ಬೆಂಗಳೂರು: ರಾಮ ಮಂದಿರ ಲೋಕಾರ್ಪಣೆಯ (Rama Mandir) ಸಂದರ್ಭದಲ್ಲಿ ರಾಜ್ಯದಲ್ಲಿ ಗೋಧ್ರಾ ಮಾದರಿ ಹಿಂಸಾಚಾರ (Godhra type Violence) ನಡೆಯುವ ಸಾಧ್ಯತೆ ಇದೆ ಎಂಬ ಹೇಳಿಕೆ ನೀಡಿ ವಿವಾದಕ್ಕೆ ಸಿಲುಕಿರುವ ಕಾಂಗ್ರೆಸ್ ನಾಯಕ ಬಿ.ಕೆ. ಹರಿಪ್ರಸಾದ್ (BK Hariprasad) ಅವರು ಮತ್ತೆ ಸಿಎಂ ಸಿದ್ದರಾಮಯ್ಯ (CM siddaramaiah) ಅವರನ್ನು ಗುರಿಯಾಗಿಸಿ ಬಾಣ ಬಿಟ್ಟಿದ್ದಾರೆ.
ನನ್ನ ವಿಚಾರಣೆ ನಡೆಸುವ ಬಗ್ಗೆ ಸಿಎಂ ಸಿದ್ದರಾಮಯ್ಯ ಅವರಿಗೆ ಮಾಹಿತಿ ನೀಡಿರುವುದಾಗಿ ಪೊಲೀಸರು ಹೇಳುತ್ತಾರೆ, ಈ ವಿಚಾರಗಳೆಲ್ಲ ಗೃಹಸಚಿವರಿಗೆ ಗೊತ್ತಿದ್ದಂತಿಲ್ಲ ಎಂದು ಹೇಳಿದ ಬಿ.ಕೆ. ಹರಿಪ್ರಸಾದ್ ಅವರು, ಸಿಸಿಬಿ ವಿಚಾರಣೆ ವಿಚಾರದಲ್ಲಿ ನಾನು ಸಿದ್ದರಾಮಯ್ಯ ಅವರ ವಿರುದ್ಧ ಮಾತನಾಡಿಲ್ಲ. ಹೀಗಿರುವಾಗ ಕುಂಬಳಕಾಯಿ ಎಂದರೆ ಹೆಗಲು ಮುಟ್ಟಿಕೊಂಡರೆ ಹೇಗೆ? ಎಂದು ಪ್ರಶ್ನೆ ಮಾಡಿದ್ದಾರೆ.
ಬೆಂಗಳೂರಿನಲ್ಲಿ ಶನಿವಾರ ಮಾಧ್ಯಮಗಳ ಜತೆ ಮಾತನಾಡಿದ ಅವರು, ಸಿಸಿಬಿ ಪೊಲೀಸರ ವಿಚಾರಣೆ ಕುರಿತಾಗಿ, ರಾಜ್ಯಪಾಲರಿಗೆ ಬಿಜೆಪಿಯವರು ದೂರು ಕೊಟ್ಟಿದ್ದರು. ವಿಚಾರಣೆ ಮಾಡಿ ತಿಳಿಸಿ ಎಂದು ರಾಜ್ಯಪಾಲರು ಹೇಳಿರಬೇಕು. ಹಾಗಾಗಿ ಇಷ್ಟೊಂದು ಕ್ಷಿಪ್ರವಾಗಿ ಇದು ಬಂದಿದೆ.
ರಾಜ್ಯಪಾಲರಿಂದ ಶಿಷ್ಟಾಚಾರದ ಉಲ್ಲಂಘನೆ
ದೂರು ಕೊಟ್ಟಿದ್ದರಲ್ಲಿ ತಪ್ಪಿಲ್ಲ, ರಾಜ್ಯಪಾಲರು ಕೇಳಿದ್ದರೆ ಅದರಲ್ಲೂ ತಪ್ಪಿಲ್ಲ. ನಿಜವಾಗಿ ಎಲ್ಲ ಪ್ರಕರಣಗಳು ಹೀಗೆ ಆದರೆ ಉತ್ತಮ. ನಮಗೆ ಮಾತ್ರ ಆದರೆ ಯಾಕೆ ಹೀಗೆ ಎಂದು ಪ್ರಶ್ನೆ ಮಾಡಬೇಕಾಗುತ್ತದೆ, ಉತ್ತರ ಹುಡುಕಬೇಕಾಗುತ್ತದೆ. ರಾಜ್ಯಪಾಲರು ಸಂವಿಧಾನದ ಒಂದು ಅಂಗ ಇದ್ದಂತೆ. ನಾನು ಪರಿಷತ್ ಸದಸ್ಯ, ನನ್ನ ವಿಚಾರಣೆಗೆ ಸಭಾಪತಿ ಅವರ ಅನುಮತಿ ತೆಗೆದುಕೊಳ್ಳಬೇಕಿತ್ತು. ಆದರೆ ಇಲ್ಲಿ, ಶಿಷ್ಟಾಚಾರದ ಉಲ್ಲಂಘನೆ ಕೂಡ ಆಗಿದೆ ಎಂದು ಹರಿಪ್ರಸಾದ್ ಹೇಳಿದರು.
