Site icon Vistara News

Blast in Bengaluru : ಬ್ಯಾಗ್‌ನಲ್ಲಿ ತಂದಿಟ್ಟ ಸ್ಫೋಟಕ ಬ್ಲಾಸ್ಟ್‌; ಸಣ್ಣದಾದರೂ ಡೇಂಜರಸ್‌ ಎಂದ ಸಿಎಂ ಸಿದ್ದರಾಮಯ್ಯ

Blast in Bangalore Siddaramaiah

ಮೈಸೂರು: ಬೆಂಗಳೂರಿನ (Bangalore News) ರಾಮೇಶ್ವರಂ ಕೆಫೆಯಲ್ಲಿ (Rameshwaram Cafe) ನಡೆದ ಸ್ಫೋಟಕ್ಕೆ (Blast in Bengaluru) ಸಂಬಂಧಿಸಿ ಪೊಲೀಸರು ಸೇರಿದಂತೆ ಉನ್ನತ ಅಧಿಕಾರಿಗಳು ತನಿಖೆ ನಡೆಸುತ್ತಿದ್ದಾರೆ. ಸರಿಯಾದ ಮಾಹಿತಿ ಪಡೆದು ಆರೋಪಿಗಳನ್ನು ಪತ್ತೆ ಹಚ್ಚಿ ಶಿಕ್ಷಿಸಲಾಗುವುದು ಎಂದು ಸಿಎಂ ಸಿದ್ದರಾಮಯ್ಯ (CM Siddaramaiah) ಅವರು ಮೈಸೂರಿನಲ್ಲಿ ಹೇಳಿದರು.

ಮಂಡಕಳ್ಳಿ ವಿಮಾನ ನಿಲ್ದಾಣದಲ್ಲಿ ಮಾಧ್ಯಮಗಳಿಗೆ ಹೇಳಿಕೆ ನೀಡಿದ ಅವರು, ಘಟನೆಯಲ್ಲಿ ಹಲವರಿಗೆ ಗಾಯಗಳಾಗಿವೆ. ಸದ್ಯ ಸಿಸಿ ಟಿವಿ ಪರಿಶೀಲನೆ‌ ನಡೆಯುತ್ತಿದೆ. ಯಾರೋ ಒಬ್ಬರು ಬ್ಯಾಗ್ ಇಟ್ಟಿರುವುದು ತಿಳಿದಿದೆ. ಈ ಕುರಿತು ಪೊಲೀಸರು ತನಿಖೆ‌ ನಡೆಸುತ್ತಿದ್ದಾರೆ ಎಂದರು.

ಯಾರೂ, ಏನೂ ಅಂತ ಯಾರಿಗೂ ಗೊತ್ತಿಲ್ಲ. ಕ್ಯಾಷಿಯರ್ ಬಳಿ ಹೋಗಿ ಟೋಕನ್ ತೆಗೆದುಕೊಂಡಿದ್ದಾನೆ.
ಅವರ ಬಳಿ ಬ್ಯಾಗ್ ಇರಿಸಿದ್ದಾನೆ. ಈ ಎಲ್ಲಾ ದೃಶ್ಯಗಳು ಸಿಸಿಟಿವಿಯಲ್ಲಿ ಸೆರೆಯಾಗಿವೆ ಎಂದು ಸಿದ್ದರಾಮಯ್ಯ ಹೇಳಿದರು.

ಇದು ಭಯೋತ್ಪಾದಕರ ಕೃತ್ಯವೇ ಎನ್ನುವ ಕುರಿತು ನಮಗೆ ಗೊತ್ತಿಲ್ಲ. ಈಗಿರುವ ಮಾಹಿತಿ ಪ್ರಕಾರ ಸ್ಥಳಕ್ಕೆ ಪೊಲೀಸರು ಹೋಗಿದ್ದಾರೆ. ಸ್ವಲ್ಪ ಸಮಯದಲ್ಲೇ ಸಂಪೂರ್ಣ ಮಾಹಿತಿ ಗೊತ್ತಾಗುತ್ತದೆ. ಸ್ಫೋಟಕ ಭಾರೀ ಪ್ರಮಾಣದಲ್ಲಿ ನಡೆದಿಲ್ಲ.
ಸಣ್ಣ ಪ್ರಮಾಣದದ್ದರೂ ಅದು ಪರಿಣಾಮಕಾರಿಯಾಗಿದೆ ಎಂದು ಘಟನೆಯ ವಿವರ ನೀಡಿದರು.

