಳು (ಕೆ. ವಿ. ಜಯಲಕ್ಷ್ಮಮ್ಮ, ಎಸ್. ಎನ್. ವಿಜಯಲಕ್ಷ್ಮಿ ಮತ್ತು ಕೆ. ವಿ. ಪ್ರಭಾಕರ್) ಕೀರ್ತಿ ರಾಜ್ ಶೆಟ್ಟಿ ಎನ್ನುವವರು ಕಾನೂನು ಬಾಹಿರವಾಗಿ GPA ಪಡೆದು ಹೈಕೋರ್ಟ್‌ನಲ್ಲಿ ಮೊಕದ್ದಮೆ ದಾಖಲಿಸಿದರು. ಈ ಸಂದರ್ಭದಲ್ಲಿ ಪ್ರಕರಣದ ತೀರ್ಪು ಸರ್ಕಾರಕ್ಕೆ ವ್ಯತಿರಿಕ್ತವಾಗಿತ್ತು.
ಬಿಡಿಎ ತನ್ನ ನಿಲುವನ್ನು ಸಮರ್ಥನೆ ಮಾಡಿಕೊಂಡು ಮೇಲ್ಮನವಿ ಸಲ್ಲಿಸಿದರೂ ರಾಜ್ಯ ಸರ್ಕಾರದ ನಗರಾಭಿವೃದ್ಧಿ ಇಲಾಖೆಯು ಉಚ್ಛ ನ್ಯಾಯಾಲಯದ ಈ ಆದೇಶವನ್ನು ಪ್ರಶ್ನಿಸಿ ಯಾವುದೇ ಮೇಲ್ಮನವಿಯನ್ನು ಸಲ್ಲಿಸಲಿಲ್ಲ. ಅರ್ಜಿದಾರರಾಗಿದ್ದ ಕೆ. ವಿ. ಜಯಲಕ್ಷ್ಮಮ್ಮ, ಎಸ್. ಎನ್. ವಿಜಯಲಕ್ಷ್ಮಿ, ಕೆ. ವಿ. ಪ್ರಭಾಕರ್ ಮತ್ತು ಇವರುಗಳಿಂದ ಕಾನೂನು ಬಾಹಿರವಾಗಿ GPA ಪಡೆದಿರುವ ಕೀರ್ತಿ ರಾಜ್ ಶೆಟ್ಟಿ ಅವರುಗಳಿಗೆ ಸಹಾಯ ಮಾಡಲೇಬೇಕೆಂದು ಸಿದ್ದರಾಮಯ್ಯ ನಿರ್ಧರಿಸಿದ್ದರು. ಅಂದಿನ ನಗರಾಭಿವೃದ್ಧಿ ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿ ಮಹೇಂದ್ರ ಜೈನ್, ಅಧೀನ ಕಾರ್ಯದರ್ಶಿ ಎನ್. ನರಸಿಂಹಮೂರ್ತಿ, ನಗರಾಭಿವೃದ್ಧಿ ಇಲಾಖೆಯ ಕಾನೂನು ಕೋಶದ ಅಧಿಕಾರಿ ಎರ್ಮಲ್ ಕಲ್ಪನಾ, ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ಆಯುಕ್ತ ಶಾಂಭಟ್ ಮತ್ತು ಬೆಂಗಳೂರು ಉತ್ತರ ತಾಲ್ಲೂಕಿನ ವಿಶೇಷ ತಹಶೀಲ್ದಾರ್ ಮೇಲೆ ತಮ್ಮ ಪ್ರಭಾವವನ್ನು ಬಳಸಿ ನಗರಾಭಿವೃದ್ಧಿ ಇಲಾಖೆ ಉಚ್ಛ ನ್ಯಾಯಾಲಯದ ಆದೇಶವನ್ನು ಪ್ರಶ್ನಿಸಿ ಯಾವುದೇ ಮೇಲ್ಮನವಿಯನ್ನು ಸಲ್ಲಿಸದಂತೆ ಕೆಲಸ ಮಾಡಿರುವುದು ಅತ್ಯಂತ ಸ್ಪಷ್ಟವಾಗಿರುತ್ತದೆ ಎಂದು ಎನ್.ಆರ್. ರಮೇಶ್ ಆರೋಪಿಸಿದ್ದಾರೆ.
