ಬೆಂಗಳೂರು: ಮಾರ್ಚ್ 1ರಂದು ಬೆಂಗಳೂರಿನ ವೈಟ್ ಫೀಲ್ಡ್‌ನ ಸಮೀಪದ ಬ್ರೂಕ್ ಫೀಲ್ಡ್‌ನಲ್ಲಿರುವ ರಾಮೇಶ್ವರಂ ಕೆಫೆಯಲ್ಲಿ (Rameshwaram Cafe) ಬಾಂಬ್ ಇಟ್ಟ (Blast in Bengaluru) ದುಷ್ಕರ್ಮಿ, ಟೋಪಿವಾಲಾ ಬಾಂಬರ್‌ನ (Topiwala Bomber) ಹೊರರಾಜ್ಯಕ್ಕೆ ಪ್ರಯಾಣಿಸಿಲ್ಲ. ಬದಲಾಗಿ ಬೆಂಗಳೂರಿನಿಂದ ಬಳ್ಳಾರಿಗೆ (Bangalore to Ballary) ಹೋಗಿ ಅಲ್ಲಿಂದ ಹಿಂದೊಮ್ಮೆ ಉಗ್ರರ ಅಡಗುದಾಣ ಎಂದೇ ಕುಖ್ಯಾತವಾಗಿದ್ದ ಉತ್ತರ ಕನ್ನಡ ಜಿಲ್ಲೆಯ ಭಟ್ಕಳಕ್ಕೆ (Ballary to Bhatkal) ಹೋಗಿದ್ದಾನೆ ಎಂಬ ಮಾಹಿತಿ ಲಭ್ಯವಾಗುತ್ತಿದೆ. ಪೊಲೀಸರು ಈ ಕ್ಲೂಗಳನ್ನು ಇಟ್ಟುಕೊಂಡು ತನಿಖೆ ನಡೆಸುತ್ತಿದ್ದಾರೆ.
ಬಿಎಂಟಿಸಿ ಬಸ್‌ನಲ್ಲಿ ಬಂದು ಕೆಫೆ ಪ್ರವೇಶ ಮಾಡಿ ಹತ್ತು ನಿಮಿಷ ಅಲ್ಲಿದ್ದು ಬಾಂಬ್ ಇಟ್ಟು ಹೊರಗೆ ಹೋಗಿದ್ದ ಈ ಬಾಂಬ್‌ನ ಪತ್ತೆಗಾಗಿ ಕಳೆದ ಆರು ದಿನಗಳಿಂದ ಪೊಲೀಸರು ಎಲ್ಲಾ ಕೋನಗಳಲ್ಲೂ ತನಿಖೆ ಮಾಡಿ ಹುಡುಕಾಟ ನಡೆಸುತ್ತಿದ್ದಾರೆ. ಆದರೆ, ಯಾವುದೂ ಫಲ ನೀಡಿಲ್ಲ. ಹೀಗಾಗಿ ಎನ್‌ಐಎ ಶಂಕಿತ ಆರೋಪಿಯ ಭಾವಚಿತ್ರವನ್ನು ಬಿಡುಗಡೆ ಮಾಡಿ ಸುಳಿವು ನೀಡಿದವರಿಗೆ 10 ಲಕ್ಷ ರೂ. ಬಹುಮಾನ ಘೋಷಿಸಿದೆ. ಇದರ ಜತೆಗೆ ಆತ ಬಿಎಂಟಿಸಿ ಬಸ್‌ನಲ್ಲಿ ಪ್ರಯಾಣಿಸುವ ವೇಳೆ ಸೆರೆಯಾದ ಚಿತ್ರವೂ ಎನ್‌ಐಎಗೆ ಸಿಕ್ಕಿದೆ.
ಮಹತ್ವದ ಮಾಹಿತಿ: ಸುಜಾತಾ ಸರ್ಕಲ್ ಮೂಲಕ ಬಳ್ಳಾರಿ ಬಸ್ ಹಿಡಿದ ಆರೋಪಿ!