ಈ ವಿಚಾರವಾಗಿ ನಾವು ಸಿಎಂ ಸಿದ್ದರಾಮಯ್ಯ ಅವರ ಗಮನಕ್ಕೆ ತಂದಿದ್ದೇವೆ ಅಂತ ಪೊಲೀಸರು ಹೇಳಿದ್ದಾರೆ. ಆದರೆ ಇದು ಗೃಹ ಸಚಿವರ ಗಮನಕ್ಕೆ ಬಂದಿಲ್ಲ ಅನ್ನಿಸುತ್ತದೆ. ನಾನು ಎಂದೂ ಸಿಎಂ ಹೆಸರೇಳಿ ವಿರುದ್ಧ ಮಾತಾಡಿಲ್ಲ. ಕುಂಬಳಕಾಯಿ ಕಳ್ಳ ಎಂದರೆ ಹೆಗಲು ಮುಟ್ಟಿಕೊಂಡರೆ ಹೇಗೆ ಎಂದು ಬಿ.ಕೆ. ಹರಿಪ್ರಸಾದ್ ಪ್ರಶ್ನಿಸಿದರು.
ಟಾರ್ಗೆಟ್ ಬಿಜೆಪಿಯದ್ದಾ? ಕಾಂಗ್ರೆಸ್‌ನದ್ದಾ ಗೊತ್ತಾಗಲಿದೆ ಎಂದ ವಿಜಯೇಂದ್ರ
ಬಿ.ಕೆ ಹರಿಪ್ರಸಾದ್ ಅವರನ್ನು ಸಿಸಿಬಿ ವಿಚಾರಣೆ ನಡೆಸಲು ರಾಜ್ಯಪಾಲರ ಸೂಚನೆ ಕಾರಣ. ಬಿಜೆಪಿ ಅವರನ್ನು ಟಾರ್ಗೆಟ್ ಮಾಡಿ ರಾಜ್ಯಪಾಲರಿಗೆ ದೂರು ನೀಡಿತ್ತು. ರಾಜ್ಯಪಾಲರು ಕೂಡಾ ಆಡಳಿತದಲ್ಲಿ ಹಸ್ತಕ್ಷೇಪ ನಡೆಸುವ ರೀತಿಯಲ್ಲಿ ವರದಿ ಕೇಳಿದ್ದರು. ಬಿಜೆಪಿ ಬಿ.ಕೆ. ಹರಿಪ್ರಸಾದ್ ಅವರನ್ನು ಟಾರ್ಗೆಟ್ ಮಾಡಿದೆ ಎಂಬ ಸಚಿವ ಪ್ರಿಯಾಂಕ್ ಖರ್ಗೆ ಆರೋಪಕ್ಕೆ ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ಪ್ರತಿಕ್ರಿಯೆ ನೀಡಿದ್ದಾರೆ.
ಹರಿಪ್ರಸಾದ್ ಟಾರ್ಗೆಟ್ ಬಿಜೆಪಿಯದ್ದಾ, ಕಾಂಗ್ರೆಸ್‌ನದ್ದಾ ಅನ್ನೋದು ಮುಂದೆ ಗೊತ್ತಾಗಲಿದೆ. ಕಾಂಗ್ರೆಸ್ ಇದನ್ನ ಹೇಗೆ ತೆಗೆದುಕೊಂಡಿದೆ ಅನ್ನೋದು ಮುಂದೆ ಗೊತ್ತಾಗಲಿದೆ ಎಂದು ಹೇಳಿದರು.
ನಾವು ಹರಿಪ್ರಸಾದ್ ಟಾರ್ಗೆಟ್ ಮಾಡಿಲ್ಲ ಎಂದ ಪರಮೇಶ್ವರ್
ರಾಜ್ಯದಲ್ಲಿರುವುದು ಕಾಂಗ್ರೆಸ್ ಸರ್ಕಾರವೋ ಆರ್ ಎಸ್ ಎಸ್ ಸರ್ಕಾರವೋ ಎಂಬ ಬಿ.ಕೆ ಹರಿಪ್ರಸಾದ್ ಕುಹಕಕ್ಕೆ, ಗೃಹ ಸಚಿವ ಡಾ.ಜಿ ಪರಮೇಶ್ವರ್ ಪ್ರತಿಕ್ರಿಯೆ ನೀಡಿದ್ದು, ಅವರ ಅಭಿಪ್ರಾಯ ಹೇಳಿದ್ದಾರೆ. ನಾನೂ ಗಮನಿಸಿದ್ದೇನೆ. ಅಧಿಕಾರಿಗಳು ಅವರ ಕೆಲಸ ಮಾಡಿದ್ದಾರೆ. ಅದರ ಬಗ್ಗೆ ಹೆಚ್ಚು ಕಮೆಂಟ್ ಮಾಡೋ ಬದಲು ಕಾನೂನು ಕ್ರಮ ಆಗಬೇಕು. ಅನಂತ್ ಕುಮಾರ್ ಹೆಗಡೆ, ಕಲ್ಲಡ್ಕ ಪ್ರಭಾಕರ್ ಭಟ್ ಮೇಲೆಯೂ ಎಫ್ ಐ ಆರ್ ಆಗಿದೆ. ಕಾನೂನು ಎಲ್ಲರಿಗೂ ಒಂದೇ. ನಂಗೂ ಬೇರೆ ಇಲ್ಲ ಎಂದರು.
ಕಾಂಗ್ರೆಸ್ ನಲ್ಲಿ ಒಳಸಂಚು ಮಾಡಿದ್ದಾರೆ ಎಂಬ ಹರಿಪ್ರಸಾದ್ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ಆ ರೀತಿ ಏನೂ ಇಲ್ಲ. ರಾಜಕೀಯವಾಗಿ ಅವರಿಗೆ ತೊಂದರೆ ಕೊಡಬೇಕು ಅಂತೇನಿಲ್ಲ ಎಂದರು.