ಬೆಂಗಳೂರು: ಕಳೆದ ಮಾರ್ಚ್ 1ರಂದು ಮಧ್ಯಾಹ್ನ 12:55ಕ್ಕೆ ಬೆಂಗಳೂರಿನ ವೈಟ್ ಫೀಲ್ಡ್ ಸಮೀಪದ ಬ್ರೂಕ್ ಫೀಲ್ಡ್ ಬಳಿಯ ರಾಮೇಶ್ವರಂ ಕೆಫೆಯಲ್ಲಿ (Rameshwaram Cafe) ಸಂಭವಿಸಿದ ಅವಳಿ ಸ್ಫೋಟಗಳ (Blast in Bengaluru) ಬಗ್ಗೆ ಎಲ್ಲೆಡೆ ಚರ್ಚೆ ನಡೆಯುತ್ತಿದೆ. ಘಟನೆ ನಡೆದು 74 ಗಂಟೆ ಕಳೆದರೂ ರವೆ ಇಡ್ಲಿ ತಿಂದು ಬಾಂಬಿಟ್ಟು ಹೋದ ಆ ಧೂರ್ತನನ್ನು ಪತ್ತೆ ಹಚ್ಚಲು ಪೊಲೀಸ್ ಇಲಾಖೆಗೆ (Police Department) ಸಾಧ್ಯವಾಗಿಲ್ಲ ಎನ್ನುವುದು ಹೆಚ್ಚು ಮಾತನಾಡಿಕೊಳ್ಳುತ್ತಿರುವ ವಿಷಯ. ಇದೀಗ ತನಿಖೆಯನ್ನು ರಾಷ್ಟ್ರೀಯ ತನಿಖಾ ದಳ (National Investigation Agency NIA)ಗೆ ಹಸ್ತಾಂತರ ಮಾಡಲಾಗಿದೆ. ಈ ನಡುವೆ, ಶಂಕಿತ ಉಗ್ರ ಹೋಟೆಲ್‌ನಲ್ಲಿ ಎಷ್ಟು ಹೊತ್ತು ಇದ್ದ? ಏನೇನು ಕಿತಾಪತಿ ಮಾಡಿದ ಎಂಬ ವಿಚಾರದಲ್ಲಿ ಕೆಲವೊಂದು Exclusive ವಿಡಿಯೊಗಳು ಲಭ್ಯವಾಗಿವೆ.
ನಿಜವೆಂದರೆ, ಆ ಟೋಪಿವಾಲಾ ಆರೋಪಿ ರಾಮೇಶ್ವರಂ ಕೆಫೆಗೆ ಬಂದು ರವೆ ಇಡ್ಲಿ ತಿಂದು ಬಾಂಬಿಟ್ಟು ಹೋಗಲು ಬಳಸಿದ್ದು ಕೇವಲ 9 ನಿಮಿಷಗಳು ಮಾತ್ರ. 11.34ಕ್ಕೆ ಹೋಟೆಲ್‌ಗೆ ತಲೆ ತಗ್ಗಿಸಿಕೊಂಡು ಎಂಟ್ರಿ ಪಡೆಯುವ ಆತ 11.43ಕ್ಕೆ ಎಲ್ಲ ಕೆಲಸ ಮುಗಿಸಿ ಹೊರಗೆ ಹೋಗುತ್ತಾನೆ. ಅಂದರೆ 9 ನಿಮಿಷ ಅಂದರೆ 540 ಸೆಕೆಂಡುಗಳಲ್ಲಿ ಕೆಲಸ ಮುಗಿಸಿ ಹೊರಟಿದ್ದಾನೆ.