ಈ ನಡುವೆ, ರಾಮೇಶ್ವರಂ ಕೆಫೆಯಲ್ಲಿ ಬಾಂಬ್ ಇಟ್ಟ ಬಳಿಕ ಆರೋಪಿ ಎಲ್ಲಿ ಹೋಗಿದ್ದಾನೆ ಎಂಬ ಬಗ್ಗೆ ಇದುವರೆಗೂ ಸ್ಪಷ್ಟವಾದ ಮಾಹಿತಿ ಇರಲಿಲ್ಲ. ಆತ ಹೊಸೂರು ಮೂಲಕ ತಮಿಳುನಾಡಿಗೆ ಹೋಗಿರಬಹುದು, ಆಂಧ್ರಕ್ಕೆ ಹೋಗಿರಬಹುದು ಎಂಬ ಸಂಶಯಗಳಿದ್ದವು. ಆದರೆ, ಈಗ ಸಿಕ್ಕಿರುವ ಮತ್ತೊಂದು ಮಾಹಿತಿಯ ಪ್ರಕಾರ ಶಂಕಿತ ಉಗ್ರ ಬೆಂಗಳೂರಿನ ಸುಜಾತಾ ಸರ್ಕಲ್‌ನಿಂದ ಬಸ್ ಹತ್ತಿ ಬಳ್ಳಾರಿಗೆ ಹೋಗಿದ್ದಾನೆ ಎನ್ನಲಾಗಿದೆ. ಅಲ್ಲಿಂದ ಆತ ಬೇರೊಂದು ಬಸ್ ಹತ್ತಿ ಭಟ್ಕಳಕ್ಕೆ ಹೋಗಿದ್ದಾನೆ ಎಂಬ ಅಂಶ ಬೆಳಕಿಗೆ ಬಂದಿದೆ.
ಬಾಂಬರ್ ಪ್ರಯಾಣಿಸಿದ ದಾರಿ ಇದು
ರಾಮೇಶ್ವರಂ ಕೆಫೆಯಲ್ಲಿ ಬಾಂಬ್ ಇಟ್ಟ ಆರೋಪಿ ಅಲ್ಲಿಂದ ಯಾವುದೋ ಮಾರ್ಗವಾಗಿ ಬೆಂಗಳೂರಿನ ರಾಜಾಜಿನಗರ ರಸ್ತೆಯ ಸುಜಾತಾ ಥಿಯೇಟರ್ ಬಳಿಗೆ ಬಂದಿದ್ದಾನೆ. ಅಲ್ಲಿಂದ ಆತ ಬಸ್ ಹತ್ತಿ ತುಮಕೂರಿಗೆ ಹೋಗಿದ್ದಾನೆ. ಅಲ್ಲಿ ಇಳಿದು ಇನ್ನೊಂದು ಬಸ್‌ನಲ್ಲಿ ಬಳ್ಳಾರಿಗೆ ಹೋಗಿದ್ದಾನೆ. ಬಳ್ಳಾರಿಯಲ್ಲಿ ಸ್ವಲ್ಪ ಹೊತ್ತು ಇದ್ದು ಅಲ್ಲಿಂದ ಮಂತ್ರಾಲಯ- ಗೋಕರ್ಣ ಬಸ್ ಹತ್ತಿ ಭಟ್ಕಳಕ್ಕೆ ತೆರಳಿದ್ದಾನೆ ಎನ್ನಲಾಗಿದೆ.
ತುಮಕೂರು, ಬಳ್ಳಾರಿಯಲ್ಲಿ ಎನ್‌ಐಎ ತಂಡ ತನಿಖೆ
ಈ ಪ್ರಯಾಣದ ಬಗ್ಗೆ ಮಾಹಿತಿ ಪಡೆದಿರುವ ರಾಷ್ಟ್ರೀಯ ತನಿಖಾ ದಳ ತುಮಕೂರು ಮತ್ತು ಬಳ್ಳಾರಿ ಬಸ್ ನಿಲ್ದಾಣಕ್ಕೆ ಆಗಮಿಸಿ ಮಾಹಿತಿ ಸಂಗ್ರಹಿಸಿದೆ. ತಡರಾತ್ರಿಯಿಂದ ಬೆಳಗಿನ ಜಾವದವರೆಗೂ ಬಳ್ಳಾರಿ ಬಸ್ ನಿಲ್ದಾಣದಲ್ಲಿ ಎನ್‌ಐಎ ತಂಡ ಮಾಹಿತಿ ಪಡೆದಿದೆ ಬೆಂಗಳೂರಿಂದ ಎರಡು ಕಾರುಗಳಲ್ಲಿ ಹತ್ತಕ್ಕೂ ಹೆಚ್ಚು ಅಧಿಕಾರಿಗಳು ಆಗಮಿಸಿದ್ದರು.
