ಬೆಂಗಳೂರು: ಮಾರ್ಚ್ 1ರಂದು ಬೆಂಗಳೂರಿನ ವೈಟ್ ಫೀಲ್ಡ್‌ನ ಸಮೀಪದ ಬ್ರೂಕ್ ಫೀಲ್ಡ್‌ನಲ್ಲಿರುವ ರಾಮೇಶ್ವರಂ ಕೆಫೆಯಲ್ಲಿ (Rameshwaram Cafe) ಬಾಂಬ್ ಇಟ್ಟ (Blast in Bengaluru) ದುಷ್ಕರ್ಮಿ, ಟೋಪಿವಾಲಾ ಬಾಂಬರ್‌ನ (Topiwala Bomber) ಪತ್ತೆಗೆ ಸುಳಿವು ನೀಡುವವರಿಗೆ ರಾಷ್ಟ್ರೀಯ ತನಿಖಾ ದಳ (National Investigation Agency-NIA) 10 ಲಕ್ಷ ರೂ. ಬಹುಮಾನ ಘೋಷಣೆ (Rupees 10 lakhs prize) ಮಾಡಿದೆ. ಅದರ ಬೆನ್ನಿಗೇ ಹರ್ಷ ಎಂಬ ಕಲಾವಿದರೊಬ್ಬರು ಆ ದುಷ್ಟ ಹೇಗಿರಬಹುದು ಎಂಬ ಬಗ್ಗೆ ರೇಖಾಚಿತ್ರಗಳನ್ನು ರಚಿಸಲಾಗಿದೆ. ಅದರ ಜತೆಗೆ ಆತ ಬಿಎಂಟಿಸಿ ಬಸ್‌ನಲ್ಲಿ ಪ್ರಯಾಣಿಸುವ ವೇಳೆ ದಾಖಲಾದ ಒಂದು ಚಿತ್ರವೂ ಬಿಡುಗಡೆಯಾಗಿದೆ. ಈ ಚಿತ್ರಗಳು ಆರೋಪಿಯ ಚಹರೆಗೆ ಸಂಬಂಧಿಸಿ ಸಾಕಷ್ಟು ಸುಳಿವುಗಳನ್ನು ನೀಡುತ್ತಿದೆ. ಹೀಗಾಗಿ ಈ ಕಿರಾತಕನ ಬಂಧನದ ಕ್ಷಣಗಳು ಹತ್ತಿರವಾಗುತ್ತಿರುವುದು ಖಚಿತವಾಗಿದೆ.
ಘಟನೆ ನಡೆದು ಏಳು ದಿನಗಳೇ ಕಳೆದರೂ ಆರೋಪಿಯನ್ನು ಸೆರೆ ಹಿಡಿಯಲು ಪೊಲೀಸ್ ಇಲಾಖೆ ಮತ್ತು ಎನ್‌ಐಎ ವಿಫಲವಾಗಿದೆ. ಇದಕ್ಕೆ ಮುಖ್ಯ ಕಾರಣ. ಆರೋಪಿ ಟೋಪಿ ಧರಿಸಿದ್ದು, ಮಾಸ್ಕ್ ಹಾಕಿಕೊಂಡಿದ್ದು ಮತ್ತು ಎಲ್ಲೂ ಸಿಸಿಟಿವಿ ಕ್ಯಾಮೆರಾಗಳಿಗೆ ಮುಖ ಕಾಣಿಸದೆ ಇದ್ದದ್ದು. ಅದರ ಜತೆಗೆ ಆತ ಹೋಟೆಲ್‌ಗೆ ಬಂದು ಬಾಂಬಿಟ್ಟು ಹೋದ ಬಳಿಕ ಒಂದು ಗಂಟೆಗಿಂತಲೂ ಹೆಚ್ಚು ಹೊತ್ತು ಸಮಯಾವಕಾಶ ಸಿಕ್ಕಿದ್ದರಿಂದ ಆತ ದೂರ ಹೋಗಿ ತಪ್ಪಿಸಿಕೊಳ್ಳಲು ಅವಕಾಶವಾಗಿದೆ ಎನ್ನಲಾಗಿದೆ.
