ಬೆಂಗಳೂರು: ಇನ್ಸ್ಟಾಗ್ರಾಮ್‌ನಲ್ಲಿ ಅಪರಿಚಿತರ ಜತೆ ಸ್ನೇಹ ಬೆಳೆಸುವ (Blackmail Case) ಮುನ್ನ ಎಚ್ಚರವಾಗಿರಿ. ಯಾಕೆಂದರೆ ನಿಮ್ಮ ನಂಬಿಕೆಯನ್ನೇ ಬಂಡವಾಳ ಮಾಡಿಕೊಳ್ಳುವ ಕಿರಾತಕರು ಹಣಕ್ಕಾಗಿ ಬ್ಲ್ಯಾಕ್‌ಮೇಲ್ ಮಾಡಬಹುದು. ಸದ್ಯ ಇನ್ಸ್ಟಾಗ್ರಾಮ್ ಗೆಳೆಯನನ್ನು ನಂಬಿ ಮಹಿಳೆಯೊಬ್ಬರು ಲಕ್ಷ ಲಕ್ಷ ಹಣವನ್ನು ಕಳೆದುಕೊಂಡಿದ್ದಾರೆ. ಮಹಿಳೆಯನ್ನು ಬ್ಲ್ಯಾಕ್‌ಮೇಲ್ ಮಾಡಿ 8 ಲಕ್ಷ ರೂ. ಹಣ ಹಾಗೂ 240 ಗ್ರಾಂ ಚಿನ್ನಾಭರಣವನ್ನು ಪೀಕಿದ್ದಾನೆ.
ವಿವಿ ಪುರಂ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದ್ದು, ಬ್ಲ್ಯಾಕ್‌ಮೇಲ್ ಮಾಡಿದ ಇನ್ಸ್ಟಾಗ್ರಾಮ್ ಗೆಳೆಯನನ್ನು ಪೊಲೀಸರು ಬಂಧಿಸಿದ್ದಾರೆ. ಅನ್ಬು ಅಲಗನ್ ಬಂಧಿತ ಆರೋಪಿ ಆಗಿದ್ದಾನೆ. ಅನ್ಬು ಅಲಗನ್ ಎಂಬ ದುಷ್ಟ ಇನ್ಸ್ಟಾಗ್ರಾಮ್ ಮೂಲಕ 39 ವರ್ಷದ ಮಹಿಳೆಯನ್ನು ಪರಿಚಯ ಮಾಡಿಕೊಂಡಿದ್ದ. ಆಕೆಗೆ ಗಾಳ ಹಾಕಿದ ಅನ್ಬು, ನಂಬಿಕೆಯನ್ನು ಗಿಟ್ಟಿಸಿಕೊಂಡಿದ್ದ. ಆಕೆಗೆ ಪುಸಲಾಯಿಸಿ ಭೇಟಿ ಮಾಡಿದಾಗ ಒಂದಷ್ಟು ಫೋಟೊಗಳನ್ನು ತೆಗೆದುಕೊಂಡಿದ್ದ. ನಂತರ ಅದೇ ಫೋಟೊಗಳನ್ನಿಟ್ಟುಕೊಂಡು ಕುಟುಂಬಸ್ಥರಿಗೆ ತೋರಿಸುವುದಾಗಿ ಬೆದರಿಕೆ ಹಾಕಿದ್ದ.