ಪ್ರಭಾವಶಾಲಿ ಮೂರನೇ ವ್ಯಕ್ತಿಗಳಿಗೆ ಅತ್ಯಂತ ಆತ್ಮೀಯರಾಗಿದ್ದ ಮಾಜಿ ಶಾಸಕ ವಸಂತ್ ಬಂಗೇರ, ಅಂದಿನ ಮುಖ್ಯಮಂತ್ರಿ ಸಿದ್ಧರಾಮಯ್ಯ ಮತ್ತು ಅರ್ಜಿದಾರರ ನಡುವಿನ ಮಧ್ಯವರ್ತಿಗಳಾಗಿ ಕಾರ್ಯ ನಿರ್ವಹಿಸಿದ್ದರು ಎಂದಿರುವ ಎನ್ ಆರ್ ರಮೇಶ್, ಸರ್ಕಾರವು ಈ ರೀತಿಯ ಆದೇಶ ನೀಡಲು ಕಾನೂನಿನ ಅಡಿಯಲ್ಲಿ ಅವಕಾಶ ಇರುವುದಿಲ್ಲ. ಮುಂದಿನ ದಿನಗಳಲ್ಲಿ ತಾವು ಮಾಡಿದ ಇಂತಹ ಕಾನೂನು ಬಾಹಿರ ಕಾರ್ಯ ಒಂದು ವೇಳೆ ಹೊರಬಂದರೂ ಸಹ ತಾವು ಇದರಲ್ಲಿ ಸಿಕ್ಕಿ ಹಾಕಿಕೊಳ್ಳದಂತೆ ಅತ್ಯಂತ ನಾಜೂಕಾಗಿ ನಗರಾಭಿವೃದ್ಧಿ ಇಲಾಖೆಯ ಕಾನೂನು ಕೋಶದ ಅಧಿಕಾರಿಯ ಮೂಲಕ ಅಂದಿನ ಸಿಎಂ ಸಿದ್ಧರಾಮಯ್ಯ ಕಾನೂನನ್ನು ತಮಗೆ ಬೇಕಾದ ರೀತಿಯಲ್ಲಿ ಬಳಸಿಕೊಂಡಿರುವುದು ಅತ್ಯಂತ ಸ್ಪಷ್ಟವಾಗಿರುತ್ತದೆ.
ತಮ್ಮ ಅಧಿಕಾರವನ್ನು ದುರುಪಯೋಗಪಡಿಸಿಕೊಂಡು ಸರ್ಕಾರದ ಸ್ವತ್ತು ನಷ್ಟ ಉಂಟಾಗಲು ಕಾರಣಕರ್ತರಾಗುವ ಮೂಲಕ ಮತ್ತು ಭ್ರಷ್ಟಾಚಾರ ನಡೆಸಿ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ 400 ಕೋಟಿ ರೂ.ಗೂ ಹೆಚ್ಚು ಮೌಲ್ಯದ ಸ್ವತ್ತು ಹೋಗಲು ಕಾರಣಕರ್ತರಾಗಿರುವ ಸಿದ್ಧರಾಮಯ್ಯ, ಮಹೇಂದ್ರ ಜೈನ್, ಎನ್. ನರಸಿಂಹಮೂರ್ತಿ, ಎರ್ಮಲ್ ಕಲ್ಪನಾ, ಶಾಂಭಟ್, ಅಂದಿನ ಬೆಂಗಳೂರು ಉತ್ತರ ತಾಲ್ಲೂಕಿನ ವಿಶೇಷ ತಹಶೀಲ್ದಾರ್, ಕೆ. ವಿ. ಜಯಲಕ್ಷ್ಮಮ್ಮ, ಎಸ್. ಎನ್. ವಿಜಯಲಕ್ಷ್ಮಿ, ಕೆ. ವಿ. ಪ್ರಭಾಕರ್, ಕೀರ್ತಿ ರಾಜ್ ಶೆಟ್ಟಿ ವಿರುದ್ಧ ಕಾನೂನು ರೀತ್ಯಾ ಕ್ರಮ ತೆಗೆದುಕೊಳ್ಳಬೇಕೆಂದು ಎನ್.ಆರ್. ರಮೇಶ್ ಆಗ್ರಹಿಸಿದ್ದಾರೆ.
ಇದನ್ನೂ ಓದಿ | Election 2023 | ಕೊನೆಗೂ ಕಾಂಗ್ರೆಸ್ ಟಿಕೆಟ್ ಪಡೆಯಲು ಅರ್ಜಿ ಸಲ್ಲಿಸಿದ ಸಿದ್ದರಾಮಯ್ಯ: ಒಂದೇ ಕ್ಷೇತ್ರದಿಂದ ಸ್ಪರ್ಧೆ