ಬೆಂಗಳೂರು: ಕಲಾವಿದರೊಬ್ಬರಿಗೆ, ತನ್ನ ಕಲೆಗೆ ಸೂಕ್ತ ಶ್ರೇಯ ಸಿಗಬೇಕು ಎಂಬ ಸಣ್ಣ ಆಸೆ ಇದ್ದೇ ಇರುತ್ತದೆ. ಇದೀಗ ನಿಧನರಾಗಿರುವ (BKS Varma Death) ನಾಡಿನ ಖ್ಯಾತ ಕಲಾವಿದ ಬಿ.ಕೆ.ಎಸ್. ವರ್ಮ ಅವರ ಇಂತಹ ಒಂದು ಮನವಿಯನ್ನು ದಶಕಗಳ ನಂತರ ಕನ್ನಡ ಸಾಹಿತ್ಯ ಪರಿಷತ್ತು ಕಡೆಗೂ ಈಡೇರಿಸಿದ್ದರ ಕಥೆ ಇದು.
1995-1998ರವರೆಗೆ ನಾಡಿನ ಹಿರಿಯ ಕವಿ ಸಾ. ಶಿ ಮರುಳಯ್ಯ ಅವರು ಕಸಾಪ ಅಧ್ಯಕ್ಷರಾಗಿದ್ದರು. ಕರ್ನಾಟಕದಲ್ಲಿ ಒಂದೊಂದು ಕಡೆ ಒಂದೊಂದು ರೀತಿಯಲ್ಲಿ ಕರ್ನಾಟಕ ಮಾತೆಯನ್ನು ಪೂಜಿಸಲಾಗುತ್ತಿದೆ. ಒಂದು ಚಿತ್ರವನ್ನು ರಚಿಸಿಕೊಡಿ ಎಂದು ಬಿ.ಕೆ.ಎಸ್. ವರ್ಮ ಅವರನ್ನು ಮರುಳಯ್ಯ ಅವರು ಕೇಳಿದ್ದರು.
ಅದರಂತೆ, ರನ್ನ, ಪಂಪ, ಚಾಮುಂಡೇಶ್ವರಿ, ಹೊಯ್ಸಳ ಲಾಂಛನ, ಶಿಲ್ಪ ಕಲೆಗಳು, ಪರಿಸರವನ್ನು ಸೇರಿಸಿ ತಾಯಿ ಭುವನೇಶ್ವರಿಯ ಚಿತ್ರವನ್ನು ವರ್ಮ ರಚಿಸಿಕೊಟ್ಟಿದ್ದರು. ಚಿತ್ರವನ್ನು ಇನ್ನೇನು ಪೂರ್ಣಗೊಳಿಸುವಷ್ಟರಲ್ಲಿ, ಕಾರ್ಯಕ್ರಮವೊಂದಕ್ಕೆ ಅಗತ್ಯವಿದೆ ಎಂದು ಮರುಳಯ್ಯ ಅವರು ಕೊಂಡೊಯ್ದಿದ್ದರು. ಚಿತ್ರದ ಕೆಳಗೆ ಕಲಾವಿದರು ಸಾಮಾನ್ಯವಾಗಿ ಬರೆಯುವಂತೆ ತಮ್ಮ ಹೆಸರನ್ನು ಬಿ.ಕೆ.ಎಸ್. ವರ್ಮ ನಮೂದು ಮಾಡಿರಲಿಲ್ಲ.
ರಾಜಾ ರವಿವರ್ಮನ ಚಿತ್ರ ಎಂದ ಆಯೋಜಕ
ಬಿ.ಕೆ.ಎಸ್. ವರ್ಮ ಅವರು ರಚಿಸಿದ ಚಿತ್ರ ನಾಡಿನಾದ್ಯಂತ ಪ್ರಸಿದ್ಧಿ ಪಡೆದಿದೆ. ಆದರೆ ಇದನ್ನು ರಚಿಸಿದವರು ಯಾರು ಎಂದು ತಿಳಿದಿರಲಿಲ್ಲ. ಒಂದು ಕಾರ್ಯಕ್ರಮದಲ್ಲಿ ಬಿ.ಕೆ.ಎಸ್. ವರ್ಮ ಭಾಗವಹಿಸಿದ್ದರು. ಆಯೋಜಕರು ಭುವನೇಶ್ವರಿ ಚಿತ್ರವನ್ನು ಉಡುಗೊರೆಯಾಗಿಬಿ.ಕೆ.ಎಸ್. ವರ್ಮ ಅವರಿಗೆ ನೀಡಿದರು. ಈ ಚಿತ್ರವನ್ನು ರಚಿಸಿರುವುದು ರಾಜಾ ರವಿ ವರ್ಮ ಎಂದು ತಿಳಿಸಿದ್ದರು.