ಮಾತ್ರವಲ್ಲ ನಗ್ನವಾಗಿ ವಿಡಿಯೋ ಕಾಲ್ ಮಾಡು, ಫೋಟೋ ಕಳುಹಿಸು ಎಂದು ಬೆದರಿಕೆ ಹಾಕಿದ್ದ. ಆನಂತರ ಆಕೆ ಕಳಿಸಿದ ನಗ್ನ ಫೋಟೊಗಳನ್ನೇ ತೋರಿಸಿ ಲಕ್ಷಾಂತರ ರೂ. ಹಣ ಹಾಗೂ ಚಿನ್ನಾಭರಣ ದೋಚಿದ್ದ. ಒಮ್ಮೆ ಹಣದ ರುಚಿ ನೋಡಿದ ಅನ್ಬು ಅಲಗನ್, ಪದೇ ಪದೆ ಹಣ ಕೇಳಲು ಶುರು ಮಾಡಿದ್ದ. ಇದರಿಂದ ಬೇಸತ್ತ ಮಹಿಳೆ ಪೊಲೀಸರ ಮೊರೆ ಹೋಗಿ, ಠಾಣೆಗೆ ದೂರು ನೀಡಿದ್ದಾಳೆ. ಮಹಿಳೆ ದೂರು ಆಧರಿಸಿ ಅನ್ಬು ಅಳಗನ್‌ನನ್ನು ಪೊಲೀಸರು ಬಂಧಿಸಿದ್ದಾರೆ. ವಿವಿ ಪುರಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ: Love Case : ತಂಗಿಯನ್ನು ಪ್ರೀತಿಸುತ್ತಿದ್ದ ಯುವಕನಿಗೆ ಚಾಕು ಹಾಕಿದ ಅಣ್ಣ
ಯುವತಿಯರ ಫೋಟೊ ತೆಗೆದು ನಂಬರ್ ಕೇಳಿದ ದುರುಳ ಯುವಕರು, ಪ್ರಶ್ನಿಸಿದ್ದಕ್ಕೆ ಹಲ್ಲೆ
ಬಾಗಲಕೋಟೆ: ಮಹಿಳಾ ದಿನಾಚರಣೆಯನ್ನೇನೋ (Women’s day) ಎಲ್ಲರೂ ಖುಷಿಯಿಂದ ಆಚರಿಸುತ್ತಾರೆ. ಶುಭಾಶಯಗಳನ್ನು ಕೋರುತ್ತಾರೆ. ಆದರೆ, ಅದರ ನಡುವೆಯೇ ಯುವತಿಯರನ್ನು ಕೆಣಕುವ (Harassment Case), ಅವರು ದಾರಿ ನಡೆಯದಂತೆ ಮಾಡುವ, ಸದಾ ಕಾಲ ಭಯದಿಂದಲೇ ಬದುಕುವಂತೆ ಮಾಡುವ ದುರುಳ ಪ್ರಯತ್ನಗಳೂ ಎಗ್ಗಿಲ್ಲದೆ ನಡೆಯುತ್ತಿವೆ. ಬಾಗಲಕೋಟೆಯ ರಬಕವಿ ಬಸ್ ನಿಲ್ದಾಣದಲ್ಲಿ (Rabakavi Bus station) ಸಂಭವಿಸಿದ ಒಂದು ಘಟನೆ ಇದಕ್ಕೆ ಅತ್ಯುತ್ತಮ ನಿದರ್ಶನವಾಗಿದೆ.
ಬಾಗಲಕೋಟೆ ಜಿಲ್ಲೆಯ ರಬಕವಿ ಬಸ್ ನಿಲ್ದಾಣದಲ್ಲಿ ಮೂವರು ಯುವಕರು ಕಾಲೇಜು ವಿದ್ಯಾರ್ಥಿನಿಯರ (College girl students Harassed) ಫೋಟೊ ತೆಗೆದು ಅವರ ಬಳಿ ನಂಬರ್ ಕೇಳಿದ್ದಾರೆ, ಕೊಡದಿದ್ದಕ್ಕೆ ವಿದ್ಯಾರ್ಥಿನಿಯರ ಮೇಲೆ ಹಲ್ಲೆ ಮಾಡಲಾಗಿದೆ. ಹಲ್ಲೆಗೊಳಗಾದ ವಿದ್ಯಾರ್ಥಿನಿಯರ ಪೈಕಿ ಒಬ್ಬಳಿಗೆ ತೀವ್ರ ಗಾಯಗಳಾಗಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಳೆ. ಹಲ್ಲೆ ಮಾಡಿದವರು ಮುಸ್ಲಿಂ ಯುವಕರಾಗಿರುವುದರಿಂದ (Three youths Arrested) ಪ್ರಕರಣ ಗಂಭೀರ ಸ್ವರೂಪ ಪಡೆದುಕೊಳ್ಳುವ ಸಾಧ್ಯತೆ ಇದೆ.
ಸ್ವಾತಿ, ಸಾಕ್ಷಿ ಮತ್ತು ಕವಿತಾ ಮೂವರೂ ಸ್ನೇಹಿತೆಯರು ಮತ್ತು ಒಂದೇ ಕಾಲೇಜಿನಲ್ಲಿ ಓದುತ್ತಿದ್ದವರು. ಇವರು ತೇರದಾಳ ಕಾಲೇಜಿನಲ್ಲಿ ವಿದ್ಯಾರ್ಥಿನಿಯರು. ಬುಧವಾರ ಸಂಜೆ ಇವರು ಕಾಲೇಜು ಮುಗಿಸಿ ತೇರದಾಳದಿಂದ ರಬಕವಿಗೆ ಬಂದು, ರಬಕವಿ ಬಸ್ ನಿಲ್ದಾಣದಲ್ಲಿ ತಮ್ಮ ಊರಿಗೆ ಹೋಗಲು ಬಸ್ ಕಾಯುತ್ತಿದ್ದರು.