ಹೀಗಾಗಿ ಆತ ಎಲ್ಲಿದ್ದಾನೆ ಎಂಬ ಬಗ್ಗೆ ಮಾಹಿತಿ ಪಡೆಯುವ ನಿಟ್ಟಿನಲ್ಲಿ ಎನ್‌ಐಎ ಪ್ರಯತ್ನ ನಡೆಸಿದೆ. ದುಷ್ಕರ್ಮಿಗಳ ಸುಳಿದು ನೀಡಿದವರಿಗೆ 10 ಲಕ್ಷ ರೂ. ಬಹುಮಾನ ನೀಡುವುದಾಗಿ ಘೋಷಿಸಿದೆ. ಆರೋಪಿ ಸುಳಿವು ನೀಡುವವರು ಎನ್.ಐ.ಎ ನ ಈ ನಂಬರ್ ಗೆ ಸಂಪರ್ಕಿಸಬಹುದು ಎಂದು 080289510999-89042441100 ನಂಬರನ್ನು ನೀಡಿದೆ. ಮಾಹಿತಿ ನೀಡಿದ ಬಾತ್ಮೀದಾರರ ಮಾಹಿತಿ ಗೌಪ್ಯತೆ ಕಾಪಾಡಲಾಗುವುದು ಎಂದು ಭರವಸೆ ನೀಡಿದೆ.
ರೇಖಾ ಚಿತ್ರ ಬಿಡುಗಡೆ ಮಾಡಿದ ಆರ್ಟಿಸ್ಟ್ ಹರ್ಷ
ಈ ನಡುವೆ ಕಲಾವಿದ ಹರ್ಷ ಎಂಬವರು ಶಂಕಿತನ ರೇಖಾಚಿತ್ರವನ್ನು ಬಿಡುಗಡೆ ಮಾಡಿದ್ದಾರೆ. ಸಿಸಿ ಟಿವಿ ದೃಶ್ಯಾವಳಿಗಳು ಮತ್ತು ಎನ್‌ಐಎ ಬಿಡುಗಡೆ ಮಾಡಿದ ಚಿತ್ರವನ್ನು ಅದರಿಸಿ ಆತ ನಿಜವಾಗಿಯೂ ಹೇಗಿರಬಹುದು ಎಂಬ ಮುಖ ಚಿತ್ರವನ್ನು ಬಿಡಿಸಿದ್ದಾರೆ.
ಈ ನಡುವೆ ಎನ್‌ಐಎ ಚೆನ್ನೈನಲ್ಲಿ ದಾಳಿ ನಡೆಸಿ ಐವರನ್ನು ವಶಕ್ಕೆ ಪಡೆದಿದ್ದು, ವಿಚಾರಣೆ ನಡೆಸಿದೆ. ಅದರ ನಡುವೆ ಪ್ರಸಕ್ತ ಪರಪ್ಪನ ಅಗ್ರಹಾರ ಜೈಲಿನಲ್ಲಿರುವ ಲಷ್ಕರ್ ಇ ತಯ್ಬಾ ಜತೆ ಸಂಪರ್ಕ ಹೊಂದಿರುವ ಟಿ. ನಜೀರ್‌ನ ವಿಚಾರಣೆ ನಡೆಸಲಾಗಿದೆ. ಆತನ ಜತೆ ಸಂಪರ್ಕ ಹೊಂದಿರುವ ಇನ್ನೂ ಕೆಲವರನ್ನು ಎನ್‌ಐಎ ವಿಚಾರಣೆ ನಡೆಸಿದೆ. ಆದರೆ, ಇನ್ನೂ ಸರಿಯಾದ ಮಾಹಿತಿ ಸಿಕ್ಕಿಲ್ಲ.
ಬಸ್‌ನಲ್ಲಿ ಪ್ರಯಾಣಿಸುವಾಗ ಸೆರೆಯಾದ ಚಿತ್ರ ಬಿಡುಗಡೆ
ಈ ನಡುವೆ, ಶಂಕಿತ ಉಗ್ರ ರಾಮೇಶ್ವರಂ ಕೆಫೆಗೆ ಬಸ್ ಮೂಲಕ ಬರುತ್ತಿದ್ದಾಗ ಸೆರೆಯಾದ ಚಿತ್ರಗಳನ್ನೂ ಬಿಡುಗಡೆ ಮಾಡಲಾಗಿದೆ. ಅದರಲ್ಲಿ ಆತನ ಮುಖಚಹರೆ ಸ್ವಲ್ಪ ಮಟ್ಟಿಗೆ ಸ್ಪಷ್ಟವಾಗಿ ಕಾಣಿಸುತ್ತದೆ. ಇದರ ನಡುವೆ ಕುಂದಲಹಳ್ಳಿ ರಸ್ತೆಯಲ್ಲೇ ನಡೆದು ಬಂದಿರುವ ದೃಶ್ಯವೂ ಸಿಕ್ಕಿದೆ.
ಇದನ್ನೂ ಓದಿ : Blast in Bengaluru : ಬಾಂಬ್ ಸ್ಫೋಟ ನಡೆದ ರಾಮೇಶ್ವರಂ ಕೆಫೆ ಮಾ. 9ಕ್ಕೆ ರಿಓಪನ್