ಇದು ಬಿ.ಕೆ. ವರ್ಮಾ ಅವರಲ್ಲಿ ಅಚ್ಚರಿ ಉಂಟುಮಾಡಿತ್ತು. ಚಿತ್ರದ ಕೆಳಗೆ ತಮ್ಮ ಹೆಸರನ್ನು ನಮೂದಿಸಿದರೆ, ಮುಂದಿನ ಪೀಳಿಗೆಗೆ ಸರಿಯಾದ ಮಾಹಿತಿ ಲಭಿಸುತ್ತದೆ ಎಂದು, ಕನ್ನಡ ಸಾಹಿತ್ಯ ಪರಿಷತ್ತನ್ನು ಮನವಿ ಮಾಡಿದ್ದರು. ಆದರೆ ಎಷ್ಟು ದಿನಗಳಾದರೂ ಕಸಾಪ ಸ್ಪಂದಿಸಿರಲಿಲ್ಲ. ಮಾಧ್ಯಮಗಳಲ್ಲಿ ಈ ವಿಚಾರ ಚರ್ಚೆಯಾಗಿತ್ತು. ಕರ್ನಾಟಕ ಲಲಿತಕಲಾ ಅಕಾಡೆಮಿ ಅಧ್ಯಕ್ಷರಾಗಿದ್ದ ಡಿ. ಮಹೇಂದ್ರ ಅವರು ಕಸಾಪಕ್ಕೆ ಪತ್ರ ಬರೆದು, ಕಲಾವಿದರಿಗೆ ಗೌರವ ನೀಡುವಂತೆ ಆಗ್ರಹಿಸಿದ್ದರು.
ಈ ಸಮಯದಲ್ಲಿ ಕಸಾಪ ಅಧ್ಯಕ್ಷರಾಗಿದ್ದ ಡಾ. ಮನು ಬಳಿಗಾರ್ ಅವರು, ಮೇಲ್ನೋಟಕ್ಕೆ ಇದು ನೀವು ಬರೆದದ್ದು ಎಂದು ತಿಳಿಯುತ್ತದೆ. ಆದರೆ ನಿಯಮದ ಪ್ರಕಾರ ಇದನ್ನು ಮಾಡೋಣ ಎಂದು ಚಿತ್ರಕಲಾ ಪರಿಷತ್ತಿನ ಕಮಲಾಕ್ಷಿ ಸೇರಿ ಅನೇಕರ ಸಮಿತಿ ರಚನೆ ಮಾಡಿ ಸಲಹೆ ಕೇಳಿದ್ದರು. ಅವರೆಲ್ಲರೂ ಒಕ್ಕೊರಲಿನಿಂದ, ಇದು ಬಿ.ಕೆ.ಎಸ್. ವರ್ಮ ಅವರು ಬರೆದ ಚಿತ್ರ ಎಂದು ಒಪ್ಪಿದ್ದರು.
ಫ್ರೇಮ್ ಮೇಲೆ ಬೇಡ ಎಂದಿದ್ದ ವರ್ಮ
ಸಮಿತಿ ಸಲಹೆಯನ್ನು ಪರಿಗಣಿಸಿದ ಡಾ. ಮನು ಬಳಿಗಾರ್, ಫೋಟೊವನ್ನು ಮತ್ತೆ ಬಿಚ್ಚಿದರೆ ಹಾಳಾಗುತ್ತದೆ, ತಮ್ಮ ಹೆಸರನ್ನು ಫ್ರೇಮ್ ಮೇಲೆ ಬರೆಸುವುದುದಾಗಿ ತಿಳಿಸಿದ್ದರು. ಮನೆಗೇ ಆಗಮಿಸಿ ತಮ್ಮನ್ನು ಗೌರವಿಸುತ್ತೇವೆ ಎಂದಿದ್ದರು. ಫ್ರೇಮ್‌ನೊಳಗೆ ಹಾಕಿದರೆ ಒಳ್ಳೆಯದು ಎಂದು ವರ್ಮ ತಿಳಿಸಿದ್ದರು. ಈ ಚರ್ಚೆ ಇರುವಾಗಲೇ ಕೋವಿಡ್ ಆಗಮಿಸಿ ಸಂಪರ್ಕ ಕಡಿತವಾಗಿತ್ತು. ನಂತರ ಮನು ಬಳಿಗಾರ್ ಅವರ ಅವಧಿಯೂ ಮುಗಿದಿತ್ತು.