ಇದನ್ನೂ ಓದಿ : Blast in Bengaluru : ರಾಮೇಶ್ವರಂ ಕೆಫೆಯಲ್ಲಿ ಬಾಂಬಿಟ್ಟವನು ಹೀಗಿದ್ದಾನೆ ನೋಡಿ, ರೇಖಾಚಿತ್ರ ರಿಲೀಸ್
ಬಾಂಬರ್ ಬಳ್ಳಾರಿಗೆ ಯಾಕೆ ಹೋದ? ಅಲ್ಲಿ ಟೆರರ್ ಲಿಂಕ್ ಇದ್ಯಾ?
ಕಳೆದ ಕೆಲವು ಸಮಯದಿಂದ ಬಳ್ಳಾರಿ ಉಗ್ರ ಚಟುವಟಿಕೆಯ ಪ್ರಮುಖ ತಾಣವಾಗುತ್ತಿದೆ. ಕೆಲವು ತಿಂಗಳ ಹಿಂದೆ ಬಳ್ಳಾರಿಯ ಪಿಎಫ್ಐ ಮಾಜಿ ಪಿಎಫ್‌ಐ ಪ್ರಧಾನ ಕಾರ್ಯದರ್ಶಿ ಸುಲೇಮಾನ್ ಮನೆ ಮೇಲೆ ದಾಳಿಯಾಗಿತ್ತು. ಆತನಿಗೆ ಸೇರಿದ ಬೆಂಗಳೂರಿನ ಬ್ಯಾಡರಹಳ್ಳಿಯ ಪ್ರಕೃತಿ ಲೇಔಟ್ ನಲ್ಲಿಯೂ ದಾಳಿ ನಡೆದಿತ್ತು.
ಈ ನಡುವೆ, ಉಗ್ರ ಸಂಬಂಧದ ಹಿನ್ನೆಲೆಯಲ್ಲಿ ಬಳ್ಳಾರಿಯ ಕೆಲವು ಕಾಲೇಜು ವಿದ್ಯಾರ್ಥಿಗಳು, ಎಂಜಿನಿಯರ್‌ಗಳನ್ನೂ ಬಂಧಿಸಿತ್ತು. ಬೆಂಗಳೂರಿನ ಪೀಣ್ಯದಲ್ಲಿ ಎಂಜಿನಿಯರ್ ಆಗಿ ಕೆಲಸ ಮಾಡುತ್ತಿದ್ದ ಬಳ್ಳಾರಿ ಮೂಲದ ಅಲ್ತಾಫ್, ಟಿಸಿಎಸ್‌ನಲ್ಲಿ ಉದ್ಯೋಗಿಯಾಗಿರುವ ಮಿಸ್‌ಬಾ, ಈಸ್ಟ್ ವೆಸ್ಟ್ ಕಾಲೇಜಿನಲ್ಲಿ ಎಂಜಿನಿಯರಿಂಗ್ ವಿದ್ಯಾರ್ಥಿಯಾಗಿರುವ ಮುನಿರುದ್ದೀನ್ ಮೇಲೆ ಎನ್‌ಐಎ ಕಣ್ಣಿಟ್ಟಿತ್ತು. ಮುನಿರುದ್ದೀನ್ ಅವರನ್ನು ವಶಕ್ಕೆ ಪಡೆಯಲಾಗಿದೆ.
ಮತ್ತೊಂದೆಡೆ ಮಂಗಳೂರಿನ ಕುಕ್ಕರ್ ಬಾಂಬ್ ಬ್ಲಾಸ್ಟ್ ಆರೋಪಿಗಳಾದ ಮೊಹಮ್ಮದ್ ಶಾರಿಕ್ ಹಾಗೂ ಮಾಜ್ ಮುನೀರ್‌ನನ್ನು ಕಸ್ಟಡಿಗೆ ಪಡೆಯಲು ಸಿದ್ಧತೆ ನಡೆದಿದೆ. ರಾಮೇಶ್ವರಂ ಕೆಫೆ ಸ್ಫೋಟ ಹಾಗೂ ಮಂಗಳೂರು ಕುಕ್ಕರ್ ಸ್ಪೋಟಕ್ಕೆ ಸಾಮ್ಯತೆ ಇರುವ ಹಿನ್ನೆಲೆಯಲ್ಲಿ ಈ ವಿಚಾರಣೆ ನಡೆಯಲಿದೆ.