11.34ರ ಹೊತ್ತಿಗೆ ಬಸ್ ನಿಲ್ದಾಣದ ಕಡೆಯಿಂದ ತಲೆ ತಗ್ಗಿಸಿಕೊಂಡೇ ಬರುವ ಆತ ಅವಸರದಿಂದಲೇ ಇದ್ದಾನೆ. ಆತ ಒಳಗೆ ಬರುವಾಗ ಮೊಬೈಲ್ ನೋಡಿಕೊಂಡು ಹೆಜ್ಜೆ ಹಾಕುತ್ತಾನೆ. ಬಳಿಕ ಕೌಂಟರ್ ಬಳಿಗೆ ಹೋಗಿ ರವೆ ಇಡ್ಲಿಗೆ ಟೋಕನ್ ಪಡೆಯುತ್ತಾನೆ. ರವೆ ಇಡ್ಲಿ ನೀಡುವ ಕೌಂಟರ್‌ಗೆ ಹೋಗುತ್ತಾನೆ. ಅಲ್ಲಿ ರವೆ ಇಡ್ಲಿ ಪಡೆದು ತಿಂದು, ತಾನು ತಂಗಿದ್ದ ಬಾಂಬ್ ತುಂಬಿದ ಬ್ಯಾಗನ್ನು ಡಸ್ಟ್ ಬಿನ್ ಬಳಿ ಇಟ್ಟು ನಂತರ ಆತ ತಲೆ ತಗ್ಗಿಸಿಕೊಂಡೇ ನಿರ್ಗಮಿಸುವ ಹೊತ್ತಿಗೆ ಸಮಯ 11.43.
ಕೈಗೆ ಗ್ಲೌಸ್ ತೊಟ್ಟುಕೊಂಡಿದ್ದ ಆತ ತಲೆ ತಗ್ಗಿಸಿಕೊಂಡೇ ರಾಮೇಶ್ವರಂ ಕೆಫೆಯನ್ನು ಪ್ರವೇಶ ಮಾಡಿದ್ದ ಕಿರಾತಕ ಹೊರಗೆ ಹೋಗುವಾಗಲೂ ಹಾಗೇ ಇದ್ದ. ಅಂದರೆ ಯಾವ ಹಂತದಲ್ಲೂ ತಲೆಯನ್ನು ಎತ್ತದೆ ಇರುವುದರಿಂದ ಅವನ ಮುಖ ಎಲ್ಲೂ ದಾಖಲಾಗಿಲ್ಲ. ಅವನು ಹಾಕಿದ ಟೋಪಿ ಅವನ ಮುಖವನ್ನು ಪೂರ್ತಿಯಾಗಿ ಮುಚ್ಚಿತ್ತು.
ಈ ದೃಶ್ಯಾವಳಿಯನ್ನು ಪಡೆದಿರುವ ಸಿಸಿಬಿ ಆತನ ಮುಖವನ್ನು ಪತ್ತೆ ಹಚ್ಚಲು ಸಾಧ್ಯವೇ ಎಂದು ಪ್ರಯತ್ನ ಮಾಡುತ್ತಿದೆ.
ಇದನ್ನೂ ಓದಿ : Blast in Bengaluru : ರಾಮೇಶ್ವರಂ ಕೆಫೆ ಸ್ಫೋಟದ ಹಿಂದೆ ಶಾರಿಕ್?; ತೀವ್ರ ವಿಚಾರಣೆ, ಯಾರೀ ಕರ್ನಲ್!?
73 ಗಂಟೆ ಕಳೆದರೂ ಸಿಗದ ಬಾಂಬರ್
ಮಾರ್ಚ್ 1ರಂದು ಮಧ್ಯಾಹ್ನ ಬಾಂಬ್ ಸ್ಫೋಟಿಸಿತ್ತು. ಅಲ್ಲಿಂದ 73 ಗಂಟೆ ಕಳೆದರೂ ಆರೋಪಿಯನ್ನು ಬಂಧಿಸುವುದು ಸಾಧ್ಯವಾಗಿಲ್ಲ. ಆತ ಹಲವಾರು ಬಸ್‌ಗಳನ್ನು ಬದಲಿಸಿಕೊಂಡು ಹೋಗಿದ್ದಾನೆ ಎನ್ನಲಾಗಿದೆ. ಆತ ಬಾಂಬ್ ಇಟ್ಟು ಸ್ಫೋಟಿಸುವ ಮಧ್ಯೆ ಸುಮಾರು 70 ನಿಮಿಷಗಳ ಅಂತರವಿದೆ. ಹೀಗಾಗಿ ಬಾಂಬ್ ಸ್ಫೋಟಿಸುವ ಹೊತ್ತಿಗೆ ಸುರಕ್ಷಿತ ಜಾಗ ತಲುಪಿರಬಹುದು, ರಾಜ್ಯದ ಗಡಿಯನ್ನೇ ದಾಟಿ ಹೋಗಿರಬಹುದು ಎಂದು ಹೇಳಲಾಗುತ್ತಿದೆ.