ಈ ವೇಳೆ ಬಸ್ ನಿಲ್ದಾಣಕ್ಕೆ ಮೂವರು ಯುವಕರು ಬಂದಿದ್ದಾರೆ. ಯುವತಿಯರನ್ನು ನೋಡಿದ ಇವರು ತಮಗೂ ಅಕ್ಕ ತಂಗಿ ಇದ್ದಾರೆ ಎಂಬುದನ್ನು ಮರೆತು ಕೆಟ್ಟದಾಗಿ ಚುಡಾಯಿಸಲು ಆರಂಭಿಸಿದರು. ಮಾತ್ರವಲ್ಲ ಯುವತಿಯರ ಚಿತ್ರಗಳನ್ನು ಬೇರೆ ಬೇರೆ ಕೋನಗಳಲ್ಲಿ ತೆಗೆದು ಕಿರಿಕಿರಿ ಮಾಡಿದರು.
ಅನ್ವರ್ ಮಕಾಂದಾರ್, ಆಯನ್ ಪಟೇಲ್, ಜಾವೀದ್ ಅಲಿ ಅಹ್ಮದ್ ಎಂಬ ಹೆಸರಿನ ಈ ಯುವಕರು ಫೋಟೊ ಕ್ಲಿಕ್ಕಿಸಿದ ಬಳಿಕ ಯುವತಿಯರ ಬಳಿಗೆ ತೆರಳಿ ಮೊಬೈಲ್ ನಂಬರ್ ನೀಡುವಂತೆ ಕೇಳಿದ್ದಾರೆ. ಮೊದಲೇ ಕಿರಿಕಿರಿಗೆ ಒಳಗಾಗಿದ್ದ ವಿದ್ಯಾರ್ಥಿನಿಯರು ನಂಬರ್ ಕೊಡಲು ನಿರಾಕರಿಸಿದ್ದಾರೆ. ಇದರಿಂದ ಆಕ್ರೋಶಿತರಾದ ಯುವಕರು ಈ ವಿದ್ಯಾರ್ಥಿನಿಯರ ಮೇಲೆ ಹಲ್ಲೆ ಮಾಡಿದ್ದಾರೆ.
ಇದನ್ನೂ ಓದಿ : Harassment Case : ಸೈಕಲ್ ಅಡ್ಡ ಬಂತೆಂದು ಬಾಲಕಿಗೆ ಹಲ್ಲೆ; ಕಾಲು ಹಿಡಿದು ಬೇಡಿದರೂ ಕರಗದ ಪಾಪಿ ಮನಸ್ಸು
ಈ ಘಟನೆ ನಡೆದ ಬಳಿಕ ಯುವತಿಯರು ಮನೆಗೆ ತೆರಳಿದ್ದಾರೆ. ವಿದ್ಯಾರ್ಥಿನಿಯರ ಪೈಕಿ ಸ್ವಾತಿ ನಡಕಟ್ಟಿ ಎಂಬಾಕೆಗೆ ತೀವ್ರ ಗಾಯಗಳೇ ಆಗಿವೆ. ಆಕೆಯನ್ನು ಮನೆಯವರು ಬಳಿಕ ಆಸ್ಪತ್ರೆಗೆ ದಾಖಲಿಸಿದ್ದಾರೆ. ಈ ನಡುವೆ ಘಟನೆ ಬಗ್ಗೆ ಮಾಹಿತಿ ತಿಳಿಯುತ್ತಿದ್ದಂತೆಯೇ ದೊಡ್ಡ ಸಂಖ್ಯೆಯಲ್ಲಿ ಜನರು ರಬಕವಿ ಬಸ್ ನಿಲ್ದಾಣದಲ್ಲಿ ಮತ್ತು ಪೊಲೀಸ್ ಠಾಣೆ ಬಳಿ ಜಮಾಯಿಸಿ ಆರೋಪಿ ಯುವಕರ ಬಂಧನಕ್ಕೆ ಒತ್ತಾಯಿಸಿದರು.
ತೇರದಾಳ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು ಪೊಲೀಸರು ಅನ್ವರ್ ಮಕಾಂದಾರ್, ಆಯನ್ ಪಟೇಲ್, ಜಾವೀದ್ ಅಲಿ ಅಹ್ಮದ್ ಎಂಬವರನ್ನು ಬಂಧಿಸಿದ್ದಾರೆ. ಹಲ್ಲೆಗೊಳಗಾದ ವಿದ್ಯಾರ್ಥಿನಿ ಸ್ವಾತಿ ನಡಕಟ್ಟಿ ಆಸ್ಪತ್ರೆಯಲ್ಲಿ ಚೇತರಿಸಿಕೊಳ್ಳುತ್ತಿದ್ದಾರೆ.
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