ಇದನ್ನೂ ಓದಿ: BKS Varma Death News : ದೇವರನ್ನೇ ಧರೆಗಿಳಿಸಿದ ದೈವದತ್ತ ಪ್ರತಿಭೆ ಬಿ.ಕೆ.ಎಸ್ ವರ್ಮಾ; ವರ್ಮ ಸರ್‌ನೇಮ್ ಬಂದಿದ್ದು ಹೇಗೆ?
ಹೆಸರು ಹಾಕಿಸಿದ ಕಸಾಪ
ಈ ಹಿಂದೆ ನಿರ್ಧಾರ ಮಾಡಿದಂತೆಯೇ ಕಸಾಪ ಅಧ್ಯಕ್ಷ ಡಾ. ಮಹೇಶ್ ಜೋಶಿ ಅವರು 2022ರ ನವೆಂಬರ್‌ನಲ್ಲಿ ಭುವನೇಶ್ವರಿ ತಾಯಿಯ ಫೋಟೊಗೆ ಬಿ.ಕೆ.ಎಸ್. ವರ್ಮ ಅವರ ಹೆಸರು ಬರೆಸಿದರು. ಫೋಟೊ ಫ್ರೇಮ್ ಮೇಲೆ ಅಲ್ಲದೆ, ಭಾವಚಿತ್ರದ ಕೆಳಗೆ “ಕಲಾವಿದ: ಬಿ.ಕೆ.ಎಸ್. ವರ್ಮ” ಎಂದು ಬರೆಸಿದರು. ಈಗಷ್ಟೆ ನವೀಕರಣಗೊಂಡಿರುವ ಕಸಾಪ ಕಚೇರಿಯಲ್ಲಿ, ಅಧ್ಯಕ್ಷರ ಆಸನದ ಹಿಂಭಾಗದಲ್ಲಿ ಈ ಚಿತ್ರವನ್ನು ಅಳವಡಿಸಿದ್ದಾರೆ.
ಈ ಕುರಿತು ಪ್ರತಿಕ್ರಿಯಿಸಿದ್ದ ಡಾ. ಮಹೇಶ್ ಜೋಶಿ, ಕಲಾವಿದರು ಸಾಕಷ್ಟು ಶ್ರಮವಹಿಸಿ ಚಿತ್ರವನ್ನು ರಚಿಸಿರುತ್ತಾರೆ. ಅವರಿಗೆ ಗೌರವ ನೀಡಬೇಕಾದ್ದು ನಮ್ಮ ಕರ್ತವ್ಯ. ಇಂತಹ ಕಾರ್ಯವನ್ನು ನಾವು ಮಾಡಿದ್ದೇವೆʼ ಎಂದಿದ್ದರು.
ತಮ್ಮ ಹೆಸರನ್ನು ನಮೂದಿಸಿರುವ ಕುರಿತು ಪ್ರತಿಕ್ರಿಯೆ ನೀಡಿದ್ದ ಬಿ.ಕೆ.ಎಸ್. ವರ್ಮ ಅವರು, ಹೆಸರು ಬೇಕು ಎನ್ನುವುದು ಸ್ವಾರ್ಥವಲ್ಲ. ಮುಂದಿನ ಪೀಳಿಗೆಗೆ ಸರಿಯಾದ ಮಾಹಿತಿ ಸಿಗಬೇಕು ಎಂದು ನಿರೀಕ್ಷೆ ಪಟ್ಟಿದೆ. ಇಷ್ಟು ದಿನವಾದ ನಂತರವಾದರೂ ಕಸಾಪ ಈ ಕಾರ್ಯ ನಡೆಸಿರುವುದು ಸಂತಸ ತಂದಿದೆ ಎಂದಿದ್ದರು.