ಬೆಂಗಳೂರು: ಬೊಮ್ಮನಹಳ್ಳಿ ಠಾಣೆ ವ್ಯಾಪ್ತಿಯಲ್ಲಿ ನಡೆದಿದ್ದ ಮಹಿಳೆಯ ಕೊಲೆ ಪ್ರಕರಣವನ್ನು ಪೊಲೀಸರು ಬೇಧಿಸಿದ್ದಾರೆ. ವೇಶ್ಯಾವಾಟಿಕೆಗಾಗಿ ಆಕೆಯನ್ನು ಕರೆದೊಯ್ಯುತ್ತಿದ್ದ ಆಟೋ ಚಾಲಕನೇ ಬ್ಲ್ಯಾಕ್‌ಮೇಲ್ ಮಾಡಿ ಕೊಲೆ ಮಾಡಿದ್ದಾನೆ.
ವೇಶ್ಯೆಯರನ್ನು ಪಿಕ್‌ಆಪ್ ಮತ್ತು ಡ್ರಾಪ್ ಮಾಡುತಿದ್ದ ಆರೋಪಿ ವಾಸೀಮ್‌ನನ್ನು ಪೊಲೀಸರು ಬಂಧಿಸಿ, ಕೃತ್ಯ ನಡೆಸಿದ ಸ್ಥಳಕ್ಕೆ ಕರೆದೊಯ್ದು ಮಹಜರು ನಡೆಸಿದ್ದಾರೆ. ಈತ ಕೊಲೆ ಮಾಡಿ ಪರಾರಿಯಾಗಿದ್ದ. ಆಟೋ ಡ್ರೈವರ್ ಅಗಿದ್ದ ಬಂಧಿತ ಆರೋಪಿಗೆ ಎರಡು ದಿನಗಳ ಹಿಂದೆ ಮಹಿಳೆ ಪರಿಚಯವಾಗಿದ್ದಳು. ʼನೀನು ವೇಶ್ಯಾವಾಟಿಕೆ ನಡೆಸುತ್ತಿದ್ದೀ. ಈ ವಿಚಾರ ಪೊಲೀಸರಿಗೆ ನಾನು ತಿಳಿಸಬಾರದು ಎಂದರೆ ನನಗೆ ಹಣ ನೀಡಬೇಕುʼʼ ಎಂದು ಬ್ಲ್ಯಾಕ್‌ಮೇಲ್ ಮಾಡಿದ್ದ.
ಆದರೆ ಹಣ ನೀಡಲು ಮಹಿಳೆ ನಿರಾಕರಿಸಿದ್ದಳು. ಇದರಿಂದ ಸಿಟ್ಟಿಗೆದ್ದ ವಾಸೀಮ್ ಆಕೆಯನ್ನು ಗಿರಾಕಿ ಇದ್ದಾರೆ ಎಂದು ಬೊಮ್ಮನಹಳ್ಳಿ ಕೆರೆ ಬಳಿ ಕರೆದೊಯ್ದಿದ್ದ. ಮತ್ತೆ ಹಣಕ್ಕಾಗಿ ಕ್ಯಾತೆ ತೆಗೆದು ಗಲಾಟೆ ಮಾಡಿದ್ದ. ಈ ವೇಳೆ ಜಗಳ ಅತೀರೇಕವಾಗಿ ತಲೆ ಮೇಲೆ ಕಲ್ಲು ಹಾಕಿ ಕೊಲೆ ಮಾಡಿ ನಂತರ ತಲೆ ಮರೆಸಿಕೊಂಡಿದ್ದ. ಆರೋಪಿಗೆ ಬಲೆ ಬೀಸಿದ್ದ ಬೊಮ್ಮನಹಳ್ಳಿ ಪೊಲೀಸರು ಆತನನ್ನು ಬಂಧಿಸಿದ್ದು, ಹೆಚ್ಚಿನ ವಿಚಾರಣೆ ನಡೆಸುತ್ತಿದ್ದಾರೆ.
ಇದನ್ನೂ ಓದಿ: ನಿನ್ನಪ್ಪನನ್ನು ಕಳಿಸು ಎಂದು ಬೈದ, ಕೊಲೆಯಾದ!