ʻʻಎಲ್ಲ ಸರ್ಕಾರಗಳು ಇದ್ದ ಕಾಲದಲ್ಲೂ ಕೂಡ ಇಂಥ ಘಟನೆಗಳು ನಡೆದಿವೆ. ಇಂತಹ ಘಟನೆ ನಡೆಯಬಾರದು ಎಂಬುದು ನಮ್ಮ ಅಭಿಪ್ರಾಯ. ಇತ್ತೀಚೆಗೆ ಇಂತಹ ಘಟನೆ ನಡೆದಿರಲಿಲ್ಲ. ಮಂಗಳೂರಲ್ಲಿ ಸಣ್ಣ ಪ್ರಮಾಣದಲ್ಲಿ ಘಟನೆ ನಡೆದಿತ್ತು. ಹಿಂದಿನ ಸರ್ಕಾರಗಳ ಅವಧಿಯಲ್ಲಿ ಹಲವು ಸ್ಫೋಟಗಳು ನಡೆದಿತ್ತು. ನಮ್ಮ ಸರ್ಕಾರದಲ್ಲಿ ಈವಾಗ ಈ ಘಟನೆ ನಡೆದಿದೆ. ಆರೋಪಿಗಳನ್ನು ಪತ್ತೆ ಹಚ್ಚಿ ಶಿಕ್ಷಿಸಲಾಗುವುದು ಎಂದು ಹೇಳಿದರು.

ʻಬ್ಲಾಸ್ಟ್ ಆಗಿರುವುದು ಸತ್ಯ. ಬ್ಲಾಸ್ಟ್ ಮಾಡಿರುವವರ ವಿರುದ್ಧ ಶಿಸ್ತಿನ, ಕಠಿಣ ಕ್ರಮ ಆಗಲಿದೆ. ಈ ವಿಚಾರದಲ್ಲಿ ರಾಜಕಾರಣ ಮಾಡಬಾರದುʼʼ ಎಂದು ಹೇಳಿದರು ಸಿದ್ದರಾಮಯ್ಯ.

ಗಾಯಾಳುಗಳಿಗೆ ಪರಿಹಾರ ವಿಚಾರದ ಬಗ್ಗೆ ಗೃಹ ಸಚಿವರು ಮಾಹಿತಿ ನೀಡುತ್ತಾರೆ. ಸಂಪೂರ್ಣ ಮಾಹಿತಿ ಸಿಕ್ಕಿದ ಮೇಲೆ ನಾನು ಮಾತನಾಡುವೆ ಎಂದು ಸಿದ್ದರಾಮಯ್ಯ ಹೇಳಿದರು.

ಗಾಯಾಳುಗಳ ಸಂಖ್ಯೆ 8ಕ್ಕೆ ಏರಿಕೆ

ರಾಮೇಶ್ವರಂ ಕೆಫೆ ಸ್ಫೋಟದಲ್ಲಿ ಗಾಯಾಳುಗಳ ಸಂಖ್ಯೆ 8ಕ್ಕೆ ಏರಿಕೆ ಆಗಿದೆ. ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಪ್ರತ್ಯಕ್ಷದರ್ಶಿಗಳು ಹೇಳುವ ಪ್ರಕಾರ ಮೈಕ್ರೋ ಚಿಪ್ ಇಂಡಿಯಾ ಲಿ. ನಲ್ಲಿ ಕೆಲಸ ಮಾಡುತ್ತಿದ್ದ ಐವರು ಮಧ್ಯಾಹ್ನಕ್ಕೆ ಊಟಕ್ಕೆ ಬಂದಿದ್ದರು. ಊಟದ ಸಮಯಕ್ಕೆ ಸ್ಫೋಟಗೊಂಡಿದ್ದು, ಕೈ ತೊಳೆಯುವ ಜಾಗದಿಂದ ಶಬ್ಧ ಕೇಳಿ ಬಂದಿದೆ. ಉತ್ತರ ಭಾರತ ಮೂಲದ ಆಕ್ಸಿಸ್ ಬ್ಯಾಂಕ್ ಉದ್ಯೋಗಿ ಮೋಮಿ ಎಂಬಾಕೆ ಗಾಯಗೊಂಡಿದ್ದಾರೆ. ಫಾರುಕ್ ಹುಸಾಯ್, ದಿಪಾಂಶು ಎಂಬುವವರು ಗಾಯಗೊಂಡಿದ್ದು, ಸ್ವರ್ಣ ನಾರಯಣಪ್ಪ ಗಂಭೀರ ಗಾಯಗೊಂಡು ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ನವ್ಯಾ (25), ಶ್ರೀನಿವಾಸ್ (67), ನಾಗಶ್ರೀ (25), ಬಾಲಮುರುಳಿ (34), ಮೋನಿ (30), ಶಂಕರ್ (41) ಎಂಬುವವರು ಗಾಯಗೊಂಡ ಕೆಲವರು ಎನ್ನಲಾಗಿದೆ. ಇವರಲ್ಲಿ ನಾಗಶ್ರಿ ಅವರ ಕಣ್ಣಿಗೆ ಏಟಾಗಿದೆ. ಮೋನಿ ಡಿಸ್ಚಾರ್ಜ್ ಆಗಿದ್ದಾರೆ ಎಂದು ತಿಳಿದುಬಂದಿದೆ.

Exit mobile version